ಶಾಲೆಯಿಂದ ಮಗು ಮರಳಿ ಬರುತ್ತಿದ್ದಂತೆ ಮುಖ ಬಾಡಿ, ಕಣ್ಣು ಕೆಂಪಾಗಿದ್ದನ್ನು ಗಮನಿಸುತ್ತೀರಿ. ಮೈ ಮುಟ್ಟಿ ನೋಡಿದರೆ ಜ್ವರ (cold and flu) ಬಂದಿದೆ. ಮಕ್ಕಳಿಗೆ ಅನಾರೋಗ್ಯವೇನೂ ಅಪರೂಪವಲ್ಲ. ಅದರಲ್ಲೂ ಚಳಿಗಾಲದ (Winter Season Care) ಹೊಸಿಲಲ್ಲಿರುವ ಈ ಸಮಯದಲ್ಲಿ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು ಮುಂತಾದ ಲಕ್ಷಣಗಳದ್ದೇ ಕಾರುಬಾರು.
ಪ್ರೌಢರಲ್ಲೂ ಚಳಿಗಾಲದ ಈ ಸಮಸ್ಯೆಗಳು ತೊಂದರೆ ಕೊಡುತ್ತವಾದರೂ ಮಕ್ಕಳಷ್ಟಲ್ಲ. ರೋಗ ನಿರೋಧಕ ಶಕ್ತಿ ಇನ್ನೂ ಬಲವಾಗದ ಎಳೆಯರಿಗೆ ಚಳಿಗಾಲದ ವೈರಸ್‌ಗಳು ನೀಡುವ ಕಾಟ ಒಂದೆರಡು ದಿನಗಳಿಗೆ ಮುಗಿಯುವುದೇ ಇಲ್ಲ. ನಾಲ್ಕು ದಿನ ಕಾಡಿಸುವ ನೆಗಡಿ, ಜ್ವರ, ಗಂಟಲುನೋವು ಕಡಿಮೆ ಆದ ಮೇಲೂ ಕಫ- ಕೆಮ್ಮು ತಾರಕಕ್ಕೇರಿ ಇನ್ನೂ ನಾಲ್ಕು ದಿನ ಚೇತರಿಸಿಕೊಳ್ಳುವುದಕ್ಕೆ ಬೇಕು ಎಂಬಂಥ ಸ್ಥಿತಿಗೆ ಪುಟಾಣಿಗಳನ್ನು ತರುತ್ತದೆ. ಮಕ್ಕಳನ್ನು ಈ ಚಳಿಗಾಲದ ಸೋಂಕುಗಳಿಂದ ಕಾಪಾಡಿಕೊಳ್ಳುವುದು ಹೇಗೆ?
ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಫ್ಲೂ ರೀತಿಯ ವೈರಸ್‌ಗಳು ಮಕ್ಕಳಲ್ಲಿ ಪ್ರಸರಣವಾಗುವುದು ಇನ್ನೂ ತ್ವರಿತವಾಗಿ. ಶಾಲೆಯಲ್ಲಿ ಅಥವಾ ಡೇ ಕೇರ್‌ಗಳಲ್ಲಿ. ಒಟ್ಟಿಗೆ ಆಡುವ, ಅಕ್ಕಪಕ್ಕ ಕುಳಿತುಕೊಳ್ಳುವ, ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಮುಟ್ಟುವ ಸಂದರ್ಭಗಳು ಸದಾ ಇರುವುದರಿಂದ ಮಕ್ಕಳಲ್ಲಿ ಸೋಂಕುಗಳು ತಡೆಯುವುದು ಕಷ್ಟ.
ದೊಡ್ಡ ಮಕ್ಕಳು ಶಾಲೆಯಿಂದ ತರುವ ಸೋಂಕುಗಳು ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಅಂಟುತ್ತವಾದ್ದರಿಂದ, ಚಿಣ್ಣರು ಆಗಾಗ ಹುಷಾರು ತಪ್ಪುವುದು ಸಾಮಾನ್ಯವಾಗುತ್ತದೆ.
ಲಸಿಕೆ ಬೇಕು
ಆಯಾ ವರ್ಷದ ಫ್ಲೂ ಋತುವಿನಲ್ಲಿ ಯಾವೆಲ್ಲಾ ವೈರಸ್‌ಗಳು ಬರಬಹುದು ಎಂಬ ಲೆಕ್ಕಾಚಾರದ ಮೇಲೆ ಫ್ಲೂ ಲಸಿಕೆಯನ್ನು ತಯಾರಿಸಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ಮಕ್ಕಳಿಗೆ ಫ್ಲೂ ಲಸಿಕೆಯನ್ನು ಹಾಕಿಸುವುದು ಉತ್ತಮ. ಇದರಿಂದ ರೋಗ ನಿರೋಧಕ ಶಕ್ತಿಯನ್ನು ತಾತ್ಕಾಲಿಕವಾಗಿ ಉತ್ತೇಜಿಸಿದಂತಾಗುತ್ತದೆ. ಒಂದೊಮ್ಮೆ ಸೋಂಕು ತಾಗಿದರೂ, ಅದರ ತೀವ್ರತೆ ಕಡಿಮೆ ಇರುತ್ತದೆ. ರೋಗ ಗುಣವಾಗುವುದಕ್ಕೆ ಬೇಕಾಗುವ ಸಮಯವೂ ಕಡಿಮೆಯೇ.
ಆಹಾರ
ಆರೋಗ್ಯಯುತ ಆಹಾರವನ್ನು ಮಕ್ಕಳಿಗೆ ತಿನ್ನಿಸುವುದು ಯಜ್ಞದಂತೆಯೇ. ಆದರೂ ಸೋಂಕುಗಳೊಂದಿಗೆ ಹೋರಾಡುವ ಶಕ್ತಿ ಬೇಕೆಂದರೆ ಮಕ್ಕಳ ಆಹಾರಾಭ್ಯಾಸಗಳು ಸತ್ವಯುತವಾಗಿ ಇರಲೇಬೇಕು. ಜಂಕ್ ಸೇವನೆಯಿಂದ ಪ್ರತಿರೋಧಕ ಶಕ್ತಿ ತೀವ್ರವಾಗಿ ಕುಂಠಿತಗೊಳ್ಳುತ್ತದೆ.
ಹಸಿರು ತರಕಾರಿಗಳು- ಸೊಪ್ಪು, ಋತುಮಾನದ ಹಣ್ಣುಗಳು, ಇಡೀ ಧಾನ್ಯಗಳು, ಮೊಳಕೆ ಕಾಳುಗಳು, ಡೈರಿ ಉತ್ಪನ್ನಗಳು, ಬೀಜಗಳು, ಮೊಟ್ಟೆ, ಮೀನು ಮುಂತಾದವು ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಆಹಾರಗಳ ಪಟ್ಟಿಯಲ್ಲಿವೆ.
ಕರಿದ, ಸಂಸ್ಕರಿತ, ಸಕ್ಕರೆಭರಿತ, ಪ್ಯಾಕ್ ಮಾಡಿದ ಆಹಾರಗಳು ತರುವುದು ಹಾನಿಯನ್ನೇ ಹೊರತು ಆರೋಗ್ಯವನ್ನಲ್ಲ.
ನಿದ್ದೆ
ಬೆಳೆಯುವ ಮಕ್ಕಳಿಗೆ 9- 10 ತಾಸು ನಿದ್ದೆ ಅಗತ್ಯ. ಇದರಿಂದ ಶರೀರ ತಂತಾನೆ ಸರಿಮಾಡಿಕೊಳ್ಳಲು ಅಗತ್ಯವಾದ ವಿಶ್ರಾಂತಿ ನೀಡಿದಂತಾಗುತ್ತದೆ. ನಿದ್ದೆಯ ಸಮಯವನ್ನು ಟಿವಿ, ಮೊಬೈಲ್‌ಗಳು ಕಸಿದರೆ ಇದಕ್ಕಿಂತ ದೊಡ್ಡ ಸಂಕಷ್ಟ ಇನ್ನೊಂದಿಲ್ಲ. ಒಂದೊಮ್ಮೆ ಸೋಂಕು ಬಂದರೆ, ಔಷಧಿ-ಉಪಚಾರಗಳ ಜೊತೆಗೆ ಭರಪೂರ ವಿಶ್ರಾಂತಿ-ನಿದ್ದೆಯೂ ಮಕ್ಕಳಿಗೆ ಅತ್ಯಗತ್ಯ.
ನೀರು
ಸೋಂಕು ಇರಲಿ, ಇಲ್ಲದಿರಲಿ ಮಕ್ಕಳು ನೀರು ಕುಡಿಯುವ ಪ್ರಮಾಣವನ್ನು ಗಮನಿಸಿ. ದಿನಕ್ಕೆ ಎಂಟು ಗ್ಲಾಸ್ ನೀರು ಮಕ್ಕಳಿಗೂ ಅಗತ್ಯ. ದೇಹದಿಂದ ಕಶ್ಮಲಗಳನ್ನು ತೆಗೆಯಲು ಇದು ಎಲ್ಲರಿಗೂ ಬೇಕಾಗುತ್ತದೆ. ಅವರು ಕುಡಿಯುವ ನೀರಿನ ಪ್ರಮಾಣ ಸಾಕಾಗುತ್ತಿಲ್ಲ ಎನಿಸಿದರೆ, ಇನ್ನಷ್ಟು ಕುಡಿಯುವಂತೆ ಪ್ರೋತ್ಸಾಹಿಸಿ. ಸೂಪ್, ಜ್ಯೂಸ್ ಮುಂತಾದ ದ್ರವಾಹಾರಗಳ ಮೂಲಕ ದೇಹಕ್ಕೆ ಸಾಕಷ್ಟು ನೀರು ದೊರೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಿ.
ಅಭ್ಯಾಸಗಳು
ಸೋಂಕು ತೀವ್ರವಾಗಿರುವ ದಿನಗಳಲ್ಲಿ ವೈಯಕ್ತಿಕ ಅಂತರವನ್ನು ಸಾಧ್ಯವಾದಷ್ಟು ಕಾಯ್ದುಕೊಳ್ಳುವುದು, ಆಗಾಗ ಕೈ ಶುಚಿ ಮಾಡುವುದು, ಲಿಫ್ಟ್, ಮೆಟ್ಟಿಲಿನ ಕಂಬಿಗಳು ಮುಂತಾದ ಎಲ್ಲರೂ ಮುಟ್ಟುವಂಥ ಜಾಗಗಳಲ್ಲಿ ಕೈ ಇಡದೇ ಇರುವುದು, ಕಣ್ಣು-ಬಾಯಿ-ಮೂಗು ಮುಟ್ಟದಿರುವುದು, ನೆಗಡಿ-ಕೆಮ್ಮು ಇದ್ದರೆ ಮಾಸ್ಕ್ ಹಾಕುವುದು ಮುಂತಾದ ಅಭ್ಯಾಸಗಳು ಚಳಿಗಾಲದಲ್ಲಿ ಜಾರಿಯಲ್ಲಿದ್ದರೆ ಹೆಚ್ಚಿನ ರಕ್ಷಣೆ ದೊರೆಯುತ್ತದೆ.
Vaccine for children: ಮಕ್ಕಳಿಗೆ ಲಸಿಕೆ ಹಾಕಿಸದಿದ್ದರೆ ಏನಾಗುತ್ತದೆ?
ಚಟುವಟಿಕೆ
ಜಡವಾಗಿರುವುದು, ಸ್ಕ್ರೀನ್ ಮುಂದೆ ಬಿದ್ದುಕೊಂಡು ತಿನ್ನುವುದು.. ಇಂಥವೆಲ್ಲಾ ಮಕ್ಕಳ ಶಕ್ತಿ- ಸಾಮರ್ಥ್ಯಗಳನ್ನು ಕುಗ್ಗಿಸುತ್ತವೆ. ಹಾಗಾಗಿ ಮಕ್ಕಳು ನಿತ್ಯವೂ ಮನೆಯಿಂದ ಹೊರಗೆ ಆಡುವುದನ್ನು ಪ್ರೋತ್ಸಾಹಿಸಿ. ಆಡುತ್ತಾ, ಓಡುತ್ತಾ ಉಸಿರಾಟ ತೀವ್ರವಾಗುವುದು ಮಕ್ಕಳಿಗೆ ಟಾನಿಕ್ ಇದ್ದಂತೆ. ಹೊರಾಂಗಣ ಆಟಗಳಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ. ಬಿಸಿಲಲ್ಲಿ ಮಕ್ಕಳು ಆಡಿದಾಗ ಪ್ರತಿರೋಧಕ ಶಕ್ತಿ ಇನ್ನಷ್ಟು ಬಲವಾಗುತ್ತದೆ.