ಬೆಂಗಳೂರು: ಆಟೋ ಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ಸಂಘರ್ಷಗಳು (bengaluru auto driver passenger argument) ಇತ್ತೀಚೆಗೆ ಹೆಚ್ಚಾಗುತ್ತಿವೆ. ಕೆಲವು ತಿಂಗಳ ಹಿಂದೆಯಷ್ಟೇ ಒಬ್ಬ ಮಹಿಳೆಯೊಂದಿಗೆ ಆಟೋ ಚಾಲಕ ಗಲಾಟೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿತ್ತು. ಇದೀಗ ಮತ್ತೆ ಅಂತಹ ಒಂದು ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಎರಡು ಬೇರೆಬೇರೆ ಆ್ಯಪ್‌ಗಳಲ್ಲಿ ಏಕಕಾಲಕ್ಕೆ ಎರಡು ಆಟೋಗಳನ್ನು ಬುಕ್ ಮಾಡಿದ ಮಹಿಳೆ ಬಳಿಕ ಒಂದನ್ನು ರದ್ದುಗೊಳಿಸಿದ್ದರು. ಆಟೋ ಚಾಲಕ ಆಕೆ ಸಂಚರಿಸುತ್ತಿದ್ದ ಇನ್ನೊಂದು ಆಟೋವನ್ನು ಬೆನ್ನಟ್ಟಿ ಬಂದು ಮಹಿಳೆಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಇದರಿಂದ ಮಹಿಳೆ ಕುಪಿತಗೊಂಡು ಆಟೋ ಚಾಲಕನನ್ನು ಬಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಮಹಿಳೆ ತಾನು ಆಟೋ ಬುಕ್ ಮಾಡಿಲ್ಲ. ಕೇವಲ ದರ ಪರಿಶೀಲನೆ ಮಾಡಿದ್ದೇನೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹದು. ಆದರೆ ಆಟೋ ಚಾಲಕ ಇದನ್ನು ಒಪ್ಪಲು ನಿರಾಕರಿಸಿದ್ದು, ಇದು ತೀವ್ರ ವಾಗ್ವಾದದಕ್ಕೆ ಕಾರಣವಾಗಿದೆ. ವಿಭಿನ್ನ ಅಪ್ಲಿಕೇಶನ್‌ಗಳಲ್ಲಿ ಏಕಕಾಲದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ ಮಹಿಳೆ ಕೊನೆಯ ಕ್ಷಣದಲ್ಲಿ ಒಂದನ್ನು ರದ್ದುಗೊಳಿಸಿದ್ದಳು. ಇದರಿಂದ ಆಟೋ ಚಾಲಕ ಮಹಿಳೆಯನ್ನು ಹಿಂಬಾಲಿಸಿ ಬಂದು ಜಗಳಕ್ಕೆ ಇಳಿದಿದ್ದಾನೆ. ಮಹಿಳೆ ಈ ಆರೋಪವನ್ನು ನಿರಾಕರಿಸಿದ್ದಾರೆ. ಆಟೋ ಚಾಲಕನ ಮೇಲೆ ತೀವ್ರ ಸಿಟ್ಟಾದ ಮಹಿಳೆ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇಡೀ ಘಟನೆಯನ್ನು ಆಟೋ ರಿಕ್ಷಾ ಚಾಲಕ ಕೆಮರಾದಲ್ಲಿ ಸೆರೆ ಹಿಡಿದಿದ್ದು, ಆತ ಎರಡು ವಿಭಿನ್ನ ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಎರಡು ಆಟೋಗಳನ್ನು ಏಕೆ ಬುಕ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ನಾನು ಇಲ್ಲಿ ಬಹಳ ಹೊತ್ತಿನಿಂದ ಕಾಯುತ್ತಿದ್ದೆ. ನೀವು ಈಗ ರದ್ದುಗೊಳಿಸಿ, ಇನ್ನೊಂದು ಆಟೋ ಹತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾನೆ.
ಪ್ರಯಾಣಿಕರು ಚಾಲಕನಿಗೆ ಈ ರೀತಿಯಾಗಿ ಅಸಭ್ಯ ಮತ್ತು ಅವಾಚ್ಯ ಪದಗಳನ್ನು ಕಾನೂನಾತ್ಮಕವಾಗಿ ಬಳಸುವುದು ಎಷ್ಟು ಸರಿ.??@BlrCityPolice @blrcitytraffic @ITBTGoK @PMOIndia @tdkarnataka @tv9kannada @CMofKarnataka @DCPNEBCP @DgpKarnataka @prajavani @DgpKarnataka @News18Kannada @NewsFirstKan @PoliceBangalore pic.twitter.com/0WqtdpRYEy
— pavan kumar (@pavanku51441725) November 14, 2024
ಇದಕ್ಕೆ ಪ್ರತಿಯಾಗಿ ಮಹಿಳೆ ಆತನ ಆಟೋವನ್ನು ಬುಕ್ ಮಾಡಿರುವುದನ್ನು ನಿರಾಕರಿಸಿದ್ದಾಳೆ. ವಿವಿಧ ಆ್ಯಪ್‌ಗಳಲ್ಲಿನ ಬೆಲೆಗಳನ್ನು ಹೋಲಿಸಿದ ಅನಂತರ ತಾನು ಕೇವಲ ಒಂದು ಆಟೋವನ್ನು ಮಾತ್ರ ಬುಕ್ ಮಾಡಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಆದರೆ ಓಲಾ ಮೂಲಕ ತನ್ನ ಆಟೋವನ್ನು ಬುಕ್ ಮಾಡಿ ಬಳಿಕ ಅದನ್ನು ರದ್ದುಗೊಳಿಸಿದ್ದಳು ಎಂದು ಚಾಲಕ ಹೇಳಿಕೊಂಡಿದ್ದಾನೆ.
ಈ ಘಟನೆಯ ಕುರಿತು ಮಾಹಿತಿ ಪಡೆದಿರುವ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆ ಮತ್ತು ಘಟನೆಯ ಸ್ಥಳವನ್ನು ನಮೂದಿಸಿ ಎಂದು ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ಕಂಪನಿಯು ತನ್ನ ಅಪ್ಲಿಕೇಶನ್‌ನಲ್ಲಿ ರದ್ದುಗೊಳಿಸುವ ವೈಶಿಷ್ಟ್ಯವನ್ನು ನೀಡಿದಾಗ, ಅದನ್ನು ಬಳಸುವುದಕ್ಕಾಗಿ ಗ್ರಾಹಕರನ್ನು ಏಕೆ ದೂಷಿಸುತ್ತೀರಿ? ಅವರು ರದ್ದುಗೊಳಿಸಿದಾಗ ಚಾಲಕರನ್ನು ದೂಷಿಸಿ ಅಥವಾ ಅನುಮತಿಸಿ ಕಂಪನಿಯು ಬುಕ್ಕಿಂಗ್ ಶುಲ್ಕವನ್ನು ಸಂಗ್ರಹಿಸಿ. ಅದನ್ನು ಇತರರಿಗೆ ನೀಡಿ, ಆಟೋದವರು ಗ್ರಾಹಕರ ಮಾತುಗಳನ್ನು ಕೇಳುತ್ತಿದ್ದರೆ, ಓಲಾ, ಉಬರ್ ಅಭಿವೃದ್ಧಿ ಹೊಂದುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಆಟೋ ಸವಾರಿ ರದ್ದುಗೊಳಿಸುವುದು ಅಪರಾಧವಲ್ಲ. ನಿಂದಿಸುವುದು, ಹೊಡೆಯುವುದು ಅಪರಾಧ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ತಾವು ಯಾವುದರಲ್ಲಿ ಪ್ರಯಾಣಿಸಬೇಕು ಎಂದು ಆಯ್ಕೆ ಮಾಡುವ ಹಕ್ಕು ಪ್ರತಿಯೊಬ್ಬ ಸವಾರನಿಗೆ ಇದೆ. ಆಟೋ ಚಾಲಕನಿಗೆ ಯಾವುದೇ ಸಮಸ್ಯೆಗಳಿದ್ದರೆ ಅವನು ಸೇವಾ ಪೂರೈಕೆದಾರರೊಂದಿಗೆ ಪರಿಶೀಲಿಸಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.
Viral News: ಎಲ್ಲ ಮೋಜು ಹುಡುಗರಿಗೆ ಮಾತ್ರ ಏಕೆ? ರಾಜಸ್ಥಾನದಲ್ಲಿ ಕುದುರೆ ಸವಾರಿ ಮಾಡುವ ಮೂಲಕ ಸಂಪ್ರದಾಯ ಮುರಿದ ವಧು
ಬೆಂಗಳೂರಿನಲ್ಲಿ ಇದು ಸಾಮಾನ್ಯ ಅಭ್ಯಾಸವಾಗಿದೆ. ಜನರು ಹಲವಾರು ಅಪ್ಲಿಕೇಶನ್‌ಗಳಲ್ಲಿ ಬುಕ್ ಮಾಡಲು ಪ್ರಾರಂಭಿಸುತ್ತಾರೆ. ಯಾಕೆಂದರೆ ಡ್ರೈವರ್‌ಗಳಿಲ್ಲ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಬುಕ್ಕಿಂಗ್ ರದ್ದಾಗುತ್ತದೆ. ಆದರೆ ಅದಕ್ಕೆ ಅವರು ರದ್ದು ಶುಲ್ಕವನ್ನು ಪಡೆಯುತ್ತಾರೆ. ಇದರಲ್ಲಿ ಯಾರಿಗೂ ಕಿರುಕುಳ ನೀಡುವ ಕಾರಣವಿಲ್ಲ ಎಂದು ಇನ್ನೊಬ್ಬರು ಹೇಳಿದರು.