Monday, 18th November 2024

Largest Airport: ಇದು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ; ಎಲ್ಲಿದೆ? ಏನಿದರ ವಿಶೇಷತೆ?

Largest Airport

ಸೌದಿ ಅರೇಬಿಯಾ: ವಿಶ್ವದಲ್ಲಿ ಅತಿ ದೊಡ್ಡದಾದ (Largest Airport) ವಿಮಾನ ನಿಲ್ದಾಣ ಯಾವುದು, ಅದು ಎಲ್ಲಿದೆ ಎಂಬ ಕುತೂಹಲ ಹಲವರಿಗಿದೆ. ಅದಕ್ಕೆ ಉತ್ತರ ಇಲ್ಲಿದೆ. ಸೌದಿ ಅರೇಬಿಯಾದ ಕಿಂಗ್ ಫಹಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಾದ್ಯಂತ ಅತಿ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎನಿಸಿಕೊಂಡಿದೆ. ಈ ವಿಮಾನ ನಿಲ್ದಾಣವು ಸೌದಿ ಅರೇಬಿಯಾದ ದಮ್ಮಾಮ್‍ನಲ್ಲಿದ್ದು, ಸುಮಾರು 780 ಚದರ ಕಿಲೋ ಮೀಟರ್ ವಿಸ್ತೀರ್ಣವನ್ನು ಹೊಂದಿದೆ.

ಕಿಂಗ್ ಫಹಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೊರೆ ಫಹಾದ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದಿ ಅವರ ಹೆಸರನ್ನು ಇಡಲಾಗಿದೆ. ಈ ವಿಮಾನ ನಿಲ್ದಾಣವನ್ನು ವಿಶ್ವದ ಅತ್ಯಂತ ಐಷಾರಾಮಿ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಆರಾಮದಾಯಕವಾದ ಪ್ರಯಾಣದ ಅನುಭವವನ್ನು ನೀಡಲು ವಿವಿಧ ಉನ್ನತ ದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಕಿಂಗ್ ಫಹಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ ಇದು ಮುಂಬೈ ನಗರಕ್ಕಿಂತ (603.4 ಚದರ ಕಿಲೋಮೀಟರ್) ದೊಡ್ಡದಾಗಿದೆ.

Largest Airport

ಕೆಲವು ಸುದ್ದಿ ವರದಿಗಳ ಪ್ರಕಾರ, ಪ್ರತಿವರ್ಷ ಸುಮಾರು 2 ಕೋಟಿ ಜನರು ಈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ (2.6 ಕೋಟಿ), ಈ ವಿಮಾನ ನಿಲ್ದಾಣವು ವಿಶ್ವದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ ಎನಿಸಿಕೊಂಡಿದೆ.

ಕಿಂಗ್ ಫಹಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿವರ್ಷ 1 ಲಕ್ಷ 25 ಸಾವಿರ ಟನ್ ಸರಕುಗಳನ್ನು ನಿರ್ವಹಿಸುತ್ತದೆ. ಈ ವಿಮಾನ ನಿಲ್ದಾಣದ ಆವರಣದಲ್ಲಿ ಒಂದು ಮಸೀದಿಯೂ ಇದೆ, ಇದು ಸುಮಾರು 2 ಸಾವಿರ ಜನರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಈ ವಿಮಾನ ನಿಲ್ದಾಣವು ಏರ್‌ಬಸ್‌ ಎ 340-600 ಮತ್ತು ಬೋಯಿಂಗ್ 747-400 (ದೀರ್ಘ-ಶ್ರೇಣಿಯ, ಹೆಚ್ಚಿನ ಸಾಮರ್ಥ್ಯದ ವೈಡ್-ಬಾಡಿ ವಿಮಾನ) ಎಂಬ ಎರಡು ಬೃಹತ್ ವಿಮಾನಗಳಿಗೆ ಸುಲಭವಾಗಿ ಸ್ಥಳಾವಕಾಶ ಕಲ್ಪಿಸುತ್ತದೆ. ಈ ವಿಮಾನ ನಿಲ್ದಾಣವು ತಲಾ 4,000 ಮೀ (13,123 ಅಡಿ) ಉದ್ದದ ಎರಡು ಸಮಾನಾಂತರ ರನ್ ವೇಗಳನ್ನು ಹೊಂದಿದೆ.

ಇದನ್ನೂ ಓದಿ: ಬೈಕ್‍ ಮೇಲೆ ಒಂದೇ ಕುಟುಂಬದ 8 ಮಂದಿಯ ಜಾಲಿರೈಡ್‌! ಟ್ರಾಫಿಕ್ ಪೊಲೀಸ್ ಕೈಗೆ

ಕಿಂಗ್ ಫಹಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಸೌದಿ ಅರೇಬಿಯಾದ ಪ್ರಗತಿಗೆ ಸಾಕ್ಷಿ ಎನಿಸಿಕೊಂಡಿದೆ.