ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಅವರು ತಮ್ಮ ಕನಸಿನ ಟಿ20 ತಂಡವನ್ನು (ABD Dream T20 Team) ಪ್ರಕಟಿಸಿದ್ದಾರೆ. ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾರನ್ನು ಹೊರಗಿಟ್ಟ ಎಬಿಡಿ, ವಿರಾಟ್ ಕೊಹ್ಲಿ ಸೇರಿದಂತೆ ಭಾರತ ತಂಡದಿಂದ ನಾಲ್ವರು ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಐಪಿಎಲ್ ಹೀರೋ ಮಯಾಂಕ್ ಯಾದವ್ ಅವರನ್ನು ಮೀಸಲು ಆಟಗಾರನಾಗಿ ಸ್ಥಾನ ನೀಡಿದ್ದಾರೆ.
“ಮಯಾಂಕ್ ಯಾದವ್ ಅವರು ಅಸಾಧಾರಣ ವೇಗದ ಬೌಲರ್. ಅವರು ಪಂದ್ಯವನ್ನು ಅತ್ಯುತ್ತಮವಾಗಿ ಆರಂಭಿಸಬಲ್ಲರು ಹಾಗೂ ಕೆಲ ವಿಕೆಟ್ಗಳನ್ನು ಪಡೆಯಬಲ್ಲರು. ಆ ಮೂಲಕ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಭಯವನ್ನು ಮೂಡಿಸಬಲ್ಲರು,” ಎಂದು ಎಬಿ ಡಿ ವಿಲಿಯರ್ಸ್ ತಿಳಿಸಿದ್ದಾರೆ.
ತಾವು ಕಟ್ಟಿರುವ ತಂಡದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಹಾಗೂ ತನ್ನ ಆತ್ಮೀಯ ಗೆಳೆಯ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ಅವರನ್ನು ಆರಂಭಿಕ ಬ್ಯಾಟ್ಸ್ಮನ್ಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಕ್ಯಾಮೆರಾನ್ ಗ್ರೀನ್ ಅವರನ್ನು ಆರಿಸಿದ್ದಾರೆ. ಇವರು ವಿಶ್ವದಲ್ಲಿಯೇ ಅತ್ಯುತ್ತಮ ಆಲ್ರೌಂಡರ್.
IND vs SA: ಕೊಹ್ಲಿ-ರೋಹಿತ್ ಅಲ್ಲ, ಸಂಜು ಸ್ಯಾಮ್ಸನ್ಗೆ ನಾನು ದೊಡ್ಡ ಅಭಿಮಾನಿ ಎಂದ ಎಬಿಡಿ!
ತಮ್ಮ ತಂಡದಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಕೇವಲ ಬ್ಯಾಟ್ಸ್ಮನ್ ಆಗಿ ಪರಿಗಣಿಸಿದ ಎಬಿಡಿ, ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ಅವರನ್ನು ವಿಕೆಟ್ ಕೀಪರ್ ಆಗಿ ಆರಿಸಿದ್ದಾರೆ.ದಕ್ಷಿಣ ಆಫ್ರಿಕಾದ ಮತ್ತೊಬ್ಬ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ಕೂಡ ಎಬಿಡಿ ನೆಚ್ಚಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತ್ಯಂತ ಸ್ಪಿನ್ನರ್ ಎನಿಸಿಕೊಂಡಿರುವ ರಶೀದ್ ಖಾನ್ ಮತ್ತು ಸುನೀಲ್ ನರೇನ್ ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.
“ನಾನು ರಶೀದ್ ಖಾನ್ರನ್ನು ಇಷ್ಟಪಡುತ್ತೇನೆ. ಅವರು ಮ್ಯಾಜಿಕಲ್ ಬೌಲರ್. ಮಧ್ಯಮ ಓವರ್ಗಳಲ್ಲಿ ನೀವು ಅವರನ್ನು ಆಡಿಸಬಹುದು. ಅವರು 2-3 ವಿಕೆಟ್ಗಳನ್ನು ಕಬಳಿಸಬಲ್ಲರು ಹಾಗೂ ತಂಡಕ್ಕೆ ಬ್ಯಾಟಿಂಗ್ನಲ್ಲಿಯೂ ನೆರವು ನೀಡಬಲ್ಲರು. ಬ್ಯಾಟಿಂಗ್ನಲ್ಲಿಯೂ ಅವರು ತಂಡವನ್ನು ಗೆಲ್ಲಿಸಬಲ್ಲರು. ಇನ್ನು ಫೀಲ್ಡಿಂಗ್ನಲ್ಲಿಯೂ ಗರಿಷ್ಠ ಕೊಡುಗೆಯನ್ನು ನೀಡಬಲ್ಲರು,” ಎಂದು ಎಬಿಡಿ ಗುಣಗಾನ ಮಾಡಿದ್ದಾರೆ.
IPL 2025 Auction: ಆರ್ಸಿಬಿ ಟಾರ್ಗೆಟ್ ಮಾಡಬಲ್ಲ ನಾಲ್ವರು ಆಟಗಾರರನ್ನು ಹೆಸರಿಸಿದ ಎಬಿಡಿ!
ಮೂವರು ವೇಗಿಗಳಿಗೆ ಸ್ಥಾನ ನೀಡಿದ ಕಗಿಸೊ ರಬಾಡ
ತಮ್ಮ ನೆಚ್ಚಿನ ಟಿ20 ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ತಮ್ಮದೇ ದೇಶದ ಕಗಿಸೊ ರಬಾಡ, ಭಾರತದಿಂದ ಜಸ್ಪ್ರೀತ್ ಬುಮ್ರಾ ಹಾಗೂ ಭುವೇಶ್ವರ್ ಕುಮಾರ್ಗೆ ಅವಕಾಶ ಕಲ್ಪಿಸಿದ್ದಾರೆ. ಆ ಮೂಲಕ ಮೂವರು ವೇಗಿಗಳಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಇನ್ನು ಮಯಾಂಕ್ ಯಾದವ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಹೊರತಾಗಿಯೂ ಎಂಎಸ್ ಧೋನಿಯನ್ನು ಮೀಸಲು ಆಟಗಾರನಾಗಿ ಎಬಿಡಿ ಉಳಿಸಿಕೊಂಡಿದ್ದಾರೆ. ಇನ್ನು ಯುಜ್ವೇಂದ್ರ ಚಹಲ್ಗೂ ಕೂಡ ಎಬಿಡಿ ಮೀಸಲು ಆಟಗಾರನಾಗಿ ಸ್ಥಾನ ನೀಡಿದ್ದಾರೆ.
ಎಬಿ ಡಿ ವಿಲಿಯರ್ಸ್ರ ನೆಚ್ಚಿನ ಟಿ20ತಂಡ: ವಿರಾಟ್ ಕೊಹ್ಲಿ, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ರಿಷಭ್ ಪಂತ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ರಶೀದ್ ಖಾನ್, ಸುನೀಲ್ ನರೇನ್, ಭುವನೇಶ್ವರ್ ಕುಮಾರ್, ಕಗಿಸೊ ರಬಾಡ, ಜಸ್ಪ್ರೀತ್ ಬುಮ್ರಾ
ಮೀಸಲು ಆಟಗಾರರು: ಎಂಎಸ್ ಧೋನಿ, ಯುಜ್ವೇಂದ್ರ ಚಹಲ್, ಮಯಾಂಕ್ ಯಾದವ್