ಮೈಸೂರು: ಮುಡಾ ಹಗರಣದ (MUDA Case, MUDA scam) ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧ ಮೈಸೂರಿನಲ್ಲಿ ಮತ್ತೊಂದು ದೂರು ದಾಖಲಾಗಿದೆ. ಸ್ನೇಹಮಯಿ ಕೃಷ್ಣ ಬಂಧನ ಹಾಗೂ ಗಡಿಪಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮೈಸೂರಿನ (Mysuru news) ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆ.ಪಿ.ಸಿ.ಸಿ ವಕ್ತಾರ ಎಂ.ಲಕ್ಷ್ಮಣ್ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ತಿಂಗಳ ಹಿಂದೆ ಸ್ನೇಹಮಯಿ ಕೃಷ್ಣ ಅವರ ಸ್ನೇಹಿತರು ಎಂದು ಹೇಳಿಕೊಂಡು ಇಬ್ಬರು ನನ್ನನ್ನು ಸಂಪರ್ಕಿಸಿದ್ದರು. ಪ್ರಕರಣ ಮುಚ್ಚಿ ಹಾಕಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೂರು ದಿನಗಳ ಹಿಂದೆ ಮತ್ತೆ ಈ ಇಬ್ಬರು ನನ್ನನ್ನು ಸಂಪರ್ಕಿಸಿ ನನಗೆ ಬೆದರಿಕೆ ಹಾಕಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ಧ ಆರೋಪ ಮುಂದುವರೆಸಿದರೆ ನಿಮ್ಮ ವಿರುದ್ಧವೂ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 44 ಪ್ರಕರಣಗಳಿವೆ. ಇದರಲ್ಲಿ 22 ಪ್ರಕರಣಗಳ ಎಫ್‌ಐಆರ್ ನನ್ನಲ್ಲಿದೆ. ಈತ ರೌಡಿಶೀಟರ್ ಆಗಿದ್ದರೂ ಕಳೆದ ಮೂರು ವರ್ಷಗಳಿಂದ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಂಧಿಸಬೇಕು ಎಂದು ದೂರು ನೀಡಿದ್ದಾಗಿ ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ
ಬೆಳಗಾವಿ: ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ಆರೋಪದ ಮೇಲೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ. ಮನೆ ಬಿಡಿಸಲು ಈ ರೀತಿ ಮಾಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಕುಂದಾನಗರಿಯಲ್ಲಿ ನಡೆದ ಅಮಾನವೀಯ ಘಟನೆಯಿದು. ಬೆಳಗಾವಿಯ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆಯ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಲಾಗಿದೆ. ನೆರೆಮನೆಯವರೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಕೃತ್ಯದ ವಿಡಿಯೋ ಮೊಬೈಲ್ ಫೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರಂಭದಲ್ಲಿ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು ಎಂಬ ಆರೋಪವೂ ಕೇಳಿ ಬಂದಿದ್ದು, ಸದ್ಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ವಡ್ಡರವಾಡಿಯ ಮನೆಯೊಂದರಲ್ಲಿ ಬಾಲಕಿಯೊಬ್ಬಳ ಜತೆ ನಾಲ್ವರು ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ. ಅಲ್ಲೇ ಪಕ್ಕದಲ್ಲಿ ವಾಸವಿರುವ ಮತ್ತೊಂದು ಕುಟುಂಬದವರು, ಮಹಿಳೆಯ ವಿರುದ್ಧ ವೇಶ್ಯಾವಾಟಿಕೆಯ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮನೆಗೆ ನುಗ್ಗಿ ತಾಯಿ, ಮಗಳನ್ನು ಹೊರಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ. ಸಂಬಂಧ ಇಲ್ಲದವರೆಲ್ಲಾ ಆ ಮಹಿಳೆಯರ ಮನೆಗೆ ಬಂದು ಹೋಗುತ್ತಾರೆ. ಮಹಿಳೆಯರು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನೆರೆ ಮನೆಯವರು ತಾಯಿ-ಮಗಳನ್ನು ಮನೆ ಬಿಡಿಸಲು ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಲಾಗಿದೆ. ಘಟನೆಯ ದೃಶ್ಯ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಆಗಿದೆ.
ಹಲ್ಲೆಗೊಳಗಾದ ಬಳಿಕ ಮಹಿಳೆ ದೂರು ನೀಡಲು ಸಮೀಪದ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ 2 ದಿನ ಪೊಲೀಸ್ ಠಾಣೆಗೆ ಅಲೆದರೂ ದೂರು ಸ್ವೀಕರಿಸಲು ನಿರಾಕರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಮಹಿಳೆ, ‘ಜೀವ ಭಯ ಇದೆ, ರಕ್ಷಣೆ ಕೊಡಿ’ ಎಂದು ಬೆಳಗಾವಿ ಕಮಿಷನರ್ಗೆ ದೂರು ನೀಡಿದ್ದರು. ಇದೀಗ ಕಮಿಷನರ್ ಸೂಚನೆ ಮೇರೆಗೆ ಶುಕ್ರವಾರ ರಾತ್ರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಿಎನ್ಎಸ್ ಕಾಯ್ದೆಯ ಸೆಕ್ಷನ್ 115(2), 3(5), 331, 352 ಹಾಗೂ 74 ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Crime News : ಕುಡಿದ ಮತ್ತಿನಲ್ಲಿ ಬಿಎಂಟಿಸಿ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ