ಮುಂಬಯಿ: ಟೀಮ್ ಇಂಡಿಯಾದ ಮಾಜಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅದೆಷ್ಟೋ ಅಂಪೈರ್‌ಗಳು ಔಟ್ ಅಲ್ಲದಿದ್ದರೂ ಔಟ್ ಎಂದು ತೀರ್ಪು ನೀಡಿದ್ದರು. ಅದರಲ್ಲೂ ಸಚಿನ್ ಪಾಲಿಗೆ ವಿಲನ್ ಆಗಿದ್ದ ಓರ್ವ ಅಂಪೈರ್ ಎಂದರೆ ಅದು ವಿಂಡೀಸ್‌ನ ಸ್ಟೀವ್ ಬಕ್ನರ್(Steve Bucknor). ಸಚಿನ್ ವಿರುದ್ಧ ಅನೇಕ ತಪ್ಪು ನಿರ್ಣಯಗಳನ್ನು ನೀಡಿ ಶತಕ ವಂಚಿತರನ್ನಾಗಿ ಮಾಡಿದ್ದರು. ಬಕ್ನರ್ ನಿವೃತ್ತಿಯಾದ ಬಳಿಕ ಸಚಿನ್‌ಗೆ ಔಟ್ ನೀಡಿದರ ಬಗ್ಗೆ ಬೇಸರ ಮತ್ತು ಕ್ಷಮೆಯನ್ನು ಕೂಡ ಕೇಳಿದ್ದರು. ಇದೀಗ ಸಚಿನ್ ಮಾಡಿರುವ ಪೋಸ್ಟ್ ಒಂದು ಬಾರಿ ವೈರಲ್(Viral post) ಆಗಿದೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಮೂರು ದೊಡ್ಡ ಮರಗಳ ಮುಂದೆ ಬ್ಯಾಟಿಂಗ್ ನಿಲುವಿನಲ್ಲಿ ನಿಂತಿರುವ ಚಿತ್ರವನ್ನು ಪೋಸ್ಟ್ ಮಾಡಿ “ಯಾವ ಅಂಪೈರ್ ಸ್ಟಂಪ್‌ಗಳನ್ನು ಇಷ್ಟು ದೊಡ್ಡದಾಗಿ ಭಾವಿಸಿದ್ದಾರೆಂದು ನೀವು ಊಹಿಸಬಹುದೇ?”ಎಂದು ಸಚಿನ್ ತಮಾಷೆಯಾಗಿ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.
ಸಚಿನ್ ಪೋಸ್ಟ್ ಕಂಡ ತಕ್ಷಣ ಪ್ರತಿಕ್ರಿಯೆ ನೀಡಿದ ಮಾಜಿ ಆಟಗಾರ ಆಕಾಶ್ ಚೋಪ್ರಾ, ʼಇದು ಸ್ವೀವ್ ಬಕ್ನರ್…ವಿಶೇಷವಾಗಿ ನೀವು ಬ್ಯಾಟಿಂಗ್ ಮಾಡುವಾಗʼ ಎಂದು ನಗುವ ಎಮೊಜಿಯೊಂದಿಗೆ ಉತ್ತರಿಸಿದ್ದಾರೆ. ನೆಟ್ಟಿಗರು ಕೂಡ ಈ ಅಂಪೈರ್ ಹೆಸರು ಮರೆಯುವುದುಂಟೆ, ನಿಸ್ಸಂಶಯವಾಗಿ ಇದು ಸ್ಟೀವ್ ಬಕ್ನರ್ ಎಂದಿದ್ದಾರೆ. ಸದ್ಯ ಸಚಿನ್ ಪೋಸ್ಟ್ ಮಾತ್ರ ವೈರಲ್ ಆಗುತ್ತಿದೆ.
ಇದನ್ನೂ ಓದಿ OTD 1989: ಕ್ರಿಕೆಟ್ ದೇವರು ಸಚಿನ್ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಇಂದಿಗೆ 35 ವರ್ಷ
Can you guess which umpire made the stumps feel this big? 🤔 pic.twitter.com/oa1iPvVza1
— Sachin Tendulkar (@sachin_rt) November 16, 2024
ಸ್ಟೀವ್ ಬಕ್ನರ್, ಒಂದಲ್ಲ ಎರಡು ಬಾರಿ ಟೀಮ್ ಇಂಡಿಯಾ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ನಾಟ್‌ಔಟ್ ಆಗಿದ್ದರೂ ಔಟ್ ಎಂದು ತೀರ್ಪು ನೀಡಿದ್ದರು. ಈ ತಪ್ಪನ್ನು ಸ್ವತಃ ಬಕ್ನರ್ ನಿವೃತ್ತಿ ಬಳಿಕ ಒಪ್ಪಿಕೊಂಡಿದ್ದರು.
2003ರಲ್ಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ‘ಗಬ್ಬಾ’ ಟೆಸ್ಟ್ ಪಂದ್ಯದಲ್ಲಿ ಸಚಿನ್ ಎಲ್‌ಬಿಡಬ್ಲ್ಯು ಆಗಿದ್ದಾರೆ ಎಂದು ಸ್ಟೀವ್ ಬಕ್ನರ್ ತೀರ್ಪು ನೀಡಿದ್ದರು. ಆಗ ಡಿಆರ್‌ಎಸ್ (ಅಂಪೈರ್ ತೀರ್ಪು ಪರಿಶೀಲನೆ) ಇಲ್ಲವಾಗಿದ್ದ ಕಾರಣ ಸಚಿನ್ ನಾಟ್‌ಔಟ್ ಆಗಿದ್ದರೂ ಕೂಡ ಹೊರ ನಡೆಯುವಂತಾಗಿತ್ತು. ಇದಾದ ಬಳಿಕ 2005ರಲ್ಲಿ ಪಾಕಿಸ್ತಾನ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲೂ ಸಚಿನ್, ವೇಗಿ ಅಬ್ದುಲ್ ರಝಾಕ್ ಬೌಲಿಂಗ್ಸ್‌ನಲ್ಲಿ ಎಡ್ಜ್ ಮಾಡಿ ಕೀಪರ್‌ಗೆ ಕ್ಯಾಚ್ ನೀಡಿದ್ದರು ಎಂದು ತಪ್ಪಾಗಿ ಗ್ರಹಿಸಿ ಔಟ್ ನೀಡಿದ್ದರು. ಸಚಿನ್ ಎದುರು ಬೇಕೆಂದೇ ತಪ್ಪು ನಿರ್ಧಾರ ನೀಡುತ್ತಾರೆ ಎಂಬ ಆರೋಪವೂ ವೆಸ್ಟ್ ಇಂಡೀಸ್ ಮೂಲಕ ಅನುಭವಿ ಅಂಪೈರ್ ಬಕ್ನರ್ ಮೇಲಿದೆ.