ಚೆನ್ನೈ: ತಮಿಳಿನ ʼಒರು ಕಿಟೈನ್ ಕರುಣೈ ಮನುʼ (Oru Kidayin Karunai Manu) ಚಿತ್ರದ ಮೂಲಕ ಜನಪ್ರಿಯರಾದ ನಿರ್ದೇಶಕ (Tamil Director) ಸುರೇಶ್ ಸಂಗಯ್ಯ (Suresh Sangaiah) ಶುಕ್ರವಾರ (ನ. 15) ನಿಧನರಾಗಿದ್ದಾರೆ. ರಾತ್ರಿ ಸುಮಾರು 11 ಗಂಟೆಗೆ ಚೆನ್ನೈಯಲ್ಲಿ ಅವರು ಮೃತಪಟ್ಟಿದ್ದಾರೆ. ಕಿಡ್ನಿ ವೈಫಲ್ಯ ಬಳಲುತ್ತಿದ್ದ ಅವರಿಗೆ ಕಾಮಾಲೆ ಕಾಯಿಲೆಯೂ ಕಾಡುತ್ತಿತ್ತು. ಹೀಗಾಗಿ ಚೆನ್ನೈಯ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಸುರೇಶ್ ಸಂಗಯ್ಯ ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಖ್ಯಾತ ತಮಿಳು ನಿರ್ದೇಶಕ ಎಂ. ಮಣಿಕಂದನ್ ಅವರ ʼಕಾಕ ಮುಟ್ಟೈʼ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ 2017ರಲ್ಲಿ ತಮ್ಮ ಚೊಚ್ಚಲ ಚಿತ್ರ ʼಒರು ಕಿಟೈನ್ ಕರುಣೈ ಮನುʼವನ್ನು ಸುರೇಶ್ ಸಂಗಯ್ಯ ನಿರ್ದೇಶಿಸಿದ್ದರು. ಇದೊಂದು ವಿಭಿನ್ನ ಕಥಾಹಂದರವನ್ನು ಹೊಂದಿರುವ ಚಿತ್ರವಾದ್ದರೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅವರ ಎರಡನೇ ಚಿತ್ರ ʼಸತ್ಯತ್ರಿಕʼ ಕೋವೀಡ್ ಸಂಕಷ್ಟ ಕಾಲದಲ್ಲಿ ನಿರ್ಮಾಣವಾದ್ದರಿಂದ ಬಿಡುಗಡೆಗೆ ಕೆಲ ಕಾಲ ವಿಳಂಬವಾಗಿತ್ತು. ನಿರೀಕ್ಷೆಯಷ್ಟು ಜನರಿಗೆ ತಲುಪಲು ಸಾಧ್ಯವಾಗಲಿಲ್ಲ.
ಇತ್ತೀಚೆಗೆ ಯೋಗಿ ಬಾಬು ಅಭಿನಯದ ʼಕೆನಾಥ ಕಾನೋಮ್ʼ ಚಿತ್ರ ನಿರ್ದೇಶಿಸಿದ್ದ ಅವರು ಬಿಡುಗಡೆಗೂ ಮುನ್ನವೇ ಮೃತ ಪಟ್ಟಿದ್ದಾರೆ. ಚಿತ್ರದಲ್ಲಿ ಜಾರ್ಜ್ ಮೇರಿಯನ್, ರಾಮಕೃಷ್ಣ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಪೂರ್ತಿಯಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : Dattaraj Death: ಕನ್ನಡದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ನಿಧನ
ಸುರೇಶ್ ಸಂಗಯ್ಯ ನಿಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಹಲವು ಗಣ್ಯರು ಸುರೇಶ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
Shocked and saddened to hear about @sureshsangaiah's passing. I've always held #OruKidayinKarunaiManu as a precious film and now with a deeper significance. pic.twitter.com/EB7F7iK0n2
— Halitha (@halithashameem) November 15, 2024