Friday, 15th November 2024

Kanhaiya Kumar: ಮಾಜಿ ಸಿಎಂ ಫಡ್ನವೀಸ್‌ ಪತ್ನಿ ಬಗ್ಗೆ ಕಮೆಂಟ್‌; ವಿವಾದದ ಕಿಡಿ ಹೊತ್ತಿಸಿದ ಕನ್ಹಯ್ಯಾ ಕುಮಾರ್ ಹೇಳಿಕೆ

ನಾಗ್ಪುರ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ (Maharashtra Elections) ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್(Kanhaiya Kumar) ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರ ಮೇಲೆ ವಾಗ್ದಾಳಿ ನಡೆಸುವ ಭರದಲ್ಲಿ ಅವರ ಪತ್ನಿಯ ಬಗ್ಗೆ ಮಾಡಿರುವ ಕಮೆಂಟ್ ಒಂದು ಇದೀಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ನಾಯಕರ ಹಾಗೂ ಪಕ್ಷಗಳ ನಡುವೆ ಮಾತಿನ ಕೆಸರೆರಚಾಟಕ್ಕೆ ಕಾರಣವಾಗಿದೆ.

ಕನ್ಹಯ್ಯಾ ಕುಮಾರ್ ಅವರು ನಾಗ್ಪುರದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಜಾಥಾದಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ಕಮೆಂಟ್ ಮಾಡಿರುವ ಅವರು, ‘ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡೋದ್ರಲ್ಲಿ ಕಾಲಕಳೆಯುತ್ತಿದ್ದರೆ, ಧರ್ಮವನ್ನು ರಕ್ಷಿಸಲು ಜನರು ಹೇಗೆ ಜವಾಬ್ದಾರಾಗುತ್ತಾರೆ..?’ ಎಂದು ಅವರು ಪ್ರಶ್ನಿಸಿದ್ದಾರೆ. ಹಾಗೂ ರಾಜಕಾರಣಿಗಳು ದಾರ್ಷ್ಟ್ಯತನವನ್ನು ಪ್ರದರ್ಶಿಸುವಾಗ ಜನರು ಅವರಿಗೆ ಸರಿಯಾದ ದಾರಿಯನ್ನು ತೋರಿಸಬೇಕು ಎಂದೂ ಅವರು ಇದೇ ಸಂದರ್ಭದಲ್ಲಿ ಮತದಾರರಿಗೆ ಕರೆ ನೀಡಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಾಂಗ್ರೆಸ್ ನಾಯಕ ಪ್ರಫುಲ್ಲ ಗುಡಾಧೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕನ್ಹಯ್ಯಾ ಕುಮಾರ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ತನ್ನ ಭಾಷಣದಲ್ಲಿ ಕನ್ಹಯ್ಯಾ ಕುಮಾರ್ ಅವರು ಎಲ್ಲೂ ಅಮೃತಾ ಫಡ್ನವೀಸ್ ಅವರ ಹೆಸರನ್ನು ಉಲ್ಲೇಖಿಸದೇ ಈ ವಾಗ್ದಾಳಿಯನ್ನು ನಡೆಸಿದ್ದಾರೆ. ಶಾಸ್ತ್ರೀಯ ಸಂಗೀತಗಾರ್ತಿ ಹಾಗೂ ಬ್ಯಾಂಕರ್ ಆಗಿರುವ ಅಮೃತಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: BBK 11: ನನ್ ಎಕ್ಕಡ ತಗೊಂಡ್ ನಾನೇ ಹೊಡ್ಕೋಬೇಕು, ಥೂ..: ಚೈತ್ರಾ ಮೇಲೆ ಕಡಿಮೆಯಾಗದ ಶಿಶಿರ್ ಕೋಪ

“ಒಂದುವೇಳೆ ಇದೊಂದು ಧರ್ಮಯುದ್ಧವಾಗಿದ್ದಲ್ಲಿ, ಧರ್ಮವನ್ನು ರಕ್ಷಿಸುವಂತೆ ನಿಮಗೆ ಸಲಹೆ ನೀಡುವ ಯಾವುದೇ ನಾಯಕರಲ್ಲಿ ನೀವೊಂದು ಪ್ರಶ್ನೆಯನ್ನು ಕೇಳಬೇಕು, ಅದೇನೆಂದರೆ, ಆ ನಾಯಕರ ಸ್ವಂತ ಮಗ ಮತ್ತು ಮಗಳು ಈ ಧರ್ಮಯುದ್ಧದಲ್ಲಿ ಸೇರಿಕೊಳ್ಳುತ್ತಾರೆಯೇ? ನಾಯಕರ ಮಕ್ಕಳು ವಿದೇಶದಲ್ಲಿ ಕಲಿಯುತ್ತಿರುವಾಗ ಜನಸಾಮಾನ್ಯರು ಧರ್ಮವನ್ನು ರಕ್ಷಿಸುವುದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.

ಅದೇ ರೀತಿಯಲ್ಲಿ, ಉಪಮುಖ್ಯಮಂತ್ರಿಗಳ ಪತ್ನಿ ಇನ್ ಸ್ಟಾಗ್ರಾಂ ರೀಲ್ಸ್ ಗಳನ್ನು ಮಾಡುವಾಗ ಜನಸಾಮಾನ್ಯರು ಧರ್ಮವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬಲ್ಲರು..’ ಎಂದೂ ಕನ್ನಯ್ಯ ಅವರು ಇದೇ ಸಂದರ್ಭದಲ್ಲಿ ಫಡ್ನವೀಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕನ್ಹಯ್ಯಾ ಕುಮಾರ್ ಅವರ ಮಾತಿನ ಚಾಟಿಯೇಟು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಮೇಲೂ ಬಿದ್ದಿದ್ದು, ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿದ್ದಾರೆ.

“ಅಮಿತ್ ಶಾ ಅವರ ಪುತ್ರ ಜಯ್ ಶಾ ಧರ್ಮ ರಕ್ಷಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವರೇ? ಅವರು ಬಿಸಿಸಿಐಗಾಗಿ ಐಪಿಎಲ್ ತಂಡಗಳನ್ನು ರೂಪಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ನಮಗೆ ಡ್ರೀಂ 11ನಲ್ಲಿ ಟೀಂ ಮಾಡಲು ಹೇಳಿ ನಮ್ಮಲ್ಲಿ ಕ್ರಿಕೆಟರ್ಸ್‌ ಆಗುವ ಕನಸುಗಳನ್ನು ಬಿತ್ತುತ್ತಾರೆ, ಆದರೆ, ಅವರ ಮಾತನ್ನು ನಂಬಿ ನಾವು ಜೂಜುಕೋರರಾಗುತ್ತಿದ್ದೇವೆ..ʼ ಎಂದು ಕನ್ಹಯ್ಯಾ ಕುಮಾರ್ ಕಿಡಿ ಕಾರಿದ್ದಾರೆ.

ಇನ್ನು, ಅಮೃತಾ ಫಡ್ನವೀಸ್‌ ಕುರಿತಾಗಿ ಕನ್ನಯ್ಯ ನೀಡಿರುವ ಹೇಳಿಕೆ ಇದೀಗ ಮಹಾರಾಷ್ಟ್ರದಲ್ಲಿ ವಿವಾದದ ಕಿಡಿಯನ್ನು ಹೊತ್ತಿಸಿದ್ದು, ಬಿಜೆಪಿ ವಕ್ತಾರ ಶೆಹಾಜಾದ್‌ ಪೂನಾವಾಲಾ ಕನ್ನಯ್ಯ ವಿರುದ್ಧ ಕಿಡಿ ಕಾರಿದ್ದು, ʼಈ ಹೇಳಿಕೆ ಎಲ್ಲಾ ಮರಾಠಿ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆʼ ಎಂದು ಅವರು ಕಿಡಿಕಾರಿದ್ದಾರೆ. ಮಾತ್ರವಲ್ಲದೇ ಕನ್ನಯ್ಯ ಅವರು ಭಯೋತ್ಪಾದಕರು ಮತ್ತು ಸಂಸತ್ತಿನ ಮೇಲೆ ದಾಳಿ ನಡೆಸಿದ ಅಫ್ಜಲ್‌ ಗುರುವಿನ ಬೆಂಬಲಿಗ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ ಗೃಹ ಸಚಿವರಾಗಿರುವ ದೇವೇಂದ್ರ ಫಡ್ನವೀಸ್‌ ಅವರ “ವೋಟ್‌ ಜಿಹಾದ್‌ʼ ಹೇಳಿಕೆಯು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟಕ್ಕೆ ರಾಜ್ಯದಲ್ಲಿನ 48 ಲೋಕಸಭಾ ಸ್ಥಾನಗಳಲ್ಲಿ 14 ಸ್ಥಾನಗಳನ್ನು ತಂದುಕೊಟ್ಟಿತ್ತು, ಫಡ್ನವೀಸ್‌ ಅವರ ಈ ಹೇಳಿಕೆಯು ಮುಸ್ಲಿಂ ಮತಗಳು ಒಗ್ಗೂಡುವಂತೆ ಮಾಡಿ ಮಹಾಯುತಿ ಮೈತ್ರಿಕೂಟಕ್ಕೆ ಕಂಟಕಪ್ರಾಯವಾಯಿತು ಎಂದು ಕನ್ಹಯ್ಯಾ ಕುಮಾರ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.