ಬೆಂಗಳೂರು: ಹವಾಮಾನ ಬದಲಾವಣೆಯ ಬಿಕ್ಕಟ್ಟು ಪ್ರಸ್ತುತ ಎಲ್ಲೆಡೆ ಚರ್ಚಿತವಾಗುತ್ತಿರುವ ವಿಷಯ. ಈಗಾಗಲೇ ಈ ಹವಾಮಾನ ಬದಲಾವಣೆಯ ದುಷ್ಪರಿಣಾಮವನ್ನು ಮನುಕುಲ ಎದುರಿಸಲಾರಂಭಿಸಿದೆ. ಈ ಹವಾಮಾನ ಬದಲಾವಣೆಯ ದುಷ್ಪರಿಣಾಮ ಲಿಂಗ, ವರ್ಗ, ಜಾತಿಗಳ ನಡುವಣ ಇದರ ಸಂಬಂಧ, ಮತ್ತು ನಾನಾ ಆಯಾಮಗಳನ್ನು ಸಮಾಜದ ಮುಂದೆ ತೆರೆದಿಡುವ ವಿಶಿಷ್ಟ ವಸ್ತು ಪ್ರದರ್ಶನಕ್ಕೆ ಬೆಂಗಳೂರು ನಗರ (Bengaluru News) ಶನಿವಾರ ಹಾಗೂ ಭಾನುವಾರ ಸಾಕ್ಷಿಯಾಯಿತು.
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಅಜರ್ಬೈಜಾನ್ ದೇಶದ ರಾಜಧಾನಿ ಬಕು ನಗರದಲ್ಲಿ ನಡೆಸಲಾಗುತ್ತಿರುವ ಸಿಒಪಿ 29 ನೇ ಸಮ್ಮೇಳನದಲ್ಲಿ ಜಾಗತಿಕ ನಾಯಕರು ಹವಾಮಾನ ಕಾಳಜಿ ಮತ್ತು ಇದರಿಂದ ಮನುಕುಲ ರಕ್ಷಿಸಲು ನಿರ್ದಿಷ್ಟ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕಾದ ಗುರಿಗಳನ್ನು ಚರ್ಚಿಸುತ್ತಿರುವ ಸಂದರ್ಭದಲ್ಲಿ ಗ್ರೀನ್‌ಪೀಸ್ ಇಂಡಿಯಾ ಮತ್ತು ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ (ಎಂಎಪಿ /MAP) ಸಹಯೋಗದಲ್ಲಿ ಅಪಾಯದ ಅಂಚಿನಲ್ಲಿ ಹವಾಮಾನ: ವಿವಿಧ ಲಿಂಗ, ಜಾತಿ, ವರ್ಗಗಳ ಅಸಹಾಯಕತೆ ಎಂಬ ವಿಷಯದ ಕುರಿತು ಎರಡು ದಿನಗಳ ಕಾಲ ವಿಶಿಷ್ಟ ವಸ್ತು ಪ್ರದರ್ಶನ ಜರುಗಿತು.
ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಈ ಜನರು ಎದುರಿಸುತ್ತಿರುವ ಕಷ್ಟ- ನಷ್ಟಗಳು, ಈ ವೈಪರೀತ್ಯಗಳ ನಡುವೆಯೂ ಸಾಗುತ್ತಿರುವ ಅವರ ಬದುಕು ಹಾಗು ಈ ಸವಾಲುಗಳನ್ನು ಎದುರಿಸಲು ಅವರು ಮೈಗೂಡಿಸಿಕೊಂಡಿರುವ ಪ್ರತಿರೋಧವನ್ನು ಇಲ್ಲಿ ಡಿಜಿಟಲ್ ಪ್ರದರ್ಶನದ ಮೂಲಕ ಪ್ರದರ್ಶಿಸಲಾಯಿತು.
ಈ ವಿಶಿಷ್ಟ ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದರೆ ಭಾರತದ ವಿವಿಧ ಭಾಗಗಳಲ್ಲಿ ಹವಾಮಾನ ಬದಲಾವಣೆಯ ತೀವ್ರತರದ ಪರಿಣಾಮಗಳಿಗೆ ಬಲಿಪಶುಗಳಾದ ಜನರು, ಅದರ ವಿರುದ್ಧ ಪ್ರತಿರೋಧವಾಗಿ ಬಳಸಿಕೊಂಡ ದೈನಂದಿನ ಬಳಕೆಯ ವಸ್ತುಗಳ ಡಿಜಿಟಲ್ ಮ್ಯೂಸಿಯಂ. ಈ ವಸ್ತುಗಳು ನಮ್ಮ ದೇಶದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯಗಳನ್ನು ಸಹಿಸಿಕೊಂಡ ಜನರ ನೈಜ ಕಥೆಗಳನ್ನು ಹೇಳುತ್ತವೆ.
ತಮ್ಮ ಹಾಸ್ಯ ಮತ್ತು ಸೃಜನಶೀಲತೆಗಾಗಿ ಇನ್ಸ್ಟಾಗ್ರಾಂನಲ್ಲಿ ಮೀನ್ಕರಿ ಎಂದೇ ಜನಪ್ರಿಯವಾಗಿರುವ ಶಬರಿ ವೇಣು ಅವರು ಈ ವಿಶಿಷ್ಟ ಪ್ರದರ್ಶನವನ್ನು ವಿನ್ಯಾಸಗೊಳಿಸಿದ್ದಾರೆ. ಈ ಕುರಿತು ಅವರು ಮಾತನಾಡಿ, ಇಲ್ಲಿ ಹೇಳಲಾಗುತ್ತಿರುವ ಕಥೆಗಳಿಗೆ ಜೀವ ತುಂಬಲು ನಾವು ವಸ್ತುಸಂಗ್ರಹಾಲಯದಲ್ಲಿ ಲಭ್ಯವಿರುವ ತಂತ್ರಜ್ಞಾನದೊಂದಿಗೆ ವಿವಿಧ ದೃಶ್ಯ ಮತ್ತು ಕಥೆ ಹೇಳುವ ತಂತ್ರಗಳನ್ನು ಸಂಯೋಜಿಸಿದ್ದೇವೆ. ಸಾಮಾನ್ಯವಾಗಿ ಹವಾಮಾನ ವಿಪತ್ತುಗಳ ಕುರಿತಾದ ಸುದ್ದಿಗಳು ಈ ವಿಪತ್ತಿಗೆ ಬಲಿಯಾದವರ ಸಂಖ್ಯೆಗಳು ಮತ್ತು ಹಾನಿಯ ಅಂಕಿಅಂಶಗಳನ್ನು ಕಡಿಮೆ ಪ್ರಮಾಣದಲ್ಲಿ ತೋರಿಸುತ್ತವೆ. ಈ ಪ್ರದರ್ಶನದ ಮೂಲಕ, ಮರೆಮಾಚಲಾದ ನೈಜ ಸಂಖ್ಯೆಗಳು ಹಾಗು ಮಾನವೀಯ ಅಂತಃಕರಣ ಕಲಕುವ ಕಥೆಗಳನ್ನು ಹಂಚಿಕೊಳ್ಳಲು ನಮಗೆ ಅವಕಾಶ ಸಿಕ್ಕಿದೆʼ ಎಂದು ಶಬರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ
ಚೆನ್ನೈ ಮತ್ತು ದೆಹಲಿ ಬಳಿಕ ಈ ಮ್ಯೂಸಿಯಂ ಆಫ್ ಮೆಮೊರೀಸ್ ಪ್ರದರ್ಶನವು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಬಾರಿ ಡಿಜಿಟಲ್ ಮ್ಯೂಸಿಯಂ ರೂಪದಲ್ಲಿ ಇದು ನೋಡುಗರನ್ನು ಆಕರ್ಷಿಸಿದೆ.
ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕಿ ಅಮೃತ ಎಸ್ ಎನ್ ಈ ಕುರಿತ ಮಾತನಾಡಿ, ‘ಹವಾಮಾನ ಬದಲಾವಣೆ ತಗ್ಗಿಸುವ ಸಂಬಂಧ ಅಗತ್ಯವಿರುವ ಹಣಕಾಸು ನೆರವಿನ ಲಭ್ಯತೆ ಹಾಗು ಈ ನಿಟ್ಟಿನಲ್ಲಿ ನಿರ್ಣಾಯಕ ನಿರ್ಣಯವೊಂದರ ನಿರೀಕ್ಷೆಯನ್ನು ಇಡೀ ಜಗತ್ತು ಬಕುವಿನಲ್ಲಿ ನಡೆಯುತ್ತಿರುವ ಸಮ್ಮೇಳನದಿಂದ ನಿರೀಕ್ಷಿಸುತ್ತಿದೆ. ಈ ನಿರ್ಣಾಯಕ ಹಂತದಲ್ಲಿ ಈ ಮ್ಯೂಸಿಯಂ ಆಫ್ ಮೆಮೊರೀಸ್ ಒಂದು ನೈಜ ಸತ್ಯವನ್ನು ಎತ್ತಿ ತೋರಿಸುತ್ತದೆ. ವಿಪರ್ಯಾಸ ಎಂದರೆ ಸಾಮಾನ್ಯವಾಗಿ ಹವಾಮಾನ ವಿಪತ್ತುಗಳಿಂದ ಹೆಚ್ಚು ಬಿಕ್ಕಟ್ಟು, ಸಮಸ್ಯೆ ಎದುರಿಸುತ್ತಿರುವವರು ವಾಸ್ತವದಲ್ಲಿ ಈ ಸಮಸ್ಯೆಗೆ ಕಾರಣೀಭೂತರಾಗಿರುವುದಿಲ್ಲ. ಈ ಸಮಸ್ಯೆಗೆ ಅವರ ಪಾಲುದಾರಿಕೆ ತೀರ ಕಡಿಮೆ ಪ್ರಮಾಣದ್ದಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣವಾಗಿರುವ ಫಾಸಿಲ್ /ಪಳೆಯುಳಿಕೆ ಇಂಧನ ಉದ್ಯಮವು ಯಾವುದೇ ಹೊಣೆಗಾರಿಕೆಯಿಲ್ಲದೆ ಲಾಭದಾಯಕವಾಗಿ ಮುಂದುವರಿಯುತ್ತಿದೆ. ಈ ಕಾರಣದಿಂದಾಗಿ, ಹವಾಮಾನ ವೈಪರೀತ್ಯ ಬಿಕ್ಕಟ್ಟು ಎದುರಿಸುತ್ತಿರುವ ಪ್ರದೇಶಗಳ ಸಮುದಾಯಗಳಿಗೆ ಹೆಚ್ಚಿನ ಹಾಗು ತುರ್ತು ಬೆಂಬಲದ ಅಗತ್ಯವಿದೆʼ ಎಂದು ತಿಳಿಸಿದ್ದಾರೆ.
ಅವರ ಪ್ರಕಾರ ಜಾಗತಿಕವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಗೆ (75 ಪ್ರತಿಶತಕ್ಕಿಂತ ಹೆಚ್ಚು) ಮತ್ತು ಎಲ್ಲಾ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗಳಿಗೆ (ಸುಮಾರು 90 ಪ್ರತಿಶತ ) ಪಳೆಯುಳಿಕೆ ಇಂಧನಗಳೇ ಕಾರಣ. ‘ಮಾಲಿನ್ಯ ಸೃಷ್ಟಿಸುವವರೆ ತಾವು ಉಂಟುಮಾಡಿರುವ ಮಾಲಿನ್ಯಕ್ಕೆ ಬೆಲೆ ತೆರಬೇಕುʼ ಎಂದು ಅವರು ಪ್ರತಿಪಾದಿಸುತ್ತಾರೆ. ಸಮುದಾಯಗಳು ಈ ಹವಾಮಾನ ವೈಪರೀತ್ಯವನ್ನು ಮೆಟ್ಟಿ ನಿಲ್ಲಲು, ಹಾಗು ಈ ಹವಾಮಾನ ವೈಪರೀತ್ಯಕ್ಕೆ ಕಾರಣರಾದವರು ಅದರಿಂದಾದ ನಷ್ಟ ಹಾಗು ಹಾನಿಗೆ ಬೆಲೆ ತೆರುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಈ ಸುದ್ದಿಯನ್ನೂ ಓದಿ | Good news: ಟಿವಿ ರಿಪೇರಿ ತರಬೇತಿಗಾಗಿ ಅರ್ಜಿ ಆಹ್ವಾನ
ಹವಾಮಾನ, ಜಾತಿ ಮತ್ತು ಲಿಂಗತ್ವಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ಭೂಮಿಕಾ ಸರಸ್ವತಿ ಅವರು ಕಾರ್ಯಕ್ರಮದಲ್ಲಿ ಕಾರ್ಯಾಗಾರವೊಂದನ್ನು ನಡೆಸಿದ್ದು ಇದು ತಾಪಮಾನದ ತೀವ್ರ ಏರಿಕೆಯ ಪರಿಣಾಮ ನಮ್ಮ ದೈನಂದಿನ ಬದುಕಿನಲ್ಲಿ ಲಿಂಗ, ಜಾತಿ ಮತ್ತು ಅಸ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ದಾಖಲೀಕರಣದ ಮೇಲೆ ಬೆಳಕು ಚೆಲ್ಲಿತು. ಪ್ರಸ್ತುತ ಮನುಕುಲವು ಎದುರಿಸುತ್ತಿರುವ ಹಲವು ಬಿಕ್ಕಟ್ಟುಗಳಲ್ಲಿರುವ ಲಿಂಗತ್ವದ ಆಯಾಮಗಳು ಮತ್ತು ಅವು ಸಮಾಜದಲ್ಲಿಈಗಾಗಲೇ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಹೇಗೆ ಉಲ್ಬಣಗೊಳಿಸುತ್ತಿವೆ ಎಂಬುದನ್ನು ಈ ಕಾರ್ಯಕ್ರಮವು ಪ್ರತಿಬಿಂಬಿಸಿತು.