Friday, 15th November 2024

Virat Kohli: ಅಭ್ಯಾಸ ಪಂದ್ಯದಲ್ಲಿಯೂ ಕೊಹ್ಲಿ ಫೇಲ್‌

ಪರ್ತ್‌: ಟೀಮ್‌ ಇಂಡಿಯಾದ ಅನುಭವಿ ಬ್ಯಾಟರ್‌ ವಿರಾಟ್‌ ಕೊಹ್ಲಿ(Virat Kohli) ಅವರ ಬ್ಯಾಟಿಂಗ್‌ ವೈಫಲ್ಯ ಆಸ್ಟ್ರೇಲಿಯಾದಲ್ಲೂ ಮುಂದುವರಿದಿದೆ. ಭಾರತ ʼಎʼ ತಂಡದ ವಿರುದ್ಧದ ಅಭ್ಯಾಸ(India vs India A Practice Match) ಪಂದ್ಯದಲ್ಲಿ ಕೇವಲ 15 ರನ್‌ಗೆ ನಿರ್ಗಮಿಸಿದ್ದಾರೆ. ಈಗಾಗಲೇ ಅವರ ವಿರುದ್ಧ ಭಾರತೀಯ ಮಾಜಿ ಕ್ರಿಕೆಟಿಗರು ಹಲವು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಟೀಕಾಕಾರಿಗೆ ಮತ್ತೊಮ್ಮೆ ಕೊಹ್ಲಿ ಆಹಾರವಾಗಿದ್ದಾರೆ.

ಶುಕ್ರವಾರ ನಡೆದ ಅಭ್ಯಾಸ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ರನ್‌ ಗಳಿಸಲು ಪರದಾಟ ನಡೆಸಿ ಮುಕೇಶ್ ಕುಮಾರ್ ಎಸೆತಕ್ಕೆ ಸ್ಲಿಪ್‌ ಫೀಲ್ಡರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಕೊಹ್ಲಿ ಮಾತ್ರವಲ್ಲದೆ ರಿಷಭ್ ಪಂತ್ (19), ಯಶಸ್ವಿ ಜೈಸ್ವಾಲ್ ಕೇವಲ 19 ರನ್ ಗಳಿಸಿ ಔಟಾದರು. ಭಾರತೀಯ ಬೌಲರ್‌ಗಳ ಎದುರೇ ರನ್‌ ಗಳಿಸಲು ಸಾಧ್ಯವಾಗದ ಬ್ಯಾಟರ್‌ಗಳು ಆಸ್ಟ್ರೇಲಿಯಾ ಬೌಲರ್‌ಗಳ ಮುಂದೆ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಕೊಹ್ಲಿ ಕಳೆದ ಐದು ವರ್ಷಗಳಲ್ಲಿ ಟೆಸ್ಟ್ನಲ್ಲಿ ಬಾರಿಸಿದ್ದು ಕೇವಲ ಎರಡು ಶತಕ ಮಾತ್ರ. ತವರಿನ ಕಿವೀಸ್‌ ಮತ್ತು ಬಾಂಗ್ಲಾ ವಿರುದ್ಧದ ಸರಣಿಯಲ್ಲಿಯೂ ಘೋರ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದರು. ಅದರಲ್ಲೂ ಕಿವೀಸ್‌ ವಿರುದ್ಧದ ಮೂರು ಪಂದ್ಯಗಳಿಂದ ಕಲೆಹಾಕಿದ್ದು ಬರೀ 93 ರನ್‌ ಮಾತ್ರ. ಆಸೀಸ್‌ನಲ್ಲಿಯೂ ಇದೇ ಕಳಪೆ ಪಾರ್ಮ್‌ ಕಂಡುಬಂದರೆ ಕೊಹ್ಲಿಯ ಟೆಸ್ಟ್‌ ಭವಿಷ್ಯದಲ್ಲಿ ಒಂದು ಅಂತಿಮ ನಿರ್ಧಾರ ಪ್ರಕಟಗೊಂಡರೂ ಅಚ್ಚರಿಯಿಲ್ಲ.

ಇದನ್ನೂ ಓದಿ Champions Trophy: ಬಿಸಿಸಿಐನಿಂದ ಲಿಖಿತ ದೃಢೀಕರಣ ಪತ್ರ ಕೇಳಿದ ಐಸಿಸಿ?

ಕೊಹ್ಲಿಗೆ ಈ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಕೊಹ್ಲಿ 5 ಪಂದ್ಯಗಳ ಸರಣಿಯಲ್ಲಿ ಕ್ರಮವಾಗಿ 54, 164, 455 ರನ್‌ ಗಡಿ ದಾಟಿದರೆ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಅತ್ಯಧಿಕ ರನ್‌ ಕಲೆಹಾಕಿದ ಚೇತೇಶ್ವರ್‌ ಪೂಜಾರ(2033), ರಾಹುಲ್‌ ದ್ರಾವಿಡ್‌(2143) ಮತ್ತು ವಿವಿಎಸ್ ಲಕ್ಷ್ಮಣ್(2434) ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 1979 ರನ್‌ ಬಾರಿಸಿದ್ದಾರೆ.

ರೋಹಿತ್‌ ಅಲಭ್ಯತೆಯಲ್ಲಿ ಮೊದಲ ಟೆಸ್ಟ್‌ನಲ್ಲಿ ಆರಂಭಿಕನಾಗಿ ಆಡಲು ಎದುರು ನೋಡುತ್ತಿದ್ದ ರಾಹುಲ್‌ ಮೊಣಕೈ ಗಾಯಕ್ಕೆ ತುತ್ತಾಗಿ ಅಭ್ಯಾಸ ಮೊಟಕುಗೊಳಿಸಿದ್ದಾರೆ. ಹೀಗಾಗಿ ರಾಹುಲ್‌ ಮೊದಲ ಪಂದ್ಯವನ್ನಾಡುವುದು ಬಹುತೇಕ ಅನುಮಾನ ಎನ್ನಲಾಗಿದೆ.