ಚಿಕ್ಕನಾಯಕನಹಳ್ಳಿ: ಇಲ್ಲಿನ ಬೆಸ್ಕಾಂ ಉಪ ವಿಭಾಗದ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಗೂಳೂರು ನಾಗರಾಜ್ ಹಾಗು ಕಾರ್ಯದರ್ಶಿ ಕಿರಣ್ ಅವರನ್ನು ಬೆಸ್ಕಾಂ ಕಚೇರಿಯ ಆವರಣದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಸರಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ್ ಮಾತನಾಡಿ ತುಂಬಾ ಹಿಂದೆಯೇ ನಾಗರಾಜ್ ಅವರು ಆಯ್ಕೆಯಾಗಬೇಕಿತ್ತು. ತಡವಾಗಿಯಾದರೂ ಆಗಿದೆ. ನೌಕರರು ಅಳೆದು ತೂಗಿ ಸಮರ್ಥರಿಗೆ ಅವಕಾಶ ನೀಡಿದ್ದಾರೆ. ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ರೈತರು ಮತ್ತು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ನೌಕರರಿಗೆ ಅರಿವು ಮೂಡಿಸಿ ಸರಕಾರಗಳಿಂದ ಬರುವ ಆದೇಶಗಳನ್ವಯ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗರಾಜ್ ನೌಕರರು ತಮ್ಮ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದು ಉತ್ತಮ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು. ಬಗರ್ ಹುಕುಂ ಕಮಿಟಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಸಾಲ್ಕಟ್ಟೆ ಗುರುಮೂರ್ತಿ, ಅಗಸರಹಳ್ಳಿ ನರಸಿಂಹಮೂರ್ತಿ, ಬೆಸ್ಕಾಂ ಎಇಇ ಗವಿರಂಗಯ್ಯ, ಸಿಬ್ಬಂದಿ ದಿವ್ಯಾ ಇನ್ನಿತರರು ಇದ್ದರು.