ಮುಂಬೈ: ಅಂತಾರಾಷ್ಟ್ರೀಯ ಗಾಯಕ ಎಕಾನ್ (Akon) ಹಾಗೂ ಬಾಲಿವುಡ್ಗೆ (Bollywood) ಅವಿನಾಭಾವ ಸಂಬಂಧವಿದೆ. ‘ರಾ.ಒನ್’ (Ra.One) ಚಿತ್ರದಲ್ಲಿ ‘ಚಮ್ಮಕ್ ಚಲ್ಲೋ’ ಎಂದು ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಮತ್ತು ಕರೀನಾ ಕಪೂರ್ ಅವರನ್ನು ಕುಣಿಸಿದ್ದ ಅವರು ಇದೀಗ ಮತ್ತೆ ಬಾಲಿವುಡ್ಗೆ ಬರುವ ಸೂಚನೆಯನ್ನು ನೀಡಿದ್ದಾರೆ. ʼಚಮ್ಮಕ್ ಚಲ್ಲೋ 2.0ʼ ಹಾಡಿನ ಮೂಲಕ ಎಕಾನ್ ಮತ್ತೆ ಬಾಲಿವುಡ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೇಘಾಲಯದ ಶಿಲ್ಲಾಂಗ್ನಲ್ಲಿ ನಡೆಯುತ್ತಿರುವ ಚೆರ್ರಿ ಬ್ಲಾಸಮ್ ಮ್ಯೂಸಿಕ್ ಫೆಸ್ಟಿವಲ್ ಭಾಗವಹಿಸಲಿರುವ ಅವರು ಕಾರ್ಯಕ್ರಮಕ್ಕೂ ಮೊದಲು ಅಮೆರಿಕನ್ ಗಾಯಕರನ್ನು ಭೇಟಿಯಾದರು. ಈ ಸಮಯದಲ್ಲಿ ಬಾಲಿವುಡ್ ಜತೆಗಿನ ನಂಟನ್ನು ನೆನಪಿಸಿಕೊಂಡಿದ್ದಾರೆ. ʼʼಕೆಲವು ವರ್ಷಗಳಿಂದ ನಾನು ಸಂಗೀತದ ಅಧ್ಯಯನದಲ್ಲಿರುವ ಕಾರಣ ಬೇರೆ ಯಾವುದರ ಕಡೆಯೂ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಾನು ಭಾರತೀಯ ಸಂಗೀತವನ್ನು ಬಹಳ ಹತ್ತಿರದಿಂದ ಗಮನಿಸುತ್ತೇನೆʼʼ ಎಂದು ಹೇಳಿದ್ದಾರೆ.
ʼʼ2025ರಲ್ಲಿ ಬಾಲಿವುಡ್ನಲ್ಲಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಈಗಾಗಲೇ ಕೆಲ ಸ್ನೇಹಿತರ ಜತೆ ಬಾಲಿವುಡ್ನ ಸಂಪರ್ಕದಲ್ಲಿದ್ದೇನೆ. ಆದಷ್ಟು ಬೇಗ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆʼʼ ಎಂದು ಹೇಳಿದ್ದಾರೆ. ʼʼಬಾಲಿವುಡ್ ಯಾವಾಗಲೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ʼಚಮ್ಮಕ್ ಚಲ್ಲೋ 2.0ʼನಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದರೆ, ನಾನು ಅದನ್ನು ಸ್ವೀಕರಿಸುತ್ತೇನೆʼʼ ಎಂದು ತಿಳಿಸಿದ್ದಾರೆ.
ʼʼಬಾಲಿವುಡ್ ಸಂಗೀತ ರಂಗದ ಜತೆಗೆ, ಭಾರತದಲ್ಲಿ ಸ್ವತಂತ್ರ ಸಂಗೀತವು ಪ್ರಚಲಿತವಾಗುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ಭಾರತ ನನ್ನ ಎರಡನೇ ಮನೆ. ನಾನು ಪ್ರತಿ ವರ್ಷ ದೇಶಕ್ಕೆ ಭೇಟಿ ನೀಡಲು ಪ್ರಯತ್ನಿಸುತ್ತೇನೆ. ಕಳೆದ ವರ್ಷ ಪುಣೆಯಲ್ಲಿ ಪ್ರದರ್ಶನ ನೀಡಿದ್ದೆ. ನಾನು ಭಾರತದ ಚೈತನ್ಯ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪ್ರೀತಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Oscars 2025: ಆಸ್ಕರ್ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಬಾಲಿವುಡ್ನ ʼಲಾಪತಾ ಲೇಡೀಸ್ʼ
ಶಾರುಖ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ 2011ರಲ್ಲಿ ಬಿಡುಗಡೆಯಾದ ʼರಾ. ಒನ್ʼ ಸಿನಿಮಾದ ಚಮಕ್ ಚಲ್ಲೋ ಹಾಡು ಇಂದಿಗೂ ಹಿಟ್ ಲಿಸ್ಟ್ನಲ್ಲಿದೆ. ಇತ್ತೀಚೆಗೆ ಗುಜರಾತಿನ ಜಾಮ್ ನಗರದಲ್ಲಿ ನಡೆದಿದ್ದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿಯೂ ಎಕಾನ್ ಪಾಲ್ಗೊಂಡಿದ್ದರು. ʼಚಮ್ಮಕ್ ಚಲ್ಲೋʼ ಹಾಡು ಪ್ಲೇ ಆಗುತ್ತಿದ್ದಂತೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜತೆ ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಹೆಜ್ಜೆ ಹಾಕಿದ್ದರು. ಈ ವಿಡಿಯೊವನ್ನು ಎಕಾನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು.