Friday, 15th November 2024

IND vs SA: ಮೂರನೇ ಕ್ರಮಾಂಕವನ್ನು ತಿಲಕ್‌ ವರ್ಮಾಗೆ ತ್ಯಾಗ ಮಾಡಲು ಕಾರಣ ತಿಳಿಸಿದ ಸೂರ್ಯ!

ʻTilak Varma Asks For No. 3 Spot, Proves His Mettleʼ-Skipper Suryakumar Yadav Reveals Chat After Gqeberha

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20ಐ (IND vs SA) ಪಂದ್ಯದಲ್ಲಿ ತಿಲಕ್‌ ವರ್ಮಾಗೆ ತಮ್ಮ ಮೂರನೇ ಬ್ಯಾಟಿಂಗ್‌ ಕ್ರಮಾಂಕವನ್ನು ನೀಡಲು ಕಾರಣವೇನೆಂದು ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಬಹಿರಂಗಪಡಿಸಿದ್ದಾರೆ. ಮೆಬೇಕದಲ್ಲಿನ ಎರಡನೇ ಪಂದ್ಯದ ಬಳಿಕ ತಿಲಕ್‌ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡುತ್ತೇನೆಂದು ನನ್ನ ಬಳಿ ಮನವಿ ಮಾಡಿಕೊಂಡಿದ್ದರು ಹಾಗೂ ಇದು ಸೆಂಚುರಿಯನ್‌ ಪಂದ್ಯದಲ್ಲಿ ಫಲ ನೀಡಿದೆ ಎಂದು ಟೀಮ್‌ ಇಂಡಿಯಾ ನಾಯಕ ತಿಳಿಸಿದ್ದಾರೆ.

ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡದ ಪರ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಎಂದಿನಂತೆ ಇನಿಂಗ್ಸ್‌ ಆರಂಭಿಸಿದ್ದರು. ಆದರೆ, ಪಂದ್ಯದ ಎರಡನೇ ಎಸೆತದಲ್ಲಿ ಮಾರ್ಕೊ ಯೆನ್ಸನ್‌ ಎಸೆತದಲ್ಲಿ ಸಂಜು ಸ್ಯಾಮ್ಸನ್‌ ಕ್ಲೀನ್‌ ಬೌಲ್ಡ್‌ ಆದರು. ಈ ವೇಳೆ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರಲಿದ್ದಾರೆಂದು ಎಲ್ಲರೂ ಭಾವಿಸಿದ್ದರು., ಆದರೆ, ತಿಲಕ್‌ ವರ್ಮಾ ಕ್ರೀಸ್‌ಗೆ ಬರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

IND vs SA: ಚೊಚ್ಚಲ ಟಿ20ಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ತಿಲಕ್‌ ವರ್ಮಾ!

ಶತಕ ಸಿಡಿಸಿ ಸೂರ್ಯ ನಂಬಿಕೆಯನ್ನು ಉಳಿಸಿಕೊಂಡ ತಿಲಕ್‌

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ ತಾನು ಎದುರಿಸಿದ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ಅವರು ಎದುರಿಸಿದ 56 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 107 ರನ್‌ಗಳನ್ನು ಸಿಡಿಸಿದರು. ಭಾರತ ತಂಡ 219 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು. ಆ ಮೂಲಕ ಸೂರ್ಯಕುಮಾರ್‌ ಯಾದವ್‌ ಇಟ್ಟಿದ್ದ ನಂಬಿಕೆಯನ್ನು ತಿಲಕ್‌ ವರ್ಮಾ ಉಳಿಸಿಕೊಂಡಿದ್ದಾರೆ. ಅಂತಿಮವಾಗಿ ಭಾರತ ತಂಡ 11 ರನ್‌ಗಳಿಂದ ಗೆಲುವು ಪಡೆದಿತ್ತು.

ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾಗೆ ತಮ್ಮ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿಸಲು ಕಾರಣ ಏನೆಂದು ಬಹಿರಂಗಪಡಿಸಿದ್ದಾರೆ. ಎರಡನೇ ಪಂದ್ಯದ ಬಳಿಕ ತಾನು ಮೂರನೇ ಕ್ರಮಾಂಕದಲ್ಲಿ ಆಡುತ್ತೇನೆಂದು ತಿಲಕ್‌ ವರ್ಮಾ ಅವರೇ ಸ್ವತಃ ಬಂದು ನನ್ನ ಬಳಿ ಮನವಿ ಮಾಡಿದ್ದರು ಎಂಬ ಅಂಶವನ್ನು ಸೂರ್ಯ ಬಹಿರಂಗಪಡಿಸಿದ್ದಾರೆ.

“ತಿಲಕ್‌ ವರ್ಮಾ ಬಗ್ಗೆ ನಾನು ಏನು ಹೇಳಬಹುದು? ಮೆಬೇಕದಲ್ಲಿ ಅವರು ನನ್ನ ಬಳಿ ಬಂದು ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಹುದೆ ಎಂದು ಕೇಳಿದ್ದರು. ಇದು ನಿಮ್ಮ ದಿನ ಹೋಗಿ ಆನಂದಿಸಿ ಎಂದು ಹೇಳಿದ್ದೆ. ಅವರ ಸಾಮರ್ಥ್ಯ ಏನು? ಹಾಗೂ ಅವರಿಂದ ನಾವು ತುಂಬಾ ಖುಷಿಯಾಗಿದ್ದೇವೆ. ಮುಂದಿನ ಪಂದ್ಯಗಳಲ್ಲಿಯೂ ಅವರು ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆಂದು ನನಗೆ ಖಚಿತತೆ ಇದೆ,” ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ತಿಳಿಸಿದ್ದಾರೆ.

ತಮ್ಮ ಬ್ಯಾಟಿಂಗ್‌ ಶ್ರೇಯ ಸೂರ್ಯಗೆ ಸಮರ್ಪಿಸಿದ ತಿಲಕ್‌

“ಈ ಎಲ್ಲಾ ಶ್ರೇಯ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಸಲ್ಲಬೇಕು. ಮೂರನೇ ಕ್ರಮಾಂಕದಲ್ಲಿ ಅವರು ನನಗೆ ಅವಕಾಶವನ್ನು ನೀಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಾನು ಮೂರನೇ ಕ್ರಮಾಂಕದಲ್ಲಿ ಆಡುತ್ತೇನೆಂದು ಅವರಿಗೆ ಹೇಳಿದ್ದೆ ಹಾಗೂ ಈ ಅವಕಾಶ ನೀಡಿದ್ದಕ್ಕಾಗಿ ನಾನು ಖುಷಿಯಾಗಿದ್ದೇನೆ. ನನ್ನ ಮೂಲ ಕೌಶಲದಿಂದ ನನ್ನನ್ನು ನಾನು ಅಭಿವ್ಯಕ್ತಗೊಳಿಸಲು ಬಯಸಿದ್ದೆ,” ಎಂದು ತಿಲಕ್‌ ವರ್ಮಾ ಹೇಳಿದ್ದಾರೆ.