Saturday, 16th November 2024

Govt Employees: ಸರ್ಕಾರಿ ನೌಕರರ ಸಂಘದ ಚುನಾವಣೆ-2024; ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಮೇಲುಗೈ

Govt Employees

ಬೆಂಗಳೂರು: ನ.11 ರಂದು ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ-2024ರಲ್ಲಿ ಅವಿರೋಧ ಆಯ್ಕೆಯಾದ 54 ತಾಲೂಕುಗಳ ಪದಾಧಿಕಾರಿಗಳ ಪೈಕಿ 45 ತಾಲೂಕುಗಳಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಪದಾಧಿಕಾರಿಗಳು ಆಯ್ಕೆಯಾಗುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ.

ಬಾಕಿ ಉಳಿದ 133 ತಾಲೂಕು, ಯೋಜನಾ ಶಾಖೆಗಳ ಚುನಾವಣೆಯಲ್ಲಿ 93ರಲ್ಲಿ ಪೂರ್ಣ ಪ್ರಮಾಣ ಮತ್ತು 18ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭಾಗಶಃ ಆಗಿ ತಾಲೂಕು, ಯೋಜನೆ ಶಾಖೆ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು ಪ್ರಜಾಸತ್ತಾತ್ಮಕ ನೌಕರ ವೇದಿಕೆಯ ಮತ್ತು ಬೆಂಬಲಿತರು ಆಯ್ಕೆಯಾಗುವ ಮೂಲಕ ಪ್ರಜಾಸತ್ತಾತ್ಮಕ ನೌಕರರ ವೇದಿಕೆಗೆ ಭಾರಿ ಮುನ್ನಡೆಯ ಆರಂಭಿಕ ಗೆಲುವನ್ನು ದಾಖಲಿಸಿದ್ದಾರೆ.

ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರು/ನೌಕರರು, ಉಪನ್ಯಾಸಕರು, ಕಂದಾಯ, ಆರೋಗ್ಯ ಇಲಾಖೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ, ಅದರಲ್ಲೂ ಎನ್‌ಪಿಎಸ್‌ ನೌಕರರು ಆಯ್ಕೆ ಆಗುವ ಮೂಲಕ ಪ್ರಜಾಸತ್ತಾತ್ಮಕ ನೌಕರರ ವೇದಿಕೆಗೆ ಶಕ್ತಿ ತುಂಬಿದ್ದಾರೆ.

ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲಾ ಶಾಖೆಯ ಚುನಾವಣೆ ಈಗ ಕೇವಲ ಔಪಚಾರಿಕ ಮಾತ್ರ ಎನಿಸಿಬಿಟ್ಟಿದ್ದು, ಬಾಕಿ ಉಳಿದ 28 ಜಿಲ್ಲೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯ ಮತ ಎಣಿಕೆ ಮುಗಿದ ಸಂಜೆ 5.30 ರವರೆಗೆ, 21ಕ್ಕೂ ಅಧಿಕ ಕಡೆ ಪ್ರಜಾಸತ್ತಾತ್ಮಕ ನೌಕರರ ವೇದಿಕೆ ಮತ್ತವರ ಬೆಂಬಲಿಗರೇ ಬಹು ಸಂಖ್ಯೆಯಲ್ಲಿ ನಿರ್ದೇಶಕರಾಗಿ ಆಯ್ಕೆ ಆಗಿದ್ದು, ಜಿಲ್ಲಾ ಶಾಖೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇವರ ಮತ್ತು ಇವರ ಬೆಂಬಲಿಗರೇ ಆಯ್ಕೆ ಆಗುವ ನಿರೀಕ್ಷೆ ಹೆಚ್ಚಿದ್ದು ವೇದಿಕೆಯ ನಾಯಕರುಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಈಗಿನ ಭರ್ಜರಿ ಮುನ್ನಡೆ ಮತ್ತು ಆಯ್ಕೆ ಆದವರ ಜೋಶ್ ನೋಡಿದಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಖಚಾಂಚಿ, ಪ್ರಧಾನ ಕಾರ್ಯದರ್ಶಿ ಯಾರು ಎನ್ನುವುದಕ್ಕಾಗಿ ಡಿಸೆಂಬರ್ 27 ರ ಚುನಾವಣೆವರೆಗೂ ಕಾಯಬೇಕಿಲ್ಲ ಎನ್ನುವುದು ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಮುಂಚೂಣಿ ನಾಯಕರ ಅಂಬೋಣ.

ಈ ಸುದ್ದಿಯನ್ನೂ ಓದಿ | Transport Department: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌; ಸಾರಿಗೆ ನಿಗಮಗಳಲ್ಲಿ ಶೀಘ್ರವೇ 9 ಸಾವಿರ ಹುದ್ದೆ ಭರ್ತಿ

ಪ್ರಜಾಸತ್ತಾತ್ಮಕ ನೌಕರರ ವೇದಿಕೆ, ಮತ್ತವರ ಬೆಂಬಲಿತ ರಾಜ್ಯದ ತಾ.ಯೋ. ಶಾಖೆಯ ಅಧ್ಯಕ್ಷರು, ಖಚಾಂಚಿ, ರಾಜ್ಯ ಪರಿಷತ್ ಸದಸ್ಯರಿಗೆ ಅಧ್ಯಕ್ಷ ಅಭ್ಯರ್ಥಿ ಕೃಷ್ಣಮೂರ್ತಿ, ಖಜಾಂಚಿ ಅಭ್ಯರ್ಥಿ ಶಿವರುದ್ರಯ್ಯ ಮತ್ತು ಸಂಭವನೀಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತು ವೇದಿಕೆಯ ಸಂಸ್ಥಾಪಕರಾದ ಹೆಚ್ಕೆ ರಾಮು, ಬಸವರಾಜ ಗುರಿಕಾರ ಬಿಪಿ ಮಂಜೇಗೌಡ, ಬೈರಪ್ಪ, ಶೇಷೇಗೌಡ, ಸಣ್ಣಮುದ್ದಯ್ಯ, ದೇವಾಡಿಗ, ರಾಯಚೂರು ಪಾಷ, ಉಡುಪಿ ಸೆರೆಗಾರ, ಚಾಮರಾಜನಗರ ರಾಚಪ್ಪ, ಸಂಚಾಲಕರಾದ ನಿಂಗೇಗೌಡ, ಮಂಡ್ಯ ನಾಗೇಶ, ಶಾಂತಾರಾಂ, ಹರಪನಹಳ್ಳಿ ಬಸವರಾಜ ಸಂಗಪ್ಪನವರ್, ಶಿಕಾರಿಪುರ ಚಿನ್ನಪ್ಪ, ಹನುಮನಾಯಕ, ಗಂಗಾಧರ, ಪಿಡಬ್ಲ್ಯೂಡಿ ಸೋಮಣ್ಣ, ರೋಷನಿಗೌಡ, ಶಶಿಕಲಾ, ಪ್ರಕಾಶ್ ನಾಯಕ, ಬೀದರಿನ ರಾಜಕುಮಾರ ಮಾಳಗೆ, ಹುಮನಾಬಾದ್ ರವಿಂದ್ರರೆಡ್ಡಿ, ಶಿವಮೊಗ್ಗೆಯ ಮೋಹನ್ ಕುಮಾರ್, ಹಾಸನದ ಕೃಷ್ಣೇಗೌಡ ಹಾಗು ಇನ್ನಿತರರು ಶುಭ ಹಾರೈಸಿದ್ದಾರೆ.