ಜೊಹಾನ್ಸ್ಬರ್ಗ್: ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿ ಆ ಬಳಿಕದ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್(Sanju Samson) ನಾಲ್ಕನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಸಂಜು ವಾಂಡರರ್ ಸ್ಟೇಡಿಯಂನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಪ್ರವಾಹ ಹರಿಸಿದರು. ಇದರಲ್ಲೊಂದು ಸಿಕ್ಸರ್ ಪಂದ್ಯ ವೀಕ್ಷಿಸುತ್ತಿದ್ದ ಮಹಿಳೆಯ ಡವಡೆಗೆ ಬಡಿದಿದೆ. ಈ ವಿಡಿಯೊ ವೈರಲ್ ಆಗಿದೆ.
ಮಹಿಳೆಯೊಬ್ಬರು ತಮ್ಮ ಕುಟುಂಬ ಸಮೇತರಾಗಿ ಪಂದ್ಯ ವೀಕ್ಷಿಸುತ್ತಿದರು. ಅರ್ಧಶತಕ ಬಾರಿಸಿದ ಜೋಶ್ನಲ್ಲಿದ್ದ ಸಂಜು ಮುಂದಿನ ಎಸೆತವನ್ನು ಸಿಕ್ಸರ್ಗೆ ಬಡಿದಟ್ಟಿದರು. ಈ ವೇಳೆ ಚೆಂಡು ಬೌಂಡರಿ ಲೈನ್ನಲ್ಲಿ ಹಾಕಲಾಗಿದ್ದ ತಡೆಗೋಡೆಯ ಕಂಬಿಗೆ ಬಿದ್ದು ಬೌನ್ಸ್ ಆಗಿ ನೇರವಾಗಿ ಮಹಿಳೆಯ ದವಡೆಗೆ ಬಿದ್ದಿದೆ. ನೋವಿನಿಂದ ನರಳಿದ ಈ ಮಹಿಳೆ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಲವಾಗಿ ಬಡಿದಿದ್ದರಿಂದ ನೋವು ಕಡಿಮೆ ಮಾಡಲು ಐಸ್ ಪ್ಯಾಕ್ ಇರಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಆಕೆ ನೋವಿನಿಂದ ಕಣ್ಣೀರಿಡುತ್ತಿರುವುದು ವಿಡಿಯೊದಲ್ಲಿ ನೋಡಬಹುದು. ಮಹಿಳೆಗೆ ಚೆಂಡು ಬಡಿಯುತ್ತಿದ್ದಂತೆ ಮೈದಾನದಿಂದಲೇ ಸಂಜು ಕೈ ಸನ್ನೆಯ ಮೂಲಕ ಉದ್ದೇಶಪೂರ್ವಕವಲ್ಲ ಎಂದು ಕ್ಷಮೆ ಕೇಳಿದರು.
ಇದನ್ನೂ ಓದಿ Rohit Sharma: ರೋಹಿತ್ ಶರ್ಮ ದಂಪತಿಗೆ ಗಂಡು ಮಗು
A SIX FROM SANJU SAMSON HIT ON THE FACE OF A FAN…!!!! pic.twitter.com/wZJR9ibIc7
— Johns. (@CricCrazyJohns) November 15, 2024
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಸಂಜು ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟು 56 ಎಸೆತ ಎದುರಿಸಿ ಅಜೇಯ 109 ರನ್ ಕಲೆಹಾಕಿದರು. ಇವರ ಈ ಪ್ರಚಂಡ ಬ್ಯಾಟಿಂಗ್ ಅಬ್ಬರದ ವೇಳೆ ಬರೋಬ್ಬರಿ 9 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು. ಇವರ ಜತೆಗಾರ ತಿಲಕ್ ವರ್ಮ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕೇವಲ 47 ಎಸೆತಗಳಿಂದ ಅಜೇಯ 120 ರನ್ ಬಾರಿಸಿದರು. ಸಿಡಿದದ್ದು 10 ಸಿಕ್ಸರ್ ಮತ್ತು 9 ಬೌಂಡರಿ. ಮೂರನೇ ಪಂದ್ಯದಲ್ಲಿಯೂ ತಿಲಕ್ ಶತಕ ಬಾರಿಸಿದ್ದರು. ಉಭಯ ಆಟಗಾರರ ಈ ಬ್ಯಾಟಿಂಗ್ ವೈಭವದಿಂದ ಭಾರತ
283 ರನ್ ಕಲೆಹಾಕಿ 135 ರನ್ಗಳ ಗೆಲುವಿನೊಂದಿಗೆ ಸರಣಿ ಗೆದ್ದು ಬೀಗಿತು. ಸಂಜು ಕ್ಯಾಲೆಂಡರ್ ವರ್ಷದಲ್ಲಿ 3 ಟಿ20 ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನಾಗಿದ್ದಾರೆ. ತಿಲಕ್ ಸತತ 2 ಶತಕ ಬಾರಿಸಿದ ವಿಶ್ವದ 5ನೇ ಹಾಗೂ ಭಾರತದ 2ನೇ ಕ್ರಿಕೆಟಿಗನೆನಿಸಿದರು.