ನವದೆಹಲಿ: ನ್ಯೂಜಿಲೆಂಡ್ ತಂಡದ ಹಿರಿಯ ವೇಗಿ ಟಿಮ್ ಸೌಥಿ ಅವರು ಅಂತಾರಾಷ್ಟೀಯ ಟೆಸ್ಟ್ ಕ್ರಿಕೆಟ್ಗೆ (Tim Southee retirement) ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ತಮ್ಮ ವೃತ್ತಿ ಜೀವನದ ಕೊನೆಯದು ಎಂದು ಪ್ರಕಟಿಸಿದ್ದಾರೆ. ಅದರಂತೆ ನ್ಯೂಜಿಲೆಂಡ್ ಕ್ರಿಕೆಟ್ ಕೂಡ ಹಿರಿಯ ವೇಗಿಯ ನಿವೃತ್ತಿ ಬಗ್ಗೆ ಖಚಿತಪಡಿಸಿದೆ. ಆದರೆ, ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ನ್ಯೂಜಿಲೆಂಡ್ ತಂಡ ಅರ್ಹತೆ ಪಡೆದರೆ, ಟಿಮ್ ಸೌಥಿ ಅವರು ಆಡಲಿದ್ದಾರೆ.
35ರ ಪ್ರಾಯದ ಟಿಮ್ ಸೌಥಿ ಅವರು ಇಲ್ಲಿಯವರೆಗೂ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 385 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆ ಮೂಲಕ ದೀರ್ಘಾವಧಿ ಸ್ವರೂಪದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ 300 ವಿಕೆಟ್ಗಳು, ಒಡಿಐನಲ್ಲಿ 200 ವಿಕೆಟ್ಗಳು ಹಾಗೂ ಟಿ20ಐ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಕಬಳಿಸಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆ ಕೂಡ ಟಿಮ್ ಸೌಥಿ ಹೆಸರಿನಲ್ಲಿದೆ.
ನ್ಯೂಜಿಲೆಂಡ್ನ ಟಿಮ್ ಸೌಥಿ ದಾಖಲೆ ಮುರಿದ ಶಕೀಬ್
ತಮ್ಮ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದ ಟಿಮ್ ಸೌಥಿ, “ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವುದು ನನ್ನ ಬಾಲ್ಯದಲ್ಲಿನ ದೊಡ್ಡ ಕನಸಾಗಿತ್ತು. ಕೇವಲ 18ವರ್ಷ ವಯಸಿನಲ್ಲಿಯೇ ರಾಷ್ಟ್ರೀಯ ತಂಡವನ್ನು ಮೊದಲ ಬಾರಿ ಪ್ರತಿನಿಧಿಸಿರುವುದು ದೊಡ್ಡ ಗೌರವ ಮತ್ತು ಹೆಮ್ಮೆಯಾಗಿದೆ. ಆದರೆ, ಇದೀಗ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಸಕಾಲ ಎಂದು ಭಾವಿಸುತ್ತೇನೆ,” ಎಂದು ತಿಳಿಸಿದ್ದಾರೆ.
ಅಂಡರ್-19 ವಿಶ್ವಕಪ್ನಲ್ಲಿ 17 ವಿಕೆಟ್ ಕಿತ್ತಿದ್ದ ಸೌಥಿ
2008ರಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಟಿಮ್ ಸೌಥಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. ಈ ಟೂರ್ನಿಯಲ್ಲಿ ಟಿಮ್ ಸೌಥಿ ಅವರು 17ವಿಕೆಟ್ಗಳನ್ನು ಕಬಳಿಸಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅಂದಿನಿಂದ ಇಲ್ಲಿಯವರೆಗೂ ಟಿಮ್ ಸೌಥಿ ಅವರು ಕಿವೀಸ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಕೀ ಬೌಲರ್ ಆಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಭಾರತ ವಿರುದ್ದ 3-0 ಅಂತರದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ನ್ಯೂಜಿಲೆಂಡ್ಗೆ ಟಿಮ್ ಸೌಥಿ ನೆರವು ನೀಡಿದ್ದರು.
"Fulfilling a childhood dream"
— BLACKCAPS (@BLACKCAPS) November 15, 2024
From a farm in Northland to the world stage! Hear from Tim Southee about his decision to retire from Test cricket after the upcoming Test series against England. Read more | https://t.co/L6IuX3jCea #NZvENG pic.twitter.com/93tdLszJky
ನ್ಯೂಜಿಲೆಂಡ್ ಸಿಇಒ ಸ್ಕಾಟ್ ವೀನಿಂಕ್ ಪ್ರತಿಕ್ರಿಯೆ
ಟಿಮ್ ಸೌಥಿ ಅವರ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದ ನ್ಯೂಜಿಲೆಂಡ್ ಕ್ರಿಕೆಟ್ ಸಿಇಒ ಸ್ಕಾಟ್ ವೀನಿಂಕ್, “ಟಿಮ್ ಸೌಥಿ ಆಧುನಿಕ ನ್ಯೂಜಿಲೆಂಡ್ ಕ್ರಿಕೆಟ್ನ ದಂತಕತೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ, “ಸೌಥಿ ನ್ಯೂಜಿಲೆಂಡ್ ಕ್ರಿಕೆಟ್ ಬೆಳವಣಿಗೆಗೆ ನಿರಂತರ ಕೊಡುಗೆಯನ್ನು ನೀಡಿದ್ದಾರೆ. ಆ ಮೂಲಕ ಸಾರ್ವಕಾಲಿಕ ನ್ಯೂಜಿಲೆಂಡ್ನ ಶ್ರೇಷ್ಠ ಕ್ರಿಕೆಟಿಗರಲ್ಲಿ ಟಿಮ್ ಸೌಥಿ ಅವರು ಕೂಡ ಗಮನ ಸೆಳೆಯಲಿದ್ದಾರೆ. ಅವರು ಅದ್ಭುತ ವಿದಾಯದ ಪಂದ್ಯಕ್ಕೆ ಅರ್ಹರಾಗಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ vs ಕಿವೀಸ್ ಟೆಸ್ಟ್ ಸರಣಿ
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಮೂರು ಪಂದ್ಯಗಳ ಟಸ್ಟ್ ಸರಣಿಯು ನವೆಂಬರ್ 28 ರಂದು ಆರಂಭವಾಗಲಿದೆ. ಮೊದಲನೇ ಟೆಸ್ಟ್ ಪಂದ್ಯ ಆರಂಭವಾದರೆ, ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 6 ರಂದು ಆರಂಭವಾಗಲಿದೆ, ನಂತರ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡಿಸೆಂಬರ್ 14ಕ್ಕೆ ಆರಂಭವಾಗಲಿದೆ.