ಬೆಂಗಳೂರು: ಕರ್ನಾಟಕ ಮೂಲದ, ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್ (Hombale Films) ಸದ್ಯ ಭಾರತದಲ್ಲಿ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕನ್ನಡ ಜತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಿರ್ಮಾಣ ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ಯಶ್-ಪ್ರಶಾಂತ್ ನೀಲ್ ಕಾಂಬಿನೇಷನ್ ಕೆ.ಜಿ.ಎಫ್. ಸರಣಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರದಂತಹ ಸೂಪರ್ ಹಿಟ್ ಚಿತ್ರಗಳನ್ನುನೀಡಿದೆ. ಜತೆಗೆ ತೆಲುಗಿನಲ್ಲಿ ಪ್ರಭಾಸ್ ಅಭಿನಯದ ʼಸಲಾರ್ʼ ಸಿನಿಮಾವನ್ನೂ ಅದ್ಧೂರಿಯಾಗಿ ಕಟ್ಟಿಕೊಟ್ಟಿದೆ. ಮಲಯಾಳಂನಲ್ಲಿ ಪಹದ್ ಫಾಸಿಲ್-ಅಪರ್ಣಾ ನಟನೆಯ ʼಧೂಮಂʼ ಸಿನಿಮಾ ನಿರ್ಮಿಸಿದೆ. ಕೀರ್ತಿ ಸುರೇಶ್ ನಟನೆಯ ʼರಘು ತಾತಾʼ ಸಿನಿಮಾದ ಮೂಲಕ ಕಾಲಿವುಡ್ಗೂ ಕಾಲಿಟ್ಟಿದೆ. ಇತ್ತೀಚೆಗೆ ಪ್ರಭಾಸ್ ಅಭಿನಯದ 3 ಚಿತ್ರಗಳನ್ನು ಘೋಷಣೆ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಬಹುಭಾಷಾ ಚಿತ್ರಕ್ಕೆ ನಾಂದಿ ಹಾಡಿದೆ.
ಹೊಸ ಪ್ರಯೋಗ
ಆ್ಯಕ್ಷನ್, ರೊಮ್ಯಾಂಟಿಕ್, ಸಸ್ಪೆನ್ಸ್, ರೆಟ್ರೋ, ಸೂಪರ್ ಹೋರೊ ಮುಂತಾದ ಶೈಲಿಯ ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಅದರ ಗ್ಲಿಂಪ್ಸ್ ಹಂಚಿಕೊಂಡಿದೆ. ಹೌದು, ಇದೇ ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಆ್ಯನಿಮೇಷನ್ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದೆ. ಈ ಸಿನಿಮಾವನ್ನು ಕ್ಲೀಮ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿದೆ. ಇದು ಪೌರಾಣಿಕ ಕತೆಯನ್ನು ಒಳಗೊಂಡಿದ್ದು, ಅಶ್ವಿನ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
When Faith is Challenged, He Appears.
— Hombale Films (@hombalefilms) November 16, 2024
In a World torn apart by Darkness and Chaos… Witness the Appearance of the Legend, The Half-Man, Half-Lion Avatar-Lord Vishnu's Most Powerful Incarnation.
▶️ https://t.co/J7jKssVcS7
Experience the Epic Battle between Good and Evil in 3D.… pic.twitter.com/TMfqWkK1jn
ವೈರಲಾಯ್ತು ವಿಡಿಯೊ
ಪುರಾಣದ ನರಸಿಂಹ ಕಥೆಯನ್ನು ಒಳಗೊಂಡ ಈ ಚಿತ್ರಕ್ಕೆ ʼಮಹಾವತಾರ್ ನರಸಿಂಹʼ (Mahavatar Narsimha) ಎಂದು ಹೆಸರಿಡಲಾಗಿದೆ. ಸದ್ಯ ಹೊರ ಬಂದಿರುವ ಮೋಷನ್ ಪೋಸ್ಟರ್ ವಿಡಿಯೊ ಸಂಚಲನ ಸೃಷ್ಟಿಸಿದೆ. ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಶಿಲ್ಪಾ ಧವನ್, ಚೈತನ್ಯ ದೇಸಾಯಿ ಮತ್ತು ಕುಶಾಲ್ ದೇಸಾಯಿ ನಿರ್ಮಿಸುತ್ತಿದ್ದಾರೆ. ʼʼನಂಬಿಕೆಗೆ ಸವಾಲು ಎದುರಾದಾಗ ಅವನು ಬರುತ್ತಾನೆ. ಕತ್ತಲೆ ಮತ್ತು ಅವ್ಯವಸ್ಥೆಯಿಂದ ಛಿದ್ರಗೊಂಡ ಜಗತ್ತಿಗೆ ವಿಷ್ಣುವಿನ ಅರ್ಧ ಮನುಷ್ಯ, ಅರ್ಧ ಸಿಂಹ ಅವತಾರವಾದ ನರಸಿಂಹ ಆಗಮಿಸುತ್ತಾನೆ. ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಮಹಾಕಾವ್ಯದ ಯುದ್ಧವನ್ನು 3ಡಿಯಲ್ಲಿ ನೋಡಿ. ಶೀಘ್ರದಲ್ಲಿಯೇ ಚಿತ್ರಮಂದಿರಗಳಿಗೆ ಬರಲಿದೆʼʼ ಎಂದು ಬರೆದುಕೊಂಡು ಯೂಟ್ಯೂಬ್ ಲಿಂಕ್ ಹಂಚಿಕೊಂಡಿದೆ. ʼಮಹಾವತಾರ್ʼ ಸೀರಿಸ್ನ ಮೊದಲ ಚಿತ್ರ ಇದು ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
2014ರಲ್ಲಿ ತೆರೆಕಂಡ ಪುನೀತ್ ರಾಜ್ ಕುಮಾರ್ ಅಭಿನಯದ ʼನಿನ್ನಂದಲೇʼ ಚಿತ್ರ ನಿರ್ಮಿಸುವ ಮೂಲಕ ಹೊಂಬಾಳೆ ಫಿಲ್ಮ್ಸ್ ಚಿತ್ರೋದ್ಯಮಕ್ಕೆ ಅಡಿ ಇರಿಸಿತು. ಇತ್ತೀಚೆಗೆ ತೆರೆಕಂಡ ಶ್ರೀಮುರಳಿ ನಟನೆಯ ʼಬಘೀರʼ ಚಿತ್ರವನ್ನು ನಿರ್ಮಿಸಿರುವ ಹೊಂಬಾಳೆ ಸದ್ಯ ರಿಷಬ್ ಶೆಟ್ಟಿ ನಟನೆಯ ʼಕಾಂತಾರ: ಚಾಪ್ಟರ್ 1ʼ, ರಕ್ಷಿತ್ ಶೆಟ್ಟಿ ಅವರ ʼರಿಚರ್ಡ್ ಆ್ಯಂಟೊನಿ: ಲಾರ್ಡ್ ಆಫ್ ದಿ ಸಿʼ, ʼಸಲಾರ್ ಪಾರ್ಟ್ 2ʼ ಸೇರಿದಂತೆ ಪ್ರಭಾಸ್ ಅಭಿನಯದ 3 ನಿನಿಮಾಗಳನ್ನು ತಯಾರಿಸುತ್ತಿದೆ.
ಇದನ್ನೂ ಓದಿ: Oscars 2025: ಆಸ್ಕರ್ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಬಾಲಿವುಡ್ನ ʼಲಾಪತಾ ಲೇಡೀಸ್ʼ