ಮುಂಬಯಿ: ನಾಯಕ ರೋಹಿತ್ ಶರ್ಮ(Rohit Sharma) ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ರೋಹಿತ್ ಪತ್ನಿ ರಿತಿಕಾ ಶುಕ್ರವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ರೋಹಿತ್ ನವೆಂಬರ್ 22ರಿಂದ ಆಸ್ಟ್ರೇಲಿಯಾ(IND vs AUS) ವಿರುದ್ಧ ಆರಂಭವಾಗಲಿರುವ ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಅಗ್ರ ಕ್ರಮಾಂಕದ ಅನುಭವಿ ಬ್ಯಾಟರ್ಗಳಾದ ಶುಭಮನ್ ಗಿಲ್ ಮತ್ತು ಕೆ.ಎಲ್ ರಾಹುಲ್ ಅಭ್ಯಾಸ ವೇಳೆ ಗಾಯಗೊಂಡು ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಉಭಯ ಆಟಗಾರರು ಅಲಭ್ಯರಾದರೆ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದೇ ಕಾರಣಕ್ಕೆ ರೋಹಿತ್ ಮೊದಲ ಪಂದ್ಯದಲ್ಲಿ ಆಡಲು ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2ನೇ ಮಗುವಿನ ನಿರೀಕ್ಷೆಯ ಕಾರಣದಿಂದಲೇ ರೋಹಿತ್ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳಿರಲಿಲ್ಲ. ಆದರೂ ಕೂಡ ರೋಹಿತ್ ಮುಂಬೈನಲ್ಲೇ ಅಭ್ಯಾಸ ನಡೆಸುತ್ತಿದ್ದರು. ಇದೀಗ ಅವರ ಪತ್ನಿ ಮಗುವಿಗೆ ಜನ್ಮ ನೀಡಿರುವ ಕಾರಣ ರೋಹಿತ್ ಆಸೀಸ್ಗೆ ಇನ್ನೆರಡು ದಿನದಲ್ಲಿ ವಿಮಾನ ಏರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IND vs AUS: ರೋಹಿತ್ ಅಲಭ್ಯರಾದರೆ ಬುಮ್ರಾ ನಾಯಕ; ಕೋಚ್ ಗಂಭೀರ್
ಶನಿವಾರದಂದು ಭಾರತ ಎ ಎದುರಿನ ಅಭ್ಯಾಸ ಪಂದ್ಯದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ಹಿಡಿಯುವಾಗ ಚೆಂಡು ಹೆಬ್ಬೆರಳಿಗೆ ಬಡಿದು ಗಾಯ ಮಾಡಿಕೊಂಡರು. ಸದ್ಯ ಗಿಲ್ರನ್ನು ತಂಡದ ವೈದ್ಯಕೀಯ ವಿಭಾಗ ಸ್ಕ್ಯಾನಿಂಗ್ಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ. ಗಾಯದ ಸ್ವರೂಪದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ರಾಹುಲ್ ಶುಕ್ರವಾರ ಬ್ಯಾಟಿಂಗ್ ವೇಳೆ ಮೊಣಕೈಗೆ ಗಾಯ ಮಾಡಿಕೊಂಡು ಮೈದಾನ ತೊರೆದಿದ್ದರು. ಶನಿವಾರ ಕೂಡ ಮೈದಾನಕ್ಕೆ ಇಳಿದಿಲ್ಲ. ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಖಚಿತ ಎನ್ನಲಡ್ಡಿಯಿಲ್ಲ.
ಗಿಲ್ ಮತ್ತು ರಾಹುಲ್ ಅಲಭ್ಯರಾದರೆ ಇವರ ಸ್ಥಾನದಲ್ಲಿ ಅಭಿಮನ್ಯು ಈಶ್ವರನ್ ಮತ್ತು ಸರ್ಫರಾಜ್ ಖಾನ್ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು. ಒಂದೊಮ್ಮೆ ಉಭಯ ಆಟಗಾರರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದರೆ, ಸರಣಿಯಿಂದಲೇ ಹೊರಬಿದ್ದರೆ, ಆಗ ಸದ್ಯ ಆಸೀಸ್ನಲ್ಲಿಯೇ ಇವರು ಭಾರತ ಎ ತಂಡದ ಪರ ಆಡಿದ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ಪ್ರಧಾನ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಗಾಯಕ್ವಾಡ್ ಭಾರತ ತಂಡದ ವಿರುದ್ಧ ಸಾಗುತ್ತಿರುವ ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದಾರೆ.