Saturday, 16th November 2024

Baba Siddique: ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ನಡೆಸಿದಾಗಲೇ ನಡೆದಿತ್ತಾ ಸಿದ್ದಿಕಿ ಹತ್ಯೆ ಪ್ಲಾನ್‌ ?

Baba Siddique

ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆಯ (Baba Siddique) ನಂತರ ಒಂದೊಂದೇ ಶಾಕಿಂಗ್‌ ವಿಚಾರಗಳು ಹೊರ ಬೀಳುತ್ತಿವೆ. ಪೊಲೀಸರಿಂದ ಬಂಧಿಸಲ್ಪಟ್ಟ ಬಿಷ್ಣೋಯ್‌ ಗ್ಯಾಂಗ್‌ನ (Bishnoi gang) ಶೂಟರ್‌ಗಳು ಇದೀಗ ಸಿದ್ದಿಕಿ ಹತ್ಯೆಯ ಪ್ಲಾನ್‌ ತೆರೆದಿಟ್ಟಿದ್ದಾರೆ. ಏಪ್ರಿಲ್ 14ರಂದು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ 10 ದಿನಗಳ ನಂತರ ಬಾಬಾ ಸಿದ್ದಿಕ್ ಅವರನ್ನು ಹತ್ಯೆ ಮಾಡುವ ಯೋಜನೆ ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ.

ಏಪ್ರಿಲ್‌ನಲ್ಲಿ ಬಾಂದ್ರಾದಲ್ಲಿರುವ ನಟ ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಮೋಟಾರ್‌ಬೈಕ್‌ನಲ್ಲಿ ಬಂದ ಇಬ್ಬರು ಅನೇಕ ಸುತ್ತು ಗುಂಡು ಹಾರಿಸಿದ್ದರು. ನಂತರ ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಸಲ್ಮಾನ್‌ ಆತ್ಮೀಯರನ್ನು ಹತ್ಯೆ ಮಾಡುವ ಗುರಿಯನ್ನು ಬಿಷ್ಣೋಯ್‌ ಗ್ಯಾಂಗ್‌ ಹೊಂದಿತ್ತು. ಸಲ್ಮಾನ್‌ ಖಾನ್‌ ಹಾಗೂ ಬಾಬಾ ಸಿದ್ಧಿಕಿ ಆತ್ಮೀಯ ಸ್ನೇಹಿತರಾದ್ದರಿಂದ ಹಂತಕರು ಸಿದ್ಧಿಕಿ ಕೊಲೆಯ ಯೋಜನೆಯನ್ನು ಹಾಕಿದ್ದರು ಎಂಬ ವಿಷಯವನ್ನು ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ಕಲೆ ಹಾಕಿದ್ದಾರೆ.

ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರು ಕೊಲೆಯ ಸಂಚು ರೂಪಿಸಲು  ಅಕ್ರಮ ದೂರವಾಣಿ ವಿನಿಮಯ ವ್ಯವಸ್ಥೆಯಾದ ಡಬ್ಬಾ ಕರೆ (Dabba Calling)ಯನ್ನು ಉಪಯೋಗಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹಂತಕರಾದ ಶಿವ ಕುಮಾರ್ ಗೌತಮ್, ಜೀಶನ್ ಅಖ್ತರ್, ಶುಭಂ ಲೋಂಕರ್ ಮತ್ತು ಸುಜಿತ್ ಸಿಂಗ್ ಸೇರಿದಂತೆ ಪ್ರಮುಖ ಕಾರ್ಯಕರ್ತರಿಗೆ ಸೂಚನೆ ನೀಡಲು ಈ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಿದ್ದ ಎಂದು ತಿಳಿದು ಬಂದಿದೆ.

ಬಾಬಾ ಸಿದ್ದಿಕ್ ಅವರನ್ನು ಅಕ್ಟೋಬರ್ 12ರಂದು ಅವರ ಮಗ ಮತ್ತು ಶಾಸಕ ಜೀಶನ್ ಸಿದ್ದಿಕ್ ಅವರ ಬಾಂದ್ರಾ ಕಚೇರಿ ಬಳಿ ಗುಂಡಿಕ್ಕಿ ಕೊಲ್ಲಲಾಯಿತು. ಪೊಲೀಸ್‌ ತನಿಖೆ ಪ್ರಕಾರ, ಪ್ರಮುಖ ಶೂಟರ್‌ ಶಿವಕುಮಾರ್ ಗೌತಮ್, ದಾಳಿಯ ನಂತರ 20 ನಿಮಿಷಗಳ ಕಾಲ ಸ್ಥಳದಲ್ಲಿಯೇ ಇದ್ದ ಎಂದು ತಿಳಿದು ಬಂದಿದೆ. ನಂತರ ಸಿದ್ದಿಕಿಯವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಂಕಿತ ಶೂಟರ್‌ ಆಸ್ಪತ್ರೆಗೂ ತೆರಳಿದ್ದ ಎನ್ನಲಾಗಿದೆ. ನಂತರ ಸಾಕ್ಷಿ ನಾಶ ಮಾಡಲು ಮಾರ್ಗ ಮಧ್ಯದಲ್ಲಿ ತನ್ನ ಮೊಬೈಲ್‌ ನಾಶ ಮಾಡಿ ಕುರ್ಲಾ ರೈಲು ನಿಲ್ದಾಣಕ್ಕೆ ತೆರಳಿದ್ದ.

ಇದನ್ನೂ ಓದಿ: Bishnoi Gang: ಸಲ್ಮಾನ್‌ನಿಂದ ದೂರ ಇರಿ…ನಿಮ್ಮ ಮೇಲೂ ನಮ್ಮ ನಿಗಾ ಇದೆ; ಸಂಸದ ಪಪ್ಪು ಯಾದವ್‌ಗೂ ಬಿಷ್ಣೋಯ್‌ ಗ್ಯಾಂಗ್‌ ಬೆದರಿಕೆ

ಮತ್ತೊಬ್ಬ ಶಂಕಿತ ಆರೋಪಿ ಶುಭಂ ಲೋಂಕರ್ ಜುಲೈನಲ್ಲಿ ಛತ್ತೀಸ್‌ಗಢದ ಬಿಲಾಸ್‌ಪುರ ಬಳಿಯ ದಟ್ಟ ಅರಣ್ಯದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ಎಂಬುದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ. ಎಕೆ-47 ಸೇರಿದಂತೆ ಎಲ್ಲ ಬಗೆಯ ಶಸ್ತ್ರಾಸ್ತ್ರಗಳ ತರಬೇತಿಯನ್ನು ಮಾವೋವಾದಿಗಳಿಂದ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.