ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಕಳೆದೊಂದು ದಶಕದಲ್ಲಿ ಕರ್ನಾಟಕದ ರಾಜಕಾರಣದ ದಿಕ್ಕನ್ನು ಗಮನಿಸಿದರೆ ರಾಜಕಾರಣದಲ್ಲಿ 30-40 ವರ್ಷ ಶಾಶ್ವತವಾಗಿ ನೆಲೆಯೂರಿದ ಹಿರಿಯರು ತಮ್ಮ ಮಕ್ಕಳಿಗೆ ಮಣೆ ಹಾಕಿ ವಂಶವೃದ್ಧಿ ಮಾಡುತ್ತಿದ್ದಾರೆಯೇ ವಿನಹ ಒಬ್ಬನೇ ಒಬ್ಬ ಪಕ್ಷದ ಕಾರ್ಯಕರ್ತನಿಗೆ ಅವಕಾಶ ಕಲ್ಪಿಸಿ ಕೊಡುವ ಬಗ್ಗೆ ಚಿಂತಿಸಿಲ್ಲ.
ಕರ್ನಾಟಕದ ಹೊಳೆಯಲ್ಲಿ ಅದೆಷ್ಟೋ ರಾಜಕಾರಣದ ನೀರು ಹರಿದು ಸಮುದ್ರ ಸೇರಿವೆ. ಅದೆಷ್ಟೋ ರಾಜಕಾರಣಿಗಳು ಹಲವಾರು ವರ್ಷಗಳ ಕಾಲ ರಾಜಕಾರಣ ನಡೆಸಿದ್ದಾರೆ. ತಮಗೆ ವಯಸ್ಸಾದಾಗ ತಮ್ಮ ಮಕ್ಕಳನ್ನು ಗದ್ದುಗೆಯಲ್ಲಿ ಕೂರಿಸಿ ಕೆಲ ರಾಜಕಾರಣಿಗಳು ಇಹ ಲೋಕ ತ್ಯಜಿಸಿದರೆ ಇನ್ನು ಕೆಲ ಮಂದಿ ಮನೆಯಲ್ಲಿ ಕೂತು ನಾಲ್ಕು ಗೋಡೆಗಳ ಮಧ್ಯೆ ರಾಜಕೀಯದ ಚದುರಂಗದಾಟದಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಅಪ್ಪ ಮಕ್ಕಳು ಜೊತೆ ಜೊತೆಯಾಗಿಯೇ ರಾಜಕೀಯದ ಅಧಿಕಾರ ಅನುಭವಿಸುತ್ತಿದ್ದಾರೆ. ಗಂಡ ಸಚಿವನಾದರೆ ಹೆಂಡತಿ ಶಾಸಕಿ,
ಅಪ್ಪ ಶಾಸಕ, ಸಚಿವನಾದರೆ ಮಗಳು ಸಂಸದೆ ಹೀಗೆ ಕುಟುಂಬ ರಾಜಕಾರಣದಲ್ಲಿ ಕರ್ನಾಟಕಕ್ಕೆ ಅಗ್ರ ಪಂಕ್ತಿಯಿದೆ.
ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಘಟಾನುಘಟಿ ರಾಜಕಾರಣಿಗಳು ತಂದ ಪರಿಣಾಮಕಾರಿ ಯೋಜನೆಗಳು ಒಂದಲ್ಲ ಒಂದು ರೀತಿಯಲ್ಲಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಆ ಕಾಲದ ರಾಜಕೀಯ ಯಾವ ಮಟ್ಟದಲ್ಲಿತ್ತೆಂದರೆ ಹಿಂದುಳಿದ ವರ್ಗಗಳ ಪರವಾಗಿ
ಉಳುವವನೇ ಹೊಲದೊಡೆಯ ಕಾನೂನು ಜಾರಿಗೆ ತಂದ ದೇವರಾಜ ಅರಸರು, ಸೂರಿಲ್ಲದೆ ಮರದಡಿಯಲ್ಲಿ ಮಲಗಿದ್ದ ವೃzಯ ಸ್ಥಿತಿ ಕಣ್ಣಾರೆ ಕಂಡು ಮರುಗಿ ಸೂರಿಲ್ಲ ದವರಿಗೆ ಆಶ್ರಯ ಯೋಜನೆ ಜಾರಿಗೆ ತಂದ ಎಸ್. ಬಂಗಾರಪ್ಪ ಹೀಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವಸ್ತು
ಸ್ಥಿತಿಯನ್ನು ಅರಿತು ಆ ಕಾಲದಲ್ಲಿ ಆಗಿನ ರಾಜಕಾರಣಿಗಳು ತಂದ ದೂರದೃಷ್ಟಿಯ ಯೋಜನೆಗಳು ಇಂದಿಗೂ ಮನೆ ಮನಗಳಲ್ಲಿ ಅಚ್ಚಳಿಯದೆ ಉಳಿದಿದೆ.
ಇದರ ಜೊತೆಗೆ ಬಡವರ ಮನೆಗಳಲ್ಲಿ ಬೆಳಕು ಕಂಡ ಒಂದು ಬಲ್ಬನ ಭಾಗ್ಯ ಜ್ಯೋತಿ ಯೋಜನೆ, ಗಂಡನನ್ನು ಕಳೆದುಕೊಂಡ ವಿಧವೆ
ಯರಿಗಾಗಿ ವಿಧವಾ ವೇತನ, ವೃದ್ಧರ ಸ್ವಾಭಿಮಾನದ ಬದುಕಿಗಾಗಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಬಾಣಂತಿಯರಿಗಾಗಿ ಮಡಿಲು ಯೋಜನೆ, ಬಡವರು ಬ್ಯಾಂಕ್ ವ್ಯವಹಾರ ನಡೆಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಅಂದಿನ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಯವರು ಜಾರಿಗೆ ತಂದ ಸಾಲಮೇಳ ಯೋಜನೆ ಇಂದಿಗೂ ಮುಕ್ತ ಬ್ಯಾಂಕ್ ವ್ಯವಹಾರ ನಡೆಸಲು ಜನಸಾಮಾನ್ಯರಿಗೆ ಪ್ರೇರೇಪಣೆ ನೀಡಿದೆ. ಇಂತಹ ಸೂಕ್ಷ್ಮ ಸಂವೇದನಾ ಶೀಲ ರಾಜಕಾರಣ ಇಂದಿನ ಕಾಲದಲ್ಲಿ ರಾಜಕಾರಣಿಗಳಲ್ಲಿ ಬಲು ಅಪರೂಪವೇ ಸರಿ.
ಒಬ್ಬ ಸಚಿವ, ಸಂಸದ, ಶಾಸಕ ಅಥವಾ ಇನ್ನಿತರ ಜನಪ್ರತಿನಿಧಿಗಳು ಅದೆಷ್ಟು ದಿನಪತ್ರಿಕೆಗಳನ್ನು ಓದುವ ಅಥವಾ ಆ ಪತ್ರಿಕೆಗಳಲ್ಲಿ ವರದಿಯಾಗುವ ತನ್ನ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆ, ವಿಶೇಷ ವರದಿಗಳು ಹಾಗೂ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದು
ಜನಸಾಮಾನ್ಯರು ತೊಂದರೆಗೆ ಸಿಲುಕಿದ ಸಮಯದಲ್ಲಿ ಪತ್ರಕರ್ತನೋರ್ವ ಆ ಸಮಸ್ಯೆಯ ಬಗ್ಗೆ ವಿಶೇಷ ವರದಿ ಪ್ರಕಟಿಸಿದಾಗ ಆ ಇಲಾಖೆಗೆ ಸಂಬಂಧಿಸಿದ ಸಚಿವ, ಮುಖ್ಯಮಂತ್ರಿ, ಶಾಸಕ, ಸಂಸದ ಸ್ಪಂದಿಸುವ ಸಂವೇದನಾಶೀಲತೆಯನ್ನು ಉಳಿಸಿಕೊಂಡಿದ್ದಾನೆಯೇ? ಉಳಿಸಿಕೊಂಡಿದ್ದೇ
ನೆಂದರೆ ಇವೆಲ್ಲವೂ ಯಶಸ್ವಿ ಜನಪ್ರತಿನಿಧಿಯ ಹಿಂದಿರುವ ಅತಿ ಸಣ್ಣ ಸಂಗತಿಗಳೆಂದೇ ಪರಿಗಣಿಸಬಹುದು.
ಒಂದೂರಿನ ಸರಕಾರಿ ಶಾಲೆಯ ದುಸ್ಥಿತಿಯ ಬಗ್ಗೆ, ಜನಸಾಮಾನ್ಯರು ನಡೆದುಕೊಂಡು ಹೋಗಲು ಸರಿಯಾದ ದಾರಿಗಳಿಲ್ಲದ ಸಮಯದಲ್ಲಿ, ಕುಡಿಯುವ ನೀರಿನ ಸಮಸ್ಯೆ, ಮೂಲ ಭೂತ ಸೌಕರ್ಯಗಳ ಬಗ್ಗೆ ಆ ಭಾಗದ ಪತ್ರಕರ್ತರು ಬೆಳಕು ಚೆಲ್ಲಿದಾಗ ಆ ವರದಿಯನ್ನು ನೋಡಿ ಜಿಽಕಾರಿಗೋ ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವ ಪರಿಪಾಠಗಳಿದ್ದವು.
ಆದರೆ ಕಾಲಬದಲಾದಂತೆಲ್ಲ ರಾಜಕಾರಣದ ಮಗ್ಗುಲಲ್ಲಿ ಬದಲಾವಣೆ ಕಾಣತೊಡಗಿದೆ. ಅಂದಿನ ಕಾಲದಂತೆ ಪ್ರಸ್ತುತ ಪತ್ರಿಕಾ ವರದಿಗಳು ಬಿಡಿ ರಾಜಕಾರಣಿಗಳ ಕಣ್ಣೆದುರಿಗೆ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಮುಖ ತಿರುಗಿಸಿಕೊಂಡು ಹೋಗುವ, ಪತ್ರಿಕೆ, ದೃಶ್ಯಮಾಧ್ಯಮಗಳು
ದಿನವಿಡೀ ಸಮಸ್ಯೆಗಳನ್ನು ಹೊತ್ತ ವರದಿಗಳನ್ನು ಭಿತ್ತರಿಸಿ ದರೂ ತಮಗೆ ಲಗಾಮೇ ಇಲ್ಲದಂತೆ ರಾಜಕಾರಣಿಗಳು ವರ್ತಿಸುತ್ತಾರೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಹಣಕ್ಕಾಗಿ, ಲೋಭಕ್ಕಾಗಿ ಮತದಾರ ತನ್ನ ಮತವನ್ನು ಎಲ್ಲಿಯ ತನಕ ಮಾರಿಕೊಳ್ಳಲು ಸಿದ್ಧನಾಗಿರುತ್ತಾನೋ ಅಲ್ಲಿಯವರೆಗೆ ಈ ಎಲ್ಲಾ ಪ್ರಕ್ರಿಯೆಗಳು ಸದಾ ಚಾಲ್ತಿಯಲ್ಲಿರುವ ಸಂಗತಿಗಳೇ.
ಒಂದು ಕಾಲದಲ್ಲಿ ವಿಚಾರ, ಮೌಲ್ಯ, ಸಿದ್ಧಾಂತ, ಕಾರ್ಯ, ಸಂಘಟನೆ, ಹಿರಿತನದ ಆಧಾರದಲ್ಲಿ ನಡೆಯುತ್ತಿದ್ದ ರಾಜಕಾರಣದ ದಿಕ್ಕು ಬದಲಾಗಿ ಕುಟುಂಬದ ಸುತ್ತ, ಹಣ, ಹೆಂಡ, ಉಡುಗೊರೆ, ಜಾತಿ, ಸಮುದಾಯದ ಆಧಾರದಲ್ಲಿ ಆವರಿಸಿಕೊಂಡಿದೆ. ಈ ಹಿಂದೆಲ್ಲ ಒಬ್ಬ ಅಭ್ಯರ್ಥಿ
ಚುನಾವಣೆಗೆ ಸ್ಪರ್ಧೆ ಮಾಡಿದರೆ ಆತನ ಆಸ್ತಿ, ಸಂಪತ್ತು ಘೋಷಣೆಯ ಮೌಲ್ಯ ಆತನ ರಾಜಕಾರಣದ ಪಾರದರ್ಶಕತೆಯನ್ನು ಬಿಂಬಿಸುತ್ತಿದ್ದವು. ಚುನಾವಣೆಯ ಇಡುಗಂಟು(ಠೇವಣಿ) ಪಕ್ಷದ ಕಾರ್ಯಕರ್ತರೇ ಸಂಗ್ರಹಿಸಿ ಕೊಟ್ಟು ಚುನಾವಣೆಯಲ್ಲಿ ಆರಿಸಿ ಕಳುಹಿಸುತ್ತಿದ್ದರು.
ಇಂದು ಅಪ್ಪ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ನಿಂತರೆ ಮಗ ವಿಧಾನಸಭೆಗೆ, ಗಂಡ ನಿಧನ ಹೊಂದಿ ಉಪಚುನಾವಣೆ ನಡೆದರೆ ಪತ್ನಿ ಇಲ್ಲವೇ ಮಗಳು ಅಭ್ಯರ್ಥಿ. ಇಂದು ವಾಚಾಮಗೋಚರ ನಿಂದಿಸಿಕೊಂಡ ನಾಯಕರು ನಾಳೆ ತಮ್ಮ ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ವಿರೋಧ ಪಕ್ಷದ ಬಾಗಿಲು ಬಡಿದು ಅಭ್ಯರ್ಥಿಯಾಗಿ ಬಿಡುತ್ತಾರೆ. ಕಳೆದೊಂದು ದಶಕದಲ್ಲಿ ಕರ್ನಾಟಕದ ರಾಜಕಾರಣದ ದಿಕ್ಕನ್ನು ಗಮನಿಸಿದರೆ ರಾಜಕಾರಣದಲ್ಲಿ 30-40 ವರ್ಷ ಶಾಶ್ವತವಾಗಿ ನೆಲೆಯೂರಿದ ಹಿರಿಯರು ತಮ್ಮ ಮಕ್ಕಳಿಗೆ ಮಣೆ ಹಾಕಿ ವಂಶವೃದ್ಧಿ ಮಾಡುತ್ತಿದ್ದಾರೆಯೇ ವಿನಹ ಒಬ್ಬನೇ ಒಬ್ಬ ಪಕ್ಷದ ಕಾರ್ಯಕರ್ತನಿಗೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಚಿಂತಿಸಿಲ್ಲ. ಬೆಳೆಯುವ ಕಾರ್ಯಕರ್ತ ಎಲ್ಲಿ ತನಗೆ ತನ್ನ ಕುಟುಂಬಕ್ಕೆ ಮಗ್ಗುಲ ಮುಳ್ಳಾಗುತ್ತಾನೋ ಎಂಬ ದೆಸೆಯಿಂದ ಆತನನ್ನು ಚಿವುಟಿ ಡಮ್ಮಿ ನಾಯಕರನ್ನೇ ಬಹುತೇಕ ಜನಪ್ರತಿನಿಧಿಗಳು ಕ್ಷೇತ್ರದ ಪದಾಧಿಕಾರಿಗಳಾಗಿ ಆಯ್ಕೆ ಮಾಡುತ್ತಾ ಬಂದಿದ್ದಾರೆ.
ಇನ್ನು ರಾಜಕಾರಣವೆಂದರೆ ತಮ್ಮ ಸುತ್ತಮುತ್ತಲಿನ ಒಂದಷ್ಟು ಬಳಗವನ್ನು ಕಟ್ಟಿಕೊಂಡು ತಮ್ಮ ಬೇಕು ಬೇಡಗಳನ್ನು ಪೂರೈಸಿಕೊಳ್ಳುವುದು. ಸಣ್ಣ ಕೆಲಸ ಕಾರ್ಯಗಳಿಗೂ ದೊಡ್ಡ ಸಾಧಕರಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಹಾಡುಗಳನ್ನು ಹಾಕಿ ದೊಡ್ಡ ಮಟ್ಟದಲ್ಲಿ ತಮ್ಮ ಹಿಂಬಾಲಕರ
ಮೂಲಕ ಪ್ರಚಾರ ಪಡೆಯುವುದು. ಯಾರೋ ತಂದ ಅನುದಾನಗಳಿಗೆ ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನಡೆಸಿ ತಾನೇ ಅಭಿವೃದ್ಧಿ ಕಾರ್ಯ ಮಾಡಿರುವುದಾಗಿ ಬಿಂಬಿಸಿಕೊಳ್ಳುವ ಪ್ರವೃತ್ತಿಗಳು, ಅತ್ಯಾಚಾರ, ಕೊಲೆ, ಹಗರಣ,ದೌರ್ಜನ್ಯ, ಪಾತಕ ಕೃತ್ಯ, ಸಮಾಜದ್ರೋಹಿ ಕೃತ್ಯ ನಡೆಸಿ, ಅಧಿಕಾರದಲ್ಲಿದ್ದಾಗಲೇ ಜೈಲು ಪಾಲಾಗಿ ಹೊರಬಂದವರನ್ನೇ ಹೀರೋಗಳಂತೆ ಸ್ವೀಕರಿಸುವ ಮಟ್ಟಕ್ಕೆ ತಲುಪಿರುವ ರಾಜಕಾರಣ ಹಾಗೂ ಆಡಳಿತ ಪಕ್ಷ, ಪ್ರತಿ ಪಕ್ಷಗಳೇ ಹಗರಣಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಸಾಗಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣದ ನೈತಿಕ ಮೌಲ್ಯ ಉಳಿಯಲು ಹೇಗೆ ಸಾಧ್ಯ? ಕಳೆದ ಎರಡು ದಶಕಗಳ ಹಿಂದಿನ ರಾಜಕಾರಣದ ಸ್ಥಿತಿಗತಿಗಳು ಹೇಗಿದ್ದವು? ವಿಧಾನ ಮಂಡಲ, ಪರಿಷತ್ ಅಧಿವೇಶನದ ಸ್ವರೂಪಗಳು ಹೇಗಿದ್ದವು? ಯಾವುದೇ ಹಗರಣ ಅಥವಾ ಆಡಳಿತ ಪಕ್ಷಗಳಿಂದ ಜನಸಾಮಾನ್ಯರಿಗೆ ತೊಂದರೆ ಯಾದಾಗ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ, ಸದಸ್ಯರು ಪ್ರತಿಭಟಿಸಿದರೆ ಕಳಂಕ ಹೊತ್ತ ಜನಪ್ರತಿನಿಧಿಗಳ ಮೇಲೆ ಶಿಸ್ತು ಕ್ರಮ, ತನಿಖೆಗೆ ಒಪ್ಪಿಸುವ ಕಾರ್ಯಗಳು ನಡೆಯುತ್ತಿದ್ದವು.
ಕರ್ನಾಟಕದಲ್ಲಿನ ಗಂಭೀರ ಪ್ರಕರಣ ವನ್ನೇ ಗಮನಿಸುವುದಾದರೆ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲು ಇಂದಿಗೂ ಪ್ರತಿಪಕ್ಷ ಬಿಜೆಪಿಗೆ ಸಾಧ್ಯವಾಗಿಲ್ಲ. ಇನ್ನು ಅಽವೇಶನ ಕಲಾಪಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು, ತಮಗೆ ಖುಷಿ ಬಂದಂತೆ ಸಭೆಯಿಂದ ಎದ್ದು ಹೋಗುವುದು, ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳದೇ ಆಲಸ್ಯತನ ತೋರಿ ಕೇವಲ ಕುರ್ಚಿ ಬಿಸಿ ಮಾಡಿ ಬರುವ ಜನಪ್ರತಿನಿಧಿ ಗಳಿಗೂ ಕೊರತೆಯಿಲ್ಲ. ಇನ್ನು ಚಿಂತಕರ ಚಾವಡಿ ಪರಿಷತ್ ಸ್ಥಾನಕ್ಕೆ ಟಿಕೆಟ್ ಸಿಗದ ರಾಜಕಾರಣಿಗಳಿಗೆ,ನೇರವಾಗಿ ಗೆಲ್ಲುವ ಸಾಮರ್ಥ್ಯ ವಿಲ್ಲದವರಿಗೆ, ಅಸಮಾಧಾನಿತರನ್ನು ತೃಪ್ತಿ ಪಡಿಸಲು ನಾಮನಿರ್ದೇಶನ ಮಾಡಲು ಇರುವ ವೇದಿಕೆಯಂತೆ ಪ್ರಸ್ತುತ ಭಾಸವಾಗುತ್ತಿದೆ.
ಸಾಮಾಜಿಕ ಜಾಲತಾಣ, ಯೂಟ್ಯೂಬ್ ಚಾನೆಲ್, ದೃಶ್ಯ ಮಾಧ್ಯಮಗಳ ಪ್ರಭಾವದ ಹೊರತಾಗಿ ರಾಜಕಾರಣ ದಲ್ಲಿ ಸಂಘಟನಾ ಕಾರ್ಯ ಮಾಡಿದ ನಾಯಕರನ್ನು ಗಮನಿಸಿದರೆ ವಾಹನ ಸೌಕರ್ಯಗಳಿಲ್ಲದೆ,ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಲ್ಲದ ಸಮಯದಲ್ಲಿ ಪಕ್ಷ ಕಟ್ಟಿದ ನಾಯಕರು ಇಂದಿಗೂ ಕೊನೆಯ ಸಾಲಿನಲ್ಲಿ ಸಂಘಟನೆಯ ಬೆಳವಣಿಗೆ ಯಲ್ಲಿ ತೃಪ್ತಿಪಟ್ಟುಕೊಂಡಿದ್ದರೆ ವಂಶದ ಕೃಪೆಯಿಂದ, ಹಣದ ಪ್ರಭಾವದಿಂದ, ಜಾತಿ ಬಲದಿಂದ, ಜಾಲತಾಣಗಳ ಪ್ರಭಾವ ಗಿಮಿಕ್‌ನಿಂದ ಜನಪ್ರತಿನಿಧಿಗಳಾದವರು ಮುಂದಿನ ಸಾಲಲ್ಲಿ ಹಿರಿಯ ಕಾರ್ಯಕರ್ತರನ್ನು ಒದ್ದು, ಕನಿಷ್ಠ ಅವರ ಭಾವನೆಗಳಿಗೂ ಬೆಲೆ ನೀಡದೆ ಮೆರೆಯುತ್ತಿರುವುದು ಇಂದು ಎಲ್ಲ ಪಕ್ಷಗಳಲ್ಲಿ ಕಾಣುತ್ತಿದ್ದೇವೆ. ಇಂತಹ ನಾಯಕರಿಗೆ ಜನಸಾಮಾನ್ಯರ ಬಿಡಿ ನಿಷ್ಠಾವಂತ ಕಾರ್ಯಕರ್ತರ ಬೆವರು, ರಕ್ತ, ಶ್ರಮ, ತ್ಯಾಗದ ಬೆಲೆ ತಿಳಿಯಲು ಹೇಗೆ ತಾನೇ ಸಾಧ್ಯ?
ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕಾರಣ ಎಂಬುವುದು ನುಸುಳದ ಕ್ಷೇತ್ರಗಳೇ ಇಲ್ಲ. ಸಮಾಜದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲು ಆಯಾ ಕ್ಷೇತ್ರದ ಶಾಸಕನ ಶಿಫಾರಸು ಬೇಕು. ಸರಕಾರಿ ಶಾಲಾಭಿವೃದ್ಧಿ ಸಮಿತಿಗೆ ಸದಸ್ಯರ ನೇಮಕ,
ಧಾರ್ಮಿಕ ಕ್ಷೇತ್ರಕ್ಕೆ ಸದಸ್ಯರ ನೇಮಕ, ಯುನಿವರ್ಸಿಟಿ ಸಿಂಡಿಕೇಟ್ ಸದಸ್ಯರ ನೇಮಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಶಾಸಕ, ಸಚಿವರು ಮೂಗು ತೂರಿಸುವುದರಿಂದ ರಾಜಕೀಯ ಪಕ್ಷಗಳ ನಾಯಕರೇ ಪರಮ ಪವಿತ್ರ ಕ್ಷೇತ್ರಗಳಾದ ಶಿಕ್ಷಣ, ಧಾರ್ಮಿಕ, ಸಹಕಾರ ಕ್ಷೇತ್ರಗಳಲ್ಲಿ ತುಂಬಿ ತುಳುಕುತ್ತಿದ್ದಾರೆ. ರಾಜಕಾರಣದ ದಿಕ್ಕು ಸರಳತೆ, ಜನಸ್ನೇಹಿ ನಡೆಗಿಂತ ಐಷಾರಾಮಿ, ಸ್ಪರ್ಧಾತ್ಮಕ ವ್ಯವಸ್ಥೆಯ ಕಡೆ ಸಾಗುತ್ತಿರುವುದು
ಕೂಡ ಕಳವಳಕಾರಿ ಸಂಗತಿಯಾಗಿ ಪರಿಣಮಿಸಿದೆ.