ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ (Stock Market) ಸಂವೇದಿ ಸೂಚ್ಯಂಕ ನಿಫ್ಟಿ (Nifty) ಕಳೆದ ಸೆಪ್ಟೆಂಬರ್‌ನಲ್ಲಿ 26,277 ಅಂಕಗಳ ಎತ್ತರದಲ್ಲಿತ್ತು. ಆದರೆ ಈಗ ನವೆಂಬರ್‌ನಲ್ಲಿ 10%ಗೂ ಹೆಚ್ಚು ಕುಸಿತಕ್ಕೀಡಾಗಿದೆ. 23,532ಕ್ಕೆ ಇಳಿದಿದೆ. ಅಂದರೆ ಎರಡು ತಿಂಗಳಿನಲ್ಲಿ 2,745 ಅಂಕಗಳು ನಷ್ಟವಾಗಿದೆ. ಹೀಗಾಗಿ ಹೂಡಿಕೆದಾರರು ಚಿಂತೆಯಲ್ಲಿದ್ದು, ಮುಂದೇನು ಮಾಡುವುದು ಎಂಬ ಯೋಚನೆಯಲ್ಲಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್‌ನ ಇತ್ತೀಚಿನ ಕುಸಿತಕ್ಕೆ ಹಲವಾರು ಕಾರಣಗಳಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಷೇರುಗಳನ್ನು ನಿರಂತರವಾಗಿ ಮಾರಾಟ ಮಾಡುತ್ತಿರುವುದು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷ, ಭಾರತದಲ್ಲಿ ಕಾರ್ಪೊರೇಟ್ ಕಂಪನಿಗಳ ತ್ರೈಮಾಸಿಕ ಆದಾಯ ದುರ್ಬಲವಾಗಿರುವುದು ಮುಖ್ಯ ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಯಾವಾಗ ಚೇತರಿಸಲಿವೆ ಮತ್ತು ಕುಸಿತ ನಿಲ್ಲಲಿದೆ ಎಂದು ಹೂಡಿಕೆದಾರರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಹೀಗಿದ್ದರೂ, ಇತಿಹಾಸದ ಅಂಕಿ ಅಂಶಗಳನ್ನು ಗಮನಿಸಿದರೆ, ಸ್ಟಾಕ್ ಮಾರ್ಕೆಟ್‌ನಲ್ಲಿ ಇಂಥ ಏರಿಳಿತಗಳು ಸಾಮಾನ್ಯ. ಅವಿಭಾಜ್ಯ ಅಂಶ.
ಸೂಚ್ಯಂಕ ಕುಸಿತದ ನಡುವೆಯೂ ಮ್ಯೂಚುವಲ್ ಫಂಡ್ ಹೂಡಿಕೆಯು ತಗ್ಗದೆ ಮುಂದುವರಿದಿದೆ. ಅಕ್ಟೋಬರ್‌ನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ 41,887 ಕೋಟಿ ರೂ. ಹೂಡಿಕೆಯಾಗಿದೆ. ಸಿಪ್ ಮೂಲಕ 25,000 ಕೋಟಿ ರೂ. ಹೂಡಿಕೆಯಾಗಿದೆ. ಹೂಡಿಕೆದಾರರು ಹೂಡಿಕೆಯ ಅವಕಾಶವನ್ನು ಬಳಸಿಕೊಳ್ಳುತ್ತಿರುವುದನ್ನು ಇದು ಬಿಂಬಿಸಿದೆ. ತಾತ್ಕಾಲಿಕವಾಗಿ ಮಾರುಕಟ್ಟೆ ಮಂದಗತಿಯಲ್ಲಿದ್ದರೂ, ದೀರ್ಘಾವಧಿಗೆ ಮುನ್ನೋಟ ಸಕಾರಾತ್ಮಕವಾಗಿದೆ. ಆದ್ದರಿಂದ ಹೂಡಿಕೆದಾರರು ನಿಶ್ಚಿಂತೆಯಿಂದ ಹೂಡಿಕೆಯನ್ನು ಮುಂದುವರಿಸಬಹುದು ಎನ್ನುತ್ತಾರೆ ತಜ್ಞರು.
ವಾಸ್ತವವಾಗಿ ಈಗ ಆತಂಕಪಡಬೇಕಾದ ಅಗತ್ಯವಿಲ್ಲ. ದೀರ್ಘಾವಧಿಯ ಬೆಳವಣಿಗೆಯ ವರ್ತುಲದಲ್ಲಿ ಮಾರ್ಕೆಟ್ ಕರೆಕ್ಷನ್ ಒಂದು ಹಂತವಷ್ಟೇ.
ಚಾರಿತ್ರಿಕವಾಗಿ ಮಾರ್ಕೆಟ್‌ನಲ್ಲಿ ಪ್ರತಿ ವರ್ಷ ಒಂದೇ ರೀತಿಯ ಕರೆಕ್ಷನ್‌ಗಳು ಆಗುತ್ತವೆ. ಆದರೆ ದೀರ್ಘಾವಧಿಗೆ ಉತ್ತಮ ಆದಾಯವನ್ನೂ ಕೊಡುತ್ತಿರುತ್ತವೆ. 2014ರಿಂದ ಇಲ್ಲಿಯವರೆಗೆ ವಾರ್ಷಿಕ ಸರಾಸರಿ 14.31% ಬೆಳವಣಿಗೆಯನ್ನು ಸ್ಟಾಕ್ ಮಾರ್ಕೆಟ್ ದಾಖಲಿಸಿದೆ. ಈಗ ಕೆಲವು ಟೆಕ್ನಿಕಲ್ ಅಂಶಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ನೋಡೋಣ.
- 200 ದಿನಗಳ ಇಎಂಎ: ನಿಫ್ಟಿ 50 ಇಂಡೆಕ್ಸ್ ತನ್ನ 200 ದಿನಗಳ ಎಕ್ಸ್‌ಪೋನ್ಷಿಯಲ್ ಮೂವಿಂಗ್ ಅವರೇಜ್ (Exponential moving average) ಅನ್ನು ಸಮೀಪಿಸುತ್ತಿದೆ. ಸಾಮಾನ್ಯವಾಗಿ ಈ ಹಂತದ ಬಳಿಕ ನಿಫ್ಟಿ ಚೇತರಿಸುತ್ತದೆ.
- ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್ (RSI): ಸ್ಟಾಕ್ ಮಾರ್ಕೆಟ್‌ನಲ್ಲಿ ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್ ಈಗ ಏರಿಕೆಯನ್ನು ಸೂಚಿಸುತ್ತಿದೆ. ಷೇರುಗಳ ಮಾರಾಟದ ಒತ್ತಡ ಕಡಿಮೆಯಾಗುತ್ತಿರುವುದನ್ನು ಇದು ಬಿಂಬಿಸಿದೆ. ಹೀಗಾಗಿ ಸೂಚ್ಯಂಕಗಳು ಏರಿಕೆಯಾಗುವ ನಿರೀಕ್ಷೆ ಇದೆ.
ಷೇರು ಮಾರುಕಟ್ಟೆಯಲ್ಲಿ ಕರೆಕ್ಷನ್‌ಗಳು ಆದ ಬಳಿಕ ಸಾಮಾನ್ಯವಾಗಿ ಸೂಚ್ಯಂಕಗಳು ಪ್ರಬಲವಾಗಿ ಚೇತರಿಸುತ್ತವೆ. ಹೀಗಾಗಿ ದೀರ್ಘಕಾಲೀನ ಹೂಡಿಕೆಗೆ ಇದು ಸಕಾಲ ಎನ್ನುತ್ತಾರೆ ತಜ್ಞರು.
ಹೂಡಿಕೆದಾರರು ಏನು ಮಾಡಬಹುದು? ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಹೂಡಿಕೆದಾರರು ಲಂಪ್ಸಮ್ ಹೂಡಿಕೆಯ ಬದಲಿಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಮಾಡುವುದು ಉತ್ತಮ. ಸ್ವಲ್ಪ ಸ್ವಲ್ಪ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಬನ್ನಿ. ಹೂಡಿಕೆಗೊಂದು ಗುರಿ ಇರಲಿ, ಹಾಗೂ ಅದು ದೀರ್ಘಾವಧಿಯದ್ದಾಗಿರಲಿ. ಶಿಸ್ತುಬದ್ಧ ಹೂಡಿಕೆಯಿಂದ ನಿಶ್ಚಿಂತೆಯಿಂದ ಇರಬಹುದು. ಹೂಡಿಕೆ ವೈವಿಧ್ಯಮಯವಾಗಿರಲಿ. ಒಂದೇ ಷೇರಿನಲ್ಲಿ ಅಥವಾ ಕ್ಷೇತ್ರದಲ್ಲಿ ಹೂಡಿಕೆಯನ್ನು ಸೀಮಿತಗೊಳಿಸುವುದು ಬೇಡ. ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭ ಕಂಗಾಲಾಗಿ ಷೇರುಗಳನ್ನು ಸಿಕ್ಕ ದರಕ್ಕೆ ಮಾರಾಟ ಮಾಡುವುದು ಬೇಡ. ಶಾಂತವಾಗಿದ್ದುಕೊಂಡು ಪರಿಸ್ಥಿತಿಯನ್ನು ಅವಲೋಕಿಸಿ.
ಈ ಸುದ್ದಿಯನ್ನೂ ಓದಿ: Stock Market Crash: ಸೆನ್ಸೆಕ್ಸ್ 984 ಅಂಕ ಪತನ, ಹೂಡಿಕೆದಾರರಿಗೆ 6.8 ಲಕ್ಷ ಕೋಟಿ ರೂ. ನಷ್ಟ