Friday, 15th November 2024

IND vs AUS Test: 2ನೇ ಟೆಸ್ಟ್‌ಗೆ ಶಮಿ ಲಭ್ಯ; ಸುಳಿವು ನೀಡಿದ ಬಾಲ್ಯದ ಕೋಚ್‌

ಲಕ್ನೋ: ಗಾಯದಿಂದ ಚೇತರಿಸಿಕೊಂಡು ಮರಳಿರುವ ವೇಗಿ ಮೊಹಮದ್​ ಶಮಿ(Mohammed Shami) ಬಂಗಾಳ ಪರ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್​ ಕಬಳಿಸಿ ಮಿಂಚಿದ ಬೆನ್ನಲ್ಲೇ ಶಮಿಯ ಬಾಲ್ಯದ ಕೋಚ್‌ ಮಹತ್ವದ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಶಮಿ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌(IND vs AUS Test) ಸರಣಿಯ ದ್ವಿತೀಯ ಪಂದ್ಯದ ವೇಳೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ʼಶಮಿ ಅಡಿಲೇಡ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ವರ್ಷದ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ತಮ್ಮ ಫಿಟ್ನೆಸ್ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಆಸೀಸ್‌ ವಿರುದ್ಧದ ಮೂರನೇ ಪಂದ್ಯದಲ್ಲಿ ಶಮಿ ಆಡುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆʼ ಎಂದು ಶಮಿ ಬಾಲ್ಯದ ಕೋಚ್‌ ಬದ್ರುದ್ದೀನ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಶಮಿ ಮಧ್ಯಪ್ರದೇಶ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 19 ಓವರ್​ಗಳಲ್ಲಿ 4 ಮೇಡನ್​ ಸಹಿತ 54 ರನ್​ಗಳಿಗೆ 4 ವಿಕೆಟ್​ ಗಳಿಸಿದ್ದರು.

ಶಮಿ ಪ್ರದರ್ಶನ ಕಂಡು ಆಸೀಸ್‌ ಪ್ರವಾಸದಲ್ಲಿರುವ ಭಾರತ ತಂಡದಲ್ಲಿಯೂ ಆಶಾಕಿರಣ ಮೂಡಿಸಿದೆ. ನಿರೀಕ್ಷೆಗೆ ತಕ್ಕಂತೆ ಬೌಲಿಂಗ್‌ ಪ್ರದರ್ಶಿಸಿದರೆ, ಆಸ್ಟ್ರೇಲಿಯಾ ವಿರುದ್ಧ ಸರಣಿಯ ಎರಡನೆ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬೂಮ್ರ ಜತೆ ದಾಳಿಗಿಳಿಯುವ ಸಾಧ್ಯತೆಯೂ ಗೋಚರಿಸಿದೆ. ಶಮಿ ಆಸ್ಟ್ರೇಲಿಯಾ ಎದುರು 12 ಟೆಸ್ಟ್ ಪಂದ್ಯಗಳನ್ನಾಡಿದ್ದು, 44 ವಿಕೆಟ್ ಕಬಳಿಸುವ ಮೂಲಕ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಇನ್ನು ಆಸೀಸ್‌ ನೆಲದಲ್ಲಿ 8 ಟೆಸ್ಟ್‌ ಪಂದ್ಯಗಳನ್ನಾಡಿದ್ದು 31 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.

ರಾಹುಲ್‌ಗೆ ಗಾಯ

ಶುಕ್ರವಾರ ಅಭ್ಯಾಸ ನಡೆಸುತ್ತಿದ್ದಾಗ ಕೆ.ಎಲ್ ರಾಹುಲ್ ಅವರ ಮೊಣಕೈಗೆ ಗಾಯವಾಗಿದ್ದು, ತಂಡದ ಆತಂಕಕ್ಕೆ ಕಾರಣವಾಗಿದೆ. ಪ್ರಸಿದ್ಧ್ ಕೃಷ್ಣ ಎಸೆದ ಬೌನ್ಸರ್‌ ಎಸೆತವೊಂದನ್ನು ಹೊಡೆಯುವ ಯತ್ನದಲ್ಲಿ ರಾಹುಲ್‌ ಬಲ ಮೊಣಕೈಗೆ ಗಾಯ ಮಾಡಿಕೊಂಡಿರು. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಿದರೂ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸಹಾಯಕ ಸಿಬ್ಬಂದಿ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಸದ್ಯ ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಗಾಯ ಗಂಭೀರ ಸ್ವರೂಪದಿಂದ ಕೂಡಿದರೆ ಮೊದಲ ಪಂದ್ಯಕ್ಕೆ ಅಲಭ್ಯರಾಗಬಹುದು. 

ಇದನ್ನೂ ಓದಿ Anshul Kamboj: ಇನಿಂಗ್ಸ್‌ನ ಎಲ್ಲ 10 ವಿಕೆಟ್‌ ಕಿತ್ತ ಅನ್ಶುಲ್ ಕಾಂಬೋಜ್

ಅಭ್ಯಾಸ ಪಂದ್ಯದಲ್ಲಿಯೂ ಕೊಹ್ಲಿ ವಿಫಲ

ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಸರಣಿಯಲ್ಲಿ ಘೋರ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಅನುಭವಿ ಆಟಗಾರ ವಿರಾಟ್‌ ಕೊಹ್ಲಿ ಇದೀಗ ಆಸೀಸ್‌ ವಿರುದ್ಧದ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿಯೂ 15 ರನ್‌ಗೆ ವಿಕೆಟ್‌ ಒಪ್ಪಿಸಿ ತಮ್ಮ ಬ್ಯಾಟಿಂಗ್‌ ವೈಫಳ್ಯವನ್ನು ಮುಂದುವರಿಸಿದ್ದಾರೆ. ಕೊಹ್ಲಿ ಮಾತ್ರವಲ್ಲದೆ ರಿಷಭ್‌ ಪಂತ್‌(19), ಯಶಸ್ವಿ ಜೈಸ್ವಾಲ್‌(15) ಕೂಡ ಅಗ್ಗಕ್ಕೆ ಔಟಾದರು.