Friday, 15th November 2024

Shishir Hegde Column: 370 ವರ್ಷದ ಶಾರ್ಕ್‌ ಮತ್ತು ಗಿಲ್ಗಮೇಶನ ಕಥೆ !

ಶಿಶಿರಕಾಲ

ಶಿಶಿರ ಹೆಗಡೆ

shishirh@gmail.com

ಸಾಮಾನ್ಯವಾಗಿ ವೃತ್ತಿ ಸಂಬಂಧಿತ ಪ್ರವಾಸಗಳಿಗೆ ಹೋದಾಗ, ಹೋದ ಕೆಲಸ ಮುಗಿಸಿ ಬಂದರೆ ಸಾಕು ಎಂದಾಗಿರುತ್ತದೆ. ಬಿಸಿನೆಸ್ ಟ್ರಿಪ್‌ನಲ್ಲಿ ಊರಿನ ಯಾವುದೋ ಒಂದೆರಡು ರಸ್ತೆ, ಹೋಟೆಲ್ಲು, ಆಫೀಸು, ಏರ್‌ಪೋರ್ಟ್ ಇವಷ್ಟನ್ನೇ ಕಂಡುಬರುವುದಾಗುತ್ತದೆ. ಕೆಲವರು ಅಷ್ಟನ್ನೇ ನೋಡಿ ಇಡೀ ಊರನ್ನು ನೋಡಿದ್ದೇನೆ ಎಂದು ಲಿಸ್ಟಿಗೆ ಸೇರಿಸಿಕೊಳ್ಳುತ್ತಾರೆ. ಊರಿನ ಬಸ್ ಸ್ಟ್ಯಾಂಡಿನಲ್ಲಿ ಇಳಿದು ಚಹಾ ಕುಡಿದವರು ‘ನಾನು
ನಿಮ್ಮೂರನ್ನು ನೋಡಿದ್ದೇನೆ’ ಎನ್ನುವಾಗ ಇವರೇ ಅಡ್ಡಿಯಿಲ್ಲ ಬಿಡಿ.

ನಾವು ಅದೆಷ್ಟೋ ಬಾರಿ ಕಂಡ, ಓಡಾಡಿದ ಜಾಗದಿಂದ ಕೂಗಳತೆಯಲ್ಲಿ ಒಂದು ಸುಂದರ ಅನ್ಯಲೋಕವೇ ಇದೆ ಎಂಬುದು ಕೆಲವೊಮ್ಮೆ ಗೊತ್ತೇ ಆಗಿರುವುದಿಲ್ಲ. ನಾನು ಆಗೀಗ ಹೋಗಿಬರುತ್ತಿದ್ದ ಜಾಗ ‘ಮೇಯ್ನ್’. ಆದರೆ ಅಲ್ಲಿ ಇಷ್ಟೊಂದು ಚಂದದ ದ್ವೀಪಸಮೂಹ, ಕೈಗೆಟುಕುವಷ್ಟು
ದೂರದಲ್ಲಿ ತಿಮಿಂಗಿಲವನ್ನೆಲ್ಲ ನೋಡಬಹುದು ಎಂಬ ಅಂದಾಜೇ ಇರಲಿಲ್ಲ. ನಾನು ಮೇಯ್ನ್ ರಾಜ್ಯದ ಬೀಚುಗಳಲ್ಲಿ ಸುತ್ತಿದ್ದರೂ ಅದರ ದಂಡೆ ಗುಂಟದ ಸಮುದ್ರ ದೊಳಗಿನ ಇನ್ನೊಂದು ರೂಪಲೋಕದ ಅಂದಾಜಿರಲಿಲ್ಲ.

ಸಮುದ್ರಮಧ್ಯದ ಬೋಟಿನಲ್ಲಿದ್ದ ನನಗೆ ಬೇರೊಂದು ಲೋಕದಲ್ಲಿದ್ದೇನೆ ಎಂದೆನಿಸುತ್ತಿತ್ತು. ಸಮುದ್ರದಲೆಯ ರಭಸದ ಮುಂದೆ ಊರಿನ ಸದ್ದು ಗದ್ದಲಗಳೆಲ್ಲ ಮರೆತೇ ಹೋಗಿದ್ದವು. ಎಂದರಲ್ಲಿ ನೀರು, ಮಿಂಚಿ ಮಾಯವಾದ ತಿಮಿಂಗಿಲ, ಮೌನ. ಟಿವಿಯಲ್ಲಿ ಭಾರಿ ಗಾತ್ರದ ತಿಮಿಂಗಿಲವನ್ನು ಕಂಡಾಗ ಅರವತ್ತಿನಿಂಚಿನ ಪರದೆಯಲ್ಲಿ ಅಂದಾಜಿಸಿzಲ್ಲ ಸಂಪೂರ್ಣ ತಪ್ಪು. ಎಂಟಂತಸ್ತು ಕಟ್ಟಡದಷ್ಟು ಉದ್ದದ ಜೀವಿ ಪಕ್ಕದಲ್ಲಿಯೇ ಹಾಯುತ್ತಿದ್ದರೆ ಜಗತ್ತೇ ಸ್ತಬ್ಧವಾಗಿತ್ತು. ಸಮುದ್ರವೆಂದರೆ ಕಥೆ-ಪುರಾಣಗಳಲ್ಲಿರುವ ಗೊಂಡಾರಣ್ಯಕ್ಕಿಂತ ಕಡಿಮೆಯಿಲ್ಲ. ಇಲ್ಲಿ ಸರಹದ್ದುಗಳೇ
ಇಲ್ಲ. ನಾವು ಸಮುದ್ರದ ಒಂದಿಷ್ಟು ಜಾಗಗಳಿಗೆ ಏನೇನೋ ಮಹಾಸಾಗರದ ಹೆಸರಿಟ್ಟದ್ದು ಬಿಟ್ಟರೆ ಸಮುದ್ರವೆಂದರೆ ಒಂದೇ ಒಂದು. ಅದೇ ಉಪ್ಪುನೀರು ಎಡೆ ವ್ಯಾಪಿಸಿರುವುದು. ಗಾಳಿಯಂತೆ. ಆದರೂ ಎಲ್ಲಿ ಬೇಕೆಂದಲ್ಲಿ ಜೀವಿಗಳು ಓಡಾಡುವುದಿಲ್ಲ. ಉಷ್ಣತೆಯಲ್ಲಿ ವ್ಯತ್ಯಾಸವಿದೆ.

ಉಷ್ಣಪ್ರವಾಹಗಳು ಅಲ್ಲಿ ಹರಿಯುತ್ತವೆ. ಅದಕ್ಕನುಗುಣವಾಗಿ ಜೀವಿಗಳ ವಲಸೆ. ಸಮುದ್ರದ ಬಯಲಿನಲ್ಲಿ ಅವುಗಳದೇ ಆದ ನಿಗದಿತ ಕಾಲು(!)ದಾರಿಗಳಿವೆ. ಅದು ಲಕ್ಷಾಂತರ ವರ್ಷದಿಂದ ತಲೆಮಾರುಗಳಿಂದ ಹಸ್ತಾಂತರವಾದ ದಾರಿ. ಅದರಲ್ಲಿಯೇ ಲಕ್ಷ ಕೋಟಿ ಜೀವಿಗಳು ಅವುಗಳದೇ ಕಾನೂನು ಮಾಡಿಕೊಂಡು ಬದುಕುತ್ತಿವೆ! ಇದು ಮನುಷ್ಯ ಸಮಾಜದ ಸಂಕೀರ್ಣತೆಗಿಂತ ಲಕ್ಷಪಟ್ಟು. ಈಗ ನಾವಿದ್ದದ್ದು ಅಟ್ಲಾಂಟಿಕ್ ಸಾಗರದಲ್ಲಿ. ಮೇಯ್ನ್ ನಿಂದ ಒಂದೈವತ್ತು ಮೈಲಿ ದೂರದ ಸಮುದ್ರದಲ್ಲಿ. ನಾವಿದ್ದ ಜಾಗದಿಂದ ಹತ್ತು ನಿಮಿಷ ಬೋಟಿನಲ್ಲಿ ಮುಂದೆ ಹೋದರೆ
ಕೆನಡಾದ ಇನ್ನೊಂದು ದ್ವೀಪ. ಅಷ್ಟು ಹೊತ್ತಿಗೆ ಸಾಗರಜೀ ವತಜ್ಞರು ಕೆಳಕ್ಕೆ ಬಿಟ್ಟ ಜಲಾಂತರ್ಗಾಮಿ ಡ್ರೋನ್‌ನಿಂದ ಇನ್ ಫ್ರಾರೆಡ್ ಚಿತ್ರಗಳು ಅಸ್ಪಷ್ಟವಾಗಿ ಮೂಡಲಾರಂಭಿಸಿದ್ದವು.

ನಾವೆಲ್ಲರೂ ಅತ್ಯುತ್ಸಾಹದಿಂದ ಖುಷಿಪಡಲು, ಉದ್ವೇಗಗೊಳ್ಳಲು ಸಕಾರಣವಿತ್ತು. ಏಕೆಂದರೆ ಅಲ್ಲಿ, ನಮ್ಮ ಬೋಟಿನ ಕೆಳಕ್ಕೆ, ಆಳಕ್ಕಿದ್ದ ಜೀವಿಯ ಹೆಸರು ಗ್ರೀನ್‌ಲ್ಯಾಂಡ್ ಶಾರ್ಕ್! ಸುಮಾರು ಇಪ್ಪತ್ತು ಫೀಟು. ನಿಧಾನಕ್ಕೆ ಅದು ಚಲಿಸುತ್ತಿದ್ದರೆ ನೀರಿನೊಳಗೊಂದು ಡೈನಸಾರಸ್ ಈಜುತ್ತಿರು ವಂತೆ. ನಮಗೆ ಅಲ್ಲಿ ಸಿಕ್ಕಿದ್ದ ಗ್ರೀನ್‌ಲ್ಯಾಂಡ್ ಶಾರ್ಕ್‌ಗೆ ಸುಮಾರು 370 ವರ್ಷ ವಯಸ್ಸಾಗಿತ್ತು! ಅಂದರೆ ಅದು ಹುಟ್ಟಿದ ವರ್ಷ 1654. ಅದರ ವಯಸ್ಸನ್ನು ವಿಜ್ಞಾನಿಗಳು ಕಾರ್ಬನ್ ಡೇಟಿಂಗ್ ಮೂಲಕ ಪತ್ತೆಹಚ್ಚಿದ್ದರು. 1654 ಎಂದರೆ ಭಾರತದಲ್ಲಿ ಮೊಘಲರ ಆಳ್ವಿಕೆ, ಷಹಜಹಾನ್ ಆಳುತ್ತಿದ್ದ ಕಾಲ ಅದು. ಅತ್ತ ಯುರೋಪಿನಲ್ಲಿ ಬ್ರಿಟಿಷರು ತಮ್ಮ ವಸಾಹತನ್ನು ವಿಸ್ತರಿಸುತ್ತಿದ್ದ ಸಮಯ. ಆಗ ತಾನೇ ಆಂಗ್ಲೋ-ಡಚ್ ಯುದ್ಧ ನಡೆದು ಆಂಗ್ಲರು ಸಮುದ್ರ- ಮಾರ್ಗಗಳ ಮೇಲೆ ತಮ್ಮ ಹಿಡಿತ ಸಾಧಿಸಿದ ವರ್ಷ.

ಅದೇ ಸಮಯದಲ್ಲಿ, ಅ ಉತ್ತರ ಅಟ್ಲಾಂಟಿಕ್ ಮಹಾ ಸಾಗರದಲ್ಲಿ ಈಗ ನಾವು ನೋಡುತ್ತಿದ್ದ ಗ್ರೀನ್‌ಲ್ಯಾಂಡ್ ಶಾರ್ಕ್ ಹುಟ್ಟಿದ್ದು. ಹೀಗೊಂದು ಐತಿಹಾಸಿಕ ಜೀವಿಯನ್ನು ಈ ಅಂದಾಜಿನಲ್ಲಿ ನೋಡುವುದೇ ರೋಮಾಂಚನ! ಅದರ ಎಲ್ಲ ವಿವರ ಕಂಪ್ಯೂಟರ್ ಪರದೆಯ ಮೇಲೆ ಮೂಡಿತ್ತು. ಅದರ ಉದ್ದ, ಭಾರ ಇತ್ಯಾದಿ. ಅದರದು ಬಲು ನಿಧಾನ ಗತಿ, ನಿಮಿಷಕ್ಕೆ ಒಂದೆರಡು ಮೀಟರ್ ಅಷ್ಟೇ ಸಾಗುವಷ್ಟು ಮಂದ. ನಾವು ಸುಮಾರು ಮೂರು ಗಂಟೆಗಳ ಕಾಲ ಅಲ್ಲಿಯೇ ಇದ್ದರೂ ಅದು ಆಳದಲ್ಲಿ ಅಲ್ಲಿಯೇ ಇತ್ತು. ಗ್ರೀನ್ ಲ್ಯಾಂಡ್ ಶಾರ್ಕ್ ಒಂದು ವಿಶೇಷ ಶಾರ್ಕ್. ಅದು ಸಾಮಾನ್ಯವಾಗಿ ಕಣ್ಣಿಗೆ ಬೀಳುವುದಿಲ್ಲ. ಅದಿರುವುದೇ ಸಾಗರದಾಳದಲ್ಲಿ. ಕಿಲೋಮೀಟರ್ ಲೆಕ್ಕದ ಆಳದ ಜಗತ್ತಿನಲ್ಲಿ. ಸಾಮಾನ್ಯವಾಗಿ ನಮಗೆ ಕೊಳದಲ್ಲಿ ಈಜುವಾಗ ಕಿವಿನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮುಖ್ಯ ಕಾರಣ ನೀರಿನೊಳಗೆ ಇದ್ದಾಗ ಕಿವಿಯ ಮೇಲೆ ಉಂಟಾಗುವ ಒತ್ತಡ. ನೀರೊಳಕ್ಕೆ ಇಳಿದಂತೆ ಈ ಒತ್ತಡ ಹೆಚ್ಚುತ್ತಲೇ ಹೋಗುತ್ತದೆ. ಸಮುದ್ರದ ನೀರಿನಲ್ಲಿ ಹತ್ತು ಮೀಟರ್ ಕೆಳಕ್ಕಿಳಿದರೆ- ನೀರಿನ ಭಾರದಿಂದಾಗಿ ಒತ್ತಡವು ಭೂಮಿಯ ಮೇಲ್ಮೈನ ದುಪ್ಪಟ್ಟಾಗುತ್ತದೆ. ಈ ಗ್ರೀನ್‌ಲ್ಯಾಂಡ್ ಶಾರ್ಕ್ ಇರುವುದು ಸುಮಾರು ಒಂದೂಕಾಲು ಕಿಲೋಮೀಟರ್ ನೀರಿನಾಳದಲ್ಲಿ. ಅಲ್ಲಿನ ಒತ್ತಡ ಸುಮಾರು 120 ಪಟ್ಟು ಜಾಸ್ತಿ. ಅಷ್ಟು ಒತ್ತಡ ತಡೆದುಕೊಳ್ಳಲು ಅದರ ಮೇಲ್ಮೈ ಚರ್ಮ ವಿಶೇಷ ರಚನೆ ಹೊಂದಿದೆ. ಅಲ್ಲಿ TMOA ಎಂಬ ಒಂದು ರಾಸಾಯನಿಕ ಅವುಗಳಿಗೆ ಒತ್ತಡ ತಡೆಯುವ ಸಾಮರ್ಥ್ಯ ನೀಡುತ್ತವೆ. ಆ ರಾಸಾಯನಿಕ ಮನುಷ್ಯನಿಗೆ ಪರಮವಿಷ. ಆ ಮೀನಿನ ಮಾಂಸ ತಿಂದರೆ ಹೃದಯಾಘಾತ ತಕ್ಷಣ. ಹಾಗಾಗಿ ಅವು ಮನುಷ್ಯನಿಂದ ಸುರಕ್ಷಿತ.

ನಾವು ನೋಡುತ್ತಿದ್ದ ಗ್ರೀನ್‌ಲ್ಯಾಂಡ್ ಶಾರ್ಕಿನ ಕಣ್ಣಿನ ಹತ್ತಿರ ಜಲಾಂತರ್ಗಾಮಿ ಡ್ರೋನ್ ಹಾದುಹೋಯಿತು. ಅದರ ಕಣ್ಣನ್ನು ದಪ್ಪದ ಲೋಳೆಯಂಥದ್ದೇನೋ ಆವರಿಸಿತ್ತು. ಕಣ್ಣಿನ ಪೊರೆ ಬಂದಂತೆ ಕಾಣುತ್ತಿತ್ತು. ಇದಿರುವುದು ಕೆಲವು ಕಿಲೋಮೀಟರ್ ಆಳದಲ್ಲಿ ಎಂದೆನಲ್ಲ, ಅಷ್ಟು ಆಳದಲ್ಲಿ ಸೂರ್ಯ ರಶ್ಮಿ ಇಳಿಯುವುದಿಲ್ಲ. ಅದು ಕಗ್ಗತ್ತಲೆಯ ಪ್ರಪಂಚ. ಹಾಗಾಗಿ ಅವಕ್ಕೆ ಕಣ್ಣಿದ್ದರೂ ಕಾಣುವುದಕ್ಕೆ ಬೆಳಕೇ ಇರುವುದಿಲ್ಲ. ಅವುಗಳಿಗೆ ಅತ್ಯಂತ ಸೂಕ್ಷ್ಮವಾದ ವಾಸನಾ ಗ್ರಹಿಕೆ ಇರುತ್ತದೆ. ಅಷ್ಟು ಆಳದಲ್ಲಿ ಕಿಲೋಮೀಟರ್ ದೂರದಲ್ಲಿ ಪ್ರಾಣಿ ಸತ್ತು ಬಿದ್ದಿದ್ದರೆ ಈ ಶಾರ್ಕ್‌ಗಳಿಗೆ ಅದರ ವಾಸನೆ ಹತ್ತಿಬಿಡುತ್ತದೆ. ಅಷ್ಟೇ ಅಲ್ಲ, ಉಳಿದ ಮೀನುಗಳು ಸುತ್ತ ಓಡಾಡಿದರೆ ಆ ಸಂಚಲನವನ್ನು ಗ್ರಹಿಸಬಲ್ಲದು.
ಈ ಕಾರಣಗಳಿಂದಾಗಿ ಅವುಗಳಿಗೆ ಕಣ್ಣಿನ ಅವಶ್ಯಕತೆ ಅಷ್ಟಕ್ಕಷ್ಟೇ. ಅವುಗಳ ಕಣ್ಣಿಗೆ ಪರಾವಲಂಬಿ- ಪ್ಯಾರಸೈಟ್ ಅಂಟಿಕೊಂಡು ಬದುಕು ತ್ತಿರುತ್ತದೆ. ಅವುಗಳಿಗೆ ಕಣ್ಣು ಒಂದು ಮುಖ್ಯ ಇಂದ್ರಿಯವೇ ಅಲ್ಲ. ತಿಮಿಂಗಿಲಗಳು ನೂರು, ಹೆಚ್ಚೆಂದರೆ ಇನ್ನೂರು ವರ್ಷ ಬದುಕಿಯಾವು. ಆದರೆ ಇಂದು ಕಂಡದ್ದು 370 ವರ್ಷ ವಯಸ್ಸಿನ ಶಾರ್ಕ್. ಈಗೆರಡು ವರ್ಷದ ಹಿಂದೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ‘ಮಿಥುಸೇಲಾಹ್’ ಎಂಬ ಐದು ಸಾವಿರ ವರ್ಷ ಹಳೆಯ ಮರವೊಂದರ ಬಗ್ಗೆ ಬರೆದಿದ್ದೆ.

ಆ ಮರದ ಮೂಲಕಾಂಡದಲ್ಲಿ ಐದು ಸಾವಿರ ರಿಂಗ್‌ಗಳಿವೆ. ಆ ಮರ ಪ್ರತಿವರ್ಷ ಒಂದು ಸುತ್ತು ಅಗಲವಾಗುತ್ತದೆ. ಆ ಪ್ರತಿ ವರ್ತುಲವನ್ನು ಅಭ್ಯಾಸಮಾಡಿ, ಹಿಂದಿನ ಐದು ಸಾವಿರ ವರ್ಷದ ಪ್ರತಿ ಇಸವಿಯ ವಾತಾವರಣ, ಚಳಿ, ಗಾಳಿ ತಿಳಿಯಬಹುದು. ಅಂತೆಯೇ ಈ ಗ್ರೀನ್‌ಲ್ಯಾಂಡ್ ಶಾರ್ಕ್ ಎಂದರೆ ಅದು 370 ವರ್ಷದ ಜೀವಂತ ಇತಿಹಾಸ. ಇವೆಲ್ಲವೂ ಅಕ್ಷರಶಃ living fossils!

ಸಾಗರದಲ್ಲಿ ಇನ್ನೊಂದು ವಿಚಿತ್ರ ಲೋಳೆಮೀನು (Jellyfish) ಇದೆ. ಬಹುಶಃ ದೀರ್ಘಾಯುಷ್ಯದ ಮಟ್ಟಿಗೆ ಅದನ್ನು ಸೋಲಿಸುವವರೇ ಇಲ್ಲವೇನೋ. ಏಕೆಂದರೆ ಅದು ಸಾಯುವುದೇ ಇಲ್ಲ! Turritopsis Dohrnii: The Immortal Jellyfish. ಇದು ಹೇಗೆಂದರೆ, ಹುಟ್ಟು
ವಾಗ ಚಿಕ್ಕದೊಂದು ಮರಿಯಾಗಿ ಸಮುದ್ರದ ನೆಲಕ್ಕೆ, ಕಲ್ಲುಗಳಿಗೆ ಅಂಟಿಕೊಳ್ಳುತ್ತದೆ. ಅಲ್ಲಿಯೇ ಬೆಳೆದು ಲೋಳೆಮೀನಾಗುತ್ತದೆ. ಆಗ ಅಂಟಿಕೊಂಡದ್ದನ್ನು ಬಿಟ್ಟು ಅದು ಮೇಲಕ್ಕೆ ಈಜುತ್ತದೆ. ಮತ್ತೆ ವೃದ್ಧಾಪ್ಯಕ್ಕೆ ಸರಿದಂತೆ ಪುನಃ ಕಲ್ಲಿಗೆ ಬಂದು ಅಂಟಿಕೊಳ್ಳುತ್ತದೆ. ಹೀಗೆ
ಅಂಟಿಕೊಂಡಾಗ ಅದು ಹೆಚ್ಚು ಕಡಿಮೆ ಗಿಡದಂತೆ ಕಾಣಿಸುತ್ತದೆ. ಆ ಸಮಯದಲ್ಲಿ ಅದರ ಜೀವಕೋಶಗಳು ಪುನರುತ್ಪತ್ತಿಯಾಗುತ್ತವೆ. ನಿಜವಾದ ಪುನರ್ಜನ್ಮ. ಅಲ್ಲಿಂದ ಮುಂದೆ ಪುನಃ ಬೆಳೆದು ಸಮುದ್ರದಲ್ಲಿ ಈಜಲು ಹೊರಡುತ್ತದೆ. ಒಟ್ಟಾರೆ ಈ ಲೋಳೆಮೀನನ್ನು ಬೇರಿನ್ಯಾವುದೋ ಜೀವಿ ಕೊಲ್ಲದಿದ್ದರೆ ಅದು ಸಾಯುವುದೇ ಇಲ್ಲ.

ಇಂಥ ದೀರ್ಘಾಯುಷಿಗಳು, ಅಜರಾಮರ ಜೀವಿಗಳ ಬಗ್ಗೆ ಕೇಳಿದಾಗ, ಕಂಡಾಗ ನಾನು ಓದಿದ ಜಗತ್ತಿನ ಅತ್ಯಂತ ಹಳೆಯ ಕಥೆಯೊಂದು ನೆನಪಾಗುತ್ತದೆ. ಕಥೆ ಸುಮಾರು ನಾಲ್ಕು ಸಾವಿರ ವರ್ಷಕ್ಕಿಂತ ಹಳೆಯದು. ಮೆಸಪಟೋಮಿಯಾದ ಉತ್ಖನನದ ವೇಳೆ ಸುಮಾರು ಹನ್ನೆರಡು ಪಾಟಿಗಳಲ್ಲಿ ಬರೆದಿಟ್ಟ ಕಥೆ. Epic Of Gilgamesh- ಗಿಲ್ಗಮೇಶನ ಕಥೆ.

ಗಿಲ್ಗಮೇಶ್ ಮೆಸಪಟೋಮಿಯಾದ ಉರುಕ್ ರಾಜ್ಯದ ರಾಜ. ಬಲಾಢ್ಯ, ದುರಹಂಕಾರಿ. ಜನರನ್ನು ಶೋಷಿಸುತ್ತ, ಹಿಂಸಿಸುತ್ತಿದ್ದ ವಿಕೃತ ಮನಸ್ಥಿತಿಯವ, ದುಷ್ಟ. ಪ್ರಜೆಗಳ ಗೋಳು ದಿನದಿಂದ ದಿನಕ್ಕೆ ಹೆಚ್ಚಾಯಿತು. ಒಂದು ದಿನ ಅದು ದೇವರಿಗೂ ಕೇಳಿಸಿತು. ಆಗ ದೇವರು ಈ ರಾಜನನ್ನು ಸಂಭಾಳಿಸಲೆಂದು ‘ಎಂಕಿಡು’ ಎಂಬ ದೇವಮಾನವನೊಬ್ಬನನ್ನು ಕಳುಹಿಸಿಕೊಡುತ್ತಾನೆ. ಹೇಗಾದರೂ ಮಾಡಿ ಈ ಗಿಲ್ಗಮೇಶನ ಕ್ರೌರ್ಯವನ್ನು ತಗ್ಗಿಸುವುದು ಎಂಕಿಡುವಿನ ಕೆಲಸ. ಎಂಕಿಡು ಕ್ರಮೇಣ ಗಿಲ್ಗಮೇಶನ ಸಾಮೀಪ್ಯ ಪಡೆಯುತ್ತಾನೆ. ಕ್ರಮೇಣ ಅವರಿಬ್ಬರೂ
ಪರಮ ಸ್ನೇಹಿತರಾ ಗಿಬಿಡುತ್ತಾರೆ. ಇಬ್ಬರೂ ಸೇರಿ ಅನಾಚಾರಕ್ಕೆ ಇಳಿದುಬಿ ಡುತ್ತಾರೆ. ಇದನ್ನು ಕಂಡ ದೇವರು ತಾನು ಕಳುಹಿಸಿಕೊಟ್ಟ ಎಂಕಿಡುವಿನ ಆಯಸ್ಸನ್ನು ಮುಗಿಸಿಬಿಡುತ್ತಾನೆ.

ಪ್ರಾಣಸ್ನೇಹಿತ ಎಂಕಿಡುವನ್ನು ಕಳೆದುಕೊಂಡ ಗಿಲ್ಗಮೇಶ್ ದಿಗ್ಭ್ರಾಂತನಾಗುತ್ತಾನೆ. ಸಾವಿನ ಶೋಕದ ನಡುವೆಯೇ ‘ನಾನು ಸಾಯಲೇಬಾರದು, ಅಜರಾಮರನಾಗಬೇಕು’ ಎಂದು ಗಿಲ್ಗಮೇಶ್ ಯೋಚಿಸುತ್ತಾನೆ. ಮುಪ್ಪಾಗಬಾರದೆಂದು ಏನೇನೋ ಔಷಧ, ಮಾಂಸ ಎಲ್ಲವನ್ನೂ ತಿನ್ನುತ್ತಾನೆ.

ಮಕ್ಕಳನ್ನು ಬಲಿಕೊಡುತ್ತಾನೆ. ಅಮರತ್ವ ಪಡೆಯಬೇಕೆಂದು ಆತ ಮಾಡದೆ ಹೋದ ಕೆಲಸವಿಲ್ಲ. ಕೊನೆಗೊಂದು ದಿನ ಅವನಿಗೆ ತಾನು ಸಾಯುವುದು ಪಕ್ಕಾ ಎಂಬ ಅರಿವಾಗುತ್ತದೆ. ಸ್ನೇಹಿತನನ್ನು ಕಳೆದುಕೊಂಡ ನಂತರ ಏಕಾಂತ ಆವರಿಸುತ್ತದೆ. ಸಂಪತ್ತು ಬರಿದಾಗುತ್ತದೆ. ಆಗ ಅಮರತ್ವಕ್ಕಿಂತ ಬದುಕಿನ ಪೂರ್ಣತೆಯೆಡೆಗೆ ಅವನ ಒಲವು ತಿರುಗಿಕೊಳ್ಳುತ್ತದೆ. ತಾನು ಶಾಶ್ವತವಾಗಿ ಬದುಕಿರಲು ಸಾಧ್ಯವಿಲ್ಲ, ಆದರೆ ತನ್ನ ಕಥೆ ಬದುಕಿರಬಹುದು ಎಂದು ಈ ಕಥೆ ಬರೆಸಿ ಸಾಯುತ್ತಾನೆ. ಇದು ಆ ಮೆಸಪಟೋಮಿಯಾ ಪಾಟಿಯ ಮೇಲಿದ್ದ ಕಥೆ.

ದೀರ್ಘಾಯುಷ್ಯ, ಅಮರತ್ವ ಇವೆಲ್ಲ ಇಂದು ನಿನ್ನೆಯ ಬಯಕೆಯಲ್ಲ. ಸಾವಿನ ಖಚಿತತೆಯ ಅರಿವು ಎಲ್ಲರಲ್ಲಿಯೂ ಸುಪ್ತವಾಗಿ, ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಆದರೂ ಅಮರತ್ವದ ಸಾಧ್ಯತೆಯ ಬಗ್ಗೆ ಕುತೂಹಲ ಇದ್ದೇ ಇದೆ. ಫೀನಿಕ್ಸ್ ಹಕ್ಕಿಯನ್ನು ಸುಟ್ಟರೆ ಅದರ ಬೂದಿಯಿಂದ
ಎದ್ದುಬರುತ್ತದೆ ಎಂಬುದೊಂದು ನಂಬಿಕೆಯಿದೆ. ಅದೇ ರೀತಿ, ಯಾವುದೇ ಸಂಸ್ಕೃತಿಯನ್ನು ತೆಗೆದುಕೊಂಡರೂ ಅಲ್ಲಿ‌ ಅಮರತ್ವದ ಬಗ್ಗೆ ಏನೋ ಒಂದು ಕಥೆ ಇದ್ದೇ ಇರುತ್ತದೆ.

ನಮ್ಮ ಮಹಾಕಾವ್ಯಗಳಲ್ಲಿ ಅಮರತ್ವವನ್ನು ಒಳ್ಳೆಯದೆಂದೂ, ವರವೆಂದೂ ಬಿಂಬಿಸಿದ್ದಿದೆ. ಅಂತೆಯೇ ಅದೊಂದು ಶಾಪವೆನಿಸಿಕೊಂಡದ್ದೂ ಇದೆ. ಅಶ್ವತ್ಥಾಮನಿಗೆ ಸಮಯ ಕೊನೆಯಾಗುವವರೆಗೂ ಏಕಾಂಗಿಯಾಗಿ ನೋವಿನಿಂದ ಇರಬೇಕೆಂಬುದು ಶಾಪ. ಮೊನ್ನೆ ದೀಪಾವಳಿಗೆ ಬಂದ
ಬಲಿಚಕ್ರವರ್ತಿಗೆ ಅಮರತ್ವ ಒಂದು ವರ. ಹನುಮಂತನೂ ಚಿರಂಜೀವಿ- ಅವನಿಗದು ಶಾಪವಲ್ಲ. ವಿಭೀಷಣ, ಕೃಪಾಚಾರ್ಯ, ಮಾರ್ಕಂಡೇಯ ರದ್ದೂ ಹೀಗೆಯೇ. ಈ ಭೂಮಿಯಲ್ಲಿ ಒಂದೊಂದು ಜೀವಿಯದು ಒಂದೊಂದು ಆಯುಷ್ಯ. ಹಾಗಾಗಿ ಸಮಯ ಎನ್ನುವುದು ಈ ವಿಷಯದಲ್ಲಿಯೂ ಸಾಪೇಕ್ಷವೇ. ಮನೆಯ ನೊಣದ್ದು, ಸೊಳ್ಳೆಯದು ಎರಡರಿಂದ ಮೂರು ವಾರದ ಬದುಕು.

‘ಮೇ -’ ಎಂಬ ನೀರನೊಣ ಬದುಕುವುದು ಒಂದೇ ಒಂದು ದಿನ. ಅದರ ಪ್ರಾಯಾವಸ್ಥೆ ಕೆಲವೇ ಗಂಟೆಗಳದ್ದು. ಆದರೆ ನಾಲ್ಕುನೂರು ವರ್ಷಗಟ್ಟಲೆ ಬದುಕುವ ಗ್ರೀನ್‌ಲ್ಯಾಂಡ್ ಶಾರ್ಕ್ ಪ್ರಾಯಕ್ಕೆ ಬರುವುದೇ ತನ್ನ ನೂರೈವತ್ತನೇ ವಯಸ್ಸಿಗೆ! ಹುಟ್ಟಿದ ಒಂದೂವರೆ ಶತಮಾನದವರೆಗೂ ಅದು
ಮಗು. ಇಷ್ಟು ವರ್ಷದಲ್ಲಿ ಮನುಷ್ಯನ ಆರೇಳನೇ ತಲಗಳಿ ಕಳೆದಿರುತ್ತದೆ. ಆ ಏಳನೇ ಸಂತತಿಗೆ ಮೂಲವಾದವನ ಹೆಸರೂ ಗೊತ್ತಿರುವುದಿಲ್ಲ.
ಇಂದಿನ ವಿeನಿಗಳು ಜಂಬಕೊಚ್ಚಿಕೊಳ್ಳುವ ಪ್ರಕಾರ ನಾವೀಗ ಮನುಷ್ಯ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಆಯಸ್ಸು ಹೊಂದಿದ್ದೇವೆ. ನಮ್ಮಲ್ಲಿ ‘ಶತಮಾನಂ ಭವತಿ ಶತಾಯುಷ್ಯ..’ ಎಂಬ ಆಶೀರ್ವಾದದ ನುಡಿಯಿದೆ. ಶ್ರೀಕೃಷ್ಣ 125, ಅರ್ಜುನ 100 ವರ್ಷ ಬದುಕಿದವರೆಂದಿದೆ.
ಆದರೆ ಶತಾಯುಷಿಗಳ ಸಂಖ್ಯೆ ಎಂದಿಗೂ ಕಡಿಮೆಯೇ ಇತ್ತು. ಎಲ್ಲಾ ಅಬ್ಬರು, ಇಬ್ಬರು ವಿಶೇಷರು.

ಹಾಗಾಗಿ ಮನುಷ್ಯ ಸಮಾಜ ಬಹು ದೀರ್ಘಕಾಲದಿಂದ ಆಯಸ್ಸಿಗನುಗುಣವಾಗಿ ರೂಪುಗೊಳ್ಳುತ್ತ ಬಂದಿದೆ. ವಿಶ್ವಯುದ್ಧದ ಸಮಯದಲ್ಲಿ ಜಗತ್ತಿನ ಜನರ ಸರಾಸರಿ ಆಯಸ್ಸು 45 ಇತ್ತು. ನಮಗೆ ಸ್ವಾತಂತ್ರ ಸಿಗುವಾಗ ಭಾರತದಲ್ಲಿನ ಜನರ ಸರಾಸರಿ ಆಯಸ್ಸು 32! ಪರಿಸ್ಥಿತಿಗೆ ತಕ್ಕಂತೆ ಆಯಸ್ಸು ಕುಗ್ಗಿದ್ದು ಇತಿಹಾಸವೇ ವಿನಾ, ಹಿಗ್ಗಿದ್ದು ಈಗಲೇ. ಸದ್ಯ ಮನುಷ್ಯ ಆಯಸ್ಸಿನ ಜಾಗತಿಕ ಸರಾಸರಿ 73. ಅಮೆರಿಕದಲ್ಲಿ ಇದು 79. ಜಪಾನಿನಲ್ಲಿ ಅತಿಹೆಚ್ಚು- 85. ಜಪಾನಿನಲ್ಲಿ ಒಂದು ಲಕ್ಷ ಶತಾಯುಷಿಗಳು ಇಂದು ಜೀವಂತವಿದ್ದಾರಂತೆ.

ಅದರಲ್ಲಿ ಶೇ.88ರಷ್ಟು ಮಹಿಳೆಯರು ಎಂಬುದೂ ಗಮನಾರ್ಹ. ಅದೇನೇ ಇರಲಿ, ಇಂದು ಅಲ್ಲಿ ಅದುವೇ ದೊಡ್ಡ ಸಮಸ್ಯೆ. ಯಾವ ದೇಶದ ವ್ಯವಸ್ಥೆಯೂ ಅಷ್ಟು ಆಯುಷ್ಯವನ್ನು ಸಂಭಾಳಿಸುವ ರೀತಿ ಬೆಳೆದುಕೊಂಡಿಲ್ಲ. ನಮ್ಮ ಇಕನಾಮಿಕ್ಸ್, ವಹಿವಾಟು ಯಾವುದೂ ದೀರ್ಘಾ ಯುಷ್ಯವನ್ನು ಗಮನಿಸಿಟ್ಟು ರಚನೆಯಾದಂಥವಲ್ಲ. ಹಾಗಾಗಿಯೇ ಇಂದು ಎಲ್ಲಿಲ್ಲದ ಪ್ರಮಾಣದಲ್ಲಿ ವೃದ್ಧಾಶ್ರಮದ ಅವಶ್ಯಕತೆ ಎದುರಾಗುತ್ತಿದೆ. ಒಂದು ವಯಸ್ಸಿನ ನಂತರದ ಬದುಕು ಕಷ್ಟವಾಗಿದೆ. ಆಯಸ್ಸು ಹೆಚ್ಚುವುದು ಖುಷಿಯಾದರೆ ಅದರ ಹೊರೆ ಹೊರುವವರು ಯಾರು ಎಂಬುದೂ ಪ್ರಶ್ನೆಯಾಗಿದೆ.

ಜೇನ್ನೊಣ ಮೊದಲಾದ ಚಿಕ್ಕ ಜೀವಿತಾವಧಿಯ ಜೀವಿಗಳಿಗೆ ಸಮಯದ ಅರಿವು ತೀವ್ರವಾಗಿರುತ್ತದೆಯಂತೆ. ಗ್ರೀನ್ ಲ್ಯಾಂಡ್ ಶಾರ್ಕ್ ಮೊದಲಾದವಕ್ಕೆ ಅದು ತೀರಾ ಮಂದ. ಹಾಗಾಗಿಯೇ ಅದರ ಚಲನವಲನ ಅಷ್ಟು ನಿಧಾನ. ಆಮೆಯೂ ಹಾಗೆಯೇ, ಸಮಯದ ಕಲ್ಪನೆ ನಿಧಾನ. ಪ್ರತಿ ಯೊಂದು ಜೀವಿಗೂ ಸಮಯದ ಅರಿವು ಆಯುಷ್ಯಕ್ಕೆ ತಕ್ಕಂತೆ ಇರುತ್ತದೆ. ಉದ್ದೇಶ ಮುಗಿದ ಮಾರನೇ ಕ್ಷಣ ಯಾವುದೇ ಜೀವಿ ಬದುಕುಳಿಯುವುದಿಲ್ಲ. ಈಗ ಏಕಾಏಕಿ ಮನುಷ್ಯನ ಆಯಸ್ಸು ದುಪ್ಪಟ್ಟು ಹೆಚ್ಚಿಬಿಟ್ಟಿದೆ. ಆದರೆ ಸಮಾಜ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಹಾಗಾಗಿ ಒಂದು ವಯಸ್ಸಿನ ನಂತರ ಉದ್ದೇಶಗಳೆಡೆಗೆ ಒಂದಿಷ್ಟು ಗೊಂದಲಗಳು ಹುಟ್ಟಿಬಿಡುತ್ತವೆ. ಆಗೆಲ್ಲ ಗ್ರೀನ್‌ಲ್ಯಾಂಡ್ ಶಾರ್ಕ್‌ನ ಸಮಾಧಾನದ ಬದುಕು ಪ್ರಸ್ತುತವಾಗುತ್ತದೆ.