Friday, 15th November 2024

IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಇತಿಹಾಸ ಬರೆದ ಸಂಜು ಸ್ಯಾಮ್ಸನ್‌-ತಿಲಕ್‌ ವರ್ಮಾ!

Sanju Samson, Tilak Varma Create Histor

ಜೋಹನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ವಿರುದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ (IND vs SA) ಭಾರತ ತಂಡದ ಆರಂಭಿಕ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮಾ ಸ್ಪೋಟಕ ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಈ ಸರಣಿಯಲ್ಲಿ ಇವರಿಬ್ಬರೂ ತಲಾ ಎರಡೆರಡು ಶತಕಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ ಭಾರತ ತಂಡ ಒಂದು ವಿಕೆಟ್‌ ನಷ್ಟಕ್ಕೆ 283 ರನ್‌ಗಳನ್ನು ಕಲೆ ಹಾಕಿತು.

ಶುಕ್ರವಾರ ಇಲ್ಲಿನ ದಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ಸ್ಪೋಟಕ 36 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ನಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್‌ ವರ್ಮಾ ತಲಾ ಶತಕಗಳನ್ನು ಸಿಡಿಸಿದರು. ಈ ಸರಣಿಯಲ್ಲಿ ಇವರಿಬ್ಬರೂ ಎರಡು ಶತಕಗಳನ್ನು ಪೂರ್ಣಗೊಳಿಸಿದ್ದಾರೆ.

IND vs SA: ಸತತ ಎರಡನೇ ಬಾರಿ ಡಕ್‌ಔಟ್‌ ಆಗಿ ಅನಗತ್ಯ ದಾಖಲೆ ಬರೆದ ಸಂಜು ಸ್ಯಾಮ್ಸನ್‌!

ಮೂರನೇ ಶತಕ ಸಿಡಿಸಿ ದಾಖಲೆ ಬರೆದ ಸಂಜು

ಕ್ಯಾಲೆಂಡರ್‌ ವರ್ಷದಲ್ಲಿ ಮೂರು ಶತಕಗಳನ್ನು ಸಿಡಿಸಿದ ವಿಶ್ವದ ಮೊದಲು ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಸಂಜು ಬರೆದಿದ್ದಾರೆ. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ದ ಡರ್ಬನ್‌ನಲ್ಲಿಯೂ ಸಂಜು ಸ್ಪೋಟಕ ಶತಕ ಬಾರಿಸಿದ್ದರು. ಇನ್ನು ಸಂಜು ಸ್ಯಾಮ್ಸನ್‌ ಬಳಿಕ ಟಿ20ಐ ಕ್ರಿಕೆಟ್‌ನಲ್ಲಿ ಸತತ ಎರಡು ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ತಿಲಕ್‌ ವರ್ಮಾ ಭಾಜನರಾಗಿದ್ದಾರೆ.

ಈ ಇನಿಂಗ್ಸ್‌ನಲ್ಲಿ ಒಟ್ಟಾರೆ ಸಂಜು ಸ್ಯಾಮ್ಸನ್‌ ಆಡಿದ 56 ಎಸೆತಗಳಲ್ಲಿ 9‌ ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 109 ರನ್‌ಗಳನ್ನು ಸಿಡಿಸಿದರೆ, ಇವರ ಜೊತೆ 210 ರನ್‌ಗಳ ಜತೆಯಾಟವನ್ನು ಆಡಿದ ತಿಲಕ್‌ ವರ್ಮಾ ಕೇವಲ 47 ಎಸೆತಗಳಲ್ಲಿ 10 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 120 ರನ್‌ಗಳನ್ನು ದಾಖಲಿಸಿದರು.

ಶತಕಗಳ ಮೂಲಕ ಇತಿಹಾಸ ಬರೆದ ಸಂಜು-ತಿಲಕ್‌

ಸಂಜು ಸ್ಯಾಮ್ಸನ್‌ ಮತ್ತು ತಿಲಕ್‌ ವರ್ಮಾ ಅವರ ಶತಕಗಳ ಮೂಲಕ ಅಂತಾರಾಷ್ಟ್ರೀಯ ಟಿ20ಐ ಪಂದ್ಯದ ಏಕೈಕ ಇನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ ಐಸಿಸಿಐ ಪೂರ್ಣ ಸದಸ್ಯತ್ವದ ರಾಷ್ಟ್ರ ಎಂಬ ಇತಿಹಾಸವನ್ನು ಭಾರತ ಬರೆದಿದೆ. ಒಟ್ಟಾರೆಯಾಗಿ ಜೆಕ್‌ ಗಣರಾಜ್ಯ (2022 ರಲ್ಲಿ ಬಲ್ಗೇರಿಯಾ ವಿರುದ್ಧ) ಹಾಗೂ ಜಪಾನ್‌ (2024ರಲ್ಲಿ ಚೀನಾ ವಿರುದ್ದ) ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿವೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಐಪಿಎಲ್‌ನ ಮೂರು ತಂಡಗಳು ಸೇರಿದಂತೆ ಒಟ್ಟು ಎಂಟು ತಂಡಗಳು ಈ ಸಾಧನೆ ಮಾಡಿವೆ.

2016ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಗುಜರಾತ್‌ ಲಯನ್ಸ್‌ ವಿರುದ್ಧ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್‌ ಅವರ ಶತಕಗಳ ಮೂಲಕ ಈ ದಾಖಲೆಯನ್ನು ಬರೆದಿತ್ತು. ಆರ್‌ಸಿಬಿ ವಿರುದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಜಾನಿ ಬೈರ್‌ಸ್ಟೋವ್‌ ಹಾಗೂ ಡೇವಿಡ್‌ ಮಿಲ್ಲರ್‌ ಅವರ ಶತಕಗಳ ಮೂಲಕ ಈ ದಾಖಲೆ ಬರೆದಿತ್ತು. ಇನ್ನು ಈ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ ತಂಡ, ಶುಭಮನ್‌ ಗಿಲ್‌ ಮತ್ತು ಸಾಯ್‌ ಸುದರ್ಶನ್‌ ಅವರ ಶತಕಗಳ ಮೂಲಕ ಈ ಸಾಧನೆ ಮಾಡಿತ್ತು.