ನವದೆಹಲಿ: ಸತತ ಮೂರನೇ ದಿನವೂ ದೆಹಲಿಯ (Delhi) ಗಾಳಿಯ (Air Pollution) ಗುಣಮಟ್ಟ ತೀವ್ರ ಕುಸಿತವಾಗಿದೆ. ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ಮೊದಲ ಐದು ಕಲುಷಿತ ಪ್ರದೇಶಗಳಾಗಿ ಜಹಾಂಗೀರ್‌ಪುರಿ, ಬವಾನಾ, ವಜೀರ್‌ಪುರ, ರೋಹಿಣಿ ಮತ್ತು ಪಂಜಾಬಿಬಾಗ್ ಗುರುತಿಸಿಕೊಂಡಿದೆ.
ಶುಕ್ರವಾರ ಬೆಳಗ್ಗೆ ಹೊಗೆಯಿಂದ ಆವೃತ್ತವಾಗಿದ್ದ ದೆಹಲಿಯಲ್ಲಿ ಸತತ ಮೂರನೇ ದಿನವೂ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ. ವಾಯು ಗುಣಮಟ್ಟ ಸೂಚ್ಯಂಕದ (Air quality index) ಪ್ರಕಾರ ದೆಹಲಿಯು ವಿಶ್ವದ ಎರಡನೇ ಅತ್ಯಂತ ಕಲುಷಿತ ನಗರವಾಗಿದೆ. ಪಾಕಿಸ್ತಾನದ ಲಾಹೋರ್ ಬಳಿಕ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 770 ಅನ್ನು ಶುಕ್ರವಾರ ಬೆಳಗ್ಗೆ 7 ಗಂಟೆಗೆ ದಾಖಲಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಆ್ಯಪ್‌ನ ಪ್ರಕಾರ, ಶುಕ್ರವಾರ ಬೆಳಗ್ಗೆ ದೆಹಲಿಯ ಮೊದಲ ಐದು ಮಾಲಿನ್ಯ ಪ್ರದೇಶಗಳಾದ ಜಹಾಂಗೀರ್‌ಪುರಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 458, ಬವಾನಾದಲ್ಲಿ 455, ವಜೀರ್‌ಪುರದಲ್ಲಿ 455, ರೋಹಿಣಿಯಲ್ಲಿ 452 ಮತ್ತು ಪಂಜಾಬಿಬಾಗ್‌ನಲ್ಲಿ 443 ದಾಖಲಾಗಿದೆ. ದೆಹಲಿಯ ಪಾಲಂನಲ್ಲಿ 500 ಮೀ. ಮತ್ತು ಸಫ್ದುರ್ಜಂಗ್‌ನಲ್ಲಿ 400 ಮೀ. ಮಾತ್ರ ಗೋಚರತೆ ಕಾಣಿಸಿಕೊಂಡಿರುವುದಾಗಿ ವರದಿ ಮಾಡಿದೆ.
ವಿಮಾನ, ರೈಲು ಸಂಚಾರ ವ್ಯತ್ಯಯ
ದಟ್ಟ ಹೊಗೆಯ ಕಾರಣದಿಂದಾಗಿ ಕಡಿಮೆ ಗೋಚರತೆಯ ಸಮಸ್ಯೆ ತಲೆದೋರಿದ್ದು,ದೇಶಾದಾದ್ಯಂತ ವಿಮಾನ ಮತ್ತು ರೈಲು ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಅಮೃತಸರಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ಹಲವಾರು ಇಂಡಿಗೋ ವಿಮಾನಗಳು ಸಂಚಾರದಲ್ಲಿ ವ್ಯತ್ಯಯವಾಗಿದೆ. ದೆಹಲಿ ಮತ್ತು ದರ್ಬಂಗಾಕ್ಕೆ ಮತ್ತು ಅಲ್ಲಿಂದ ಹೊರಡುವ ಅನೇಕ ಸ್ಪೈಸ್‌ಜೆಟ್ ವಿಮಾನಗಳು ತಡವಾಗಿ ಸಂಚರಿಸಿವೆ. ವಿವಿಧ ರೈಲುಗಳು ಎರಡು ಗಂಟೆಗೂ ಹೆಚ್ಚು ವಿಳಂಬವಾಗಿ ಕಾರ್ಯಾಚರಣೆ ಪ್ರಾರಂಭಿಸಿವೆ. ನವದೆಹಲಿ ರೈಲು ನಿಲ್ದಾಣಕ್ಕೆ ಆಗಮಿಸುವ 25 ಕ್ಕೂ ಹೆಚ್ಚು ರೈಲುಗಳು ಸಹ ವಿಳಂಬವಾಗಿವೆ ಎನ್ನಲಾಗಿದೆ.
ಆನ್‌ಲೈನ್‌ನಲ್ಲಿ ತರಗತಿಗಳು
ಕಡಿಮೆ ಗೋಚರತೆಯ ಕಾರಣದಿಂದಾಗಿ ದೆಹಲಿಯ ಎಲ್ಲಾ ಪ್ರಾಥಮಿಕ ಶಾಲೆ ಚಟುವಟಿಕೆಗಳನ್ನು ಆನ್‌ಲೈನ್ ಮೂಲಕ ನಡೆಸಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಅತಿಶಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದು, ಇದು ಮುಂದಿನ ನಿರ್ದೇಶನಗಳವರೆಗೆ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.
ಹಲವು ನಿರ್ಬಂಧ
ದೆಹಲಿಯಲ್ಲಿ ವಾಯುಗುಣಮಟ್ಟ ನಿರ್ವಹಣಾ ಸಮಿತಿಯು ಗ್ರೇಡೆಡ್ ಆಕ್ಷನ್ ರೆಸ್ಪಾನ್ಸ್ ಪ್ಲಾನ್‌ನ (GRAP) ಹಂತ 3 ಅನ್ನು ಜಾರಿಗೊಳಿಸಿದ್ದು, ಇದರ ಪ್ರಕಾರ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಇಂತಿವೆ.
- ಕಟ್ಟಡ ನಿರ್ಮಾಣ ಮತ್ತು ಧ್ವಂಸ ಕಾರ್ಯಕ್ಕೆ ನಿರ್ಬಂಧ
- ದೆಹಲಿ ಮತ್ತು ಎನ್‌ಸಿಆರ್‌ನ ಗುರುಗ್ರಾಮ್, ಫರಿದಾಬಾದ್, ಘಾಜಿಯಾಬಾದ್ ಮತ್ತು ನೋಯ್ಡಾದಲ್ಲಿ ಬಿಎಸ್ -3 ಪೆಟ್ರೋಲ್ ಮತ್ತು ಬಿಎಸ್ -4 ಡೀಸೆಲ್ ನಾಲ್ಕು-ಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.
- ತುರ್ತು ಉದ್ದೇಶಗಳಿಗಾಗಿ ಮಾತ್ರ ಡೀಸೆಲ್ ಜನರೇಟರ್ ಸೆಟ್‌ಗಳ ನಿರ್ಬಂಧಿತ ಬಳಕೆಗೆ ಅನುಮತಿ ಇದ್ದು, ಪ್ರಮಾಣಿತ ಪಟ್ಟಿಯಲ್ಲಿರುವ ಇಂಧನಗಳಿಂದ ಕಾರ್ಯನಿರ್ವಹಿಸುವ ಕೈಗಾರಿಕಾ ಕಾರ್ಯಾಚರಣೆಗಳನ್ನು ನಿಷೇಧಿಸಲಾಗಿದೆ.
- ಯಾಂತ್ರೀಕೃತ ರಸ್ತೆ ಗುಡಿಸುವುದು, ಧೂಳನ್ನು ಕಡಿಮೆ ಮಾಡಲು ನೀರು ಚಿಮುಕಿಸಲು ಆದೇಶಿಸಲಾಗಿದೆ.
- ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹೆಚ್ಚಿಸುವುದು, ವಿಭಿನ್ನ ದರಗಳ ಮೂಲಕ ಆಫ್ ಪೀಕ್ ಪ್ರಯಾಣವನ್ನು ಉತ್ತೇಜಿಸಲಾಗುವುದು.
- ಪ್ರಮುಖ ವೆಲ್ಡಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸಗಳಿಗಾಗಿ ಸಣ್ಣ ವೆಲ್ಡಿಂಗ್ ಚಟುವಟಿಕೆಗಳನ್ನು ಅನುಮತಿಸಲಾಗಿದೆ.
- ಪೇಂಟಿಂಗ್, ಪಾಲಿಶಿಂಗ್ ಮತ್ತು ವಾರ್ನಿಶಿಂಗ್ ಕೆಲಸಗಳು ಇತ್ಯಾದಿ. ಸಿಮೆಂಟ್, ಪ್ಲಾಸ್ಟರ್, ಇತರ ಲೇಪನ, ಒಳಾಂಗಣ ದುರಸ್ತಿ, ನಿರ್ವಹಣೆ, ಟೈಲ್ಸ್, ಕಲ್ಲು, ಇತರ ಫ್ಲೋರಿಂಗ್ ಸಾಮಗ್ರಿಗಳನ್ನು ಕತ್ತರಿಸುವುದು, ಗ್ರೈಂಡಿಂಗ್ ಮಾಡುವುದು ಮತ್ತು ಸರಿಪಡಿಸುವುದಕ್ಕೆ ಅನುಮತಿ ಇದೆ.
- ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳ ಚಲನೆಗೆ ನಿರ್ಬಂಧವಿದೆ.
ಮನೆಯಲ್ಲೇ ಇರಿ
ವಾಯು ಮಾಲಿನ್ಯವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉಸಿರಾಟದ ಸಮಸ್ಯೆಗಳಿಂದ ಹಿಡಿದು ಹೃದಯರಕ್ತನಾಳದವರೆಗೆ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದು, ಜನರು ಸಾಧ್ಯವಾದಷ್ಟು ಮನೆಯೊಳಗೆ ಇರಬೇಕೆಂದು ಸೂಚಿಸಿದ್ದಾರೆ. ವಾಯು ಮಾಲಿನ್ಯವು ಕರುಳು ಮತ್ತು ಚಯಾಪಚಯ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಗುರುಗ್ರಾಮ್‌ನ ನಾರಾಯಣ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ, ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ಸಲಹೆಗಾರ ಡಾ. ಸುಕೃತ್ ಸಿಂಗ್ ಸೇಥಿ ತಿಳಿಸಿದ್ದಾರೆ.
ಕಲುಷಿತ ಗಾಳಿಯಲ್ಲಿರುವ ಹಾನಿಕಾರಕ ಕಣಗಳು ಮತ್ತು ಅನಿಲಗಳನ್ನು ನಾವು ಉಸಿರಾಡಿದಾಗ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಬಹುದು. ಇದು ಕರುಳಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಕರುಳಿನಲ್ಲಿ ಬ್ಯಾಕ್ಟೀರಿಯಾಗಳ ಸಂಗ್ರಹ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಡಾ. ಸೇಥಿ ತಿಳಿಸಿದ್ದಾರೆ. ಹೀಗಾಗಿ ಗರಿಷ್ಠ ಮಾಲಿನ್ಯದ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಲು ಅವರು ಸೂಚಿಸಿದ್ದಾರೆ. ಹೊರಗೆ ತಿರುಗಾಡುವಾಗ ಮಾಸ್ಕ್ ಬಳಸುವುದು ಒಳ್ಳೆಯದು ಎಂದು ಹೇಳಿದ್ದಾರೆ.