Sunday, 17th November 2024

Manipur Violence: ಮಣಿಪುರದಲ್ಲಿ ಭಾರೀ ಹಿಂಸಾಚಾರ-ಸಿಎಂ ಪೂರ್ವಜರ ಮನೆ ಮೇಲೂ ದಾಳಿ; ಇಂಟರ್ನೆಟ್‌ ಸೇವೆ ಸ್ಥಗಿತ..ನಿಷೇಧಾಜ್ಞೆ ಜಾರಿ

Manipur violence

ಇಂಫಾಲ್‌: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಆರು ನಾಗರಿಕರ ಬರ್ಬರ ಹತ್ಯೆ ಖಂಡಿಸಿ ಭಾರೀ ಹಿಂಸಾಚಾರ ಭುಗಿಲೆದ್ದಿದ್ದು(Manipur Violence), ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತ(Internet Suspended)ಗೊಳಿಸಲಾಗಿದೆ. ಈಶಾನ್ಯ ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಬಿಷ್ಣುಪುರ್, ತೌಬಲ್, ಕಕ್ಚಿಂಗ್, ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಇಂಫಾಲ್ ಕಣಿವೆಯ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಂಪುಗಳು ಹಲವಾರು ಶಾಸಕರ ನಿವಾಸಗಳಿಗೆ ನುಗ್ಗಿ ಆಸ್ತಿಯನ್ನು ನಾಶಪಡಿಸಿದ್ದರಿಂದ ದೊಡ್ಡ ಪ್ರಮಾಣದ ಹಿಂಸಾಚಾರ ವರದಿಯಾಗಿದೆ.

ಇಂಫಾಲ್‌ನ ಖ್ವೈರಂಬಂಡ್ ಕೀಥೆಲ್‌ನಲ್ಲಿ ಬಂಡೂಕೋರರು ಆರು ಜನರನ್ನು ಅಪಹರಿಸಿ ಹತ್ಯೆ ಮಾಡಿದ ನಂತರ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ. ಈ ಪ್ರತಿಭಟನೆಗಳು ಇದೀಗ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಉದ್ರಿಕ್ತರ ಗುಂಪು ಜನಪ್ರತಿನಿಧಿಗಳ ಮನೆಗೆ ನುಗ್ಗಿ ಅವರ ಪೀಠೋಪಕರಣಗಳನ್ನು ಸುಟ್ಟು ಹಾಕಿವೆ. ಇನ್ನು ಇಂಫಾಲ್‌ನಲ್ಲಿರುವ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರ ಪೂರ್ವಜರ ಮನೆ ಮೇಲೂ ದಾಳಿ ನಡೆದಿದೆ. ಮತ್ತೊಂದೆಡೆ ಪ್ರತಿಭಟನಾಕಾರರು ಶನಿವಾರ ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದರು.

ಇನ್ನು ಐದು ಜಿಲ್ಲೆಗಳಲ್ಲಿ ಅನಿರ್ದಿಷ್ಟ ನಿಷೇಧಾಜ್ಞೆಗಳನ್ನು ಜಾರಿಗೊಳಿಸಲಾಗಿದ್ದು, ರಾಜ್ಯದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಘಟನೆ ಹಿನ್ನೆಲೆ

ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನ. 11 ಸಿಆರ್‌ಪಿಎಫ್‌ (CRPF) ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 10 ಕುಕಿ ಬಂಡುಕೋರರು ಸಾವನ್ನಪ್ಪಿದ್ದರು. ಅದಾದ ಬಳಿಕ ನ. 12ರಂದು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಅವರನ್ನು ಶಂಕಿತ ಕುಕಿ ಬಂಡುಕೋರರು ಅಪಹರಿಸಿದ್ದಾರೆ ಎನ್ನಲಾಗಿದೆ.

ಶಂಕಿತ ಬಂಡುಕೋರರ ಗುಂಪು ಸೋಮವಾರ ಅಪರಾಹ್ನ 2.30ರ ಸುಮಾರಿಗೆ ಬೊರೊಬೆಕ್ರಾ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿ ಹತ್ತಿರದಲ್ಲೇ ಇರುವ ಸಿಆರ್‌ಪಿಎಫ್‌ ಶಿಬಿರದತ್ತ ತೆರಳಿತ್ತು. ʼʼಬಂಡುಕೋರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು. ಅವರು ದಾಳಿ ನಡೆಸಲು ಆಗಮಿಸುತ್ತಿದ್ದಂತೆ ಸಿಆರ್‌ಪಿಎಫ್‌ ಸಿಬ್ಬಂದಿ ಪ್ರತಿ ದಾಳಿ ನಡೆಸತೊಡಗಿದರು. ಈ ಎನ್‌ಕೌಂಟರ್‌ ಸುಮಾರು 45 ನಿಮಿಷಗಳ ಕಾಲ ಮುಂದುವರಿಯಿತು. ಪರಿಣಾಮ 10 ಬಂಡುಕೋರರು ಹತರಾಗಿದ್ದಾರೆ. ಶಂಕಿತ ಬಂಡುಕೋರರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆʼʼ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎನ್‌ಕೌಂಟರ್‌ ಸ್ಥಳದಿಂದ ಎಕೆ, ಐಎನ್ಎಸ್ಎಎಸ್ ಅಸಾಲ್ಟ್ ರೈಫಲ್‌ಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್ ಲಾಂಚರ್ ಮುಂತಾದ ಶಸ್ತಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: ಮಣಿಪುರ-ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ; ತೀವ್ರ ನಿಗಾ