ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಅವರ ತಂದೆ ಜಗದೀಶ್ ಸಿಂಗ್ ಪಟಾನಿ ಅವರಿಗೆ ಉತ್ತರ ಪ್ರದೇಶ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ವಂಚಕರು ಭರವಸೆ ನೀಡಿ 25 ಲಕ್ಷ ರೂ.ಗಳನ್ನು (Fraud Case) ಎಗರಿಸಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿ ಮತ್ತು ಬರೇಲಿಯ ನಿವಾಸಿಯಾದ ಜಗದೀಶ್ ಪಟಾನಿ ವಂಚಕರ ಮಾತಿಗೆ ಮರುಳಾಗಿ ದೊಡ್ಡ ಮೊತ್ತದ ಹಣವನ್ನು ನೀಡಿದ್ದಾರೆ. ಆದರೆ ಬಹಳ ಸಮಯದ ನಂತರ ಅವರಿಗೆ ಇದು ವಂಚಕರ ಹುನ್ನಾರ ಎಂದು ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ, ಪಟಾನಿ ಅವರಿಗೆ ವಂಚಕನಿಂದ ಕರೆ ಬಂದಿದ್ದು, ವಂಚಕನು ಯುಪಿ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದು, ಹಣವನ್ನು ಪಾವತಿಸಿದರೆ ಯುಪಿ ರಾಜ್ಯ ಸರ್ಕಾರದ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸುವುದಾಗಿ ಭರವಸೆ ನೀಡಿದ್ದಾನಂತೆ. ಅವನ ಮಾತನ್ನು ನಂಬಿದ ಪಟಾನಿ 20 ಲಕ್ಷ ರೂ.ಗಳನ್ನು ಅವನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ ಮತ್ತು 5 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ನೀಡಿದ್ದಾರೆ.
ಹಣವನ್ನು ಪಾವತಿಸಿ ಬಹಳ ಸಮಯವಾದರೂ ಕೂಡ ಆತ ಕೆಲಸ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದಾಗ ಪಟಾನಿ ಅವರಿಗೆ ಮೋಸ ಹೋಗಿರುವುದು ಅರಿವಾಗಿದೆ.ಈ ಕುರಿತು ಅವರು ಬರೇಲಿ ಪೊಲೀಸರಿಗೆ ದೂರು ನೀಡಿದ್ದು, ಈಗ ಎಫ್ಐಆರ್ ದಾಖಲಾಗಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆದರೆ ಈ ಘಟನೆಯ ಬಗ್ಗೆ ದಿಶಾ ಮತ್ತು ಅವರ ಕುಟುಂಬ ಸದಸ್ಯರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಈ ನಡುವೆ ದಿಶಾ ಅವರ ಇತ್ತೀಚಿನ ಚಿತ್ರ ಕಂಗುವಾ ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮತ್ತು ಇದಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದಲ್ಲಿ ಸೂರ್ಯ ಮತ್ತು ಬಾಬಿ ಡಿಯೋಲ್ ಕೂಡ ನಟಿಸಿದ್ದು, ಅವರ ಅಭಿನಯವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಆದರೆ ವೀಕ್ಷಕರು ಚಿತ್ರಕಥೆ ಮತ್ತು ಚಿತ್ರದ ಗಟ್ಟಿಯಾದ ಸಂಗೀತ ಮತ್ತು ಸೌಂಡ್ ಎಫೆಕ್ಟ್ ಅನ್ನು ಟೀಕಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ ಜಡೆ ಜಗಳ: ಯುವತಿಯರಿಬ್ಬರ ಕಿತ್ತಾಟ ನೋಡಿ ಬಿದ್ದು ಬಿದ್ದು ನಕ್ಕ ಜನರು
ಈ ಹಿಂದೆ ಸಂದರ್ಶನವೊಂದರಲ್ಲಿ, ದಿಶಾ ತನ್ನ ಫೋಟೋಶೂಟ್‍ಗಳನ್ನು ನೋಡಿದಾಗಲೆಲ್ಲಾ ತನ್ನ ತಂದೆ ಹೇಗೆ ಮುಜುಗರಪಟ್ಟುಕೊಳ್ಳುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು. “ಇದು ಕೆಲಸ ಎಂದು ನನ್ನ ಹೆತ್ತವರಿಗೆ ತಿಳಿದಿದೆ, ಮತ್ತು ನಾನು ಯಾವುದೇ ತಪ್ಪು ಮಾಡುತ್ತಿಲ್ಲ. ಅವರು ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಸಹಜವಾಗಿ, ನಾನು ನನ್ನ ಚಿತ್ರಗಳನ್ನು ಕುಟುಂಬದ ವಾಟ್ಸಾಪ್ ಗುಂಪಿನಲ್ಲಿ ಕಳುಹಿಸಿದಾಗಲೆಲ್ಲಾ ನನ್ನ ತಂದೆಗೆ ಮುಜುಗರವಾಗುತ್ತದೆ. ಎಷ್ಟೇ ಆದರೂ ಅವರು ತಂದೆ” ಎಂದು ಅವರು ಹೇಳಿದ್ದಾರೆ.