ಮುಂಬೈ: ಭಾರತದ ಮಾಜಿ ಗೂಢಾಚಾರಿ (RAW) ಹಾಗೂ ರಾಷ್ಟ್ರೀಯ ಭದ್ರತಾ ಸುರಕ್ಷಾ (NSG) ಕಮಾಂಡೋ, ಪ್ರಧಾನಿ ನರೇಂದ್ರ ಮೋದಿಯವರ ಮಾಜಿ ಅಂಗರಕ್ಷಕ ಲಕ್ಕಿ ಬಿಶ್ತ್ (Lucky Bisht) ತಮಗೆ ಬಿಗ್ ಬಾಸ್ 18 (Big Bos 18) ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಲು ಆಫರ್ ಬಂದಿತ್ತು ಆದರೆ ತಾನು ಅದನ್ನು ಒಪ್ಪಿಕೊಂಡಿರಲಿಲ್ಲ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.
ತನ್ನ ಜೀವನದ ಹಲವಾರು ವಿಚಾರಗಳನ್ನು ಖಾಸಗಿ ಟೆಲಿವಿಷನ್ ಚಾನೆಲ್‌ನಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲದೇ ಇದ್ದ ಕಾರಣದಿಂದ ನಾನು ಈ ಆಫರ್ ತಿರಸ್ಕರಿಸಿದ್ದೆ ಎಂದು ಬಿಶ್ತ್ ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. “ಒಬ್ಬ ರಾ ಏಜೆಂಟ್ ಆಗಿದ್ದುಕೊಂಡು, ನಮ್ಮ ಜೀವನವು ಕೆಲವೊಮ್ಮೆ ಬಹಳಷ್ಟು ನಿಗೂಢತೆಗಳಿಂದ ಕೂಡಿರುತ್ತದೆ, ಮತ್ತು ನಾವು ನಿಜವಾಗಿಯೂ ಯಾರೆಂಬುದರ ಸತ್ಯ ವಿಷಯ ಕೆಲವರಿಗೆ ಮಾತ್ರವೇ ತಿಳಿದಿರುತ್ತದೆ. ನಮ್ಮ ಗುರುತು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸದ ರೀತಿಯಲ್ಲಿ ನಮಗೆ ತರಬೇತಿ ನೀಡಲಾಗಿರುತ್ತದೆ. ಮತ್ತು ನಾನೂ ಕೂಡಾ ಅದಕ್ಕೆ ಬದ್ಧನಾಗಿದ್ದೇನೆ. ಇದು ನಾನೇ ಮಾಡಿಕೊಂಡಿರುವ ಆಯ್ಕೆ ಮತ್ತು ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನನ್ನ ಬೆಂಬಲಕ್ಕಿದ್ದಾರೆ..ʼ ಎಂದು ಬಿಶ್ತ್ ಅವರು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ 18 ಟೀಂ ಜೊತೆ ಮತ್ತು ತನ್ನ ತಂಡದ ಜೊತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಸುತ್ತಿನ ಚರ್ಚೆಗಳಾಗಿವೆ ಎಂಬ ವಿಚಾರವನ್ನೂ ಸಹ ಬಿಶ್ತ್ ಅವರು ಬಹಿರಂಗಗೊಳಿಸಿದ್ದಾರೆ.
ಲಕ್ಕಿ ಬಿಶ್ತ್ ಯಾರು?
ಭಾರತದ ಅತ್ಯುತ್ತಮ ಸ್ನೈಪರ್ ಹಾಗೂ ರಾ ಏಜೆಂಟ್ ಗಳಲ್ಲಿ ಒಬ್ಬರಾಗಿರುವ ಬಿಶ್ತ್ ಅವರು 2009ರಲ್ಲಿ ಭಾರತದ ಬೆಸ್ಟ್ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಕಮಾಂಡೋ ಪ್ರಶಸ್ತಿಗೂ ಭಾಜನರಾಗಿದ್ದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಶ್ತ್ ಅವರು 2010ರಲ್ಲಿ ಆಗಿನ ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರ ಭಾರತ ಭೇಟಿ ಸಂದರ್ಭದಲ್ಲಿ ಭದ್ರತಾ ಪಡೆಯ ಭಾಗವಾಗಿದ್ದರು.
ಇದನ್ನೂ ಓದಿ: Maharashtra Assembly Elections: ʼಮಹಾವಿಕಾಸ ಅಘಾಡಿಗೆ ಮತ ಚಲಾಯಿಸಿ 3 ಸಾವಿರ ರೂ. ಪಡೆಯಿರಿ! ನಟಿಗೆ ಬಂತು ಕಾಲ್!
ಆದರೆ, 2011ರಲ್ಲಿ ಉತ್ತಾರಖಂಡದಲ್ಲಿ ನೇಪಾಲ ಗಡಿ ಭಾಗದಲ್ಲಿ ರಾಜು ಪರ್ಗಾಯಿ ಮತ್ತು ಅಮಿತ್ ಆರ್ಯ ಎಂಬಿಬ್ಬರ ಜೋಡಿ ಕೊಲೆ ಪ್ರಕರಣದಲ್ಲಿ ಬಿಶ್ತ್ ಹೆಸರು ಕೇಳಿಬಂದು ಅವರು ಬಂಧನಕ್ಕೊಳಗಾಗಿ ಜೈಲು ಶಿಕ್ಷೆಯನ್ನೂ ಸಹ ಅನುಭವಿಸಿದ್ದರು. ಆದರೆ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಶ್ತ್ 2018ರಲ್ಲಿ ಈ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದರು. ಬಳಿಕ ಬಿಶ್ತ್ ಅವರು ಸ್ಪೆಷಲ್ ಫೋರ್ಸ್ ತೊರೆದು ಬಾಲಿವುಡ್ ನಲ್ಲಿ ಸ್ಕ್ರೀನ್ ರೈಟರ್ ಹಾಗೂ ಫಿಲ್ಮ್ ಮೇಕರ್ ಆಗಿ ತಮ್ಮ ಹೊಸ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.