ಶಶಾಂಕಣ
ಶಶಿಧರ ಹಾಲಾಡಿ
21ನೇ ಶತಮಾನದ 3ನೇ ದಶಕದಲ್ಲಿರುವ ನಾವು, ಒಂದು ಗುಣಮಟ್ಟದ ರಸ್ತೆಯನ್ನು ಒದಗಿಸಿಕೊಡಲಾರೆವೆ? ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ನೆಪದಿಂದಾಗಿ, ಶಿರಾಡಿ ಘಾಟ್‌ನ ಮತ್ತು ಶಿವಮೊಗ್ಗದಿಂದ ಬೀರೂರಿನ ತನಕದ ರಸ್ತೆಗಳು ಭಯಾನಕ ಸ್ವರೂಪವನ್ನು ಹೊಂದುವಂತೆ ಮಾಡಬಹುದೆ?
ದೀರ್ಘಾವಧಿ ಯ ಬಸ್ ಪ್ರಯಾಣ ಸುಖಕರವಾಗಿರಬೇಕಾದರೆ,ಕುಡಿದ ನೀರು ಅಲ್ಲಾಡದಂತೆ ಪಯಣಿಸಬೇಕಾದರೆ, ಕೆಲವು ಐಷಾರಾಮಿ
ಬಸ್ಸುಗಳು ನಮ್ಮ ರಾಜ್ಯದಲ್ಲಿ ಲಭ್ಯ. ಅಂಥದೊಂದು ಅನುಭವ ಪಡೆಯಲೆಂದು, ಮಂಗಳೂರು ಮೂಲಕ ಸಾಗುವ ಬಸ್‌ನಲ್ಲಿ ಚೀಟಿ ಕಾಯ್ದಿರಿಸಿ, ಬೆಳಗ್ಗೆ 8 ಗಂಟೆಗೆಲ್ಲಾ ಬೆಂಗಳೂರು ಬಸ್ ನಿಲ್ದಾಣ ತಲುಪಿಬಸ್ಸಿನಲ್ಲಿ ಕುಳಿತು, “ಎಷ್ಟು ಗಂಟೆಗೆ ತಲುಪಬಹುದು?” ಎಂದು ನಿರ್ವಾಹಕರನ್ನು ಕೇಳಿದೆ. “ಸರಿಯಾಗಿ ಹೇಳುವುದು ಕಷ್ಟ ಸರ್! ರಸ್ತೆ ಚೆನ್ನಾಗಿಲ್ಲವಲ್ಲ!” ಎಂದರು. ಈ ಉತ್ತರ ಅಚ್ಚರಿ ತಂದಿತು. ಬೆಂಗಳೂರಿನಿಂದ
ಮಂಗಳೂರಿಗೆ ಉತ್ತಮ ರಸ್ತೆಯಿಲ್ಲವೆ?! 10 ವರ್ಷ ಹಿಂದೆಯೇ, ಅಲ್ಲಿಗೆ ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಿ, ಹಲವು ಬಾರಿ ಹೊಸ ಕಾಂಕ್ರೀಟು ರಸ್ತೆಯನ್ನು ನಿರ್ಮಿಸಲಾಗಿತ್ತು.
ಹೀಗಾಗಿ, ಆ ಹೆದ್ದಾರಿಯಲ್ಲಿ ಹವಾನಿಯಂತ್ರಿತ ಬಸ್‌ನಲ್ಲಿ ಪಯಣಿಸುವುದು ಸುಖಕರವಾರುತ್ತದೆ ಎಂಬ ಕಲ್ಪನೆಯಿತ್ತು. ಅದು ಕೇವಲ ‘ಭ್ರಮೆ’
ಎನಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಆ ಉದ್ದನೆಯ ಬಸ್ ಹಾಸನ ದಾಟಿದಾಕ್ಷಣ ಪ್ರಯಣಾನುಭವದ ದುಸ್ಥಿತಿಯನ್ನು ತೆರೆದಿಡಲಾರಂಭಿಸಿತು.
ಹಾಸನದವರೆಗೆ ಚೆನ್ನಾಗಿದ್ದ ರಸ್ತೆ, ಸಕಲೇಶಪುರದತ್ತ ಸಾಗುವಾಗ ಸ್ವರೂಪ ಬದಲಿಸಿಕೊಂಡಿತು. ಅಲ್ಲಲ್ಲಿ ನಿರ್ಮಾಣ ಹಂತದ ರಸ್ತೆ, ಕೆಲವು ನೂರು ಅಡಿಗಳಷ್ಟು ನಿರ್ಮಾಣಗೊಂಡಿದ್ದರೂ ಸಂಚಾರಕ್ಕೆ ತೆರೆದುಕೊಂಡಿಲ್ಲದ ಭಾಗ, ಕೆಲವೆಡೆ ಕಿರಿದಾದ ರಸ್ತೆ, ಗುಂಡಿ-ಗೊಟರು, ಇನ್ನುಕೆಲವೆಡೆ ಹೆದ್ದಾರಿ ಎನ್ನಲಾಗದಂಥ ಭಾಗಗಳು! ಹೀಗೇಕೆ ಎಂದು ಯೋಚಿಸುಷ್ಟರಲ್ಲಿ, ಶಿರಾಡಿ ಘಾಟಿ ರಸ್ತೆಯ ಕೆಲವೆಡೆ ಇನ್ನಷ್ಟು ಭೀಕರ ಎನಿಸುವ ಅನುಭವಗಳಾದವು.
ಉದ್ದಕ್ಕೂ ರಸ್ತೆ, ಸೇತುವೆಗಳ ನಿರ್ಮಾಣ ನಡೆದಿತ್ತು. ಅಲ್ಲಲ್ಲಿ ಮಣ್ಣು ಕಲ್ಲುಗಳ ರಾಶಿ. ರಸ್ತೆ ಪಕ್ಕದಲ್ಲೇ ಕುಟುಂಬ ಸಮೇತ ಟೆಂಟಿನಲ್ಲಿ
ವಾಸಿಸುತ್ತಿದ್ದ ಕೆಲಸಗಾರರು. ಮಕ್ಕಳನ್ನೂ ನಿರ್ಮಾಣ ಸ್ಥಳಕ್ಕೆ ಕರೆತಂದಿದ್ದ ಕುಟುಂಬಗಳ ಬವಣೆಗಳ ದರ್ಶನ. ಕೆಲವೆಡೆ ರಸ್ತೆಯ ಪಕ್ಕದ ಗುಡ್ಡಗಳನ್ನು ಕಡಿದಾಗಿ, ಭೀಕರವಾಗಿ ಕಡಿದುಹಾಕಲಾಗಿತ್ತು. ಹೀಗೆ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದ ಯಂತ್ರಗಳು ಅಲ್ಲಲ್ಲಿ ನಿಂತಿದ್ದವು, “ನಮಗೆ ಇನ್ನಷ್ಟು ಆಹಾರ ಕೊಡಿ, ಇನ್ನಷ್ಟು ಗುಡ್ಡ ತರಿಯುತ್ತೇವೆ” ಎಂದು ಹೇಳುವಂತಿದ್ದವು. ಕಡಿದುಹಾಕಲಾದ ಗುಡ್ಡಕ್ಕೆ ಸೂಕ್ತ ಆಧಾರ ಅಥವಾ ಕಲ್ಲಿನ ಕಟ್ಟೋಣದ ಭದ್ರತೆ ನೀಡದೇ, ನೇರವಾಗಿ ಗುಡ್ಡ ಕಡಿದು ರಸ್ತೆ ಮಾಡಿದ್ದರಿಂದಾಗಿ, ಕಳೆದ ಮಳೆಗಾಲದಲ್ಲಿ ಆ ರಸ್ತೆಯಲ್ಲಿ ಒಂದೆರಡು ಭಯಾನಕ ಗುಡ್ಡಕುಸಿತಗಳಾಗಿದ್ದವು; ಲಾರಿ, ಕಾರುಗಳು ಅದರಲ್ಲಿ ಸಿಲುಕಿದ್ದರೂ ಪ್ರಾಣಾಪಾಯವಾಗಿರಲಿಲ್ಲ. ಅದೇ ವೇಳೆಗೆ ಅಂಕೋಲಾದ
ಬಳಿ ಇಂಥದ್ದೇ ಅವೈಜ್ಞಾನಿಕ ರಸ್ತೆ ವಿಸ್ತರಣಾ ಕಾಮಗಾರಿಯಿಂದಾಗಿ ಭಾರಿ ಗುಡ್ಡವು ರಸ್ತೆಯ ಮೇಲೆ ಕುಸಿದು, ಅದರ ಪಕ್ಕದಲ್ಲಿದ್ದ ಮನೆ-ಕಂ-
ಕ್ಯಾಂಟೀನ್ ವಾಸಿಗಳು ಸೇರಿದಂತೆ ಆರೆಂಟು ಜನರನ್ನು ಆಹುತಿ ತೆಗೆದುಕೊಂಡಿತ್ತು. ಆ ಜೀವಹಾನಿಗೆ ಅವೈಜ್ಞಾನಿಕ ಗುಡ್ಡತರಿತವೇ ಕಾರಣ
ಹೊರತು, ಮಳೆ ಅಲ್ಲವೇ ಅಲ್ಲ!
ಶಿರಾಡಿ ಘಾಟಿ ಮಾರ್ಗವು ಅತ್ಯಂತ ಜನಪ್ರಿಯ ಎನ್ನಬಹುದಾದ, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ರಸ್ತೆ. ಅವುಗಳ ಪೈಕಿ,
ಪೆಟ್ರೋಲಿಯಂ ಉತ್ಪನ್ನ ಸಾಗಿಸುವ ಲಾರಿಗಳು, ಕಂಟೈನರ್ ಸಾಗಿಸುವ ಟ್ರಕ್‌ಗಳೂ ಸೇರಿವೆ.
ಹಡಗಿನ ಮೂಲಕ ವಸ್ತುಗಳನ್ನು ತರಿಸಲು ನಮ್ಮ ರಾಜ್ಯದಲ್ಲಿರುವ ಪ್ರಮುಖ ಮತ್ತು ಏಕೈಕ ಬಂದರು ಮಂಗಳೂರು; ಅಲ್ಲಿಂದ ಕಂಟೈನರ್‌ಗಳನ್ನು
ರಾಜಧಾನಿಗೆ ಸಾಗಿಸಲು ಶಿರಾಡಿ ಘಾಟ್ ಒಂದೇ ಪ್ರಮುಖ ಸಂಪರ್ಕಮಾರ್ಗ. ಟ್ರಕ್, ಲಾರಿಗಳ ನಡುವೆ ಸಂಚರಿಸುವ ಕಾರುಗಳು ಪುಟಾಣಿ
ಆಟಿಕೆಗಳಂತೆ ಕಾಣಿಸುತ್ತವೆ. ಜತೆಯಲ್ಲೇ ರಾಜ್ಯ ಸಾರಿಗೆ ಬಸ್, ವೋಲ್ವೋ ಬಸ್, ಗೂಡ್ಸ್ ಟೆಂಪೋ, ಮೋಟಾರ್ ಸೈಕಲ್, ಸ್ಕೂಟರುಗಳು. ಆದರೆ ಇವೆಲ್ಲವೂ ಸಂಚರಿಸಲು ಶಿರಾಡಿ ಘಾಟ್‌ನಲ್ಲಿ, ಈಗ ಅಂದರೆ ನವೆಂಬರ್ ೨೦೨೪ರಲ್ಲಿ, ಹಲವು ಕಡೆವ ಕಿರಿದಾದ ರಸ್ತೆ ಮಾತ್ರ ಇದೆ!
ದ್ವಿಮುಖ ಸಂಚಾರ ಒದಗಿಸುವ, ಮಧ್ಯೆ ರಸ್ತೆ ವಿಭಜಕ ಹೊಂದಿರಬೇಕಾಗಿದ್ದ ಈ ರಸ್ತೆಯಲ್ಲಿ, ಇಂಥ ಕಿರಿದಾದ ರಸ್ತೆಯನ್ನು ಬಹುಭಾಗಗಳಲ್ಲಿ ಕಂಡು ಆಘಾತವಾಯಿತು! ಆ ಕಿರಿದಾದ ರಸ್ತೆಯಲ್ಲಿ ಉದ್ದ ದೇಹದ ನಮ್ಮ ವೋಲ್ವೋ ಬಸ್ ನಿಧಾನವಾಗಿ ಚಲಿಸುತ್ತಾ, ತಿರುವುಗಳಿದ್ದಾಗ ಅಕ್ಷರಶಃ ತಿಣುಕುತ್ತಾ ಸಾಗುತ್ತಿತ್ತು. ಅತ್ಯಾಧುನಿಕ ವ್ಯವಸ್ಥೆಯಿರುವ, ದುಬಾರಿ ಬೆಲೆಯ ಹವಾನಿಯಂತ್ರಿತ ಬಸ್‌ಗಳನ್ನು, ಇಂಥ ರಸ್ತೆಗಳಲ್ಲಿ
ಓಡಿಸಲೇಬಾರದು. ಓಡಿಸಿದಲ್ಲಿ ಅವು ಬಹುಬೇಗನೆ ಕೆಟ್ಟುಹೋಗುವ ಸಂಭವ ಅಧಿಕ.
ಆದರೂ, ಪ್ರತಿನಿತ್ಯ ಹತ್ತಾರು ವೋಲ್ವೋ ಬಸ್‌ಗಳು ಮಂಗಳೂರು-ಬೆಂಗಳೂರು ನಡುವೆ ಸಂಚರಿಸುತ್ತಲೇ ಇವೆ. ರಸ್ತೆಯ ದುಸ್ಥಿತಿಯಿಂದಾಗಿ ನಲುಗುತ್ತಿವೆ. ಇದನ್ನು ಬಂಧಪಟ್ಟವರು ಗಮನಿಸಬೇಕು. ಅತಿ ದುಸ್ಥಿತಿಯ ಆ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಾ, ಘಾಟಿಯಿಳಿದು ಶಿರಾಡಿ ಹಳ್ಳಿಯನ್ನು ತಲುಪಿದೆವು. ಅಲ್ಲಿಂದ ಸ್ವಲ್ಪ ದೂರ ಉತ್ತಮ ರಸ್ತೆ ಕಂಡಿತು. ಆದರೆ, ಆ ನೆಮ್ಮದಿ ಕ್ಷಣಿಕ- ಅಲ್ಲಿಂದಾಚೆ ಹೊಸ ಹೆದ್ದಾರಿ, ಮೇಲ್ಸೇತುವೆಗಳ ನಿರ್ಮಾಣ ಹಲವು ಕಡೆ ಭರದಿಂದ ಸಾಗಿತ್ತು.
ಹೆಜ್ಜೆ ಹೆಜ್ಜೆಗೂ ಅಡೆತಡೆ, ರಸ್ತೆ ಬದಲಿ, ಕಿರಿದಾದ ರಸ್ತೆ! ಹೊರಗಿನ ಬಿಸಿಲಿನ ತಾಪ, ಧೂಳು ನಮ್ಮನ್ನು ಕಾಡುತ್ತಿರಲಿಲ್ಲ ನಿಜ; ಹವಾನಿಯಂತ್ರಕ ಅಷ್ಟು ರಕ್ಷಣೆ ಒದಗಿಸಿತ್ತು. ಆದರೆ ದುಬಾರಿ ಬೆಲೆ ತೆತ್ತು ಖರೀದಿಸಿದ ಚೀಟಿಗೆ ನ್ಯಾ ಯುತ ಎನಿಸುವ ಸುಗಮ ಸಂಚಾರ ಆ ಬಸ್‌ನಲ್ಲಿದ್ದವರಿಗೆ ಬೇಡವೆ? “ಸರ್ ರಸ್ತೆ ಸರಿಯಿಲ್ಲ, ನಾವೇನು ಮಾಡೋದು?” ಎನ್ನುತ್ತಾರೆ ಚಾಲಕರು, ನಿರ್ವಾಹಕರು. ನಿಜ, ಅವರು ಅಸಹಾಯಕರು. ಆದರೆ, ಶಿರಾಡಿ ಘಾಟ್ ರಸ್ತೆ, ಕಳೆದ ಒಂದು ದಶಕದಿಂದಲೂ ಸರಿಯಿಲ್ಲ, ರಿಪೇರಿ ನಡೆಯುತ್ತಿದೆ” ಎಂಬಂತಾಗಲು ಯಾರು ಕಾರಣ? ಕಂಟ್ರಾಕ್ಟರುಗಳೇ, ಕೆಲಸಗಾರರೇ, ಎಂಜಿನಿಯರುಗಳೇ, ಸರಕಾರದ ವಿವಿಧ ಪ್ರಾಧಿಕಾರಗಳೇ ಅಥವಾ ಸಾಮಾಜಿಕ ಜವಾ ಬ್ದಾರಿ ಹೊರಬೇಕಿರುವ, ಹೊಣೆಗಾರಿಕೆಗೆ ಬದ್ಧರಾಗಿರುವ ಜನಪ್ರತಿನಿಽಗಳು/ರಾಜಕಾರಣಿಗಳೇ? ಮಂಗಳೂರು ಮತ್ತು ದಕ್ಷಿಣ ಕನ್ನಡದ ಭಾಗಗಳನ್ನು ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ನಿರ್ಲಕ್ಷಿಸುತ್ತಲೇ ಬರಲಾಗುತ್ತಿದೆ ಎಂಬ ದೂರು ಹಳೆಯದು. ಅದು ನಿಜವಿರಬಹುದೆ? ಶಿರಾಡಿ ಘಾಟ್ ರಸ್ತೆಯ ದುಸ್ಥಿತಿಯನ್ನು, ಒಂದು ದಶಕಕ್ಕೂ ಮೀರಿದ ಅವಧಿಯಿಂದ ಅದರ ನಿರ್ಮಾಣ, ಮರುನಿರ್ಮಾಣ ಮತ್ತು ದುರಸ್ತಿ ನಡೆಯುತ್ತಿರುವುದನ್ನು ಕಂಡರೆ, ಆ ಆರೋಪ ನಿಜವಿರಬಹುದೇ ಎನಿಸುತ್ತದೆ. ಅಲ್ಲಿ ಹಲವೆಡೆ ಸಿಮೆಂಟ್ ರಸ್ತೆ ನಿರ್ಮಾಣ ನಡೆದಿದೆ; ಆ ರಸ್ತೆಯ ಮೇಲೆ ಟಾರು ಹೊದಿಕೆ ಹಾಕಲಾಗಿದ್ದು, ಅದು ಕೆಲವು ಕಡೆ ಕಿತ್ತುಹೋಗಿರುವುದೂ ಕಂಡುಬರುತ್ತದೆ. ಶ್ರೀಸಾಮಾನ್ಯರಿಗೆ ಇದು ಅಚ್ಚರಿಯ ವಿಷಯವೂ ಎನಿಸೀತು- ಸಿಮೆಂಟ್ ರಸ್ತೆಯ ಮೇಲೆ ಟಾರಿನ ಲೇಪನವೇಕೆ? ಹಾಂ! ಬೆಳಗ್ಗೆ 8 ಗಂಟೆಗೆ ಶುರುವಾದ ನಮ್ಮ ಪಯಣ, ಮಂಗಳೂರಿನ ಬಸ್ ನಿಲ್ದಾಣ ಪ್ರವೇಶಿಸಿದಾಗ ಸಂಜೆ 4 ಮೀರಿತ್ತು. ಸುಮಾರು ಒಂದೂವರೆ ತಾಸಿನ ವಿಳಂಬ. ಅಲ್ಲಿಂದಾಚೆ ಕುಂದಾಪುರದತ್ತ ಸಾಗಿದ ಹೆದ್ದಾರಿ ಚೆನ್ನಾಗಿತ್ತು.
ಒಂದು ರಾಜ್ಯ/ದೇಶ ಅಭಿವೃದ್ಧಿ ಹೊಂದಲು ಉತ್ತಮ ರಸ್ತೆ, ಹೆದ್ದಾರಿಗಳು ಅವಶ್ಯಕ ಎಂಬುದರಲ್ಲಿ ಗೊಂದಲಗಳಿಲ್ಲ. ಅಮೆರಿಕದಂಥ ಮುಂದುವರಿದ ದೇಶಗಳು, 20ನೇ ಶತಮಾನದ ಆರಂಭದಿಂದಲೇ (ಸುಮಾರು 1925 ರಿಂದ) ಗುಣಮಟ್ಟದ ಹೆದ್ದಾರಿಗಳನ್ನು ನಿರ್ಮಿಸಲು
ಆರಂಭಿಸಿದ್ದವು, ಈಗಲೂ ಆ ಕೆಲಸವನ್ನು ದಕ್ಷತೆಯಿಂದ ಮುಂದುವರಿಸಿವೆ. ಭಾರತವೂ ಉತ್ತಮ ಹೆದ್ದಾರಿಗಳ ನಿರ್ಮಾಣವನ್ನು ಆರಂಭಿಸಿದೆ; ಆದರೆ, ಬೆಂಗಳೂರು-ಮಂಗಳೂರು ನಡುವಿನ ಈ ರಸ್ತೆಯ ಈಗಿನ ಸ್ಥಿತಿ ಕಂಡು, ಮನ ಮುದುಡಿತು.
ಮತ್ತೊಂದು ದುರಂತವೆಂದರೆ, ಈ ಹೆದ್ದಾರಿಯ ಭಾಗವಾಗಿರುವ ಸಕಲೇಶಪುರ ಮತ್ತು ಶಿರಾಡಿ ನಡುವಿನ ರಸ್ತೆಯೂ ಒಂದು ದಶಕದಿಂದ ದುಸ್ಥಿತಿ
ಯಲ್ಲಿದೆ! ಇದಕ್ಕೆ ಉತ್ತರದಾಯಿತ್ವ ಶೂನ್ಯವೇ? ವಾಪಸಾಗುವಾಗ, ಶಿರಾಡಿ ಘಾಟಿಯ ದುಸ್ಥಿತಿ ನೆನೆದು, ಅದರ ಸಹವಾಸವೇ ಬೇಡವೆಂದು,
ಬೇರೊಂದು ರಸ್ತೆಯನ್ನು ಆಯ್ದುಕೊಂಡೆ. ಮೊದಲು ಶಿವಮೊಗ್ಗಕ್ಕೆ ಕೆಂಪುಬಸ್ಸಿನಲ್ಲಿ ಬಂದು, ಅಲ್ಲಿಂದ ಬೆಂಗಳೂರಿಗೆ ಮಧ್ಯಾಹ್ನ ೧ ಗಂಟೆಗೆ
ಹೊರಡುವ, ಬ್ಯಾಟರಿ ಚಾಲಿತ ಹವಾನಿಯಂತ್ರಿತ ಬಸ್‌ನಲ್ಲಿ ದುಬಾರಿ ಬೆಲೆಯ ಚೀಟಿ ಖರೀದಿಸಿ, “ಬೇಗನೆ ತಲುಪುವಿರಾ?‘’ ಎಂದು
ನಿರ್ವಾಹಕರನ್ನು ಕೇಳಿದೆ. “ಹೇಳೊಕ್ಕಾಗೊಲ್ಲ ಸರ್, ರಸ್ತೆ ಸರಿಯಿಲ್ಲ” ಎಂದರು ಅವರು.
1980ರ ದಶಕದಲ್ಲಿ ಹಲವು ಬಾರಿ ಶಿವಮೊಗ್ಗದಿಂದ ಬೆಂಗಳೂರಿಗೆ, ಕೆಂಪು ಬಸ್ಸಿನಲ್ಲಿ ಸುಮಾರು 6 ಗಂಟೆಯ ಅವಧಿಯಲ್ಲಿ ಬಂದಿದ್ದೆ. ಈಗ, ಮಧ್ಯಾಹ್ನ ಒಂದು ಗಂಟೆಗೆ ಶಿವಮೊಗ್ಗದಿಂದ ಹೊರಡುವ ಆ ಹವಾನಿಯಂತ್ರಿತ ಮತ್ತು ಕಡಿಮೆ ನಿಲುಗಡೆಯ ಬಸ್, ರಾತ್ರಿ ಸುಮಾರು ೮.೩೦ರ ಹೊತ್ತಿಗೆ ಬೆಂಗಳೂರನ್ನು ತಲುಪುತ್ತದೆ! ಅಂದರೆ ಏಳೂವರೆ ಗಂಟೆಯ ಪಯಣ.
ಈ ಭಾಗದಲ್ಲಿ ಹೊಸ ಮತ್ತು ಗುಣಮಟ್ಟದ ಹೆದ್ದಾರಿಯ ನಿರ್ಮಾಣಪ್ರಗತಿಯಲ್ಲಿರುವುದರಿಂದ, ಶಿವಮೊಗ್ಗದಿಂದ ಬೀರೂರಿನ ತನಕ ರಸ್ತೆಯುದ್ದಕ್ಕೂ
ಅಡೆತಡೆಗಳು, ಹಂಪ್‌ಗಳು, ಕಿರಿದಾದ ಭಾಗಗಳು, ಸುತ್ತು ಬಳಸುವ ರಸ್ತೆ ಭಾಗಗಳಿವೆ. ಕೆಲ ವರ್ಷಗಳ ಹಿಂದೆ ಶಿವಮೊಗ್ಗ ಬೀರೂರು ನಡುವಿನ ಬಸ್ ಪಯಣದ ಅವಽ ಒಂದು ಗಂಟೆ ಹದಿನೈದು ನಿಮಿಷ; ಈಗ, ಆ ಹವಾನಿಯಂತ್ರಿತ ಬಸ್‌ನಲ್ಲಿ ಎರಡೂಕಾಲು ಗಂಟೆ ಬೇಕಾಯಿತು! ಕಡೂರಿನ
ನಂತರ, ಹೊಸ ಹೆದ್ದಾರಿಯ ಮೇಲಿನ ನಮ್ಮ ಪಯಣ ಸುಗಮವಾಗಿತ್ತು. ಆದರೆ, ಅದಕ್ಕೂ ಮುಂಚಿನ ಎರಡೂ ಕಾಲು ಗಂಟೆಯ ಅವಽಯ
ಪಯಣದುದ್ದಕ್ಕೂ, ಕುಲುಕಾಟ, ದಡ ಬಡ, ಎತ್ತಿಹಾಕುವುದು ಎಲ್ಲವೂ ನಡೆದದ್ದರಿಂದ, ಆ ಪಯಣವು ದುಃಸ್ವಪ್ನದ ಅನುಭವವನ್ನೇ ನೀಡಿತು.
೨೧ನೇ ಶತಮಾನದ ೩ನೇ ದಶಕದಲ್ಲಿರುವ ನಾವು, ಒಂದು ಗುಣಮಟ್ಟದ ರಸ್ತೆಯನ್ನು, ಸುಗಮ ಪಯಣವನ್ನು ಒದಗಿಸಿಕೊಡಲಾರೆವೆ? ಹೆದ್ದಾರಿ
ಕಾಮಗಾರಿ ನಡೆಯುತ್ತಿರುವ ನೆಪದಿಂದಾಗಿ, ಶಿರಾಡಿ ಘಾಟ್ ರಸ್ತೆ ಮತ್ತು ಶಿವಮೊಗ್ಗದಿಂದ ಬೀರೂರಿನ ತನಕದ ರಸ್ತೆಗಳು ಭಯಾನಕ ಸ್ವರೂಪವನ್ನು ಹೊಂದುವಂತೆ ಮಾಡಬಹುದೆ? ಅರ್ಧರ್ಧ ನಿರ್ಮಾಣವಾದ ಅಲ್ಲಿನ ಕೆಲವು ಭಾಗದ ರಸ್ತೆಗಳು, ವಿವಿಧ ಸಂಸ್ಥೆ-ಕಂಟ್ರಾಕ್ಟರ್-ಇಲಾಖೆ-ಪ್ರಾಧಿಕಾರಗಳ ನಡುವಿನ ಸಮನ್ವಯದ ಕೊರತೆಯನ್ನು ಮೇಲ್ನೋಟಕ್ಕೆ ತೋರುತ್ತಿವೆ. ಅಥವಾ ಇಲ್ಲೂ ಭ್ರಷ್ಟಾಚಾರದ ಬಾಹುಗಳ ಹಿಡಿತ ಬಿಗಿಯಾಗಿ ದೆಯೇ? ಅದರಿಂದಲೇ ಇಂಥ ತೊಡಕುಗಳು ಹೆಚ್ಚುತ್ತಿವೆಯೇ? ನಮ್ಮ ಇಂದಿನ ವ್ಯವಸ್ಥೆಯಲ್ಲಿ ಇಂಥ ಪ್ರಶ್ನೆಗಳಿಗೆ ಉತ್ತರವು, ಒಬ್ಬ ಜನಸಾಮಾನ್ಯನಿಗೆಕೊನೆಗೂ ದೊರಕುವುದೇ?