Saturday, 16th November 2024

ಮಣಿಪುರ-ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ; ತೀವ್ರ ನಿಗಾ

Manipur’s Jiribam

ಇಂಫಾಲ: ಮಣಿಪುರದ ಜಿರಿಬಾಮ್ (Manipur’s Jiribam) ಜಿಲ್ಲೆಯಿಂದ ಶಂಕಿತ ಕುಕಿ ಬಂಡುಕೋರರು ಒಂದೇ ಕುಟುಂಬದ 6 ಮಂದಿಯನ್ನು ಅಪಹರಿಸಿದ 3 ದಿನಗಳ ಬಳಿಕ ಶಿಶು ಸೇರಿದಂತೆ ಇಬ್ಬರು ಮಕ್ಕಳು ಮತ್ತು ಮಹಿಳೆಯ ಕೊಳೆತ ಶವ ಮಣಿಪುರ-ಅಸ್ಸಾಂ ಗಡಿಯ ಬಳಿ ಶುಕ್ರವಾರ (ನ. 15) ಪತ್ತೆಯಾಗಿದೆ. ಸದ್ಯ ಜಿರಿಬಾಮ್ ಜಿಲ್ಲೆಯಲ್ಲಿ ತೀವ್ರ ನಿಗಾ ಇರಿಸಲಾಗಿದೆ. ನ. 11ರಂದು ಮೂವರು ಮಹಿಳೆಯರು ಸಹಿತ 6 ಮಂದಿಯನ್ನು ಅಪಹರಿಸಲಾಗಿತ್ತು. ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ.

ʼʼಅಪಹರಣ ನಡೆದ ಗ್ರಾಮದಿಂದ ಸುಮಾರು 15 ಕಿ.ಮೀ. ದೂರದಲ್ಲಿ ಅಂತಾರಾಜ್ಯ ಗಡಿಯ ಸಮೀಪ ಸದಿ ತೀರದಲ್ಲಿ 3 ಮೃತದೇಹ ಪತ್ತೆಯಾಗಿದೆ. ಆದರೆ ಇದು ಅಪಹರಣಲಕ್ಕೊಳಗಾದವರ ಮೃತದೇಹವೇ ಎನ್ನುವುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿರಿಬಾಮ್‌ನಲ್ಲಿ ಸೂಕ್ತ ಮೂಲ ಸೌಕರ್ಯವಿಲ್ಲದ ಕಾರಣ ಗುರುತು ಪತ್ತೆಗಾಗಿ ಮೃತದೇಹಗಳನ್ನು 50 ಕಿ.ಮೀ. ದೂರದಲ್ಲಿರುವ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (SMHC) ಸಾಗಿಸಲಾಗಿದೆ. ʼʼಒಂದೇ ಕುಟುಂಬದ 6 ಮಂದಿಯನ್ನು ಅಪಹರಿಸಿದ ಗ್ರಾಮದಿಂದ ಸುಮಾರು 15-20 ಕಿ.ಮೀ. ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಅವರ ಗುರುತು ಪತ್ತೆಯಾಗಿಲ್ಲ. ಇದಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಂಕಿತ ಕುಕಿ ಬಂಡುಕೋರರು ಅಪಹರಿಸಲ್ಪಟ್ಟ ಇವರೆಲ್ಲ ಮೈತೈ ಅಮುದಾಯಕ್ಕೆ ಸೇರಿದವರು.

ರಾಜ್ಯ ಸರ್ಕಾರದ ಕಾರ್ಮಿಕ ಲೈಶಾರಾಮ್ ಹೆರೋಜಿತ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಕುಟುಂಬವನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಯಾವುದೇ ಗುಂಪು ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಶಸ್ತ್ರಸಜ್ಜಿತ ಜನರ ಗುಂಪೊಂದು ಅವರನ್ನು ದೋಣಿಯಲ್ಲಿ ಕರೆದೊಯ್ಯುತ್ತಿರುವುದನ್ನು ತಮ್ಮವರೊಬ್ಬರು ನೋಡಿರುವುದಾಗಿ ಅವರು ತಿಳಿಸಿದ್ದಾರೆ.

ಘಟನೆ ವಿವರ

ಮಣಿಪುರದ ಜಿರಿಬಾಮ್ (Manipur’s Jiribam) ಜಿಲ್ಲೆಯಲ್ಲಿ ನ. 11 ಸಿಆರ್‌ಪಿಎಫ್‌ (CRPF) ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 10 ಕುಕಿ ಬಂಡುಕೋರರು ಸಾವನ್ನಪ್ಪಿದ್ದರು. ಅದಾದ ಬಳಿಕ ನ. 12ರಂದು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಅವರನ್ನು ಶಂಕಿತ ಕುಕಿ ಬಂಡುಕೋರರು ಅಪಹರಿಸಿದ್ದಾರೆ ಎನ್ನಲಾಗಿದೆ.

ಶಂಕಿತ ಬಂಡುಕೋರರ ಗುಂಪು ಸೋಮವಾರ ಅಪರಾಹ್ನ 2.30ರ ಸುಮಾರಿಗೆ ಬೊರೊಬೆಕ್ರಾ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿ ಹತ್ತಿರದಲ್ಲೇ ಇರುವ ಸಿಆರ್‌ಪಿಎಫ್‌ ಶಿಬಿರದತ್ತ ತೆರಳಿತ್ತು. ʼʼಬಂಡುಕೋರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು. ಅವರು ದಾಳಿ ನಡೆಸಲು ಆಗಮಿಸುತ್ತಿದ್ದಂತೆ ಸಿಆರ್‌ಪಿಎಫ್‌ ಸಿಬ್ಬಂದಿ ಪ್ರತಿ ದಾಳಿ ನಡೆಸತೊಡಗಿದರು. ಈ ಎನ್‌ಕೌಂಟರ್‌ ಸುಮಾರು 45 ನಿಮಿಷಗಳ ಕಾಲ ಮುಂದುವರಿಯಿತು. ಪರಿಣಾಮ 10 ಬಂಡುಕೋರರು ಹತರಾಗಿದ್ದಾರೆ. ಶಂಕಿತ ಬಂಡುಕೋರರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆʼʼ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎನ್‌ಕೌಂಟರ್‌ ಸ್ಥಳದಿಂದ ಎಕೆ, ಐಎನ್ಎಸ್ಎಎಸ್ ಅಸಾಲ್ಟ್ ರೈಫಲ್‌ಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್ ಲಾಂಚರ್ ಮುಂತಾದ ಶಸ್ತಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Jiribam Encounter: ಮಣಿಪುರದಲ್ಲಿ ಮತ್ತೆ ಸಂಘರ್ಷ: ಭೀಕರ ಎನ್‌ಕೌಂಟರ್‌ನಲ್ಲಿ 11 ಬಂಡುಕೋರರ ಹತ್ಯೆ