ಮುಂಬೈ: ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿರುವ ನಟ ವಿಕ್ರಾಂತ್ ಮಾಸ್ಸೆ (Vikrant Massey) ಇತ್ತೀಚೆಗೆ ತಮ್ಮ ಕುಟುಂಬದ ಬಹುಧರ್ಮೀಯ ಸಂಪ್ರದಾಯಗಳ ಬಗ್ಗೆ ಹಂಚಿಕೊಂಡಿದ್ದಾರೆ. ವಿಕ್ರಾಂತ್ ಅವರ ಕುಟುಂಬವು ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಯಾಕೆಂದರೆ ಅವರ ತಂದೆ ಕ್ರಿಶ್ಚಿಯನ್, ಅವರ ತಾಯಿ ಸಿಖ್, ಅವರ ಪತ್ನಿಯಾದ ನಟಿ ಶೀತಲ್ ಠಾಕೂರ್ ಹಿಂದೂ, ಮತ್ತು ಅವರ ಸಹೋದರ ಮೊಯೀನ್ 17 ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಇಂತಹ ಬಹುಧರ್ಮಿಯರನ್ನು ಹೊಂದಿರುವ ಇವರ ಕುಟುಂಬ ಒಟ್ಟಾಗಿ, ಎಲ್ಲಾ ನಂಬಿಕೆಗಳನ್ನು ಸಮಾನ ಗೌರವದಿಂದ ಆಚರಿಸುತ್ತಾರೆ ಎಂದು ವಿಕ್ರಾಂತ್ ತಿಳಿಸಿದ್ದಾರೆ.
ಆದರೆ, ಇತ್ತೀಚೆಗೆ, ಕರ್ವಾ ಚೌತ್ ಸಮಯದಲ್ಲಿ ಪತ್ನಿ ಶೀತಲ್ ಅವರ ಪಾದಗಳನ್ನು ಮುಟ್ಟಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ವಿಕ್ರಾಂತ್ ಅನೇಕರಿಂದ ಟ್ರೋಲ್ ಆಗಿದ್ದಾರೆ. ಅನೇಕರು ಈ ವಿಚಾರವನ್ನು ಹೊಗಳಿದರೆ, ಇನ್ನೂ ಕೆಲವು ನೆಟ್ಟಿಗರು ಇದನ್ನು ಆಕ್ಷೇಪಿಸಿದ್ದಾರೆ. ಹಿಂದೂ ಆಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಿಕ್ರಾಂತ್ ಅವರನ್ನು ಟೀಕಿಸಿದ್ದಾರೆ. ಹಾಗಾಗಿ ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ನಟ ವಿಕ್ರಾಂತ್, ತಮ್ಮ ಕುಟುಂಬವು ಯಾವಾಗಲೂ ಅಂತರ್ಧರ್ಮೀಯ ಆಚರಣೆಗಳನ್ನು ಸ್ವೀಕರಿಸುತ್ತದೆ ಎಂದು ಹೇಳಿದ್ದಾರೆ.
“ಸಿಖ್ ಆಗಿ ಜನಿಸಿದ ನನ್ನ ತಾಯಿ ಕರ್ವಾ ಚೌತ್ ಸಮಯದಲ್ಲಿ ಬಿಂದಿ ಧರಿಸಿ ನಮ್ಮ ಪಕ್ಕದಲ್ಲಿ ನಿಂತಿದ್ದಾರೆ. ಬಾಲ್ಯದಿಂದಲೂ, ನಾವು ದೇವಾಲಯಗಳಿಗೆ, ನವರಾತ್ರಿಯ ಸಮಯದಲ್ಲಿ ಪ್ರತಿಸಲ ಮಾತಾ ರಾಣಿ ಪೆಂಡಾಲ್ಗಳಿಗೆ ಹೋಗುತ್ತಿದ್ದೇವು. ನಮ್ಮ ಕುಟುಂಬವು , ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತದೆ” ಎಂದು ಅವರು ಹೇಳಿದ್ದಾರೆ. “ನನ್ನ ತಂದೆ ಕ್ರಿಶ್ಚಿಯನ್ ಆಗಿದ್ದರೂ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋ ದೇವಿ ದೇವಸ್ಥಾನಕ್ಕೆ ಆರು ಬಾರಿ ಹೋಗಿದ್ದಾರೆ. ಅವರು ಈಗಲೂ ವಾರಕ್ಕೆ ಎರಡು ಬಾರಿ ಚರ್ಚ್ಗೆ ಹೋಗುತ್ತಾರೆ. ಭಾರತ ಯಾವಾಗಲೂ ಹೀಗೆಯೇ ಇದೆ. ಇದು ನಮ್ಮ ಹಿಂದೂಸ್ತಾನ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ ನೋಡಿ ಫುಲ್ ಫಿದಾ ಆದ ಜಪಾನಿ ಯುಟ್ಯೂಬರ್! ಭಾರೀ ವೈರಲ್ ಆಗ್ತಿದೆ ಆಕೆಯ ವಿಡಿಯೊ
ಅಲ್ಲದೇ ಅವರ ಸಹೋದರನ ಬಗ್ಗೆ ಮಾತನಾಡಿದ ಅವರು, “ನನ್ನ ಸಹೋದರ ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾನೆ. ಇಸ್ಲಾಂಗೆ ಮತಾಂತರಗೊಳ್ಳುವುದು ಅವರ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ನಾವು ಇಲ್ಲಿ ದೀಪಾವಳಿ ಮತ್ತು ಹೋಳಿಯನ್ನು ಒಟ್ಟಿಗೆ ಆಚರಿಸುತ್ತೇವೆ. ಈದ್ ಸಂದರ್ಭದಲ್ಲಿ, ನಾವು ಬಿರಿಯಾನಿ ತಯಾರಿಸಿ ಆಚರಿಸುತ್ತೇವೆ” ಎಂದಿದ್ದಾರೆ.
ನಟ ವಿಕ್ರಾಂತ್ ಮಾಸ್ಸೆ 2002ರ ಗೋಧ್ರಾ ರೈಲು ಬೆಂಕಿ ದುರಂತ ಘಟನೆಯನ್ನು ಆಧರಿಸಿದ ಚಿತ್ರ ‘ದಿ ಸಬರಮತಿ ರಿಪೋರ್ಟ್’ ನಲ್ಲಿ ನಟಿಸಿದ್ದಾರೆ. ಇದೀಗ ಚಿತ್ರ ಹಲವು ಕಾರಣಗಳಿಂದ ಭಾರೀ ಸುದ್ದಿಯಲ್ಲಿದೆ.