-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಹುಡುಗಿಯರ ವಿಂಟರ್ ಜಾಕೆಟ್ ಫ್ಯಾಷನ್ (Winter Jacket Fashion) ಕ್ರೇಝ್ ಹೆಚ್ಚಾಗಿದೆ. ಹೌದು, ಇಂದು ಫ್ಯಾಷನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಡ್ರೆಸ್ಗಳಿಗೆ ಸೂಟ್ ಆಗುವಂತೆ ಹುಡುಗಿಯರು ಜಾಕೆಟ್ ಧರಿಸುವ ಕಾನ್ಸೆಪ್ಟ್ ಎಂಟ್ರಿ ನೀಡಿದೆ.
ಚಳಿಗಾಲದ ಲೇಯರ್ ಲುಕ್ಗೆ ಜಾಕೆಟ್
ಡಿಸೈನರ್ ದೀನಾ ಹೇಳುವಂತೆ, ಯಂಗ್ಸ್ಟರ್ಸ್ ಫಂಕಿ ಕ್ಯಾಶುವಲ್ಸ್ ಸ್ಟೈಲ್ ಸಿಂಬಲ್ ಆಗಿದ್ದ ಈ ಜಾಕೆಟ್ಗಳು ಇದೀಗ ಹುಡುಗಿಯರ ಸ್ಟೈಲಿಶ್ ವಿಂಟರ್ ಲೇಯರ್ ಡ್ರೆಸ್ ಲಿಸ್ಟ್ಗೆ ಎಂಟ್ರಿ ಪಡೆದಿವೆ. ಪರಿಣಾಮ, ಫಾರ್ಮಲ್ ಧರಿಸುವ ಡಿಸೆಂಟ್ ಹುಡುಗಿಯರಿಗೂ ಕೂಡ ಪ್ರಿಯವಾಗತೊಡಗಿವೆ. ಮಾಡೆಲ್ ರಾಗಾ ಪ್ರಕಾರ, ಮೊದಲೆಲ್ಲಾ ಜಾಕೆಟ್ಗಳು ಕೇವಲ ಹುಡುಗರ ಆಸ್ತಿ ಎಂಬಂತಿದ್ದವು. ಹೆಚ್ಚೆಂದರೆ, ಚಳಿ-ಮಳೆಯಿಂದ ರಕ್ಷಣೆ ಪಡೆಯಲು ಧರಿಸುವ ಅಭ್ಯಾಸ ಕಂಡು ಬರುತ್ತಿತ್ತು. ಆದರೆ, ಇತ್ತೀಚೆಗೆ ಇವು ಹುಡುಗಿಯರನ್ನು ಪ್ರೀತಿಯಿಂದ ಆವರಿಸಿಕೊಂಡಿವೆ ಎನ್ನುತ್ತಾರೆ.
ಟ್ರೆಂಡಿನಲ್ಲಿರುವ ಲೇಡಿಸ್ ಜಾಕೆಟ್ಸ್
ಫಾರ್ಮಲ್ ಲುಕ್ ನೀಡುವ ಸ್ಲೀಕ್ ಕಟ್ಸ್, ಕ್ಲಾಸಿಕ್ ಲುಕ್ನ ವಾರ್ಸಿಟಿ ಊಲ್ ಜಾಕೆಟ್, ಟ್ಯಾನ್ ಪ್ಲಸ್ ಫರ್ ಕಾಲರ್ಡ್ ಜಾಕೆಟ್, ಕ್ರೇಜಿ ರೈಡರ್ಸ್ ವಿಂಟೆಜ್ ಎವಿಯೆಟರ್ ಬಾಂಬರ್ ಲೆದರ್ ಜಾಕೆಟ್, ರಿಪ್ಪಡ್ ಲೆದರ್ ಜಾಕೆಟ್, ಕ್ವಿಲ್ಟೆಡ್ ಜಾಕೆಟ್ಗಳು ಹುಡುಗಿಯರ ಫ್ಯಾಷನ್ಗೆ ತಕ್ಕಂತೆ ಹೊಸ ರೂಪದಲ್ಲಿ ಬಿಡುಗಡೆಗೊಂಡಿವೆ.
ಹುಡುಗಿಯರ ಸ್ಟೈಲಿಶ್ ಜಾಕೆಟ್ಸ್
ಹುಡುಗಿಯರ ಜಾಕೆಟ್ಗಳಲ್ಲಿ ನೂರಾರು ವೆರೈಟಿ ಹಾಗೂ ಡಿಸೈನ್ಸ್ ಲಭ್ಯ. ಕೆಲವು ಲಾಂಗ್ ಕೋಟ್ನಂತಿದ್ದರೆ, ಇನ್ನು ಕೆಲವು ಸೊಂಟದವರೆಗೆ, ಮತ್ತೆ ಕೆಲವು ಸೊಂಟದ ಮೇಲೆ-ಕೆಳಗೆ ನಿಲ್ಲುತ್ತವೆ. ಒಟ್ನಲ್ಲಿ, ಜಾಕೆಟ್ನ ಔಟ್ಲುಕ್ ಅದನ್ನು ವಿನ್ಯಾಸಗೊಳಿಸಿರುವ ರೀತಿ, ಕಟ್, ಕಲರ್ ಮೇಲೆ ಅವಲಂಬಿತವಾಗಿರುತ್ತದೆ. ಇನ್ನು, ಮೆಟಲ್, ವಿಂಟೆಂಜ್ ಹಾಗೂ ರಾಯಲ್ ಶೈಲಿಯ ಬಟನ್ಸ್ ಇರುವ ಜಾಕೆಟ್ಗಳು, ಕೆಲವೊಮ್ಮೆ ಫ್ಯಾಬ್ರಿಕ್ ಅನ್ನು ಡಲ್ ಆಗಿ ಕಾಣುವಂತೆ ಮಾಡಿ ರಾಯಲ್ ಲುಕ್ ನೀಡುತ್ತವೆ. ಟ್ರೆಂಚಿ ಕೋಟ್ಗಳ ಶೈಲಿಯಲ್ಲೂಇವು ಲಭ್ಯ. ಪಿಕ್ನಿಕ್, ಪಾರ್ಟಿಗಳಿಗೆ ಇವು ಸಕತ್ ಆಗಿ ಕಾಣುತ್ತವೆ. ಇನ್ನು, ಪಾಕೆಟ್ಗಳಿಲ್ಲದ ಲೇಡೀಸ್ ಜಾಕೆಟ್ಗಳನ್ನು ಇಂದು ಕಾಣಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ದ್ವಿ-ಚಕ್ರ ವಾಹನ ಚಾಲಕಿಯರ ವಿಂಟರ್ ಜಾಕೆಟ್ಸ್
ದ್ವಿಚಕ್ರ ವಾಹನ ಚಾಲನೆ ಮಾಡುವ ಹೆಣ್ಣು ಮಕ್ಕಳು ಆದಷ್ಟೂ ಬಟನ್ಸ್ ಜಾಕೆಟ್ಗೆ ನೋ ಹೇಳಿ, ಜಿಪ್ ಹೈ ಕಾಲರ್ಡ್ ನೆಕ್ ಜಾಕೆಟ್ಗೆ ಸೈ ಎನ್ನಿ. ಇವುಗಳನ್ನು ಧರಿಸುವುದರಿಂದ ಚಳಿ-ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಬಹುದು. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬಗೆಯ ಜಾಕೆಟ್ಸ್ ಲಗ್ಗೆ ಇಟ್ಟಿವೆ. ವಿವಿಧ ಬ್ರಾಂಡ್ಗಳಲ್ಲಿ ಈಗಾಗಲೇ ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಕರಣ್.
ಜಾಕೆಟ್ ಪ್ರಿಯರಿಗೆ ಸಿಂಪಲ್ ಟಿಪ್ಸ್
- ಸಂಪೂರ್ಣ ವೆಸ್ಟರ್ನ್ ಲುಕ್ ನೀಡುವ ಜಾಕೆಟ್ಗಳು ಟೀನೇಜ್ ಹುಡುಗಿಯರಿಗೆ ಅಂದವಾಗಿ ಕಾಣಿಸುತ್ತವೆ.
- ಇಂಡೋ-ವೆಸ್ಟರ್ನ್ ಡಿಸೈನ್ನ ಜಾಕೆಟ್ಗಳು ಎಲ್ಲಾ ವಯಸ್ಸಿನವರಿಗೂ ಮ್ಯಾಚ್ ಆಗುತ್ತವೆ.
- ಫಾರ್ಮಲ್ ಡ್ರೆಸ್ಕೋಡ್ ಜತೆಗೆ ಇಂಡಿಯನ್ ಲುಕ್ ನೀಡುವ ಜಾಕೆಟ್ಗಳನ್ನೇ ಸೆಲೆಕ್ಟ್ ಮಾಡಿ, ಧರಿಸಿ.
- ಡೆನಿಮ್, ಖಾಕಿ, ಜೋಧ್ಪುರ್ ಪ್ಯಾಂಟ್-ಲಿನೆನ್ ಕುರ್ತಾಗಳ ಜತೆ ಜಾಕೆಟ್ ಟ್ರೈ ಮಾಡಬಹುದು.
- ಉದ್ದಗಿರುವವರಿಗೆ ಎಲ್ಲಾ ಶೈಲಿಯ ಜಾಕೆಟ್ಗಳು ಸೂಟ್ ಆಗುತ್ತವೆ.
- ಕುಳ್ಳಗಿರುವವರು ಕ್ರಾಪ್ ಜಾಕೆಟ್ ಆಯ್ಕೆ ಮಾಡಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)