ಕೆನಡಾದಲ್ಲಿ ಟೆಸ್ಲಾ (Tesla) ಕಾರೊಂದು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಪರಿಣಾಮ (Tesla Car Accident) ಸಹೋದರರಿಬ್ಬರು ಸೇರಿ ನಾಲ್ವರು ಭಾರತೀಯ ಮೂಲದ ಸ್ನೇಹಿತರು ದುರಂತ ಸಾವಿಗೀಡಾಗಿದ್ದಾರೆ. ಸಾವಿಗೀಡಾದ ದುರ್ದೈವಿಗಳನ್ನು ಗುಜರಾತಿನ ಕೆಟಬಾ ಗೋಹಿಲ್ (೨೯) ಮತ್ತು ಆಕೆಯ ಸಹೋದರ ನೀಲ್ ರಾಜ್ (೨೫), ಹಾಗೂ ಜಯರಾಜ ಸಿಂಗ್ ಸಿಸೋಡಿಯಾ ಮತ್ತು ದಿಗ್ವಿಜಯ್ ಪಟೇಲ್ ಎಂದು ಗುರುತಿಸಲಾಗಿದೆ.
ಟೆಸ್ಲಾ ಕಂಪೆನಿಯ ಎಲೆಕ್ಟ್ರಾನಿಕ್ ಕಾರು (Electronic Car) ಹೆದ್ದಾರಿ ಬದಿಯ ತಡೆ ಬೇಲಿಗೆ ಅಪ್ಪಳಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ 20 ವರ್ಷದ ಯುವತಿಯೊಬ್ಬಳು ಪವಾಡಸದೃಶಳಾಗಿ ಪಾರಾಗಿದ್ದಾಳೆ. ರಿಕ್ ಹಾರ್ಪರ್ ಎಂಬ ವ್ಯಕ್ತಿಯೊಬ್ಬರು, ಅಪಘಾತದಿಂದ ಕಾರು ಹೊತ್ತಿ ಉರಿಯುತ್ತಿದ್ದಂತೆ ಕಾರಿ ಗಾಜನ್ನು ಸಾಹಸಮಯವಾಗಿ ಒಡೆದ ಕಾರಣ ಈ ಯುವತಿಯ ಪ್ರಾಣ ಉಳಿಯುವಂತಾಯಿತು.
ಈ ಭೀಕರ ಘಟನೆಯ ಬಗ್ಗೆ ಮಾತನಾಡಿದ ಹಾರ್ಪರ್, ಟೆಸ್ಲಾ ಕಾರಿನ ಸುರಕ್ಷತೆಯ ಬಗ್ಗೆಯೇ ಪ್ರಶ್ನೆಯನ್ನು ಎತ್ತಿದ್ದಾರೆ. ಈ ದುರಂತ ಸಂಭವಿಸಿದ ಸಂದರ್ಭದಲ್ಲಿ ಕಾರಿನ ಬಾಗಿಲನ್ನು ತೆರೆಯಲು ಸಾಧ್ಯವಾಗಲಿಲ್ಲ ಎಂದು ಹಾರ್ಪರ್ ಹೇಳಿಕೆಯನ್ನು ಟೊರೆಂಟೋ ಸ್ಟಾರ್ ಉಲ್ಲೇಖಿಸಿ ವರದಿ ಮಾಡಿದೆ.
ʼಕಾರಿನಲ್ಲಿದ್ದವರು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸಿರಬಹುದು. ಆದರೆ ಈ ಪ್ರಯತ್ನದಲ್ಲಿ ಅವರು ವಿಫಲರಾದ ಕಾರಣ ಈ ದುರಂತ ಸಂಭವಿಸಿದೆʼ ಎಂದು ಹಾರ್ಪರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Viral Video: ಫ್ರೀ ಆಗಿ ಸಿಕ್ರೆ ಕೆಚಪ್ ಪ್ಯಾಕನ್ನೂ ಬಿಡಲ್ಲ… ಇದು ಈತನ ಜಾಣ್ಮೆಯೋ…ಇಲ್ಲ, ದುರಾಸೆಯೋ? ವಿಡಿಯೊ ನೋಡಿ
“ಕಾರಿನ ಬ್ಯಾಟರಿಯಿಂದ ಸಮಸ್ಯೆ ಉಂಟಾಗಿದೆಯೇ ಎಂದು ನನಗೆ ಗೊತ್ತಿಲ್ಲ, ಆದರೆ ಆಕೆಗೆ ಹೊರ ಬರಲಾಗಲಿಲ್ಲʼ ಎಂದು ಹಾರ್ಪರ್ ಕಾರಿನ ಬಾಗಿಲನ್ನು ಒಡೆದ ಬಳಿಕ ಔಟ್ಲೆಟ್ ಗೆ ಮಾಹಿತಿ ನೀಡಿದ್ದಾರೆ. ದಟ್ಟವಾದ ಹೊಗೆಯ ಕಾರಣದಿಂದ ಒಳಗಿದ್ದವರಿಗೆ ಏನೂ ಕಾಣುತ್ತಿರಲಿಲ್ಲ, ಹಾಗಾಗಿ ನಾಲ್ವರು ಅದರಲ್ಲಿ ಸಿಲುಕಿಕೊಂಡು ಸಾವನ್ನಪ್ಪುವಂತಾಯಿತುʼ ಎಂದು ಅವರು ಹೇಳಿದ್ದಾರೆ.
ಈ ಕಾರು ಅಪಘಾತಕ್ಕೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ. ಆದರೆ ಟೆಸ್ಲಾ ಕಾರುಗಳ ಬಾಗಿಲು ತೆರೆದುಕೊಳ್ಳುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದು ಹಲವಾರು ಪ್ರಶೆಗಳನ್ನು ಎತ್ತುವಂತೆ ಮಾಡಿದೆ. ಇಲೆಕ್ಟ್ರಿಕ್ ವಾಹನಗಳ ಬಾಗಿಲುಗಳು ತುರ್ತು ಸಂದರ್ಭದಲ್ಲಿ ತೆರೆದುಕೊಳ್ಳಬೇಕಾದರೆ ಹೆಚ್ಚಿನ ಪವರ್ ಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಹ್ಯಾಂಡಲ್ ಬದಲಾಗಿ ಬಟನ್ ತೆರೆದುಕೊಳ್ಳಬೇಕಾಗಿರುತ್ತದೆ. ಕ್ಯಾಲ್ಗರಿ ಅಗ್ನಿ ಶಾಮಕ ದಳದ ಕ್ಯಾಪ್ಟನ್ ರ್ಯಾಂಡಿ ಸ್ಮಿಟ್ಝ್ ಹೇಳುವ ಪ್ರಕಾರ, ಅಪಘಾತದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿರುತ್ತವೆ ಇದರಿಂದಾಗಿ ಕಾರಿನ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ.