ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಸಿನಿಮಾ (Bhairathi Ranagal Movie) ಶುಕ್ರವಾರ ಅದ್ಧೂರಿಯಾಗಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಸುಮಾರು 365ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಶಿವಣ್ಣನ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಏನಂದ್ರು ಎಂಬ ಮಾಹಿತಿ ಇಲ್ಲಿದೆ.
‘ಮಫ್ತಿ’ ಬಳಿಕ ಮತ್ತೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ಕೂಡ ತುದಿಗಾಲಲ್ಲಿ ನಿಂತಿದ್ದರು. ಇದು ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿದ್ದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಹುಟ್ಟಾಕಿತ್ತು. ಮೊದಲ ದಿನ ಫ್ಯಾನ್ಸ್‌ಗಳಿಗಾಗಿ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ಪಾತ್ರ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಆಗಿತ್ತು. ಭೈರತಿ ರಣಗಲ್ ಯಾರು? ಈ ಹಿಂದೆ ‘ಭೈರತಿ ರಣಗಲ್’ ಹೇಗಿದ್ದ? ಭೈರತಿ ರಣಗಲ್ ವೈಲೆಂಟ್ ಆಗಿದ್ದು ಯಾಕೆ? ಇಂತಹ ಹಲವು ಪ್ರಶ್ನೆಗಳಿಗೆ ಈ ಪ್ರೀಕ್ವೆಲ್‌ನಲ್ಲಿ ಉತ್ತರ ಕೊಡಲಾಗಿದೆ. ಸಿನಿಮಾ ಅದ್ಭುತವಾಗಿದ್ದು, ಪಕ್ಕಾ ಪೈಸಾ ವಸೂಲ್ ಚಿತ್ರವಾಗಿದೆ. ಶಿವಣ್ಣ ಅವರ ಮಾಸ್ ಡೈಲಾಗ್‌ಗಳು ಸೂಪರ್ ಅಗಿದ್ದು, ಯಂಗ್ ಅಂಡ್ ಎನರ್ಜಿಟಿಕ್ ಆಕ್ಷನ್‌ನಿಂದ ಶಿವಣ್ಣನ ವಿಶ್ವರೂಪವನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಪ್ರೇಕ್ಷಕರು ತಿಳಿಸಿದ್ದಾರೆ.
ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರ ನಟನೆ, ಮ್ಯಾನರಿಸಂ, ಸ್ಟೈಲ್, ಡೈಲಾಗ್ ಎಲ್ಲವೂ ಭೈರತಿ ರಣಗಲ್ ಚಿತ್ರದ ಮೇಲಿನ ಆಸಕ್ತಿ ಇನ್ನಷ್ಟು ಹೆಚ್ಚಿಸಿವೆ. ಸಿನಿಮಾ ಪ್ರದರ್ಶನಕ್ಕೂ ಮೊದಲೇ ಥಿಯೇಟರ್ ಮುಂಭಾಗ ಶಿವಣ್ಣನ ಅಭಿಮಾನಿಗಳು ಪಟಾಕಿ ಹೊಡೆದು, ಹಾಡುಗಳಿಗೆ ಡ್ಯಾನ್ಸ್ ಮಾಡಿ, ಡೊಳ್ಳು, ತಮಟೆ ಸೌಂಡ್ಗೆ ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಭೈರತಿ ರಣಗಲ್ ಸಿನಿಮಾ ಸೂಪರ್ ಆಗಿ ಮೂಡಿ ಬಂದಿದೆ ಎಂದು ಅಭಿಮಾನಿಗಳು ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಶಿವಣ್ಣನ ಫ್ಯಾನ್ಸ್ ಕಪ್ಪು ಶರ್ಟ್, ಪಂಚೆ ಧರಿಸಿ ಸಿನಿಮಾ ನೋಡಲು ಆಗಮಿಸಿದ್ದು ವಿಶೇಷ ಎನಿಸಿತು.
ಇನ್ನು ಈ ಸಿನಿಮಾ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕೂಡ ಮುಂಜಾನೆತೇ ಅಭಿಮಾನಿಗಳೊಂದಿಗೆ ಫ್ಯಾನ್ಸ್ ಶೋನಲ್ಲಿ ಸಿನಿಮಾ ವೀಕ್ಷಣೆ ಮಾಡಿದರು. ನಟ ಡಾಲಿ ಧನಂಜಯ್ ಕೂಡ ಭೈರತಿ ರಣಗಲ್ ಸಿನಿಮಾ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಬೆಂಗಳೂರು ಏರ್‌ಪೋರ್ಟ್ ನೋಡಿ ಫುಲ್ ಫಿದಾ ಆದ ಜಪಾನಿ ಯುಟ್ಯೂಬರ್! ಭಾರೀ ವೈರಲ್ ಆಗ್ತಿದೆ ಆಕೆಯ ವಿಡಿಯೊ
ಭೈರತಿ ರಣಗಲ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜತೆಗೆ ರುಕ್ಮಿಣಿ ವಸಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನರ್ತನ್ ನಿರ್ದೇಶನ, ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಚೇತನ್ ಡಿಸೋಜಾ ಮತ್ತು ದಿಲೀಪ್ ಸುಬ್ರಹ್ಮಣ್ಯನ್ ರೂಪಿಸಿರುವ ಸಾಹಸ ಸಂಯೋಜನೆ ಫೈಟ್‌ಗಳ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ. ಖ್ಯಾತ ಬಾಲಿವುಡ್ ನಟ ರಾಹುಲ್ ಬೋಸ್ ಜತೆಗೆ ಶಬೀರ್ ಕಲ್ಲರಕಲ್, ಛಾಯಾ ಸಿಂಗ್, ದೇವರಾಜ್, ಮಧು ಗುರುಸ್ವಾಮಿ, ಬಾಬು ಹಿರಣ್ಣಯ್ಯ ಚಿತ್ರದಲ್ಲಿ ಅಭಿನಯಿಸಿದ್ದಾರೆ.