Saturday, 16th November 2024

Viral News: ಬದುಕುವ ಛಲಕ್ಕೆ ಕಂದನ ಭವಿಷ್ಯದ ಬಲ; ಪುಟ್ಟ ಮಗುವಿನೊಂದಿಗೆ ತಾಯಿಯ ಫುಡ್ ಡೆಲಿವರಿ ವಿಡಿಯೊ ವೈರಲ್

ಗಾಂಧಿನಗರ: ಆನ್‌ಲೈನ್‌ನಲ್ಲಿ (Online) ಆಹಾರವನ್ನು ಆರ್ಡರ್ (Order) ಮಾಡುವ ಪ್ರವೃತ್ತಿ ಜನಪ್ರಿಯವಾಗಿದೆ. ಮೊದಲೆಲ್ಲ ಹೋಟೆಲ್​ಗೆ ಹೋಗಿ ಊಟ ಮಾಡೋದು ಅಂದ್ರೆ ಏನೋ ಒಂಥರಾ ಸಂತೋಷದ ವಿಷಯವಾಗಿತ್ತು. ಕೂತಲ್ಲೇ ಫುಡ್​ ಆರ್ಡರ್ (Food Order) ಮಾಡಿ ತಿನ್ನುವ ಕಾಲ ಬಂದು ಎಷ್ಟೊ ದಿನಗಳು ಆಗಿದೆ. ಈಗ ಆ್ಯಂಬುಲೆನ್ಸ್ ಬರುವ ವೇಗಕ್ಕಿಂತ ಫುಡ್ ಆರ್ಡರ್​​​ ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತೆ. ಇದೀಗ ಮಹಿಳೆಯೊಬ್ಬರು ಮಗುವಿನ ಜತೆಗೆ ಆನ್‌ಲೈನ್‌ ಫುಡ್‌ ಡೆಲಿವರಿ ಮಾಡುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಗುಲಾಬ್ ಜಾಮೂನ್‌ನಿಂದ ಹಿಡಿದು ಫುಲ್ ಮೀಲ್ಸ್‌ವರೆಗೆ ಯಾವುದೇ ಆಹಾರವನ್ನು ತರಿಸಿಕೊಂಡು ಮನೆಯಲ್ಲಿಯೇ ಸವಿಯಬಹುದು. ಫುಡ್‌ ಡೆಲಿವರಿ ಆ್ಯಪ್‌ಗಳು ನಗರ ಮತ್ತು ನಗರದ ಅಕ್ಕಪಕ್ಕದ ಪ್ರದೇಶಗಳಿಗೆ ಫುಡ್‌ ಅನ್ನು ಡೆಲಿವರಿ ಮಾಡುತ್ತವೆ. ಅದೇ ಈ ಫುಡ್ ಡೆಲಿವರಿ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ವಿಡಿಯೊ ವೈರಲ್ ಆಗಿದೆ. ವಿಶೇಷ ಎಂದರೆ ಅವರು ಮಗುವನ್ನು ಬೈಕ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪ್ರತಿ ದಿನ ಗ್ರಾಹಕರಿಗೆ ಆಹಾರ ಡೆಲಿವರಿ ಮಾಡುತ್ತಿದ್ದಾರೆ.

ಹೌದು, ಗುಜರಾತ್‌(Gujarat)ನ ರಾಜ್‌ಕೋಟ್‌ನಲ್ಲಿ ಝೊಮ್ಯಾಟೋ ಡೆಲಿವರಿ (Zomato Delivery) ಏಜೆಂಟ್ ಆಗಿ ಕಾರ್ಯಾಚಾರಿಸುತ್ತಿರು ತಾಯಿಯ ಸ್ಪೂರ್ತಿಯ ಕತೆ ಇದಾಗಿದೆ. ಜೀವನ ಬಂಡಿ ಮುನ್ನಡೆಸಲು ಅವರು ಫುಡ್ ಡೆಲಿವರಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಇವರ ಹೆಗಲ ಮೇಲೆ ಬಿದ್ದಿದ್ದು, ದುಡಿಮೆ ಅತ್ಯಗತ್ಯವಾಗಿದೆ. ಆದರೆ ಮಗುವಿನ ಕಾರಣದಿಂದ ಹೊಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪೂರೈಸಿರುವ ಈಕೆಗೆ ಬೇಡಿಕೆಗೆ ತಕ್ಕಂತೆ ಕೆಲಸ ಸಿಗಲಿಲ್ಲ. ಈಕೆ ಮಗುವನ್ನು ಕರೆದುಕೊಂಡು ಬಂದು ಕೆಲಸ ಮಾಡುತ್ತೇನೆ ಎಂದಾಗ ಹಲವರು ನಿರಾಕರಿಸಿದರು. ಹೀಗಾಗಿ ಮಗುವನ್ನು ಜತೆಗೆ ಕರೆದುಕೊಂಡು ಹೋಗಿ ಕೆಲಸ ಮಾಡುವಂತೆ ಉದ್ಯೋಗ ಹುಡುಕುತ್ತಿರುವಾಗ ಆಕೆಗೆ ತೋಚಿದ್ದು ಝೊಮ್ಯಾಟೋ ಡೆಲಿವರಿ (Zomato Delivery)ಯ ಹುದ್ದೆ.

ಅಂದುಕೊಂಡಂತೆ ಫುಡ್ ಡೆಲಿವರಿ ಹುದ್ದೆಯನ್ನು ಪ್ರಾರಂಭಿಸಿದ ಆ ಮಹಿಳೆಗೆ ಪ್ರಾರಂಭದಲ್ಲಿ ಹತ್ತಾರು ಸಂಕಷ್ಟಗಳು ಎದುರಾದರೂ, ಧೃತಿಗೆಡದೇ ಈ ಸಂಪಾದನೆಯಲ್ಲಿ ಕುಟುಂಬವನ್ನು ಸಾಕಿ ಸಲಹುತ್ತಿದ್ದಾರೆ. ತಾಯಿ ತೋಳಿನಲ್ಲಿ, ಪಾಲನೆಯಲ್ಲಿ ಸ್ವಚ್ಛಂದವಾಗಿ ಆಟವಾಡಬೇಕಿದ್ದ ಈ ಮಗು ಅಮ್ಮನ ಜತೆ ಡೆಲಿವರಿ ಪಡೆಯಲು, ತಲುಪಿಸಲು ತೆರಳುತ್ತಿದೆ. ಮಗಳನ್ನು ಕೂರಿಸಿಕೊಂಡೇ ಅವರು ಎಲ್ಲ ಕಡೆ ಡೆಲಿವರಿಗೆ ತೆರಳುತ್ತಾರೆ. ಕಷ್ಟ, ಸವಾಲುಗಳ ನಡುವೆ ಮಗಳ ಮೇಲಿನ ಪ್ರೀತಿ ಮತ್ತಷ್ಟು ಉತ್ಸಾಹ ಹಾಗೂ ಚೈತನ್ಯ ನೀಡುತ್ತಿದೆ. ಕಷ್ಟದಲ್ಲೂ ಮಗಳ ಮುಖದಲ್ಲಿ ನಗು ಕಡಿಮೆ ಮಾಡಿಲ್ಲ ಎನ್ನುತ್ತಾರೆ ಆಕೆ.

ಇನ್ನು ತನ್ನ ಮಗಳನ್ನೂ ನೋಡಿಕೊಳ್ಳುತ್ತಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ ಸ್ವಾಭಿಮಾನದ ಜೀವನ ಸಾಗಿಸುತ್ತಿರುವ ಆ ಮಹಿಳೆಯ ಸ್ಫೂರ್ತಿದಾಯಕ ಕಥೆಯನ್ನು ವಿಶಾಲ್ ಅನ್ನೋ ಕೆಂಟೆಂಟ್ ಕ್ರಿಯೇಟರ್ ಹಂಚಿಕೊಂಡಿದ್ದಾರೆ. ʼʼಮನೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ ಕೆಲಸದ ಸಮಯದಲ್ಲಿ ತನ್ನ ಪುಟಾಣಿ ಮಗುವನ್ನು ಕೂಡ ನೋಡಿಕೊಳ್ಳುತ್ತ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಮೇಲಿನ ಸಮರ್ಪಣೆ ಮತ್ತು ಮಗುವಿನ ಮೇಲಿನ ಪ್ರೀತಿ ನಿಜಕ್ಕೂ ಎಲ್ಲರಿಗೂ ಪ್ರೇರಣೆ” ಎಂಬ ಶೀರ್ಷಿಕೆಯನ್ನು ವಿಡಿಯೊಕ್ಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಬೆಂಗಳೂರು ಏರ್‌ಪೋರ್ಟ್‌ ನೋಡಿ ಫುಲ್‌ ಫಿದಾ ಆದ ಜಪಾನಿ ಯುಟ್ಯೂಬರ್! ಭಾರೀ ವೈರಲ್‌ ಆಗ್ತಿದೆ ಆಕೆಯ ವಿಡಿಯೊ