ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ (ನವೆಂಬರ್ 16) ನಡೆದಿದ್ದ ನಾಲ್ಕನೇ ಹಾಗೂ ಅಂತಿಮ ಟಿ20ಐ (IND vs SA) ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (109* ರನ್) ಹಾಗೂ ತಿಲಕ್ ವರ್ಮಾ (120* ರನ್) ಶತಕಗಳ ಬಲದಿಂದ ಟೀಮ್ ಇಂಡಿಯಾ 283 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಈ ಕಠಿಣ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳನ್ನು ಬೇಟೆಯಾಡಿದ ಯುವ ವೇಗಿ ಅರ್ಷದೀಪ್ ಸಿಂಗ್ ಪ್ರಮುಖ ಮೂರು ವಿಕೆಟ್ ಪಡೆದು ತಂಡಕ್ಕೆ 135 ರನ್‌ಗಳ ಗೆಲುವಿಗೆ ನೆರವು ನೀಡಿದರು.
ಪಂದ್ಯದ ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಅರ್ಷದೀಪ್ ಸಿಂಗ್, ತಮ್ಮ ಎರಡನೇ ಓವರ್‌ನಲ್ಲಿ ನಾಯಕ ಏಡೆನ್ ಮಾರ್ಕ್ರಮ್ ಹಾಗೂ ನಂತರ ಹೆನ್ರಿಚ್ ಕ್ಲಾಸೆನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ 10 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೀಡು ಮಾಡಿದ್ದರು. ಪಂದ್ಯದ ಬಳಿಕ ಈ ಮೂರು ವಿಕೆಟ್‌ಗಳ ಪೈಕಿ ನೆಚ್ಚಿನ ವಿಕೆಟ್ ಯಾವುದೆಂದು ಯುವ ವೇಗಿ ಅರ್ಷದೀಪ್ ಸಿಂಗ್ ಬಹಿರಂಗಪಡಿಸಿದ್ದಾರೆ.
IND vs SA Match Highlights: ಸಂಜು-ತಿಲಕ್ ಶತಕಗಳ ಅಬ್ಬರ, ಟಿ20ಐ ಸರಣಿ ಗೆದ್ದ ಭಾರತ!
ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೂರು ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ ಮೂರು ವಿಕೆಟ್ ಪಡೆದಿದ್ದ ಅರ್ಷದೀಪ್ ಸಿಂಗ್, ಈ ಸರಣಿಯಲ್ಲಿ ಒಟ್ಟು 8 ವಿಕೆಟ್ ಪಡೆದು ಟೀಮ್ ಇಂಡಿಯಾ 3-1 ಅಂತರದಲ್ಲಿ ಟಿ20ಐ ಸರಣಿ ಗೆಲುವಿನಲ್ಲಿ ಮಹತ್ತ ಪಾತ್ರವಹಿಸಿದರು.
ಹೆಂಡ್ರಿಕ್ಸ್ ,ಕ್ಲಾಸೆನ್ ವಿಕೆಟ್ ನನಗೆ ಅತ್ಯುತ್ತಮ: ಅರ್ಷದೀಪ್ ಸಿಂಗ್
“ಇಂದು ತಾನು ಪಡೆದ ಮೂರು ವಿಕೆಟ್‌ಗಳ ಪೈಕಿ ರೀಜಾ ಹೆಂಡ್ರಿಕ್ಸ್ ಹಾಗೂ ಹೆನ್ರಿಚ್ ಕ್ಲಾಸೆನ್ ಅವರ ವಿಕೆಟ್‌ಗಳು ಅತ್ಯುತ್ತಮವಾಗಿದ್ದವು. ಬಲಗೈ ಆಟಗಾರರಿಗೆ ಬೌಲ್ ಮಾಡುವುದು ತುಂಬಾ ಸವಾಲಾಗಿರುತ್ತದೆ. ಆದರೆ ಒಬ್ಬ ಆಟಗಾರ ಬೌಲ್ಡ್ ಹಾಗೂ ಮತ್ತೊಬ್ಬರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದ ಸಂತಸವಿದೆ. ಆದ್ದರಿಂದ ಈ ಎರಡೂ ವಿಕೆಟ್‌ಗಳು ಉತ್ತಮವಾಗಿವೆ. ಔಟ್ ಸ್ವಿಂಗರ್ ಮೂಲಕ ರೀಜಾ ಹೆಂಡ್ರಿಕ್ಸ್ ವಿಕೆಟ್ ಪಡೆದರೆ, ಕ್ಲಾಸೆನ್ ಅವರಿಗೆ ಚೆಂಡನ್ನು ಇನ್ ಸ್ವಿಂಗ್ ಮೂಲಕ ವಿಕೆಟ್ ಪಡೆದಿದ್ದೇನೆ. ಆದ್ದರಿಂದ ಕ್ಲಾಸೆನ್ ವಿಕೆಟ್ ಕೂಡ ಉತ್ತಮವಾಗಿದೆ,” ಎಂದು ಅರ್ಷದೀಪ್ ಸಿಂಗ್ ಹೇಳಿದ್ದಾರೆ.
Suryakumar Yadav: ನೆಟ್ಟಿಗರ ಮನಗೆದ್ದ ಸೂರ್ಯಕುಮಾರ್; ವಿಡಿಯೊ ವೈರಲ್
ತಂಡದ ಗೆಲುವು ಮುಖ್ಯ
“ಪಂದ್ಯದಲ್ಲಿ ವಿಕೆಟ್ ಪಡೆದಾಗ ನಮ್ಮಲ್ಲಿ ಉತ್ತಮ ಭಾವನೆ ಮೂಡುತ್ತದೆ. ಯಾವಾಗ ನಿಮ್ಮ ರಣತಂತ್ರಗಳು ಯಶಸ್ವಿಯಾಗುತ್ತದೆ, ಆಗ ನಿಮಗೆ ಸಾಮಾನ್ಯವಾಗಿ ಸಂತಸವಾಗುತ್ತದೆ. ನಾನು ಅಂಕಿ- ಅಂಶಗಳ ಕುರಿತು ಹೆಚ್ಚು ಯೋಚಿಸುವುದಿಲ್ಲ. ತಂಡಕ್ಕೆ ಉತ್ತಮ ಫಲಿತಾಂಶ ತಂದುಕೊಡುವುದೇ ನನ್ನ ಪರಮ ಗುರಿ. ನನ್ನ ಬೌಲಿಂಗ್ ಅಂಕಿ- ಅಂಶಗಳು ಉತ್ತಮವಾಗಿದೆಯೋ, ಇಲ್ಲವೋ ಅದು ನನಗೆ ಮುಖ್ಯವಾಗುವುದಿಲ್ಲ. ಆದರೆ ತಂಡ ಬಯಸಿದಾಗಲೆಲ್ಲಾ ನಾನು ಬೌಲ್ ಮಾಡಿ ತಂಡಕ್ಕೆ ಗೆಲುವು ತಂದುಕೊಡಲು ಬಯಸುತ್ತೇನೆ,” ಎಂದು ಅರ್ಷದೀಪ್ ಸಿಂಗ್ ತಿಳಿಸಿದ್ದಾರೆ.
ಎರಡನೇ ಗರಿಷ್ಠ ವಿಕೆಟ್ ಟೇಕರ್
ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ 8 ವಿಕೆಟ್ ಪಡೆದ ಅರ್ಷದೀಪ್ ಸಿಂಗ್, ಚುಟುಕು ಸ್ವರೂಪದಲ್ಲಿ ಒಟ್ಟಾರೆ 95 ವಿಕೆಟ್ ಪಡೆಯುವ ಮೂಲಕ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (96 ವಿಕೆಟ್) ನಂತರ ಎರಡನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 2024ರ ವರ್ಷದಲ್ಲಿ 26 ಟಿ20ಐ ಪಂದ್ಯಗಳಲ್ಲಿ 24 ರಲ್ಲಿ ಗೆಲುವು ಸಾಧಿಸಿದೆ.