Saturday, 16th November 2024

GSAT-20 Satellite: ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಇಸ್ರೋ; ಸ್ಪೇಸ್‌ಎಕ್ಸ್‌ ಮೂಲಕ ಉಪಗ್ರಹ ಉಡಾವಣೆ

GSAT-20 Satellite

ನವದೆಹಲಿ: ಭಾರತವು ತನ್ನ ಅತ್ಯಾಧುನಿಕ ಸಂವಹನ ಉಪಗ್ರಹವಾದ GSAT-20 (GSAT-20 Satellite) ಉಡಾವಣೆ ಮಾಡಲು ಸಿದ್ಧವಾಗಿದೆ. ಎಲಾನ್‌ ಮಸ್ಕ್‌ (Elon musk) ಒಡೆತನದ ಸ್ಪೇಸ್‌ಎಕ್ಸ್‌ನ (SpaceX) ಫಾಲ್ಕನ್ 9 ರಾಕೆಟ್‌ (Falcon 9 rocket) ಬಳಸಿ ಉಡಾವಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಅಮೆರಿಕದ ಕೇಪ್ ಕ್ಯಾನವೆರಲ್‌ನಿಂದ ಉಪಗ್ರಹ ಉಡಾವಣೆಯಾಗಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಭಿವೃದ್ಧಿಪಡಿಸಿದ ಈ ಉಪಗ್ರಹವು ಸರಿಸುಮಾರು 4,700 ಕಿಲೋ ಗ್ರಾಂಗಳಷ್ಟು ತೂಗುತ್ತದೆ. ಇದರಿಂದ ಭಾರತೀಯ ರಾಕೆಟ್‌ಗಳಿಗೆ ಸಾಗಿಸಲು ತುಂಬಾ ಭಾರವಾಗಿತ್ತು. ಭಾರತೀಯ ರಾಕೆಟ್‌ಗಳನ್ನು ಬಳಸಿ ಉಡಾವಣೆ ಮಾಡಲು ಸಾಧ್ಯವಾಗದ ಕಾರಣ, ಸ್ಪೇಸ್‌ಎಕ್ಸ್‌ನನ್ನು ಬಳಸಲಾಗುತ್ತಿದೆ.

ಉಡಾವಣೆಯನ್ನು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮೂಲಕ ನಡೆಸಲಾಗುತ್ತಿದೆ. ಉಡಾವಣೆಗಾಗಿ NSIL ಸ್ಪೇಸ್‌ಎಕ್ಸ್‌ಗೆ ಸರಿಸುಮಾರು 500 ಕೋಟಿ ರೂ. ಪಾವತಿಸಿದೆ ಎಂದು ಹೇಳಲಾಗಿದೆ. ಈ ಮೊದಲು ರಷ್ಯಾದ ಏರಿಯನ್‌ಸ್ಪೇಸ್‌ ಅನ್ನು ಭಾರತ ಅವಲಂಬಿಸಿತ್ತು. ಆದರೆ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧದ ಕಾರಣದಿಂದ ಏರಿಯನ್‌ಸ್ಪೇಸ್‌ ಬಳಕೆ ಸಾಧ್ಯವಾಗಿಲ್ಲ. ಚೀನಾ ಕೂಡ ಉಪಗ್ರಹ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಭಾರತಕ್ಕೆ ಅನುಮತಿ ನೀಡುವುದಿಲ್ಲ. ಪ್ರಸ್ತುತ ಯಾವುದೇ ಆಯ್ಕೆ ಇಲ್ಲದೆ ಸ್ಪೇಸ್‌ ಎಕ್ಸ್‌ನ್ನು ಬಳಸಿಕೊಳ್ಳಲಿದೆ.

ʼʼಸ್ಪೇಸ್‌ಎಕ್ಸ್‌ನೊಂದಿಗೆ ಚೊಚ್ಚಲ ಉಡಾವಣೆಯಲ್ಲಿ ನಾವು ಉತ್ತಮ ಒಪ್ಪಂದವನ್ನು ಪಡೆದುಕೊಂಡಿದ್ದೇವೆʼʼ ಎಂದು ಇಸ್ರೋದ ಬೆಂಗಳೂರು ಮೂಲದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಹೇಳಿದ್ದಾರೆ.

ಇದನ್ನೂ ಓದಿ : Donald Trump: ನವೀಕರಿಸಬಹುದಾದ ಇಂಧನ ಯೋಜನೆ ಸ್ಥಗಿತ; ಟ್ರಂಪ್‌ ಘೋಷಣೆ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ

ದೂರದ ಪ್ರದೇಶಗಳಿಗೆ ಇಂಟರ್‌ನೆಟ್‌ ಸಂಪರ್ಕ ಸೇರಿದಂತೆ ಭಾರತದಾದ್ಯಂತ ಈ ಉಪಗ್ರಹ ಪ್ರಮುಖ ಸೇವೆಗಳನ್ನು ಒದಗಿಸುತ್ತದೆ. ಈ ಬಗ್ಗೆ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಡಾ. ಎಂ ಶಂಕರನ್ ಮಾತನಾಡಿ, “ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಉಪಗ್ರಹವು ಭಾರತದೊಳಗಿನ ವಿಮಾನದಲ್ಲಿನ ಇಂಟರ್‌ನೆಟ್‌ ಸಂಪರ್ಕದಲ್ಲಿ ಗಮನಾರ್ಹ ಸುಧಾರಣೆಯನ್ನು ತರಲಿದೆʼʼ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಭಾರತದ ವಾಯುಪ್ರದೇಶವನ್ನು ಪ್ರವೇಶಿಸುವ ಅಂತರರಾಷ್ಟ್ರೀಯ ವಿಮಾನಗಳು ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಬೇಕಾಗಿತ್ತು. ಏಕೆಂದರೆ ಅಂತಹ ಸೇವೆಗಳಿಗೆ ಭಾರತದಲ್ಲಿ ಅನುಮತಿ ಇರಲಿಲ್ಲ.