ಪ್ರಭು ಪ್ರವರ
ಪ್ರಭು ಚಾವ್ಲಾ
ಜನರಿಂದ ಪ್ರೀತಿಯನ್ನೂ ದ್ವೇಷವನ್ನೂ ಸಮಸಮವಾಗಿ ದಕ್ಕಿಸಿಕೊಂಡ ವಿಶ್ವ ನಾಯಕ ಎಂಬ ಹಣೆಪಟ್ಟಿಯನ್ನು ಯಾರಿಗಾದರೂ ಲಗತ್ತಿಸುವುದಾದರೆ, ಡೊನಾಲ್ಡ್ ಟ್ರಂಪ್ ನಿಸ್ಸಂದೇಹವಾಗಿ ಅದಕ್ಕೆ ಅರ್ಹರಾಗುತ್ತಾರೆ ನೋಡಿ!
ಅವರು ಈಗ ಅಮೆರಿಕದ 47ನೇ ಚುನಾಯಿತ ಅಧ್ಯಕ್ಷ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬೇಕಿದ್ದರೆ ಟ್ರಂಪ್
ಅವರ ಅವಳಿ ಎನ್ನಲಡ್ಡಿಯಿಲ್ಲ, ಏಕೆಂದರೆ ದೇಶಭಕ್ತಿ, ಸಾಂಪ್ರದಾಯಿಕತೆ ಮತ್ತು ರಾಷ್ಟ್ರೀಯ ಅಸ್ಮಿತೆಯಂಥ ಮೌಲ್ಯಗಳ
ವಿಷಯದಲ್ಲಿ ಇವರಿಬ್ಬರೂ ಪರಸ್ಪರರನ್ನು ಹೋಲುತ್ತಾರೆ. ಎಡಪಂಥೀಯ ಮಾಧ್ಯಮಗಳು, ಹಾಲಿವುಡ್‌ನ ಮಹತ್ವಾಕಾಂಕ್ಷಿ
ಗಳು ಮತ್ತು ಐರೋಪ್ಯ ವಲಯದ ಉದಾರವಾದಿಗಳಿಗೆ ಟ್ರಂಪ್ ರನ್ನು ಕಂಡರೆ ಅದೇನೋ ಹೇವರಿಕೆ! ಮತ್ತೊಂದೆಡೆ ದೆಹಲಿಯ
‘ಲುಟಿಯೆನ್ಸ್’ ಪ್ರದೇಶದಲ್ಲಿ ನೆಲೆಸಿರುವ ‘ರಾಜಕೀಯದ ಲಿಲಿಪುಟ್’ಗಳಿಗೆ ಮತ್ತು ಜಾತ್ಯತೀತವಾದಕ್ಕೆ ನೇತುಬಿದ್ದು
ಇನ್ನೇನು ಅಳಿವಿನಂಚಿನಲ್ಲಿರುವ ‘ರಾಜಕೀಯ ರಾವುತ’ರಿಗೆ, ಮೋದಿಯವರ ಆಕ್ರಮಣಕಾರಿ ರಾಷ್ಟ್ರೀಯತೆಯನ್ನು ಕಂಡರೆ
ಅದೇನೋ ಜುಗುಪ್ಸೆ! ಹೀಗೆ, ಮೋದಿ ಮತ್ತು ಟ್ರಂಪ್ ಇಬ್ಬರೂ ಸಮಾನವಾಗಿ ಟೀಕಾಪ್ರಹಾರಕ್ಕೂ ಗುರಿಯಾಗಿದ್ದಾರೆ, ವಿಶ್ವಸ್ತರದ
ನಾಯಕರಾಗಿ ಪ್ರಭಾವ ಬೀರುತ್ತಿರುವ ವಿಶಿಷ್ಟ ಪಂಥೀಯರೂ ಆಗಿದ್ದಾರೆ! ಸ್ಪಷ್ಟವಾಗಿ ಹೇಳುವುದಾದರೆ ಅವರಿಬ್ಬರೂ ತಂತಮ್ಮ
ಪಂಥದ ಪ್ರವರ್ತಕರಾಗಿದ್ದಾರೆ.
‘ದೇಶವೇ ಮೊದಲು’ ಎಂದು ಒತ್ತಿಹೇಳುವ ಮತ್ತು ಅಕ್ರಮ ವಲಸೆಗೆ ಇತಿಶ್ರೀ ಹಾಡುವ ಟ್ರಂಪ್‌ರ ನಿಲುವಿಗೆ ಅಮೆರಿಕನ್ನರು
ಅಂಗೀಕಾರದ ಮುದ್ರೆಯೊತ್ತಿದ್ದಾರೆ, ಮತ ಹಾಕಿ ಗೆಲ್ಲಿಸಿದ್ದಾರೆ. ಪ್ಯಾಲೆಸ್ತೀನ್ ಕುರಿತಾಗಿ ನಿಷ್ಠುರ ನಿಲುವನ್ನು ತಳೆದಿದ್ದು ಹಾಗೂ
ಉಗ್ರವಾದಕ್ಕೆ ಬೆಂಬಲಿಸುವ ವಿದ್ಯಾರ್ಥಿಗಳನ್ನು ಗಡೀಪಾರು ಮಾಡುವುದಾಗಿ ಬೆದರಿಸಿದ್ದು ಟ್ರಂಪ್‌ರನ್ನು ಓರ್ವ ಹಠಮಾರಿ
ರಾಜಕೀಯ ಹೋರಾಟಗಾರನಾಗಿ ರೂಪಿಸಿದವು ಎನ್ನಬೇಕು.
ರಾಜಕೀಯ ಶಕ್ತಿಯ ನೆಲೆಯಲ್ಲಿ ಮೋದಿ ಮತ್ತು ಟ್ರಂಪ್ ಇಬ್ಬರೂ ಪ್ರಬಲರೇ ಎನ್ನಬೇಕು. ಈ ಪೈಕಿ ಮೋದಿಯವರು ದೆಹಲಿಯ ‘ದಿವಾನಖಾನೆಯ ದುಷ್ಟಕೂಟ’ವನ್ನು ಕೆಡವಲು ಶಪಥ ಮಾಡಿದರೆ, ವಾಷಿಂಗ್ಟನ್‌ನ ರಾಜಕೀಯ ಕೊಳಚೆಯನ್ನು ಬರಿದುಮಾಡಲು ಟ್ರಂಪ್ ಪ್ರತಿಜ್ಞೆ ಮಾಡಿದರು. ಅಮೆರಿಕದ ಶತಕೋಟ್ಯಧಿಪತಿ ರಿಯಲ್ ಎಸ್ಟೇಟ್ ಡೆವಲಪರ್ ಎನಿಸಿಕೊಂಡಿರುವ ಟ್ರಂಪ್ ಅಲ್ಲಿನ ವಯೋವೃದ್ಧ ಅಧ್ಯಕ್ಷರಾಗಿರಬಹುದು, ಆದರೆ ಶ್ವೇತಭವನವನ್ನು ಮತ್ತಷ್ಟು ಶಕ್ತಿಶಾಲಿಯಾಗಿಸಲು ಅಗತ್ಯವಾದ ‘ರ‍್ಯಾಂಬೋ’ನಂಥ ತಾಕತ್ತು ಅವರಿಗಿದೆ. ಮೋದಿ ಯವರು ತಮ್ಮ ಧ್ಯೇಯ ಮತ್ತು ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರಲೆಂದೇ ಕೇಂದ್ರೀಕೃತ ಅಽಕಾರವನ್ನು ಸಜ್ಜುಗೊಳಿಸಿಕೊಂಡಿರುವುದರಿಂದ ‘ಪ್ರಧಾನಿ ಕಾರ್ಯಾಲಯ’ವು ಅದಕ್ಕೆ ಬೇಕಾದ ಉಪಕ್ರಮಗಳಿಗೆಲ್ಲಾ ಮುಂದಾಗುತ್ತದೆ. ಒಟ್ಟಾರೆ ಹೇಳುವುದಾದರೆ, ಈ ಇಬ್ಬರೂ ಹಿಡಿದಕೆಲಸವನ್ನು ಪಟ್ಟುಹಿಡಿದು ಸಾಧಿಸುವವರೇ.
ಇವರಿಬ್ಬರಲ್ಲಿ ಕಾಣಬರುವ ವ್ಯತ್ಯಾಸವೆಂದರೆ, ಟ್ರಂಪ್ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿ, ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಓದಿ ಬೆಳೆದವರಾದರೆ, ಮೋದಿ ಆರಂಭಿಕ ಹಂತದಲ್ಲಿ ಚಹಾ ಮಾರಿಕೊಂಡಿದ್ದು, ನಂತರ ಹಂತಹಂತವಾಗಿ ಔನ್ನತ್ಯಕ್ಕೇರಿದವರು.
2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಹಾಗೂ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ದಕ್ಕಿದ ವಿಜಯ ಏನನ್ನು ಸೂಚಿಸುತ್ತದೆ? ತಮ್ಮದೇ ಆದಕಾರ್ಯಸೂಚಿಗಳನ್ನು ಹೊಂದಿರುವ ಈ ನಾಯಕರ ಸ್ವೀಕಾರಾರ್ಹತೆ, ದೇಶಭಕ್ತಿಯ ಸಬಲೀಕರಣ ಮತ್ತು ನಿರಂಕುಶಾಧಿಕಾರಿಗಳ ಜತೆಗಿನ ಒಂದು ಸಹಜ ಬಾಂಧವ್ಯವನ್ನು ಇದು ಸಂಕೇತಿಸುತ್ತದೆ ಎನ್ನಲಡ್ಡಿಯಿಲ್ಲ. ಈ ಇಬ್ಬರ ನಡುವೆ ಭೌಗೋಳಿಕವಾಗಿ ಬರೋಬ್ಬರಿ 12000 ಕಿ.ಮೀ.ನಷ್ಟು ಅಂತರವಿದ್ದರೂ, ‘ಗಾಢನಂಬಿಕೆ’ ಅಥವಾ ‘ನಿಶ್ಚಿತಾಭಿಪ್ರಾಯ’ ಎಂಬ ಅಂಶವು ಇವರಿಬ್ಬರನ್ನು ಒಗ್ಗೂಡಿಸಿದೆ ಎನ್ನಬೇಕು. ಈ ಇಬ್ಬರೂ ತಾವು ಪ್ರತಿನಿಽಸುವ ರಾಜಕೀಯ ಪಕ್ಷಗಳಿಗಿಂತಲೂ ದೊಡ್ಡದಾಗಿ ಬೆಳೆದುಬಿಟ್ಟಿದ್ದಾರೆ.
ಇವರು ತಂತಮ್ಮ ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನವನ್ನು ಸ್ವೀಕರಿಸಿದವರೇ ಆದರೂ, ಆ ಪುಸ್ತಕವು ದಕ್ಕಿಸಿಕೊಡುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ತಮ್ಮದಾಗಿಸಿಕೊಳ್ಳಲು ವ್ಯವಸ್ಥೆಯಲ್ಲಿನ ಸಾಕಷ್ಟು ಲೋಪದೋಷಗಳನ್ನು ನೆಚ್ಚುತ್ತಾರೆ. ತಾವು ಏನನ್ನು ಕೇಳಿಸಿಕೊಳ್ಳಲು ಬಯಸುತ್ತೇವೆ ಎಂಬುದನ್ನು ಹೇಳುವಂಥ ‘ಅಪ್ತವಲಯ’ವೇ ತಮ್ಮನ್ನು ಸುತ್ತವರಿಯುವಂತೆ ಅವರು ನೋಡಿಕೊಳ್ಳುತ್ತಾರೆ. ತಾವಷ್ಟೇ ಮಿಂಚ ಬೇಕು, ಆಕರ್ಷಣೆಯ ಕೇಂದ್ರವಾಗಬೇಕು ಎಂಬುದು ಇವರಿಬ್ಬರಲ್ಲೂ ಕೆನೆಗಟ್ಟಿರುವ ಬಯಕೆ. ‘ಕನಿಷ್ಠತಮ’ ಸರಕಾರಿ ವ್ಯವಸ್ಥೆಯ ಮೂಲಕ ‘ಗರಿಷ್ಠತಮ’ ಆಡಳಿತ ನೀಡಲು ಇವರಿಬ್ಬರೂ ಬಯಸುತ್ತಾರೆ. ಒಟ್ಟಿನಲ್ಲಿ, ಇವರಲ್ಲಿ ಎದ್ದುಕಾ ಣುವಂಥ ಹೋಲಿಕೆಗಳು ಸಾಧಾರಣ ವಾಗಿರುವಂಥವಲ್ಲ ಎನ್ನ ಬೇಕು. ಇಂಥ ಒಂದೊಂದು ವೈಶಿಷ್ಟ್ಯವನ್ನೂ ಅವಲೋಕಿಸುತ್ತಾ ಹೋಗೋಣ… ರಾಷ್ಟ್ರೀಯತೆ ಮತ್ತು ದೇಶಭಕ್ತಿ: ಬರುವ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಶ್ವೇತಭವನದೊಳಗೆ ಕಾಲಿಡಲಿದ್ದಾರೆ; ‘ಅಮೆರಿಕವನ್ನು ಮತ್ತೊಮ್ಮೆ ಮಹತ್ತರ ನೆಲೆಯಾಗಿಸೋಣ’ ಎಂಬ ಟ್ರಂಪ್ ಅವರ ಉದ್ಘೋಷವೇ ಈ ನಿಟ್ಟಿನಲ್ಲಿ ಅವರಿಗೆ ಚಿಮ್ಮುಹಲಗೆಯಾಗಿ ಪರಿಣಮಿಸಿತು ಮತ್ತು ಅನೇಕ ಡೆಮಾಕ್ರಾಟರನ್ನು ಅಧಿಕಾರಕೇಂದ್ರದಿಂದ ದೂರವುಳಿಸಿತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
‘ಏಕೀಕೃತ ಅಮೆರಿಕ’ ಎಂಬ ಪರಿಕಲ್ಪನೆಯು ಅಪಾಯದಲ್ಲಿದೆ ಎಂಬುದನ್ನು ಮತದಾರರಿಗೆ ಸಮರ್ಥವಾಗಿ ಮನವರಿಕೆ ಮಾಡಿಕೊಟ್ಟ ಹೆಗ್ಗಳಿಕೆ ಅವರದ್ದು. ಚುನಾವಣಾ ಪ್ರಚಾರ ಸಭೆಗಳಲ್ಲಿ ವಿಶಿಷ್ಟ ನಗೆಚಟಾಕಿ ಹಾರಿಸುತ್ತಲೇ, ಎದುರಾಳಿಗಳನ್ನು ಗೇಲಿ ಮಾಡುತ್ತಲೇ, ಮತಬೇಟೆಯ ಕಸರತ್ತಿನಲ್ಲಿ ತಮಗಾದ ಅವಮಾನಗಳನ್ನು ಹೇಳಿಕೊಳ್ಳುತ್ತಲೇ, “ಡೆಮಾಕ್ರಾಟರು ಒಂದೊಮ್ಮೆ ಅಧಿಕಾರ ಗದ್ದುಗೆಗೆ ಮರಳಿದ್ದೇ ಆದಲ್ಲಿ ಅಮೆರಿಕವು ತನ್ನ ಜಾಗತಿಕ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತದೆ” ಎಂದು ಬೆಂಬಲಿಗರನ್ನು ಮತ್ತು ಯಾರನ್ನೂ ನೇರವಾಗಿ/ಸ್ಪಷ್ಟವಾಗಿ ಬೆಂಬಲಿಸದೆ ‘ಬೇಲಿ ಮೇಲೆಕುಳಿತವರನ್ನು’ ಟ್ರಂಪ್ ಎಚ್ಚರಿಸಿದ್ದುಂಟು.
2016ರ ತಮ್ಮ ಚುನಾವಣಾ ಪ್ರಚಾರದಲ್ಲೂ ‘ಅಮೆರಿಕದ ರಾಷ್ಟ್ರೀಯತೆ’ಯ ಮಂತ್ರವನ್ನು ಟ್ರಂಪ್ ಜಪಿಸಿದ್ದುಂಟು, ಬಲವಾಗಿ ಪ್ರತಿಪಾದಿಸಿ ದ್ದುಂಟು. ‘ನ್ಯಾಟೋ’ ಮಿಲಿಟರಿ ಒಕ್ಕೂಟವು ಅಮೆರಿಕಕ್ಕಿಂತ ಐರೋಪ್ಯ ರಾಷ್ಟ್ರಗಳ ಹಿತಾಸಕ್ತಿಗಳ ನೆರವೇರಿಕೆಗೇ ಶ್ರಮವಹಿಸುತ್ತದೆ ಎಂದು ಟ್ರಂಪ್ ನಂಬಿದ್ದರಿಂದ, ‘ನ್ಯಾಟೋ’ಗೆ ನೀಡಲಾಗುವ ದುಡ್ಡು-ಕಾಸಿಗೆ ಕತ್ತರಿ ಹಾಕುವುದಾಗಿಯೂ ಟ್ರಂಪ್ ಬೆದರಿಸಿದ್ದುಂಟು. ಟ್ರಂಪ್‌ರ ‘ಮತಬೇಟೆ’ಯ ಕಸರತ್ತು, 2013ರಲ್ಲಿ ಮೋದಿ ಕೈಗೊಂಡಿದ್ದ ಇಂಥದ್ದೇ ಕಸರತ್ತನ್ನು ಬಹುತೇಕ ಹೋಲುವಂತಿತ್ತು. ‘ವಿಭಜಿತ ಭಾರತ’ವನ್ನು ಒಗ್ಗೂಡಿಸಲಿಕ್ಕೆ ‘ಸುರಕ್ಷಿತ ಭಾರತ’ ಎಂಬ ಪರಿಕಲ್ಪನೆಯೇ ಮೋದಿಯವರ ಪಾಲಿಗೆ ಒಂದು ‘ಪರಮಾಸ್ತ್ರ’ವಾಗಿತ್ತು.
ಇದರ ಅಂಗವಾಗಿ, ಭಾರತದ ಸುರಕ್ಷತೆಗೆ ಧಕ್ಕೆಯುಂಟು ಮಾಡುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಶಿಕ್ಷೆ ನೀಡಲು ಅವರು ಶಪಥ ಮಾಡಿದ್ದರ ಜತೆಗೆ, ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಪ್ರತ್ಯೇಕ ಅಸ್ಮಿತೆಯನ್ನು ನೀಡಿದ್ದ ‘ಸಾಂವಿಧಾನಿಕ ದೌರ್ಬಲ್ಯ’ವನ್ನು ತೊಡೆದುಹಾಕಲು ವಿಽ ೩೭೦ರ ರದ್ದತಿಗೆ
ಸಂಕಲ್ಪಿಸಿದರು.
ವಲಸೆ-ವಿರೋಧಿ ಧೋರಣೆ: ಈ ಬಾರಿಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಜಯಭೇರಿ ಬಾರಿಸುವುದಕ್ಕೆ ಕಾರಣವಾದ ಮತ್ತೊಂದು ಮಹತ್ತರ ಅಂಶವೆಂದರೆ, ‘ಅಕ್ರಮ ವಲಸೆಗಾರಿಕೆ’ಯ ಪಿಡುಗಿನೆಡೆಗೆ ಟ್ರಂಪ್‌ರಲ್ಲಿ ಮಡುಗಟ್ಟಿದ್ದ ವಿರೋಧ. ಇದನ್ನು ತಮ್ಮ ಭಾಷಣದಲ್ಲಿ ಸಮರ್ಥವಾಗೇ ಬಳಸಿಕೊಂಡು ವಾಕ್ಚಾತುರ್ಯ ಮೆರೆದ ಟ್ರಂಪ್, “ಕಮಲಾ ಹ್ಯಾರಿಸ್‌ಗೆ ನೀವು ನೀಡುವ ಒಂದೊಂದು ಮತವೂ ನಿಮ್ಮ ತಲೆಯ ಮೇಲೆ ನೀವೇ ಎಳೆದುಕೊಳ್ಳುವಕಲ್ಲುಚಪ್ಪಡಿಯಾಗುತ್ತದೆ; ಅಂದರೆ, 40 ಅಥವಾ 50 ದಶಲಕ್ಷಕ್ಕೂ ಹೆಚ್ಚಿನ ಅಕ್ರಮ ವಿದೇಶಿಗರು/ವಲಸಿಗರು ನಮ್ಮ ಗಡಿಯುದ್ದಕ್ಕೂ ನುಸುಳಿಕೊಂಡು ನಿಮ್ಮ ಹಣವನ್ನು, ಉದ್ಯೋಗಾವಕಾಶಗಳನ್ನು, ಒಟ್ಟಾರೆಯಾಗಿ ನಿಮ್ಮ ಬದುಕನ್ನೇ ದೋಚಿಬಿಡುತ್ತಾರೆ” ಎಂದು ಆವೇಶಭರಿತರಾಗಿ ಮತದಾರರನ್ನು ಎಚ್ಚರಿಸಿದರು.
ಇದಕ್ಕೂ ಮುನ್ನ ಅವರು ಪಕ್ಷದ ವತಿಯಿಂದ ತಮ್ಮ ನಾಮನಿರ್ದೇಶನದ ನಿರೀಕ್ಷೆಯಲ್ಲಿದ್ದಾಗ, “ಅಕ್ರಮ ವಲಸೆಗಾರಿಕೆ ಎಂಬುದು ನಮ್ಮ ರಾಷ್ಟ್ರದ ರಕ್ತವನ್ನು ವಿಷಪೂರಿತಗೊಳಿಸುತ್ತಿದೆ. ಈ ಅಕ್ರಮ ವಲಸಿಗರೆಲ್ಲ, ವಿಶ್ವದ ವಿವಿಧೆಡೆಯ ಜೈಲುಗಳಿಂದ, ಮನೋರೋಗದ ಚಿಕಿತ್ಸಾಲಯಗಳಿಂದ ಬಂದವರಾಗಿರುತ್ತಾರೆ” ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು ಎಂಬುದು ಗಮನಾರ್ಹ. Mein Kampf ಕೃತಿಯಲ್ಲಿ
ಜರ್ಮನಿಯ ಅಡಾಲ್ ಹಿಟ್ಲರ್, ಯೆಹೂದಿಗಳನ್ನು ಕೆರಳಿಸಲು ಅಥವಾ ತೀವ್ರವಾಗಿ ಖಂಡಿಸಲು ‘ರಕ್ತವನ್ನು ವಿಷಪೂರಿತವಾಗಿಸುವಿಕೆ’ ಎಂಬ ಪರಿಭಾಷೆಯನ್ನು ಬಳಸಿದ್ದುಂಟು; ಇದೇ ರೀತಿಯಲ್ಲಿ ಅಮೆರಿಕದ ರಕ್ತವಾಹಿನಿಗೆ ವಲಸೆಗಾರರು ನಂಜು ಬೆರೆಸುತ್ತಿದ್ದಾರೆ ಎಂಬ ಅರ್ಥದ ಪದಗುಚ್ಛವನ್ನು ಟ್ರಂಪ್ ಬಳಸಿದ್ದಕ್ಕಾಗಿ ವಿಮರ್ಶಕರು ಅವರನ್ನು ಕಟುವಾಗಿ ಟೀಕಿಸಿದ್ದುಂಟು.
ನರೇಂದ್ರ ಮೋದಿಯವರೂ ಇದೇ ಹಾದಿಯನ್ನು ತುಳಿದಿದ್ದಿದೆ. 2014ರ ತಮ್ಮ ಚುನಾವಣಾ ಪ್ರಚಾರಭಾಷಣದ ಸಂದರ್ಭದಲ್ಲಿ, “ಅಕ್ರಮ ವಲಸಿಗರು ಸಾಂಸ್ಕೃತಿಕ ಅರಾಜಕತೆಯನ್ನು ಸೃಷ್ಟಿಸುವ, ಕಾನೂನು-ಸುವ್ಯವಸ್ಥೆಗೆ ಭಂಗತರುವ ಅಪಾಯವಿದೆ” ಎಂದು ಭಾವನಾತ್ಮಕ ಲೇಪದೊಂದಿಗೆ ಒತ್ತಿಹೇಳಿದ್ದುಂಟು. ಅಷ್ಟೇಕೆ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆಯಕಾವೇರಿರುವ ಸಂದರ್ಭದಲ್ಲೂ, “ಕಾಂಗ್ರೆಸ್ ಪಕ್ಷ ಮತ್ತು ಇತರ ಪ್ರಾದೇಶಿಕ ಪಕ್ಷಗಳು ತಮ್ಮ ತಳಹದಿಯನ್ನು ಗಟ್ಟಿಗೊಳಿಸಿಕೊಂಡು ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಲು ಗಡಿಯಾಚೆಯ ಜನರ ಅಕ್ರಮಹರಿವಿಗೆ ಉತ್ತೇಜಿಸುತ್ತವೆ” ಎಂದುಆರೋಪಿಸಿದ್ದುಂಟು.
ಸಾಂಸ್ಕೃತಿಕ ಒಗ್ಗಟ್ಟು: ತಂತಮ್ಮ ರಾಷ್ಟ್ರಗಳ ಜೀವನ ವಿಧಾನವನ್ನು ಸಂರಕ್ಷಿಸುವ ವಿಷಯಕ್ಕೆ ಬಂದರೆ, ಮೋದಿ ಮತ್ತು ಟ್ರಂಪ್ ಇಬ್ಬರೂ ಈ ನಿಟ್ಟಿನಲ್ಲಿ ಕಟ್ಟಾ ಸಮರ್ಥಕರಾಗಿದ್ದಾರೆ, ಪ್ರಬಲ ಪ್ರತಿಪಾದಕರಾಗಿದ್ದಾರೆ ಎನ್ನಲಡ್ಡಿಯಿಲ್ಲ. 2017ರಲ್ಲಿ Politico ನಿಯತಕಾಲಿಕವು ಟ್ರಂಪ್‌ರನ್ನು ‘ಸಾಂಸ್ಕೃತಿಕ ಸಂಘರ್ಷದ ಅಧ್ಯಕ್ಷರು’ ಎಂದು ಕರೆದರೆ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು, “ಅಧ್ಯಕ್ಷ ಟ್ರಂಪ್ ಅವರೊಬ್ಬ ವಿಭಿನ್ನ ರೀತಿಯ ಸಂಘರ್ಷದ ಅಧ್ಯಕ್ಷರಾಗಿದ್ದಾರೆ, ಅವರು ಸಾಂಸ್ಕೃತಿಕ ಸಂಘರ್ಷದ ಅಧ್ಯಕ್ಷರು” ಎಂದು ಉಲ್ಲೇಖಿಸಿದ್ದುಂಟು. ಇದೇ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಕಳೆದ ವಾರ ಹೀಗೆ ಬರೆದುಕೊಂಡಿತ್ತು: “ಅಧ್ಯಕ್ಷರು ಮತ್ತು ಅವರ ಉನ್ನತಾಧಿಕಾರಿಗಳು ಖಾಸಗಿಯಾಗಿ ಲೋಕಾಭಿರಾಮವಾಗಿ ಮಾತಾಡುವಾಗ, ಟ್ರಂಪ್ ಅವರು ಕರಾವಳಿ ಪ್ರದೇಶದ ‘ಶಿಷ್ಟ’ ಗಣ್ಯ ಸಮಾಜದ ವಿರುದ್ಧವಾಗಿರುವ ಒಂದು ಸಾಂಸ್ಕೃತಿಕ ಸಂಘರ್ಷದಲ್ಲಿ ತಮ್ಮ ಬಿಳಿಯ ಜನರ ಪರವಾಗಿ, ಕಾರ್ಮಿಕ ವರ್ಗದವರ ಪರವಾಗಿ ತೊಡಗಿಸಿಕೊಂಡಿರುವುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ. ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಮತ್ತು ಇತರ ಡೆಮಾಕ್ರಾಟ್‌ಗಳಿಂದಾಗಿ ಈ ಸಂಘರ್ಷವು ತಮ್ಮ ಮೇಲೆರಗಿದೆ ಎಂದು ನಂಬಿರುವ ಅವರು ಈ ಸಲ ಗೆದ್ದೇ ಗೆಲ್ಲಲು ಸಂಕಲ್ಪಿಸಿದ್ದಾರೆ”. ಅಂತೆಯೇ, ಶೇ.50ಕ್ಕೂ ಹೆಚ್ಚು ಭಾಗದಷ್ಟು ‘ಜನಪ್ರಿಯ ಮತಗಳನ್ನು’ ಗಳಿಸುವ ಮೂಲಕ ಈ ಸಾಂಸ್ಕೃತಿಕ ಯುದ್ಧದಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದಾರೆ.
ಇನ್ನು ಮೋದಿಯವರ ವಿಷಯಕ್ಕೆ ಬರುವುದಾದರೆ, ಇತರ ನಂಬಿಕೆಗಳ ಅಥವಾ ಜೀವನ ಪತಿಗಳ ಗೊಡವೆಗೆ ಹೋಗದೆ, ‘ಭಾರತೀಯತೆ’ಯ ಶ್ರೇಷ್ಠತೆಯನ್ನು ಬಲಪಡಿಸಲು ತಾವು ಪರಿಭಾವಿಸಿರುವ ಹಿಂದೂ ಜೀವನ ವಿಧಾನವನ್ನು ಮರುಸ್ಥಾಪಿಸಲು ಅವರು ಪಟ್ಟು ಬಿಡದೆ ಹೋರಾಡುತ್ತಿದ್ದಾರೆ. ಅವರ ಸಾರಥ್ಯ ಮತ್ತು ಪ್ರೇರಣೆಯ ಬಲದೊಂದಿಗೆ ಬಿಜೆಪಿ-ನೇತೃತ್ವದ ರಾಜ್ಯ ಸರಕಾರಗಳು ಹಳೆಯ ನಗರಗಳಿಗೆ ಮರುನಾಮಕರಣ ಮಾಡಿರುವುದು ಮಾತ್ರವಲ್ಲದೆ, ಕ್ಷಿಪ್ರಗತಿಯಲ್ಲಿ ಕಣ್ಮರೆಯಾಗುತ್ತಿರುವ ಹಿಂದೂಗಳ ಮತ್ತು ಬುಡಕಟ್ಟು ಸಮುದಾಯದವರ ಹಳೆಯ ಪೂಜಾಕೇಂದ್ರಗಳನ್ನು ಪುನರುಜ್ಜೀವನಗೊಳಿಸಿವೆ.
ನಿರ್ಬಂಧಿತ ಬಂಡವಾಳಶಾಹಿ: ಟ್ರಂಪ್ ಹುಟ್ಟಿದ್ದು, ಬೆಳೆದಿದ್ದು ಒಬ್ಬ ಉದ್ಯಮಿಯಾಗಿಯೇ; ಆದರೆ, ಮೋದಿಯವರ ವ್ಯಾವಹಾರಿಕ ಚಾಣಾಕ್ಷತೆಯು ಅವರ ತವರುನೆಲದ ನೀತಿಸೂತ್ರಗಳೊಂದಿಗೆ ಸರಿಹೊಂದುತ್ತದೆ ಎನ್ನಲಡ್ಡಿಯಿಲ್ಲ. ಅವರು ಪ್ರಧಾನಮಂತ್ರಿಯಾದ ನಂತರ, “ನಾನೊಬ್ಬ ಗುಜ
ರಾತಿ, ವ್ಯಾಪಾರ-ವ್ಯವಹಾರ ಮಾಡುವುದು ಹೇಗೆಂಬುದು ಗುಜರಾತಿಗಳಿಗೆ ಗೊತ್ತಿರುತ್ತದೆ” ಎಂದು ಮುಕ್ತವಾಗಿ ಹೇಳಿಕೊಂಡಿದ್ದರು, ಒಪ್ಪಿಕೊಂಡಿದ್ದರು. ತೆರಿಗೆಗಳನ್ನು ತಗ್ಗಿಸುವ ಮತ್ತು ಸರಕಾರಿ ಆಡಳಿತಶಾಹಿಯ ಗಾತ್ರವನ್ನು ಕುಗ್ಗಿಸುವ ಬಗ್ಗೆ ಟ್ರಂಪ್ ಮಾತಾಡಿಕೊಂಡೇ ಬಂದಿದ್ದಾರೆ. ಭಾರತೀಯ ಕಂಪನಿಗಳಿಗೆ ವಿಧಿಸಲಾಗುತ್ತಿದ್ದ ‘ಸಾಂಸ್ಥಿಕ ತೆರಿಗೆ’ಯನ್ನು ಶೇ.25ರ ಮಟ್ಟಕ್ಕೆ ಇಳಿಸಿದ ಏಕೈಕ ಪ್ರಧಾನಿ ಮೋದಿ.
ನವೋದ್ಯಮಶೀಲರನ್ನು/ವಾಣಿಜ್ಯೋದ್ಯಮಿಗಳನ್ನು ‘ಸಂಪತ್ತಿನ ಸೃಷ್ಟಿಕರ್ತರು’ ಎಂದೇ ಕರೆಯುವ ಮೋದಿ, ವ್ಯವಹಾರ ಪ್ರಕ್ರಿಯೆಗಳು ಸರಳವಾಗಿ-ಸುಗಮವಾಗಿ ನಡೆಯುವಂತಾಗಲು ತಮ್ಮ ಸರಕಾರಿ ವ್ಯವಸ್ಥೆಗೆ ಉತ್ತೇಜನ ನೀಡುತ್ತಾರೆ, ಹುಮ್ಮಸ್ಸು ತುಂಬುತ್ತಾರೆ.
ಚೀನಾ-ವಿರೋಧಿ ಮತ್ತು ಇಸ್ರೇಲ್-ಪರ ನಿಲುವು: ಮೋದಿ ಮತ್ತು ಟ್ರಂಪ್ ಇಬ್ಬರೂ ಸೈದ್ಧಾಂತಿಕವಾಗಿಯೇ ಆಗಲೀವೈಯಕ್ತಿಕ ನೆಲೆಯಲ್ಲೇ ಆಗಲಿ ಚೀನಾವನ್ನು ನಂಬುವುದಿಲ್ಲ.
ಚೀನಿ ಆಮದುಗಳ ಮೇಲೆ ಬರೋಬ್ಬರಿ ಶೇ.60ರಷ್ಟು ಸುಂಕವನ್ನು ಹೇರುವುದಾಗಿ ಬೆದರಿಸಿದ್ದ ಟ್ರಂಪ್, ಅನೇಕ ಚೀನಿ ಕಂಪನಿಗಳನ್ನು
ನಿಷೇಽಸಿದ್ದೂ ಉಂಟು. ಭಾರತದ ಪಾಲಿನ ಮಗ್ಗುಲುಮುಳ್ಳು ಎನಿಸಿಕೊಂಡಿರುವ ಚೀನಾ 1962ರಿಂದಲೂ ನಮ್ಮ ಭೂಪ್ರದೇಶದ ಮೇಲೆ ಹಕ್ಕು ಚಲಾಯಿಸುವ ಅಥವಾ ಅತಿಕ್ರಮ ಪ್ರವೇಶ ಮಾಡುವ ಕಿತಾಪತಿಯಲ್ಲೇ ತೊಡಗಿದ್ದು, ಈ ‘ಭೌಗೋಳಿಕ ಎಚ್ಚರಿಕೆ’ಯೇ ಭಾರತದ ಪಾಲಿಗೆ ಒಂದು ಅವ್ಯಕ್ತಭಯವಾಗಿಬಿಟ್ಟಿದೆ. ಆದರೆ, ಇಸ್ರೇಲ್ ಮಾತ್ರ ಭಾರತ ಮತ್ತು ಅಮೆರಿಕವನ್ನು ಒಗ್ಗೂಡಿಸುವ ಮತ್ತೊಂದು ಅಂಶವೆನಿಸಿಕೊಂಡುಬಿಟ್ಟಿದೆ. ಟ್ರಂಪ್ ಅವರು ಜೆರುಸಲೇಮ್ ಅನ್ನು ಇಸ್ರೇಲಿನ ರಾಜಧಾನಿಯಾಗಿ ಗುರುತಿಸಿದ್ದರೆ, ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿಯವರ ಹೆಗಲೇರಿದೆ.
ಒಗ್ಗದ ವಿದ್ಯಾರ್ಥಿ ಪ್ರತಿಭಟನೆ: ಮೋದಿ ಮತ್ತು ಟ್ರಂಪ್ ಇಬ್ಬರಿಗೂ ವಿದ್ಯಾರ್ಥಿ ಸಮುದಾಯದ ಪ್ರತಿಭಟನೆಗಳು/ ಹೋರಾಟಗಳು ಎಂದರೆ ಅಪಥ್ಯ. ಅಮೆರಿಕದ ಶೈಕ್ಷಣಿಕ ಕ್ಯಾಂಪಸ್‌ಗಳನ್ನು ಆಕ್ರಮಿಸಿಕೊಂಡಿರುವ ‘ಕೆಫಿಯಾ-ಧಾರಿ’ ವಿದ್ಯಾರ್ಥಿಗಳನ್ನು ಗಡೀಪಾರು ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಹಾಗೂ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಕಂಡುಬಂದ
ಪ್ರತಿಭಟನೆಗಳನ್ನು ಮೋದಿಯವರು ದೃಢವಾಗಿ ತಗ್ಗಿಸಿದ್ದು ಇದಕ್ಕೆ ಸಾಕ್ಷಿ.
ಸಾಮಾಜಿಕ ಮಾಧ್ಯಮಗಳು ಆಧುನಿಕ ರಾಜಕೀಯದ ಉಸಿರಾಗಿಬಿಟ್ಟಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಾರ್ವಜನಿಕ ಘನತೆಗೆ ಸಂಬಂಧಿಸಿದಂತೆ ಭಾರತೀಯರ ಒಲವೇನು ಎಂಬುದನ್ನು ಮೋದಿಯವರು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿಯೇ, 80 ದಶಲಕ್ಷಕ್ಕೂ ಹೆಚ್ಚಿರುವ ತಮ್ಮ ಅನುಯಾಯಿಗಳಿಗೆಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವ ಪೋಸ್ಟ್‌ಗಳು ಮಾಹಿತಿಪೂರ್ಣವೂ ವಿವರಣಾತ್ಮಕವೂ ಆಗಿರುತ್ತವೆ.
ನಿಂದನೀಯ ಟ್ವೀಟ್‌ಗಳ ಕಾರಣದಿಂದಾಗಿ ಟ್ವಿಟರ್ ಸಂಸ್ಥೆಯಿಂದ ಟ್ರಂಪ್ ನಿಷೇಧಿಸಲ್ಪಟ್ಟಿದ್ದು ಹೌದಾದರೂ, ಅವರು ಬರೋಬ್ಬರಿ 80 ದಶಲಕ್ಷ ಅನುಯಾಯಿಗಳನ್ನು ಹೊಂದುವ ಮೂಲಕ ಸಾಮಾಜಿಕ ಮಾಧ್ಯಮ ಸಂಘರ್ಷದ ಅಧ್ವರ್ಯುವಾಗಿದ್ದರು ಎಂಬುದನ್ನಿಲ್ಲಿ ಸ್ಮರಿಸಬೇಕು. ಒಟ್ಟಾರೆ ಹೇಳುವುದಿಷ್ಟೇ- ಮೋದಿ ಮತ್ತು ಟ್ರಂಪ್ ಇಬ್ಬರಲ್ಲೂ ಸಾಮಾನ್ಯವಾಗಿರುವ ಇಂಥ ಒಂದಷ್ಟು ಅಂಶಗಳು, ಅವರಿಬ್ಬರನ್ನೂ ಮಿತ್ರರನ್ನಾಗಿಸಿವೆ.
4 ವರ್ಷಗಳ ಅವಽಯಲ್ಲಿ ಟ್ರಂಪ್‌ರನ್ನು 8 ಬಾರಿ ಭೇಟಿ ಮಾಡಿದ ಏಕೈಕ ಭಾರತೀಯ ಪ್ರಧಾನಿ ಮೋದಿ ಎಂಬುದು ನಿಮ್ಮ ಗಮನಕ್ಕೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಹೌಡಿ ಮೋದಿ’ಕಾರ್ಯಕ್ರಮ ಹಾಗೂ ಭಾರತದ ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮಗಳ ಸಂದರ್ಭದಲ್ಲಿ, ಅವರಿಬ್ಬರ ನಡುವೆ ಇದ್ದ ಆಳ ಬಾಂಧವ್ಯವು ಸ್ಪಷ್ಟವಾಗಿತ್ತು ಎನ್ನಬೇಕು. ಮೋದಿಯವರು ಟೆಕ್ಸಾಸ್‌ನಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಗೆ ಟ್ರಂಪ್‌ರನ್ನೂ ಆಹ್ವಾನಿಸಲಾಗಿತ್ತು; ಅಲ್ಲಿ ‘ಅಬ್ ಕಿ ಬಾರ್, ಟ್ರಂಪ್ ಸರ್ಕಾರ್’ ಎಂದು ಉದ್ಗರಿಸುವ ಮೂಲಕ ಮೋದಿಯವರು ಬಿಜೆಪಿಯ ಚುನಾವಣಾ ಘೋಷವಾಕ್ಯವನ್ನು ಅಲ್ಲಿನ ಸನ್ನಿವೇಶಕ್ಕೆ ಹೊಂದಿಸಿ ವಿವರಿಸಿದ್ದು ನಿಮಗೆ ಗೊತ್ತೇ ಇದೆ.
ಜನಪ್ರಿಯ ಮೌಲ್ಯಮಾಪನವನ್ನು ಆಧರಿಸಿ ಹೇಳುವುದಾದರೆ, ಮೋದಿಯವರಾಗಲೀ ಟ್ರಂಪ್ ಅವರಾಗಲೀ ರಾಜಕೀಯದಲ್ಲಿ ‘ಹೊಸಗಸುಬಿ’ ಗಳಲ್ಲ. ಅವರು ಸಾಕಷ್ಟು ಪಳಗಿರುವ ರಾಜಕಾರಣಿಗಳು, ಮುತ್ಸದ್ದಿಗಳು. ಉದಾರವಾದಿಗಳ ಕ್ಷಮೆಯನ್ನು ಇತಿಹಾಸದ ಕಸದಬುಟ್ಟಿಗೆ ಸೀಮಿತ ಗೊಳಿಸುವ ಮೂಲಕ ಚರಿತ್ರೆಯ ಮರುನಿರೂಪಣೆ ಮಾಡುತ್ತಿರುವ ಇವರಿಬ್ಬರೂ ರಾಷ್ಟ್ರೀಯವಾದಿ ಜನಸಮಾನ್ಯರ ಪಾಲಿಗೆ ನಿಜಾರ್ಥದ ಹೀರೋಗಳಾಗಿದ್ದಾರೆ ಎಂದರೆ ತಪ್ಪಾಗಲಾರದು.
(ಲೇಖಕರು ಹಿರಿಯ ಪತ್ರಕರ್ತರು)