Saturday, 16th November 2024

C Shikha: ಐಎಎಸ್ ಅಧಿಕಾರಿ ಸಿ. ಶಿಖಾ ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆ; ಕೇಂದ್ರ ಆಹಾರ ಇಲಾಖೆಗೆ ವರ್ಗಾವಣೆ

ಬೆಂಗಳೂರು: ಹಲವು ವರ್ಷಗಳಿಂದ ರಾಜ್ಯ ಸೇವೆಯಲ್ಲಿದ್ದ ಐಎಎಸ್‌‍ ಅಧಿಕಾರಿ ಸಿ. ಶಿಖಾ (C Shikha) ಅವರು ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿದ್ದಾರೆ. ಹೀಗಾಗಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಸಿ. ಶಿಖಾ ಅವರು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಜಂಟಿ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದು, ಶೀಘ್ರವೇ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. 2004ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಸಿ. ಶಿಖಾ ಅವರು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಸಿ. ಶಿಖಾ ಅವರನ್ನು ಅವರನ್ನು ರಾಜ್ಯದ ಸೇವೆಯಿಂದ ಬಿಡುಗಡೆಗೊಳಿಸಿದೆ. ಇನ್ನು ಸಿ. ಶಿಖಾ ಅವರು ಕೇಂದ್ರ ಸೇವೆಗೆ ತೆರಳುವ ಕಾರಣ ಅವರಿಂದ ತೆರವಾಗಿರುವ ಹುದ್ದೆಗೆ ಚಂದ್ರಶೇಖರ ನಾಯಕ ಎಲ್. ಅವರನ್ನು ಪ್ರಭಾರರನ್ನಾಗಿ ನೇಮಿಸಲಾಗಿದೆ.

2004ರಲ್ಲಿ ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿಯಾಗಿರುವ ಶಿಖಾ ಅವರು ಮೈಸೂರು ಜಿಲ್ಲಾಧಿಕಾರಿ, ಬೆಸ್ಕಾಂ, ಸೆಸ್ಕಾಂ ಎಂಡಿ, ಪಿಯು ಬೋರ್ಡ್ ನಿರ್ದೇಶಕಿ, ಬಿಎಂಟಿಸಿ ಎಂಡಿ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಜಂಟಿ ಕಾರ್ಯದರ್ಶಿಯಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಸಿ. ಶಿಖಾ ಅವರಿಗೆ ಕಳೆದ ವಾರ ಕಚೇರಿಯಲ್ಲಿ ಬೀಳ್ಕೊಡುಗೆ ನೀಡಲಾಗಿತ್ತು. ಕೇಂದ್ರ ಸೇವೆಯಲ್ಲಿಯೂ ಅವರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಲಿ ಎಂದು ಅಧಿಕಾರಿಗಳು, ಸಿಬ್ಬಂದಿ ಶುಭ ಹಾರೈಸಿದ್ದರು. ಈಗ ರಾಜ್ಯ ಸರ್ಕಾರದ ಸೇವೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.

ಶಿ. ಶಿಖಾ ಅವರು 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ ಕಾರಣಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದ್ದರು. ವಾಣಿಜ್ಯ ತೆರಿಗೆ ಆಯುಕ್ತರಾಗಿ ಇಲಾಖೆಯ ಮೂಲಕ ಮತದಾರರಲ್ಲಿ ಉಚಿತ ಉಡುಗೊರೆಗಳ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ, ವಾಣಿಜ್ಯ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತಿ ಪಾಲನೆ ಸೇರಿ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಆಯೋಗ ಅವರಿಗೆ ಪ್ರಶಸ್ತಿಯನ್ನು ನೀಡಿತ್ತು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಸಿ. ಶಿಖಾ ಅವರು ಹೊರ ವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಪ್ರತ್ಯೇಕ ಪಥ ನಿರ್ಮಾಣ ಮಾಡುವ ಮೂಲಕ ಬಸ್‌ಗಳ ಸಂಚಾರಕ್ಕೆ ಸುಗಲ ವ್ಯವಸ್ಥೆಯನ್ನು ಮಾಡಿದ್ದರು. ಇನ್ನು ಸುಮಾರು ಮೂರುವರೆ ವರ್ಷಗಳ ಕಾಲ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಅವರು, ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಅವರು ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಮಾಡಿದ್ದರು.

ಈ ಸುದ್ದಿಯನ್ನೂ ಓದಿ | Viral News: ಬದುಕುವ ಛಲಕ್ಕೆ ಕಂದನ ಭವಿಷ್ಯದ ಬಲ; ಪುಟ್ಟ ಮಗುವಿನೊಂದಿಗೆ ತಾಯಿಯ ಫುಡ್ ಡೆಲಿವರಿ ವಿಡಿಯೊ ವೈರಲ್

ಮೈಸೂರಿನಲ್ಲಿ ಕಾರ್ಯ ನಿರ್ವಹಣೆ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ಮುಡಾ ಮಾಜಿ ಅಧ್ಯಕ್ಷ ಕೆ. ಮರೀಗೌಡ ತಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಸಹ ನೀಡಿದ್ದರು.