ದುಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ(ICC) ಆಕ್ಷೇಪಣೆ ಸಲ್ಲಿಸಿದ ನಂತರ ಚಾಂಪಿಯನ್ಸ್ ಟ್ರೋಫಿ(Champions Trophy) ಪ್ರವಾಸವನ್ನು ಮೂರು ಆತಿಥೇಯ ನಗರಗಳಾದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಗೆ ಸೀಮಿತಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಚಾಂಪಿಯನ್ಸ್ ಟ್ರೋಫಿ ಪಾಕ್‌ಗೆ ಬಂದ ತಕ್ಷಣ ಪಾಕ್ ಕ್ರಿಕೆಟ್ ಮಂಡಳಿ ಟ್ವಿಟರ್ ಎಕ್ಸ್ ಖಾತೆಯಲ್ಲಿ “ಸಿದ್ಧರಾಗಿ, ಪಾಕಿಸ್ತಾನ! ICC ಚಾಂಪಿಯನ್ಸ್ ಟ್ರೋಫಿ 2025 ಟ್ರೋಫಿ ಪ್ರವಾಸವು ಇಸ್ಲಾಮಾಬಾದ್‌ನಲ್ಲಿ ನವೆಂಬರ್ 16 ರಂದು ಪ್ರಾರಂಭವಾಗುತ್ತದೆ, ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ” ಎಂದು ಬರೆದುಕೊಂಡಿತ್ತು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿಗೆ ಕರೆ ಮಾಡಿ ಪಾಕ್ ಆಕ್ರಮಿತ ಕಾಶ್ಮೀರದ ಅಡಿಯಲ್ಲಿ ಬರುವ ನಗರಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸ ಆಯೋಜಿಸಿರುವ ಪಿಸಿಬಿಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ, ಐಸಿಸಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇಸ್ಲಾಮಾಬಾದ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಪಿಒಕೆಗೆ ಯಾವುದೇ ಪ್ರವಾಸ ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧಾರಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಡೆ ನೀಡಿದೆ ಎನ್ನಲಾಗಿದೆ.
ಚಾಂಪಿಯನ್ಸ್(Champions Trophy) ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕೃತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಲಿಖಿತ ವಿವರಣೆಯನ್ನು ಕೇಳಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರವನ್ನು ಬಿಸಿಸಿಐ ಐಸಿಸಿಗೆ ಮೌಖಿಕವಾಗಿ ತಿಳಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಕಳೆದ ವಾರ ಭಾರತ ತಂಡ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳದು ಎಂದು ಐಸಿಸಿಗೆ ಬಿಸಿಸಿಐ ತನ್ನ ನಿಲುವನ್ನು ಸೂಚಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ(ಪಿಸಿಬಿ) ಐಸಿಸಿಗೆ ಪತ್ರ ಬರೆದು, ಭಾರತ ತಂಡ ಪಾಕ್‌ನಲ್ಲಿ ಆಡದಿರುವ ಸೂಕ್ತ ಕಾರಣವನ್ನು ಬಿಸಿಸಿಐನಿಂದ ಲಿಖಿತ ದೃಢೀಕರಣ ಪತ್ರವನ್ನು ಪಡೆಯುವಂತೆ ಪಿಸಿಬಿ ಪತ್ರದಲ್ಲಿ ಉಲ್ಲೇಖಿಸಿತ್ತು. ಇದೀಗ ಐಸಿಸಿ ಪಾಕ್ ಮನವಿಯ ಪ್ರಕಾರ ಬಿಸಿಸಿಐಗೆ ಲಿಖಿತ ವಿವರಣೆಯನ್ನು ಕೇಳಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇದುವರೆಗೂ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನೊಂದೆಡೆ ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ, ಐಸಿಸಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. ತೀರ್ಪು ಯಾವುದೇ ದೇಶದ ಪರವಾಗಿ ಬಂದರೂ ದೊಡ್ಡ ವಿವಾದ ಸೃಷ್ಟಿಯಾಗುವ ಸಾಧ್ಯತೆಯಿದೆ.