Saturday, 16th November 2024

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿಗೆ ರಾಜ್ಯ ತಂಡ ಪ್ರಕಟ; ಸಮಿತ್ ದ್ರಾವಿಡ್‌ಗೆ ನಿರಾಸೆ

ಬೆಂಗಳೂರು: ಇದೇ ನವೆಂಬರ್‌ ಇಂದೋರ್‌ನಲ್ಲಿ 23ರಿಂದ ಡಿಸೆಂಬರ್‌ 5ರವರೆಗೆ ನಡೆಯಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ (SMAT 2024) ಕೂಟಕ್ಕೆ 15 ಮಂದಿ ಸದಸ್ಯರ ಕರ್ನಾಟಕ ತಂಡ ಪ್ರಕಟವಾಗಿದೆ. ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್ವಾಲ್‌ (Mayank Agarwal) ತಂಡದ ನಾಯಕನಾಗಿದ್ದಾರೆ.

ಅನುಭವಿ ಆಟಗಾರ ಮನೀಶ್‌ ಪಾಂಡೆ ಉಪ ನಾಯಕನಾಗಿದ್ದು, ವಿಕೆಟ್‌ ಕೀಪರ್‌ ಗಳಾಗಿ ಶ್ರೀಜಿತ್‌ ಕೆಎಲ್‌ ಮತ್ತು ಚೇತನ್‌ ಎಲ್‌ ಆರ್‌ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ವೇಗಿ ವೈಶಾಖ್ ವಿಜಯ್‌ ಕುಮಾರ್‌ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವಿಜಯ್‌ ಕುಮಾರ್‌ ಹರಿಣಗಳ ನಾಡಿನಲ್ಲಿ ಪದಾರ್ಪಣೆ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ತಂಡದ ಪರ ಆಡಿದ್ದ ಪಡಿಕ್ಕಲ್‌ ಮರಳಿ ರಾಜ್ಯ ತಂಡಕ್ಕೆ ಆಗಮಿಸಿದ್ದಾರೆ. ಸಂಭಾವ್ಯ 30 ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್ ದ್ರಾವಿಡ್ ಅಂತಿಮ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾದರು.

ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ಗುಜರಾತ್, ಸೌರಾಷ್ಟ್ರ, ತಮಿಳುನಾಡು ಮತ್ತು ಬರೋಡಾ ತಂಡಗಳು ಕಾಣಿಸಿಕೊಂಡಿದೆ. ನವೆಂಬರ್ 23 ರಂದು ಉತ್ತರಾಖಂಡ ವಿರುದ್ಧ ಕಣಕ್ಕಿಳಿಯುವ ಮೂಲಕ ಕರ್ನಾಟಕ ತಂಡ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ರಾಜ್ಯ ತಂಡ ತನ್ನ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ನಾಕೌಟ್‌ ಪ್ರವೇಶಿಸಲು ವಿಫಲವಾಗಿತ್ತು.

ಇದನ್ನೂ ಓದಿ Ranji Trophy: ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಸಾಧನೆ ಮಾಡಿದ ಅನ್ಷುಲ್‌ ಕಾಂಬೋಜ್‌ ಯಾರು?

ಕರ್ನಾಟಕ ತಂಡ

ಮಯಾಂಕ್‌ ಅಗರ್ವಾಲ್‌ (ನಾಯಕ), ಮನೀಶ್‌ ಪಾಂಡೆ (ಉಪ ನಾಯಕ), ದೇವದತ್ತ ಪಡಿಕ್ಕಲ್‌, ಅಭಿನವ್‌ ಮನೋಹರ್‌, ಶ್ರೇಯಸ್‌ ಗೋಪಾಲ್‌, ಸ್ಮರಣ್‌ ಆರ್‌, ಶ್ರೀಜಿತ್‌ ಕೆಎಲ್‌, ವೈಶಾಖ್ ವಿಜಯ್‌ ಕುಮಾರ್‌, ಮೆಖೈಲ್‌ ಎಚ್‌ ನರೋನ್ಹಾ, ಕೌಶಿಕ್‌ ವಿ, ಮನೋಜ್‌ ಭಾಂಡಗೆ, ವಿದ್ಯಾಧರ್‌ ಪಾಟೀಲ್‌, ಚೇತನ್‌ ಎಲ್‌ ಆರ್‌, ಶುಭಾಂಗ್‌ ಹೆಗ್ಡೆ ಮತ್ತು ಮನ್ವಂತ್‌ ಕುಮಾರ್‌ ಎಲ್.