ಬೆಂಗಳೂರು: ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ರೈಲು (Namma Metro) ಅವಲಂಬಿಸಿದ್ದ ಜನರಿಗೆ ನಮ್ಮ ಮೆಟ್ರೋ, ಟಿಕೆಟ್ ದರ ಏರಿಕೆಯ ಶಾಕ್ ನೀಡಲು ಮುಂದಾಗಿದೆ. ಕಳೆದ 7 ವರ್ಷಗಳಿಂದ ಮೆಟ್ರೋ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಇದೀಗ ಕೇಂದ್ರ ಸರ್ಕಾರದ ದರ ನಿಗದಿ ಸಮಿತಿಯ ಸಲಹೆಯಂತೆ ಮೆಟ್ರೋ ಪ್ರಯಾಣದ ದರ ಪರಿಷ್ಕರಣೆಗೆ ಚಿಂತನೆ ನಡೆಸಿದ್ದು, ಡಿಸೆಂಬರ್ ಅಂತ್ಯಕ್ಕೆ ಪರಿಷ್ಕೃತ ದರ ಜಾರಿ ಬರಲಿದೆ ಎನ್ನಲಾಗಿದೆ.
ಈ ಹಿಂದೆ ಕೂಡ ಬಿಎಂಆರ್ಸಿಎಲ್ ದರ ಏರಿಕೆ ಬಗ್ಗೆ ಹಲವು ಬಾರು ಚರ್ಚೆ ನಡೆಸಿತ್ತು. ಈ ಕುರಿತು ಅಕ್ಟೋಬರ್ 28ರ ವರೆಗೆ ಸಾರ್ವಜನಿಕ ಅಭಿಪ್ರಾಯಗಳನ್ನೂ ಬಿಎಂಆರ್ಸಿಎಲ್ ಸಂಗ್ರಹಿಸಿತ್ತು. ಇದೇ ವಿಷಯವಾಗಿ ಸಮಿತಿಯು ಮತ್ತೊಂದು ಸಭೆ ಕರೆದಿದೆ. ಈಗಾಗಲೇ ಮೆಟ್ರೋ ದರ ಹೆಚ್ಚಳದ ಕುರಿತು ಎರಡು ಬಾರಿ ಅಧಿಕಾರಿಗಳ ಜತೆ ಸಭೆ ನಡೆದಿದ್ದು, ಈ ಬಾರಿಯ ಸಭೆಯಲ್ಲಿ ಕಮಿಟಿ ಸದಸ್ಯರು ಮತ್ತು ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಬಿಎಂಆರ್ ಸಿಎಲ್ ದರ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಟಿಕೆಟ್ ದರ ಎಷ್ಟು ಹೆಚ್ಚಳವಾಗಬಹುದು?
ನಮ್ಮ ಮೆಟ್ರೋ ಸದ್ಯಕ್ಕೆ ಕನಿಷ್ಠ 10 ರೂ. ರಿಂದ ಗರಿಷ್ಠ 60 ರೂ.ವರೆಗೆ ಚಾರ್ಜ್ ಮಾಡುತ್ತಿದೆ. ಆದರೆ, ಇದೀಗ ಕನಿಷ್ಠ ದರ 10 ರೂ. ಗಳಿಂದ 15 ರೂ.ಗೆ ಏರಿಕೆಯಾಗಲಿದ್ದು, ಗರಿಷ್ಠ ದರ 60 ರೂ.ನಿಂದ 75 ರೂಪಾಯಿ ಆಗಬಹುದು ಎನ್ನಲಾಗುತ್ತಿದೆ. ಇದರಿಂದಾಗಿ ಮೆಟ್ರೋದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಆರಾಮವಾಗಿ ಪ್ರಯಾಣಿಸುತ್ತಿದ್ದ ಜನರ ಮೇಲೆ ಪರಿಣಾಮ ಬೀರಬಹುದು.
ಹಳದಿ ಮಾರ್ಗದ ಮೆಟ್ರೋ ಸೇವೆ ಆರಂಭ ಯಾವಾಗ!
ದರ ಏರಿಕೆಯ ಶಾಕ್ ಮಧ್ಯೆಯೇ ಜನವರಿಯಲ್ಲಿ ಮೆಟ್ರೋ ಹಳದಿ ಮಾರ್ಗದ ಸಂಚಾರ ಆರಂಭವಾಗಲಿದೆ. ಸೇವೆ ಪ್ರಾರಂಭವಾದ ನಂತರ ದರ ಏರಿಕೆಯಿಂದಾಗಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಈಗಾಗಲೇ ಮೆಟ್ರೋ ಹಳದಿ ಮಾರ್ಗವು ತನ್ನ ಕಾರ್ಯಾಚರಣೆಯನ್ನು ಶುರುಮಾಡಿದೆ. ಮೆಟ್ರೋ ಮಾರ್ಗದ ಹಳಿಗಳು ಈಗಾಗಲೇ ತಯಾರಾಗಿದ್ದು ಮೆಟ್ರೋ ರೈಲುಗಳ ಕೊರತೆಯಿಂದಾಗಿ ಹಳದಿ ಮೆಟ್ರೋ ಸಂಚಾರವು ವಿಳಂಬವಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಮೆಟ್ರೋ ರೈಲಿನ ಎಲ್ಲಾ ಕಾರ್ಯಗಳು ಮುಗಿಯಲಿದ್ದು, ಹೊಸ ವರ್ಷ ಅಂದರೆ ಜನವರಿ 2025 ರಿಂದ ಹಳದಿ ಮೆಟ್ರೋ ಸೇವೆಯನ್ನು ಜನರು ಪಡೆಯಬಹುದಾಗಿದೆ.
19 ಕಿ.ಮೀ. ಉದ್ದ, 16 ನಿಲ್ದಾಣ ಒಳಗೊಂಡಿರುವ ಆರ್ವಿ ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಕೋನಪ್ಪನ ಅಗ್ರಹಾರ, ಹೊಸೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ನಿಲ್ದಾಣಗಳು ಇವೆ.
ಈ ಸುದ್ದಿಯನ್ನೂ ಓದಿ | Kasturirangan Report: ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ಭಾರಿ ಪ್ರತಿಭಟನೆ