ರಸದೌತಣ
ಯಗಟಿ ರಘು ನಾಡಿಗ್
‘‘ಲೇಯ್ ರಾಮಾಚಾರಿ… ನಿನ್ನೆ ರಾತ್ರಿ ಅಲಮೇಲುನ ಕರಕೊಂಡು ಹೋಗಿ ಕೆಡಿಸಿದ್ಯಂತೆ…? ಬೊಗಳೋ? ಸತ್ಯಾನ ಕೇಳಿ ನಾಲಿಗೆ ಸೇದಿಹೋಯ್ತೇನೋ…?’’ ಹೀಗೆನ್ನುತ್ತಾ ಚಾಮಯ್ಯ ಮೇಷ್ಟ್ರು ತಮ್ಮ ಕೈಯಲ್ಲಿದ್ದ ಬೆತ್ತದಿಂದ ರಾಮಾಚಾರಿಯ ಬಲಭುಜಕ್ಕೆ ಬಾರಿಸುತ್ತಾರೆ, ಏಟಿನ ರಭಸಕ್ಕೆ ತತ್ತರಿಸುವ ರಾಮಾಚಾರಿ ಭುಜಹಿಡಿದುಕೊಂಡು ಜೋಲಿಹೊಡೆಯುತ್ತಾ ಅಷ್ಟು ದೂರಕ್ಕೆ ಸಾಗುತ್ತಾನೆ. ಕೋಪೋದ್ರಿಕ್ತ ಚಾಮಯ್ಯ ಮೇಷ್ಟ್ರು ತಮ್ಮ ಕೈಯಲ್ಲಿದ್ದ ಬೆತ್ತವನ್ನು ಬೀಸಿ ನೆಲಕ್ಕೆ ಒಗೆಯುತ್ತಾರೆ….
ಇಲ್ಲಿ ಚಾಮಯ್ಯ ಮೇಷ್ಟ್ರಾಗಿ ಅಬ್ಬರಿಸಿದವರು ‘ಸಹಜಾಭಿನಯ ಚತುರ’ ಕೆ.ಎಸ್.ಅಶ್ವಥ್, ಅವರ ಕೋಪಕ್ಕೆ ತುತ್ತಾಗುವ ರಾಮಾಚಾರಿಯಾಗಿ ಮಿಂಚಿದವರು ‘ಸಾಹಸಸಿಂಹ’ ವಿಷ್ಣುವರ್ಧನ್. ಇದು ಪುಟ್ಟಣ್ಣ ಕಣಗಾಲರ ನಿರ್ದೇಶನದ ‘ನಾಗರಹಾವು’ ಚಲನಚಿತ್ರದ ಒಂದು ದೃಶ್ಯ. ಈ ಚಿತ್ರ ‘ಎವರ್ ಗ್ರೀನ್’ ಎನಿಸಿಕೊಂಡಿರುವುದೇಕೆ? ಎಂಬ ಪ್ರಶ್ನೆಗೆ ಇಂಥ ಮಣಗಟ್ಟಲೆ ಸಾಕ್ಷಿಗಳು ಇದರಲ್ಲಿ ಕಾಣಸಿಗುತ್ತವೆ. ಚಿತ್ರದುರ್ಗದ ಜನರೆಲ್ಲರೂ ‘ವಿಷಸರ್ಪ’ ಎಂದೇ ಕರೆಯುತ್ತಿದ್ದ ರಾಮಾಚಾರಿಯನ್ನು ‘ಅರಗಿಣಿ’ ಎಂದೇ ಸಮರ್ಥಿಸಿಕೊಳ್ಳುತ್ತಿದ್ದ ಚಾಮಯ್ಯ ಮೇಷ್ಟ್ರು, ಅಲಮೇಲುವಿನ ಮಾನಭಂಗಕ್ಕೆ ತಮ್ಮ ಈ ಪ್ರೀತಿಯ ಶಿಷ್ಯ ಕೈಹಾಕಿದ ಎಂಬ ಆರೋಪ ಕೇಳಿ ಕ್ರುದ್ಧರಾಗಿ ಅವನನ್ನು ಹುಡುಕಿಕೊಂಡು ದುರ್ಗದ ಕೋಟೆಗೆ ಬರುತ್ತಾರೆ. ಅಲ್ಲಿ ಏಕನಾಥೇಶ್ವರಿ ದೇಗುಲದ ಮುಂದೆ ಕೂತಿದ್ದ ರಾಮಾಚಾರಿಯನ್ನು ಕೂಗಿ ಎಬ್ಬಿಸಿ, ತಾವು ಕೇಳಿದ ಆರೋಪಕ್ಕೆ ಸ್ಪಷ್ಟೀಕರಣವನ್ನು ನೀಡುವಂತೆ ತಮ್ಮದೇ ಶೈಲಿಯಲ್ಲಿ ರಾಮಾಚಾರಿಯನ್ನು ಕೇಳುವಾಗ ಆಡುವ ಮಾತಿದು. ಈ ಚಿತ್ರವನ್ನು ನಿಮ್ಮಲ್ಲಿ ಸಾಕಷ್ಟು ಮಂದಿ ನೋಡಿರಬಹುದು, ಇನ್ನೂ ನೋಡಿಲ್ಲವಾದರೆ ಯುಟ್ಯೂಬ್ ನಲ್ಲಿ ಕಣ್ತುಂಬಿಕೊಳ್ಳಿ.
‘ಫ್ರೇಮ್’ ಹಾಕಿಸಿ ಇಡುವುದಕ್ಕೆ ಅರ್ಹವಾಗಿರುವ ಇಂಥ ಒಂದೊಂದು ದೃಶ್ಯವನ್ನೂ ವಿವರಿಸುತ್ತಾ ಹೋದರೆ ಪುಟಗಳು ಸಾಲವು. ಆದರೆ, ಈ ಸನ್ನಿವೇಶದ ಚಿತ್ರೀಕರಣದ ಆಸುಪಾಸಿನಲ್ಲಿ ಏನೆಲ್ಲಾ ‘ಒಳಸಂಚು’(!) ನಡೆದಿತ್ತು, ತಮ್ಮ ಚಿತ್ರದ ಕಥೆಯನ್ನು, ಪಾತ್ರಧಾರಿಗಳ ಪರಕಾಯ ಪ್ರವೇಶವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಪುಟ್ಟಣ್ಣ ಎಷ್ಟೆಲ್ಲಾ ಶ್ರಮಪಡುತ್ತಿದ್ದರು ಎಂಬುದನ್ನು ವಿವರಿಸಲಿಕ್ಕೆ, ‘ನಾಗರಹಾವು’ ಎಂಬ ಹದವಾಗಿ ಬೆಂದಿರುವ ಅನ್ನದ ತಪ್ಪಲೆಯಿಂದ ಆಯ್ದುಕೊಂಡಿರುವ ಒಂದು ಅಗುಳಷ್ಟೇ- ಮೇಲಿನ ಸನ್ನಿವೇಶ!
ಈ ಸನ್ನಿವೇಶವನ್ನು ವಿಷ್ಣು ಅವರಿಗೆ ವಿವರಿಸಿದ ಪುಟ್ಟಣ್ಣ, ಚಾಮಯ್ಯ ಮೇಷ್ಟ್ರಿಂದ ಹೀಗೊಂದು ಆರೋಪ ಬಂದಾಗ ಹೇಗೆಲ್ಲಾ ಕ್ರೋಧಗೊಳ್ಳಬೇಕು, ಅದನ್ನು ಕೆಂಗಣ್ಣುಗಳಲ್ಲಿ ಹೇಗೆ ತೋರಿಸಬೇಕು ಎಂಬುದನ್ನೆಲ್ಲ ಮನವರಿಕೆ ಮಾಡಿಕೊಟ್ಟು ಮಾನಸಿಕವಾಗಿ ಅವರನ್ನು ಸಜ್ಜುಗೊಳಿಸಿದರು. ತರುವಾಯ ಶುರುವಾಗಿದ್ದೇ ಪುಟ್ಟಣ್ಣನವರ ಒಳಸಂಚು! ಚಾಮಯ್ಯ ಮೇಷ್ಟ್ರು ಪಾತ್ರಧಾರಿ ಅಶ್ವಥ್ ರನ್ನು ಮತ್ತೊಂದು ಬದಿಗೆ ಕರೆದೊಯ್ದ ಪುಟ್ಟಣ್ಣ, ಅವರಿಗೂ ದೃಶ್ಯದ ಸಂದರ್ಭ, ಹಿನ್ನೆಲೆ ವಿವರಿಸಿ, ‘‘ನಿಮ್ಮ ಕೈಯಲ್ಲಿನ ಬೆತ್ತದಿಂದ ಈ ವಿಷ್ಣುವಿಗೆ ಹೇಗೆ ಬಾರಿಸಬೇಕು ಅಂದ್ರೆ, ಆ ಏಟಿನ ರುಚಿಗೇ ಅವನಿಂದ ‘ನಾಗರಹಾವಿನ’ ರೋಷ ಕಣ್ಣಲ್ಲಿ ಉಕ್ಕಬೇಕು. ಸರಿಯಾಗೇ ಬಾರಿಸಿ’’ ಎಂದುಬಿಟ್ಟರಂತೆ. ಅಶ್ವಥ್ ದಿಗಿಲುಗೊಂಡು, ‘‘ಅಯ್ಯೋ ಪುಟ್ಟಣ್ಣಾ, ಅದೆಲ್ಲಾ ಬೇಡ. ಬಾರಿಸಿದಂತೆ ಹಾಗೇ ಸುಮ್ಮನೆ ಆ್ಯಕ್ಟ್ ಮಾಡ್ತೀನಿ ಬಿಡಿ… ಹೊಡೆಯೋದೆಲ್ಲಾ ಯಾಕೆ..?’’ ಅಂದರಂತೆ. ಅದಕ್ಕೆ ಪುಟ್ಟಣ್ಣ, ‘‘ಅಶ್ವಥ್ ಜೀ, ನೀವು ಸುಮ್ಮನೆ ನಾನು ಹೇಳಿದಂತೆ ಮಾಡಿ, ಆಮೇಲೆ ಇದೆ ನೋಡಿ ಗಮ್ಮತ್ತು…’’ ಎನ್ನುತ್ತಾ ದೃಶ್ಯದ ‘ಟೇಕ್’ಗೆ ತೆರಳಿದರು. ನಂತರ ನಡೆದಿದ್ದೇ ಚಮತ್ಕಾರ…
ಲೇಖನದ ಶುರುವಿನಲ್ಲಿ ಉಲ್ಲೇಖಿಸಿರುವ ಸಂಭಾಷಣೆ ಹೇಳುತ್ತಾ ಚಾಮಯ್ಯ ಮೇಷ್ಟ್ರು ಸಾಕಷ್ಟು ಜೋರಾಗೇ ರಾಮಾಚಾರಿಯ ಭುಜಕ್ಕೆ ಬೆತ್ತದಿಂದ ಬಾರಿಸುತ್ತಾರೆ. ಹೊಡೆತ ಅದೆಷ್ಟು ರಭಸವಾಗಿರುತ್ತದೆಂದರೆ ಬೆತ್ತ ಲಟಕ್ಕನೆ 2 ತುಂಡಾಗುತ್ತದೆ! ದೃಶ್ಯ ಮುಂದುವರಿಯುತ್ತದೆ, ನೋಯುತ್ತಿದ್ದ ಭುಜವನ್ನು ಹಿಡಿದುಕೊಂಡೇ ರಾಮಾಚಾರಿ ಆಕ್ರೋಶದಿಂದ ಚಾಮಯ್ಯ ಮೇಷ್ಟ್ರ ಕಡೆಗೆ ತಿರುಗಿ ನೋಡುತ್ತಾನೆ (ಹಿನ್ನೆಲೆಯಲ್ಲಿ ಟಿಪಿಕಲ್ ‘ಟಿಂಗ್ ಡಿಂಗ್ ಡಿಂಗ್ ಡಿಂಗ್, ಟಿಂಗ್ ಡಿಂಗ್ ಡಿಂಗ್ ಡಿಂಗ್’ ಸಂಗೀತ..!). ಅವನ ಕಂಗಳಲ್ಲಿ ಜ್ವಾಲಾಮುಖಿ… ಸಾಕ್ಷಾತ್ ನಾಗರಹಾವಿನ ಆಕ್ರೋಶ. ‘‘ಶಭಾಶ್! ಕೊನೆಗೂ ಸಿಕ್ಕ ರಾಮಾಚಾರಿ’’ ಎಂದು ಪುಟ್ಟಣ್ಣ ಚಪ್ಪಾಳೆ ತಟ್ಟುತ್ತಾ ‘ಷಾಟ್ ಓಕೆ’ ಮಾಡಿ ಆಶ್ವಥ್ ಮತ್ತು ವಿಷ್ಣುರನ್ನು ಅಭಿನಂದಿಸುತ್ತಾರೆ!
(ವಾಸ್ತವವಾಗಿ, ಚಿತ್ರಕಥೆಯಲ್ಲಿ ಬೆತ್ತ ಮುರಿಯುವುದರ ಉಲ್ಲೇಖವಿರಲಿಲ್ಲ; ಪಾತ್ರದಲ್ಲಿ ಅಶ್ವಥ್ ಪರಕಾಯ ಪ್ರವೇಶ ಮಾಡಿದಾಗಿನ ಆವೇಶದಿಂದ ಹುಟ್ಟಿದ ರಭಸಕ್ಕೆ ಮುರಿದಿತ್ತು ಬೆತ್ತ. ಅದನ್ನು ಅಷ್ಟಕ್ಕೇ ಬಿಟ್ಟುಬಿಡದ ಪುಟ್ಟಣ್ಣ ಅದಕ್ಕೂ ಒಂದು ‘ಜಸ್ಟಿಫಿಕೇಷನ್’ ಕೊಟ್ಟಿದ್ದಾರೆ. ತನ್ನಿಂದ ತಪ್ಪಾಗಿಲ್ಲವೆಂದು ರಾಮಾಚಾರಿಯು ಚಾಮಯ್ಯ ಮೇಷ್ಟ್ರಿಗೆ ಮನವರಿಕೆ ಮಾಡಿಕೊಟ್ಟ ನಂತರ, ‘‘ಮೇಷ್ಟ್ರೇ… ಬೆತ್ತ ಮುರಿದುಹೋಗಿದೆ. ರಿಪೇರಿ ಮಾಡಿಸಿ ನಾಳೆ ನಾನೇ ತಂದುಕೊಡ್ತೀನಿ’’ ಅಂತಾನೆ. ಇದು ಸಿದ್ಧಪಡಿಸಲಾಗಿದ್ದ ಸಂಭಾಷಣೆಯ ಸಾಲಲ್ಲ, ಈ ದೃಶ್ಯದ ಚಿತ್ರೀಕರಣದ ವೇಳೆ ಅಲ್ಲೇ ಹೊಸದಾಗಿ ಹೊಸೆದು ಸೇರಿಸಿದ್ದು! ಇದು ಪುಟ್ಟಣ್ಣನವರ ಸಮಯಸ್ಫೂರ್ತಿ ಮತ್ತು ಪರಿಣತಿಗೆ ಮತ್ತೊಂದು ಪ್ರೂಫ್!).
ಪುಟ್ಟಣ್ಣನವರ ನಿರ್ದೇಶನದ ಚಿತ್ರಗಳೆಲ್ಲವೂ ಮಹಾನ್ ದೃಶ್ಯಕಾವ್ಯಗಳು ಅಂತ ಈ ಬರಹದಲ್ಲಿ ಸಮರ್ಥಿಸಲು ಹೊರಟಿಲ್ಲ; ಆದರೆ ಚಿತ್ರದ ಒಂದೊಂದು ದೃಶ್ಯವನ್ನೂ ಪರಿಣಾಮಕಾರಿಯಾಗಿಸಲು ಅವರು ಏನೆಲ್ಲಾ ‘ರಿಸ್ಕ್’ ತೆಗೆದುಕೊಳ್ಳುತ್ತಿದ್ದರು ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ. ವಿಷ್ಣು ಆಗಿನ ಕಾಲಕ್ಕೆ ಹೊಸಬರೇ ಇದ್ದಿರಬಹುದು, ನಾಯಕರಾಗಿ ಅದು ಅವರ ಮೊದಲ ಚಿತ್ರವೇ ಆಗಿದ್ದಿರಬಹುದು; ಹಾಗಂತ, ಬೆತ್ತದಲ್ಲಿ ನಿಜವಾಗಿಯೂ ಹೊಡೆಸುವ ನಿರ್ಧಾರ ನಿಜಕ್ಕೂ ‘ರಿಸ್ಕಿಯೇ’. ಆದರೆ, ದೃಶ್ಯವನ್ನು ಉತ್ತಮವಾಗಿ ಕಟ್ಟಿಕೊಡುವ, ಪಾತ್ರಗಳ ಒಳತೋಟಿಯನ್ನು ಪ್ರೇಕ್ಷಕರ ಮುಂದೆ ಹರವಿಟ್ಟು ಕಥೆಯನ್ನು ಅವರ ಹೃದಯದಲ್ಲಿ ಕೆನೆಗಟ್ಟಿಸುವ ಪುಟ್ಟಣ್ಣನವರ ಆಶಯ ಅಲ್ಲಿ ಢಾಳಾಗಿತ್ತು ಎಂಬುದಂತೂ ಸತ್ಯ. ದೃಶ್ಯವನ್ನು ಹೀಗೆ ‘ಯಥಾರ್ಥ’ ಸ್ವರೂಪದಲ್ಲಿ ಚಿತ್ರೀಕರಿಸದೆ ‘ಆ್ಯಕ್ಟಿಂಗ್’ನಂತೆಯೇ ಹೊಸೆದು ರೀಲು ಸುತ್ತಿದ್ದರೂ ನಿರ್ಮಾಪಕ ಎನ್.ವೀರಾಸ್ವಾಮಿಯವರು ಪ್ರಾಯಶಃ ಆಕ್ಷೇಪಿಸುತ್ತಿರಲಿಲ್ಲ. ಆದರೆ ಬಡ್ಡೀಮಗಂದು, ‘ಆತ್ಮತೃಪ್ತಿ’ಗೆ ಹಪಹಪಿಸುವ ‘ಅತೃಪ್ತ ಆತ್ಮ’ ಅನ್ನೋದು ಇರುತ್ತೆ ನೋಡಿ, ಅದು ಹಾಗೆ ಕಾಟಾಚಾರಕ್ಕೆ ಸುತ್ತಿ ಎಸೆಯಲು ಬಿಡೋಲ್ಲ. ಪುಟ್ಟಣ್ಣ ಅಂಥ ‘ಪರ್ಫೆಕ್ಷನಿಸ್ಟ್’ ಆಗಿದ್ದರಿಂದಲೇ ‘ನಾಗರಹಾವು’ ಚಿತ್ರದ ಒಂದೊಂದು ದೃಶ್ಯವೂ ‘ಹಾಟ್ ಕೇಕ್’ನಂತೆ ಮೂಡಿಬಂದಿದೆ. ಅಲ್ಲಿಯವರೆಗೂ ‘ಮಹಿಳಾ-ಪ್ರಧಾನ’ ಕಥೆಯ ಚಿತ್ರವನ್ನೇ ನಿರ್ದೇಶಿಸುತ್ತಿದ್ದ ಪುಟ್ಟಣ್ಣ, ಈ ಚಿತ್ರದಲ್ಲಿ ‘ಪುರುಷ-ಪ್ರಧಾನ’ ಕಥೆಗೆ ಓಗೊಟ್ಟು ಹೊರಳುದಾರಿ ತುಳಿದರು. ತನ್ಮೂಲಕ ವಿಷ್ಣುವರ್ಧನ್ ರಂಥ ಪ್ರತಿಭಾವಂತನನ್ನು ಯಥೋಚಿತವಾಗಿ ಕೆತ್ತಿ ಸುಂದರ ಶಿಲ್ಪವಾಗಿಸಿದರು.
ಪುಟ್ಟಣ್ಣ ಹೀಗೆ ರಿಸ್ಕ್ ತೆಗೆದುಕೊಳ್ಳುತ್ತಿದ್ದುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅವುಗಳ ಪೈಕಿ ಉಲ್ಲೇಖಿಸಬಹುದಾದ ಮತ್ತೊಂದು ಸನ್ನಿವೇಶ ‘ರಂಗನಾಯಕಿ’ ಚಿತ್ರದ್ದು. ವೃತ್ತಿಪರ ನಾಟಕ ಕಂಪನಿಗಳ ಅಸ್ಥಿರತೆ, ಅದರಲ್ಲಿ ತೊಡಗಿಸಿಕೊಂಡವರ ಬದುಕು-ಬವಣೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಚಿತ್ರವಿದು. ಇದರಲ್ಲಿ, ನಾಟಕ ನೋಡುತ್ತಿದ್ದ ಪ್ರೇಕ್ಷಕರು ಕೋಪಗೊಂಡು ರಂಗಮಂಚದ ಮೇಲೆ ಕಲ್ಲು ತೂರುವ ಸನ್ನಿವೇಶವೊಂದಿದೆ. ಈ ದೃಶ್ಯದಲ್ಲಿ ತೊಡಗಿಸಿಕೊಂಡಿದ್ದ ನಟ-ನಟಿಯರಿಗೆಲ್ಲಾ ಸಂದರ್ಭವನ್ನು ವಿವರಿಸಿ ಸಜ್ಜುಗೊಳಿಸಿದ ಪುಟ್ಟಣ್ಣನವರು, ನಂತರ ಚಿತ್ರದ ಛಾಯಾಗ್ರಾಹಕ ಎಸ್.ಮಾರುತಿರಾವ್ ಅವರಿಗೆ ತಾವು ಆ ದೃಶ್ಯದ ಚಿತ್ರೀಕರಣಕ್ಕೆ ಹೂಡಿರುವ ಒಳಸಂಚನ್ನು ವಿವರಿಸಿದರು. ಅದನ್ನು ಕೇಳಿ ಮಾರುತಿರಾವ್ ತತ್ತರಿಸಿಹೋದರು, ‘‘ಬೇಡ ಸರ್, ಇದು ಅಪಾಯಕಾರಿ… ಹಾಗೆ ಮಾಡೋಕ್ಕೆ ಹೋಗ್ಬೇಡಿ’’ ಎಂದು ಗೋಗರೆದರು, ಎಚ್ಚರಿಸಿದರು. ಆದರೆ ‘ಸೃಜನಶೀಲ ಮೊಂಡರು’ ಮಾತು ಕೇಳಬೇಕಲ್ಲ?! ಅವರ ಹಠಕ್ಕೆ ಎಸ್.ಮಾರುತಿರಾವ್ ‘ಎಸ್’ ಎನ್ನಲೇಬೇಕಾಯಿತು. ಅಂದಹಾಗೆ, ಪುಟ್ಟಣ್ಣ ಹೂಡಿದ್ದ ಆ ಒಳಸಂಚು ಏನು ಗೊತ್ತೇ? ನಾಟಕ ಪ್ರದರ್ಶನದ ಸಜ್ಜಿಕೆಯ ಹೊರಗೆ ಒಂದಷ್ಟು ಜನರನ್ನು ಸಜ್ಜುಗೊಳಿಸಿ ಅವರೆಲ್ಲರಿಗೆ ಸಾಕಷ್ಟು ಕಲ್ಲುಗಳನ್ನು ನೀಡಿದ್ದು, ‘‘ಈಗ ಹೊಡೀರಿ’’ ಎಂದು ಅವರನ್ನು ಹುರಿದುಂಬಿಸಿದ್ದು. ಏನು, ಎತ್ತ? ಎಂದು ಗೊತ್ತಿಲ್ಲದ ಜನರೂ ಹುಮ್ಮಸ್ಸಿನಿಂದಲೇ ರಂಗಮಂಚದತ್ತ ಕಲ್ಲು ತೂರಿದರು. ಇದನ್ನು ನಿರೀಕ್ಷಿಸಿರದಿದ್ದ ನಟ-ನಟಿಯರು ತತ್ತರಿಸಿಹೋದರು, ಜೋರಾಗಿ ಅರಚುತ್ತಾ ರಂಗದ ತುಂಬೆಲ್ಲಾ ಅಡ್ಡಾದಿಡ್ಡಿಯಾಗಿ ಓಡತೊಡಗಿದರು, ರಂಗಮಂದಿರದ ಒಂದಿಡೀ ವಾತಾವರಣದಲ್ಲಿ ಅಲ್ಲೋಲ-ಕಲ್ಲೋಲ! ಪುಟ್ಟಣ್ಣನವರಿಗೆ ಬೇಕಾಗಿದ್ದುದೂ ಅದೇ! ಅವರ ಪರಿಕಲ್ಪನೆಯಂತೆಯೇ ದೃಶ್ಯ ಒಡಮೂಡಿತ್ತು, ಷಾಟ್ ‘ಓಕೆ’ ಆಯಿತು!
ಇದಕ್ಕೂ ಸಾಕಷ್ಟು ವರ್ಷ ಮೊದಲು, ತಮ್ಮ ಮೊದಲ ಚಿತ್ರ ‘ಬೆಳ್ಳಿಮೋಡ’ವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ‘ಪ್ರೇಕ್ಷಕ-ಪ್ರಭು’ವನ್ನು ಸಂತುಷ್ಟಗೊಳಿಸಲು ಪುಟ್ಟಣ್ಣ ಪಟ್ಟ ಪಡಿಪಾಟಲು ಒಂದೆರಡಲ್ಲ. ಚಿತ್ರೀಕರಣದ ದಿನಾಂಕ ನಿಕ್ಕಿಯಾಗುವುದಕ್ಕೂ ಮುನ್ನ, ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದು ಲಾಡ್ಜ್ ನಲ್ಲಿ ತಂಗಿ, ನಂತರ ಬಾಡಿಗೆ ಸೈಕಲ್ ಏರಿ ಸುತ್ತಲ ಬೆಟ್ಟಪ್ರದೇಶಗಳನ್ನೆಲ್ಲಾ ಸುತ್ತಿ ಚಿತ್ರೀಕರಣದ ಲೊಕೇಶನ್ ಗಳನ್ನು ನಿಗದಿಪಡಿಸಿಕೊಂಡರು. ಚಿತ್ರೀಕರಣದ ವೇಳೆ ಶುರುವಾಯಿತು ಸರ್ಕಸ್! ನಿರ್ದಿಷ್ಟ ಸ್ಥಳದಲ್ಲಿ ಎತ್ತರದ ಒಂದು ಮರ ಇರಬೇಕಿತ್ತು ಎಂದು ಅವರಿಗನ್ನಿಸಿತು; ಆದರೆ ಅದು ಮರಕ್ಕೆ ಹೇಗೆ ಗೊತ್ತಾಗಬೇಕು?! ಹಾಗಂತ ಪುಟ್ಟಣ್ಣ ಬಿಡಲಿಲ್ಲ, ಚಿತ್ರೀಕರಣ ತಂಡದವರನ್ನೆಲ್ಲಾ ಎಬ್ಬಿಸಿಕೊಂಡು ಅದೆಲ್ಲಿಂದಲೋ ಒಂದು ಮರ ಕಡಿಸಿ ತಂದು ‘‘ಐಸಾ ಐಸಾ’’ ಎಂದು ಹೇಳಿಸುತ್ತಾ ಬೆಟ್ಟದ ಮೇಲ್ಭಾಗದವರೆಗೂ ತಂದು, ನಿಗದಿತ ಸ್ಥಳದಲ್ಲಿ ನೆಡಿಸಿದರು. ‘ಬೆಳ್ಳಿಮೋಡ’ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಲ್ಪನಾ ‘‘ಬೆಳ್ಳಿ ಕರಗಿತು, ಮೋಡ ಉಳಿಯಿತು’’ ಎಂದು ಆವೇಶದಿಂದ ಡೈಲಾಗ್ ಹೇಳಿಕೊಂಡು ಕೊಡಲಿಯೇಟು ಹಾಕೋದು ಈ ಮರಕ್ಕೇ! ತಮ್ಮ ಕಲಾಕೃತಿಯನ್ನು ಸುಂದರವಾಗಿಸಲು ಪುಟ್ಟಣ್ಣ ಎಷ್ಟೆಲ್ಲಾ ಶ್ರಮಿಸುತ್ತಿದ್ದರು ಎಂಬುದಕ್ಕೆ ಇದೊಂದು ನಿದರ್ಶನ.
***
ಹೊಟ್ಟೆಪಾಡಿಗಾಗಿ ನಾಟಕದ ಕಂಪನಿಯಲ್ಲಿನ ಪ್ರಚಾರದ ಹುಡುಗ, ಕಾರ್ ಡ್ರೈವರ್ ಹೀಗೆ ಏನೆಲ್ಲಾ ಕೆಲಸಗಳನ್ನು ನಿರ್ವಹಿಸಿ ನಂತರ ಚಲನಚಿತ್ರ ನಿರ್ದೇಶಕನ ಸೀಟನ್ನು ಅಲಂಕರಿಸಿದ ಪುಟ್ಟಣ್ಣ, ಒಂದಿಡೀ ಭಾರತ ಚಿತ್ರರಂಗವೇ ಕನ್ನಡದ ಕಡೆಗೆ ತಿರುಗಿನೋಡುವಂತೆ ಮಾಡಿದವರಲ್ಲಿ ಎದ್ದುಕಾಣುವ ಹೆಸರು. ‘ಬೆಳ್ಳಿಮೋಡ’, ‘ಗೆಜ್ಜೆಪೂಜೆ’, ‘ಶರಪಂಜರ’, ‘ಶುಭಮಂಗಳ’, ‘ಉಪಾಸನೆ’, ‘ನಾಗರಹಾವು’, ‘ರಂಗನಾಯಕಿ’ ಮುಂತಾದ ಅನುಪಮ ಚಿತ್ರಗಳನ್ನು ಕಟ್ಟಿಕೊಟ್ಟವರು. ಚಿತ್ರರಂಗಕ್ಕೆ ಅನೇಕ ಹೊಸ ನಟ-ನಟಿಯರು, ತಂತ್ರಜ್ಞರನ್ನು ಕೊಡುಗೆಯಾಗಿತ್ತವರು. ಚಿತ್ರನಿರ್ಮಾಣದಲ್ಲಿ ಕೆಲವೇ ಲಕ್ಷಗಳನ್ನು ವಿನಿಯೋಗಿಸಿ ಹಲವು ಪಟ್ಟು ಲಕ್ಷಗಳನ್ನು ಸಂಪಾದಿಸುವುದು ಹೇಗೆಂಬುದನ್ನು ನಿರ್ಮಾಪಕರಿಗೆ ತೋರಿಸಿಕೊಟ್ಟವರು. ಆದರೆ ಕೊನೆಗಾಲದಲ್ಲಿ ಅವರು ಬಿಡಿಗಾಸಿಗೂ ಭವಂತ ಪಡಬೇಕಾಗಿಬಂತು. ಬೆಂಗಳೂರಿನ ಜಯನಗರದಲ್ಲಿದ್ದ ತಮ್ಮ ಮನೆಗೆ ಅವರಿಟ್ಟುಕೊಂಡಿದ್ದ ಹೆಸರು ‘ಹೆಡ್ಡನ ಹಟ್ಟಿ’. ‘‘ಇದೇಕೆ ಈ ಹೆಸರು?’’ ಅಂತ ಅದ್ಯಾರೋ ಕೇಳಿದ್ದಕ್ಕೆ, ‘‘ಚಿತ್ರರಂಗಕ್ಕೆ ಏನೆಲ್ಲಾ ಕೊಡುಗೆ ನೀಡಿದೆ, ಎಂತೆಂಥವರನ್ನೆಲ್ಲಾ ಪರಿಚಯಿಸಿದೆ; ಆದರೆ ಎಲ್ಲರೂ, ನಾನು ದಷ್ಟಪುಷ್ಟ ಹಸುವಾಗಿದ್ದಾಗ ಪುಷ್ಕಳವಾಗಿ ಹಾಲು ಕರೆದುಕೊಂಡು ನಂತರ ದೂರ ತಳ್ಳಿದರು. ಇಲ್ಲಿ ನನಗಿಂತ ‘ಹೆಡ್ಡ’ ಮತ್ತೊಬ್ಬ ಇರಲು ಸಾಧ್ಯವೇ? ಅದಕ್ಕೇ ‘ಹೆಡ್ಡನ ಹಟ್ಟಿ’ ನನ್ನ ಮನೆಹೆಸರು’’ ಎಂದುತ್ತರಿಸಿ ಕಣ್ಣೊರೆಸಿಕೊಂಡರಂತೆ. ಬರುವ ಡಿಸೆಂಬರ್ 1ನೇ ತಾರೀಕಿಗೆ ಪುಟ್ಟಣ್ಣ ಕಣಗಾಲರು ಜನಿಸಿ 91 ವರ್ಷಗಳಾಗುತ್ತವೆ (ಜನನ: 1933ರ ಡಿಸೆಂಬರ್ 1, ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದಲ್ಲಿ). ನಮ್ಮಂಥ ಅಭಿಮಾನಿಗಳಾದರೂ ಅವರನ್ನು ಸ್ಮರಿಸೋಣ…