ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನೋಡಲು ಬಹಳ ಅದ್ಭುತವಾಗಿದೆ. ಇದನ್ನು ನೋಡಿದವರು ಆಶ್ಚರ್ಯಗೊಳ್ಳುವುದು ಖಂಡಿತ! ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನೋಡಿ ಜಪಾನಿನ ಯುಟ್ಯೂಬರ್ ಒಬ್ಬರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಇನ್ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಪೊಸ್ಟ್ ಮಾಡಿ ಅದರಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ವೈರಲ್(Viral Video) ಆಗಿದೆ.
ಜಪಾನಿನ ಯುಟ್ಯೂಬರ್ ಕಿಕಿ ಚೆನ್ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿನ ಟರ್ಮಿನಲ್ 2 ಅಲ್ಲಿ ಸುತ್ತಾಡಿದ್ದಾರೆ. ಏರ್‌ಪೋರ್ಟ್‌ನಲ್ಲಿರುವ ಇವೆಂಟ್ ಸ್ಪೇಸ್, ನಿಕೋಬಾರ್ ಲಾಂಜ್, ಎಂಟರ್‌ಟೈನ್ಮೆಂಟ್ ಏರಿಯಾಗಳನ್ನೆಲ್ಲಾ ಬೆರಗು ಕಣ್ಣಿನಿಂದ ನೋಡಿದ್ದಾರೆ. ಹಾಗೇ ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಅವರು ಫಾಲೋವರ್ಸ್‌ಗೆ ವಿಮಾನ ನಿಲ್ದಾಣದ ಸೌಂದರ್ಯವನ್ನು ಬಣ್ಣಿಸಿದ್ದಾರೆ.
“ಭಾರತದ ಅತ್ಯುತ್ತಮ ವಿಮಾನ ನಿಲ್ದಾಣ ಟರ್ಮಿನಲ್. ಇಲ್ಲಿ ಎಲ್ಲವನ್ನೂ ಬಿದಿರಿನಿಂದ ನಿರ್ಮಿಸಲಾಗಿದೆ – ಚೆಕ್-ಇನ್ ಕೌಂಟರ್‌ಗಳು ಸಹ ಬಿದಿರಿನಲ್ಲಿದೆ” ಎಂದು ಅವರು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಹಾಗೇ “ನಾನು ಭಾರತದ ವಿಮಾನ ನಿಲ್ದಾಣದಲ್ಲಿದ್ದೆ ಎಂದು ನಂಬಲು ಸಾಧ್ಯವಿಲ್ಲ” ಎಂದು ವಿಡಿಯೊದಲ್ಲಿ ಬರೆದಿದ್ದಾರೆ. ಈ ವಿಡಿಯೊಗೆ ಸುಮಾರು 17 ಮಿಲಿಯನ್ ವ್ಯೂವ್ಸ್ ಬಂದಿದೆ. ಇದಕ್ಕೆ ಟ್ವೀಟರ್ ಹಾಗೂ ಯೂಟ್ಯೂಬ್‌ನಲ್ಲಿ ಸಾಕಷ್ಟು ಲೈಕ್ಸ್ ಕೂಡ ಸಿಕ್ಕಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಪ್ಯಾರಿಸ್ ಮೂಲದ ಪ್ರತಿಷ್ಠಿತ ವಾಸ್ತುಶಿಲ್ಪ ಪ್ರಶಸ್ತಿಗಳ ತೀರ್ಪುಗಾರರಾದ ಯುನೆಸ್ಕೋದ ಪ್ರಿಕ್ಸ್ ವರ್ಸೇಲ್ಸ್ ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ ಟರ್ಮಿನಲ್‍ಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ. ಈ ಟರ್ಮಿನಲ್ ತನ್ನ ಅಸಾಧಾರಣ ವಿನ್ಯಾಸಕ್ಕಾಗಿ ವಿಶಿಷ್ಟವಾದ ಒಳಾಂಗಣಕ್ಕಾಗಿ ವಿಶೇಷ ಬಹುಮಾನಗಳನ್ನು ಪಡೆದಿತ್ತು. ಸುಮಾರು 5,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಟರ್ಮಿನಲ್ 2, ಉದ್ಯಾನ ನಗರಿ ಬೆಂಗಳೂರಿಗೆ ಒಂದು ಗೌರವದ ಸಂಕೇತವಾಗಿದೆ. ಇದು ಇಲ್ಲಿರುವ ಪ್ರಯಾಣಿಕರಿಗೆ ಉದ್ಯಾನದಲ್ಲಿ ಇದ್ದಂತಹ ಪ್ರಶಾಂತ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ:ಹಾವೆಂದರೆ ಭಯ ಪಡೋರು ಇಲ್ಲೊಮ್ಮೆ ನೋಡಿ; ದೈತ್ಯ ಅನಕೊಂಡ ಎತ್ತಿಕೊಂಡು ಯುವಕನ ಸಾಹಸ! ವಿಡಿಯೊ ಇದೆ
ಪ್ರಯಾಣಿಕರು 10,000+ ಚದರ ಮೀಟರ್ ಹಸಿರು ಗೋಡೆಗಳು, ತೂಗು ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸಬಹುದು ಮತ್ತು ಇವೆಲ್ಲವನ್ನೂ ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿ ತಯಾರಿಸಲಾಗಿತ್ತು.