Friday, 15th November 2024

IND vs AUS: ʻಜೈಸ್ವಾಲ್‌-ಗಿಲ್‌ ಓಪನರ್ಸ್‌ʼ, ಪರ್ತ್‌ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ರವಿ ಶಾಸ್ತ್ರಿ!

avi Shastri predicts India XI for first Test against Australia

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರೆಣಿಯ (IND vs AUS) ಮೊದಲನೇ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ, ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್‌ ಜತೆ ಇನಿಂಗ್ಸ್‌ ಆರಂಭಿಸಲು ಶುಭಮನ್‌ ಗಿಲ್‌ ಅವರಿಗೆ ಅವಕಾಶ ಕಲ್ಪಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 22 ರಂದು ಪರ್ತ್‌ನ ಅಪ್ಟಸ್‌ ಸ್ಟೇಡಿಯಂನಲ್ಲಿ ಆರಂಣವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ಕಠಿಣ ತಾಲೀಮು ನಡೆಸುತ್ತಿವೆ. ಅಂದ ಹಾಗೆ ವೈಯಕ್ತಿಕ ಕಾರಣಗಳಿಂದಾಗಿ ನಾಯಕ ರೋಹಿತ್‌ ಶರ್ಮಾ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಇನಿಂಗ್ಸ್‌ ಆರಂಭಸಲು ಕೆಎಲ್‌ ರಾಹುಲ್‌, ಶುಭಮನ್‌ ಗಿಲ್‌ ಹಾಗೂ ಅಭಿಮನ್ಯು ಈಶ್ವರನ್‌ ಇದ್ದಾರೆ.

ಕ್ರಿಕೆಟ್‌ ನಿರೂಪಕಿ ಸಂಜನಾ ಗಣೇಸನ್‌ ಅವರೊಂದಿಗೆ ಐಸಿಸಿ ರಿವ್ಯೂವ್‌ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರೆಣಿಯ ಮೊದಲನೇ ಪಂದ್ಯಕ್ಕೆ ತಮ್ಮ ನೆಚ್ಚಿನ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಆಯ್ಕೆ ಮಾಡಿದ್ದಾರೆ. ಆದರೆ, ಇದರಲ್ಲಿ ಕೆಲವೊಂದು ಅಚ್ಚರಿ ಆಯ್ಕೆಗಳನ್ನು ಮಾಡುವ ಎಲ್ಲರ ಗಮನ ಸೆಳೆದಿದ್ದಾರೆ.

IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!

ಯಶಸ್ವಿ ಜೈಸ್ವಾಲ್-ಶುಭಮನ್‌ ಗಿಲ್‌ ಓಪನರ್ಸ್

ತಮ್ಮ ನೆಚ್ಚಿನ ತಂಡದಲ್ಲಿ ಇನಿಂಗ್ಸ್‌ ಆರಂಭಿಸಲು ಯಶಸ್ವಿ ಜೈಸ್ವಾಲ್‌ ಜತೆ ಶುಭಮನ್‌ ಗಿಲ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಆ ಮೂಲಕ ಮೂರನೇ ಕ್ರಮಾಂಕಕ್ಕೆ ಕೆಎಲ್‌ ರಾಹುಲ್‌ ಅವರನ್ನು ಕರೆ ತಂದಿದ್ದಾರೆ. ಭಾರತ ಎ ತಂಡದ ಪರ ಕೆಎಲ್‌ ರಾಹುಲ್‌ ಹಾಗೂ ಅಭಿಮನ್ಯು ಈಶ್ವರನ್‌ ಇನಿಂಗ್ಸ್‌ ಆರಂಭಿಸಿದ್ದರು. ಇದೀಗ ಅವರು ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಆಡಲಿದ್ದಾರೆ. 2020-21ರ ಸಾಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಿಲ್‌ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ್ದರು. ಈ ಕಾರಣದಿಂದ ಅವರನ್ನು ಇನಿಂಗ್ಸ್‌ ಆರಂಭಿಸಲು ಅವಕಾಶ ಪಡೆದುಕೊಳ್ಳಲಿದ್ದಾರೆ.

ಮಧ್ಯಮ ಕ್ರಮಾಂಕ

ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ‌, ರಿಷಭ್‌ ಪಂತ್‌, ಧ್ರುವ್‌ ಜುರೆಲ್‌ ಹಾಗೂ ರವೀಂದ್ರ ಜಡೇಜಾ ಅಥವಾ ವಾಷಿಂಗ್ಟನ್‌ ಸುಂದರ್‌ ಅವರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕೆಂದು ಮಾಜಿ ಹೆಡ್‌ ಕೋಚ್‌ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಕಂಡೀಷನ್ಸ್‌ ಫಾಸ್ಟ್‌ ಬೌಲಿಂಗ್‌ ಕಂಡೀಷನ್ಸ್‌ ಆಗಿದೆ. ಈ ಕಾರಣದಿಂದ ಆರ್‌ ಅಶ್ವಿನ್‌ ಅವರ ಬದಲು ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಬೇಕೆಂಬುದು ರವಿ ಶಾಸ್ತ್ರಿ ಅಭಿಪ್ರಾಯ. ಇನ್ನು ವೇಗದ ಬೌಲಿಂಗ್‌ ವಿಭಾಗಕ್ಕೆ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಆಕಾಶ್‌ ದೀಪ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಪರ್ತ್‌ ಟೆಸ್ಟ್‌ಗೆ ಭಾರತ ಪ್ಲೇಯಿಂಗ್‌ XI ಆರಿಸಿದ ರವಿಶಾಸ್ತ್ರಿ

ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್‌ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ/ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ, ಜಸ್‌ಪ್ರೀತ್‌ ಬುಮ್ರಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್