ಜೋಹನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ (IND vs SA) ಭಾರತ ತಂಡದ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಶತಕಗಳನ್ನು ಸಿಡಿಸಿದ್ದಾರೆ. 210 ರನ್ಗಳ ಜೊತೆಯಾಟವನ್ನು ಆಡಿದ ಈ ಜೋಡಿ ಭಾರತ ತಂಡ ತನ್ನ ಪಾಲಿನ 20 ಓವರ್ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 283 ರನ್ಗಳನ್ನು ದಾಖಲಿಸಲು ನೆರವು ನೀಡಿದರು.
ಆರಂಭಿಕ ಅಭಿಷೇಕ್ ಶರ್ಮಾ 36 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಎರಡನೇ ವಿಕೆಟ್ಗೆ ಜೊತೆಯಾದ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ತಾ ಮುಂದು, ನಾ ಮುಂದು ಎಂಬಂತ ಹರಿಣ ಪಡೆಯ ಬೌಲರ್ಗಳ ಎದುರು ಅಬ್ಬರಿಸಿದರು. ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 109 ರನ್ಗಳನ್ನು ಸಿಡಿಸಿದರೆ, ತಿಲಕ್ ವರ್ಮಾ ಕೇವಲ 47 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 120 ರನ್ಗಳನ್ನು ಸ್ಪೋಟಿಸಿದರು. ಈ ಇಬ್ಬರೂ ಬ್ಯಾಟ್ಸ್ಮನ್ಗಳು ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ 5 ದಾಖಲೆಗಳನ್ನು ಮುರಿದಿದ್ದಾರೆ.
IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಇತಿಹಾಸ ಬರೆದ ಸಂಜು ಸ್ಯಾಮ್ಸನ್-ತಿಲಕ್ ವರ್ಮಾ!
ಸಂಜು ಸ್ಯಾಮ್ಸನ್-ತಿಲಕ್ ವರ್ಮಾ ಮುರಿದ ಟಾಪ್ 5 ದಾಖಲೆಗಳ ವಿವರ
1.ಟಿ20ಐ ಪಂದ್ಯದ ಇನಿಂಗ್ಸ್ವೊಂದರಲ್ಲಿ ಇಬ್ಬರು ಶತಕ ಸಿಡಿಸಿದ ಮೊದಲ ಪೂರ್ಣ ಪ್ರಮಾಣದ ತಂಡ ಭಾರತ
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇಬ್ಬರೂ ನಾಲ್ಕನೇ ಟಿ20ಐ ಪಂದ್ಯದಲ್ಲಿ ತಲಾ ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಪಂದ್ಯದ ಏಕೈಕ ಇನಿಂಗ್ಸ್ನಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ಶತಕ ಸಿಡಿಸಿದ ಐಸಿಸಿಐ ಪೂರ್ಣ ಸದಸ್ಯತ್ವದ ರಾಷ್ಟ್ರ ಎಂಬ ದಾಖಲೆಯನ್ನು ಭಾರತ ತಂಡ ಬರೆದಿದೆ. ಈ ಸರಣಿಯಲ್ಲಿ ಸಂಜು ಹಾಗೂ ತಿಲಕ್ ಇಬ್ಬರೂ ತಲಾ ಎರಡೆರಡು ಶತಕಗಳನ್ನು ಸಿಡಿಸಿದ್ದಾರೆ.
2. ದಕ್ಷಿಣ ಆಫ್ರಿಕಾ ಎದುರು ಟಿ20ಐನಲ್ಲಿ ಯಾವುದೇ ವಿಕೆಟ್ಗೆ ಗರಿಷ್ಠ ಜೊತೆಯಾಟ
ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಎರಡನೇ ವಿಕೆಟ್ಗೆ 210 ರನ್ಗಳ ದಾಖಲೆಯ ಜೊತೆಯಾಟವನ್ನು ಆಡಿದರು. ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಎದುರು ಯಾವುದೇ ವಿಕೆಟ್ಗೆ ಅತಿ ಹೆಚ್ಚು ರನ್ಗಳ ಜೊತೆಯಾಟವನ್ನು ಆಡಿದ ನೂತನ ದಾಖಲೆಯನ್ನು ಈ ಜೋಡಿ ಬರೆದಿದೆ. ಇನ್ನು ಟಿ20ಐನಲ್ಲಿ ಭಾರತದ ಪರ ಯಾವುದೇ ವಿಕೆಟ್ಗೆ ದಾಖಲಾದ ಅತ್ಯಂತ ಗರುಷ್ಠ ಜೊತೆಯಾಟ ಇದಾಗಿದೆ.
Innings Break!
— BCCI (@BCCI) November 15, 2024
Absolutely dominating batting display from #TeamIndia at The Wanderers Stadium, Johannesburg⚡️ ⚡️
1⃣2⃣0⃣* from Tilak Varma
1⃣0⃣9⃣* from Sanju Samson
Scorecard ▶️ https://t.co/b22K7t8KwL#SAvIND pic.twitter.com/RO9mgJFZnL
3. ಟಿ20ಐನಲ್ಲಿ ಎರಡು ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ದಾಖಲಾದ ಅತ್ಯಂತ ಗರಿಷ್ಠ ಜತೆಯಾಟ
ಭಾರತ ತಂಡದ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ 73 ರನ್ಗಳನ್ನು ಕಲೆ ಹಾಕಿತು. 36 ರನ್ ಗಳಿಸಿದ ಬಳಿಕ ಅಭಿಷೇಕ್ ವಿಕೆಟ್ ಒಪ್ಪಿಸಿದರು. ನಂತರ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಎರಡನೇ ವಿಕೆಟ್ಗೆ 210 ರನ್ಗಳ ಜತೆಯಾಟವನ್ನು ಆಡಿದರು. ಇದರೊಂದಿಗೆ ಟಿ20ಐನಲ್ಲಿ ಎರಡು ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ಗಳ ಜತೆಯಾಟವಾಡಿದ ದಾಖಲೆಯನ್ನು ಸಂಜು-ತಿಲಕ್ ಬರೆದರು.
4.ಕ್ಯಾಲೆಂಡರ್ ವರ್ಷದಲ್ಲಿ 3 ಶತಕ ಸಿಡಿಸಿದ ಸಂಜು
ಪ್ರಸಕ್ತ ವರ್ಷ ಭಾರತ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ಗೆ ಅತ್ಯಂತ ಅದ್ಭುತವಾಗಿದೆ. ಕೇರಳ ಮೂಲದ ಬ್ಯಾಟ್ಸ್ಮನ್ ಸ್ಥಿರ ಪ್ರದರ್ಶನದ ಸಮಸ್ಯೆಯಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಟಿ20ಐ ಸರಣಿಗಳಲ್ಲಿ ಮೂರು ಶತಕಗಳನ್ನು ಸಿಡಿಸಿ ದಾಖಲೆಯನ್ನು ಬರೆದಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಮೂರು ಶತಕಗಳನ್ನು ಸಿಡಿಸಿದ ವಿಶ್ವದ ಮೊದಲು ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಸಂಜು ಬರೆದಿದ್ದಾರೆ. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ ಕೊನೆಯ ಪಂದ್ಯದಲ್ಲಿಯೂ ಶತಕ ಬಾರಿಸಿದ್ದರು.
9⃣ 🤝 7⃣2⃣
— BCCI (@BCCI) November 15, 2024
Sanju Samson 🤝 Tilak Varma
𝗜𝗻 𝗙𝗿𝗮𝗺𝗲: The ONLY two Indians to score 2⃣ successive T20I 💯s 👏 👏
Live ▶️ https://t.co/b22K7t8KwL#TeamIndia | #SAvIND pic.twitter.com/lvm31r6s5c
5. ದಕ್ಷಿಣ ಆಫ್ರಿಕಾ ಎದುರು ಟಿ20ಐ ಪಂದ್ಯದಲ್ಲಿ ಅತ್ಯಂತ ಗರಿಷ್ಠ ಮೊತ್ತ
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ದಾಖಲೆಯ ಜತೆಯಾಟದಿಂದ ಭಾರತ ತಂಡ ತನ್ನ ಪಾಲಿನ 20 ಓವರ್ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 283 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 284 ರನ್ಗಳ ದಾಖಲೆಯ ಗುರಿಯನ್ನು ನೀಡಿತು. ದಕ್ಷಿಣ ಆಫ್ರಿಕಾ ವಿರುದ್ದ ಟಿ20ಐ ಪಂದ್ಯದಲ್ಲಿ ಯಾವುದೇ ತಂಡ ಗಳಿಸಿದ ಅತ್ಯಂತ ಗರಿಷ್ಠ ಮೊತ್ತ ಇದಾಯಿತು. ಈ ಹಿಂದೆ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಎದುರು ಸೆಂಚುರಿಯನ್ನಲ್ಲಿ 20 ಓವರ್ಗಳಿಗೆ ಮೂರು ವಿಕೆಟ್ಗಳ ನಷ್ಟಕ್ಕೆ 258 ರನ್ಗಳನ್ನು ಕಲೆ ಹಾಕಿತ್ತು. ಇದೀಗ ಭಾರತ ಈ ದಾಖಲೆಯನ್ನು ಮುರಿದಿದೆ.