Saturday, 16th November 2024

Fire Accident: ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ಶಿಶುಗಳ ಸಜೀವ ದಹನ

ಲಖನೌ: ಉತ್ತರ ಪ್ರದೇಶ (Uttar Pradesh)ದಲ್ಲಿ ಶುಕ್ರವಾರ (ನ. 15) ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 10 ಮಕ್ಕಳು ಮೃತಪಟ್ಟಿದ್ದಾರೆ. ʼʼಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀ ಭಾಯಿ ವೈದ್ಯಕೀಯ ಕಾಲೇಜಿನ (Maharani Laxmibai Medical Colleg) ಎನ್‌ಐಸಿಯುನಲ್ಲಿ (Neonatal Intensive Care Unit) ಬೆಂಕಿ ಕಾಣಿಸಿಕೊಂಡು 10ಕ್ಕೂ ಹೆಚ್ಚು ಮಕ್ಕಳು ಸಜೀವ ದಹನಗೊಂಡಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ (Fire Accident).

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ವಾರ್ಡ್‌ನಲ್ಲಿ 49ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದು, 37 ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹೊಗೆಯಿಂದ ತುಂಬಿದ ವಾರ್ಡ್‌ನ ಕಿಟಕಿಗಳನ್ನು ಒಡೆದು ರೋಗಿಗಳನ್ನು ಸ್ಥಳಾಂತರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

”ಶಾರ್ಟ್ ಸರ್ಕ್ಯೂಟ್‌ನಿಂದ ಎನ್‌ಐಸಿಯು (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ಒಳಗಿನ ಘಟಕದಲ್ಲಿ ರಾತ್ರಿ 10.30 ರಿಂದ 10.45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 10 ಶಿಶುಗಳು ಸಾವನ್ನಪ್ಪಿವೆ” ಎಂದು ಝಾನ್ಸಿ ಡಿಎಂ ಅವಿನಾಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಇತರ 17 ಮಕ್ಕಳು ಪ್ರಸ್ತುತ ವೈದ್ಯಕೀಯ ಕಾಲೇಜು ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತನಿಖೆ ಆದೇಶಿಸಿದ ಸಿಎಂ

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖುಮಂತ್ರಿ ಯೋಗಿ ಆದಿತ್ಯನಾಥ್‌ ತನಿಖೆ ಆದೇಶ ಹೊರಡಿಸಿದ್ದಾರೆ. 12 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಝಾನ್ಸಿ ವಿಭಾಗೀಯ ಆಯುಕ್ತರು ಮತ್ತು ಝಾನ್ಸಿಯ ಉಪ ಪೊಲೀಸ್ ಮಹಾನಿರೀಕ್ಷಕರಿಗೆ ಸೂಚಿಸಿದ್ದಾರೆ. “ಝಾನ್ಸಿ ಜಿಲ್ಲೆಯಲ್ಲಿರುವ ವೈದ್ಯಕೀಯ ಕಾಲೇಜಿನ ಎನ್ಐಸಿಯುನಲ್ಲಿ ಸಂಭವಿಸಿದ ಅಪಘಾತ ಹೃದಯ ವಿದ್ರಾವಕವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸಮರೋಪಾದಿಯಲ್ಲಿ ನಡೆಸಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಮಹಾರಾಣಿ ಲಕ್ಷ್ಮೀ ಭಾಯಿ ವೈದ್ಯಕೀಯ ಕಾಲೇಜನನು 1968ರಲ್ಲಿ ಆರಂಭಿಸಲಾಯಿತು. ರಾಜ್ಯ ಸರ್ಕಾರದ ಇದನ್ನು ನಿರ್ವಹಿಸುತ್ತಿದೆ.

ಈ ಸುದ್ದಿಯನ್ನೂ ಓದಿ: Fire Accident: ಸ್ಟೀಲ್‌ ಕಂಪನಿಯಲ್ಲಿ ಬೆಂಕಿ ಅವಘಡ; 16 ಕಾರ್ಮಿಕರ ಸ್ಥಿತಿ ಗಂಭೀರ