Saturday, 16th November 2024

‌Vishweshwar Bhat Column: ಮೊಬೈಲ್‌, ವೈಫೈ ಇಲ್ಲದ ಬದುಕು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಎಚ್ಚರವಾಗಿದ್ದಾಗ ಎರಡು ತಾಸು ಮೊಬೈಲ್ ಬಿಟ್ಟಿದ್ದರೆ, ಕೆಲವರು ವಿಚಿತ್ರವಾಗಿ ಚಡಪಡಿಸಲಾರಂಭಿಸುತ್ತಾರೆ. ಒಂದು ತಾಸು ವಾಟ್ಸಾಪ್
ನೋಡದೇ ಇದ್ದರೆ, ಶುದ್ಧ ತಿಕ್ಕಲರಂತೆ ವರ್ತಿಸಲಾರಂಭಿಸುತ್ತೀರಿ. ಏನೋ ಜಗತ್ತು ಅಲ ಕಲ ಆದವರಂತೆ ಆಡುತ್ತಾರೆ. ಕನಿಷ್ಠ ಗಂಟೆಗೊಮ್ಮೆ
ಯಾದರೂ -ಸ್ ಬುಕ್ ನೋಡಬೇಕು. ಎರಡು ಗಂಟೆಗೊಮ್ಮೆ ಟ್ವಿಟರ್ ನೋಡಬೇಕು. ಇಲ್ಲದಿದ್ದರೆ ಅವರು ಮನುಷ್ಯರಾಗಿರುವುದಿಲ್ಲ. ಇನ್ನು
ಕೆಲವರಿಗೆ ಮೊಬೈಲ್ ನೋಡದೇ ಮಾತಾಡಲು ಬರುವುದೇ ಇಲ್ಲ.

ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ, ಆದರೆ ಮೊಬೈಲನ್ನು ನೋಡುತ್ತಿರುತ್ತಾರೆ. ಮೊಬೈಲ್ ಆಫ್ ಮಾಡಿ ಮಾತಾಡಿ ಅಂದ್ರೆ, ಅರ್ಧ ಗಂಟೆ ಹೇಗೋ ತಡೆದುಕೊಳ್ಳುತ್ತಾರೆ. ನಂತರ ವರ್ತನೆ ಅಡ್ಡಾದಿಡ್ಡಿ, ವಕ್ರ ವಕ್ರ. ಇನ್ನು‌ ಇಂಟರ್ನೆಟ್ ಅಥವಾ ವೈಫೈ ಇಲ್ಲದಿದ್ದರೆ ನೋಡಬೇಕು, ಥೇಟು ಅಂಡು ಸುಟ್ಟುಕೊಂಡ ಬೆಕ್ಕು! ಬೋರ್ಡ್ ರೂಮ್ ಮೀಟಿಂಗ್‌ಗಳಲ್ಲಿ ಪ್ರತಿ ಒಂದು ಗಂಟೆಗೆ ‘ಕಾಫಿ ಬ್ರೇಕ್’ ತೆಗೆದುಕೊಳ್ಳುವುದು ಸಾಮಾನ್ಯ. ಈಗ ಅಂಥ ವಿರಾಮಕ್ಕೆ ವಾಟ್ಸಾಪ್ ಬ್ರೇಕ್, ಮೊಬೈಲ್ ಬ್ರೇಕ್ ಎಂದು ಕರೆಯುತ್ತಾರೆ. ಸಿನಿಮಾ ಥಿಯೇಟರುಗಳಲ್ಲಿನ ಇಂಟರ್ವೆಲ್ ಸಹ ಈಗ ‘ವಾಟ್ಸಾಪ್ ವಿರಾಮ’ವಾಗಿದೆ.

ಕಾಫಿ – ತಿಂಡಿಗಿಂತ ಮೊದಲು ವಾಟ್ಸಾಪ್ ನೋಡಬೇಕು. ಇಲ್ಲದಿದ್ದರೆ ಏನೋ ಚಡಪಡಿಕೆ. ಕೆಲವು ದಿನಗಳ ಹಿಂದೆ, ಸುಮಾರು ಒಂದು
ತಾಸಿನ ಕಾಲ, ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು. ಎಲ್ಲೂ ವಾಟ್ಸಾಪ್ ಸೇವೆ ಇರಲಿಲ್ಲ. ಆಗ ಕೆಲವರು ವರ್ತಿಸಿದ ರೀತಿ ನೋಡಿದರೆ ಆಶ್ಚರ್ಯ, ದಿಗಿಲು. ನಿದ್ದೆ ಮಾಡಿದಷ್ಟು ಹೊತ್ತು ಮಾತ್ರ ಇವೆಲ್ಲವುಗಳಿಂದ ಮುಕ್ತಿ. ಎಚ್ಚರವಾದಾಗ ಬೆಡ್ ಕಾಫಿ ಇಲ್ಲದಿದ್ದರೂ ಆದೀತು, ವಾಟ್ಸಾಪ್ ಇರಲೇಬೇಕು. ಬೇಕಾದರೆ ನೋಡಿ, ಜೈಲಿನಲ್ಲಿ ವೈಫೈ ಸೌಲಭ್ಯವಿರುವ ಮೊಬೈಲ್‌ನ್ನು ಕೊಟ್ಟರೆ, ಜೀವಾವಧಿ ಶಿಕ್ಷೆಯನ್ನು ಇಪ್ಪತ್ತೈದು ವರ್ಷಗಳಿಗೆ ಏರಿಸಿದರೂ, ಯಾವ ಕೈದಿಯೂ ಬೇಸರಿಸಿಕೊಳ್ಳುವುದಿಲ್ಲ.

ಸಿನಿಮಾ ನೋಡುತ್ತಾ, ಮೆಸೇಜ್ ಮಾಡುತ್ತಾ, ವಿಡಿಯೋ ಕಾಲ್ ಮಾಡುತ್ತಾ ಹಾಯಾಗಿ ಕಳೆದುಬಿಡುತ್ತಾರೆ. ಕೆಲವರು ಜೈಲಿನ ಹೊರಗಿದ್ದೂ ಕಳೆಯುವುದೂ ಹಾಗೆ ಅಲ್ಲವೇ? ಆಗ ಜೈಲು ವಾಸವನ್ನೇ ಎಲ್ಲರೂ ಇಷ್ಟಪಡಬಹುದು. ಹಾಗೆ ನೋಡಿದರೆ, ವೈಫೈ ಇಲ್ಲದ, ಮೊಬೈಲ್ ಇಲ್ಲದ ಜೀವನವೇ ಅನೇಕರಿಗೆ ಜೈಲು ವಾಸ. ಅಷ್ಟರಮಟ್ಟಿಗೆ ಮನುಷ್ಯ ಮೊಬೈಲ್ ಒಳಗೆ ಬಂದಿ. ಮೊಬೈಲ್ ಇಲ್ಲದ, ವೈಫೈ ಇಲ್ಲದ, ಇಂಟರ್ನೆಟ್ ಇಲ್ಲದ ಮನೆಯೇ ಸೆರೆಮನೆ. ನಾನು ಕೆಲವು ದಿನಗಳ ಹಿಂದೆ, ಶಿರಸಿಯ ನನ್ನ ಸ್ನೇಹಿತನ ಮನೆಯಲ್ಲಿ ನಾಲ್ಕು ದಿನ ಇದ್ದೆ.

ಆ ಸಂದರ್ಭದಲ್ಲಿ ಬೇಕೆಂದೇ ದಿನದ ಭಾಳ ಹೊತ್ತು ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ. ಅಲ್ಲದೇ ಅಲ್ಲಿ ನೆಟ್ ವರ್ಕ್ ಸಂಪರ್ಕವೂ ಸರಿಯಾಗಿರಲಿಲ್ಲ. ಹೀಗಾಗಿ ಫೇಸ್ ಬುಕ್‌ನಲ್ಲಿ ಯಾವ ಪೋ ಮಾಡಿರಲಿಲ್ಲ. ಅಲ್ಲದೇ ಟ್ವೀಟ್ ಕೂಡ ಮಾಡಿರಲಿಲ್ಲ. ಅಷ್ಟಕ್ಕೇ ನನ್ನ ಆತ್ಮೀಯ ರೊಬ್ಬರು ಆಶ್ಚರ್ಯದಿಂದ, ‘ನೀವು ಮೂರ್ನಾಲ್ಕು ದಿನ ಫೇಸ್‌ಬುಕ್ ನೋಡದೇ, ಟ್ವೀಟ್ ಮಾಡದೇ, ವಾಟ್ಸಾಪ್ ಮೆಸೇಜ್ ನೋಡದೇ ಹೇಗೆ ಹಾಯಾಗಿ ಇರುತ್ತೀರಿ?’ ಎಂದು ಕೇಳಿದ್ದರು.

ಅದಕ್ಕೆ ನಾನು ‘ಅವು ಇಲ್ಲದಿರುವುದರಿಂದಲೇ ಹಾಯಾಗಿ ಇರಬಹುದು’ ಎಂದಿದ್ದೆ. ಇತ್ತೀಚಿಗೆ ಇಂಥದೇ ಇನ್ನೊಂದು ಸಂದರ್ಭ ಒದಗಿ ಬಂದಿತು.
ಒಂದು ದಿನ ಇವೆಲ್ಲವುಗಳಿಂದ ದೂರವಾಗಿದ್ದೆ. ಮರುದಿನ ಅದೇ ನನ್ನ ಆತ್ಮೀಯರಿಗೆ (ಅವರ ಸಮಾಧಾನಕ್ಕೆ) ಹೀಗೆ ಬರೆದೆ – ‘ಇಂದು ಇಡೀ ದಿನ
ನದಿ, ಬೆಟ್ಟ, ಕಾಡು, ತೋಟದಲ್ಲಿ ಕಳೆದೆ. ಆದರೆ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್‌ದಲ್ಲಿ ಹಾಕಲು ಒಂದೇ ಒಂದು ಫೋಟೋ ತೆಗೆಯಲಿಲ್ಲ.
ಇಡೀ ದಿನ ಕಳೆದಿದ್ದು ಯಾಕೋ ವ್ಯರ್ಥ ಎನಿಸಿತು.’ ಇದನ್ನು ಓದಿದ ಅವರು, ‘ಈ ವಾಕ್ಯದ ಸಾಲುಗಳನ್ನು ಅಲ್ಲಲ್ಲಿ ತುಂಡರಿಸಿ ಬರೆದಿದ್ದರೆ,
ಒಳ್ಳೆಯ ಕವನ ಆಗುತ್ತಿತ್ತಲ್ಲ ಸಾರ್’ ಎಂದರು.