Sunday, 17th November 2024

BGT 2024-25: ಅಡಿಲೇಡ್‌ ಟೆಸ್ಟ್‌ನಲ್ಲಿ ಮೊಹಮ್ಮದ್‌ ಶಮಿ ಕಣಕ್ಕೆ

ಮುಂಬಯಿ: ನವೆಂಬರ್ 22 ರಂದು ಪರ್ತ್‌ನಲ್ಲಿ ಪ್ರಾರಂಭವಾಗುವ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ(BGT 2024-25) ಭಾರತ ತಂಡದಲ್ಲಿ ಮೊಹಮ್ಮದ್‌ ಶಮಿಯನ್ನು(Mohammed Shami) ಸೇರಿಸಲು ಬಿಸಿಸಿಐ(BCCI) ಸಿದ್ಧವಾಗಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಮೊದಲ ಪಂದ್ಯಕ್ಕೆ ಮುಂಚಿತವಾಗಿ ಶಮಿ ತಂಡವನ್ನು ಸೇರಿಕೊಳ್ಳಬಹುದು ಎಂದು ತಿಳಿದುಬಂದಿದೆ. ಆದರೆ, ಪರ್ತ್‌ನಲ್ಲಿ ನಡೆದ ಪಂದ್ಯದ ನಂತರವೇ ಶಮಿ ಅವರನ್ನು ಆಡುವ ಬಳಗಕ್ಕೆ ಸೇರಿಸಲಾಗುವುದು ಎಂದು ವರದಿ ಹೇಳಿದೆ.

ವರ್ಷದ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ಮರಳಿರುವ ಶಮಿ ಮಧ್ಯಪ್ರದೇಶ ವಿರುದ್ದದ ರಣಜಿ ಪಂದ್ಯದಲ್ಲಿ ಬಂಗಾಳ ಪರ ಆಡಿದ್ದ ಶಮಿ ಪಂದ್ಯದಲ್ಲಿ 43.2 ಓವರ್‌ ಎಸೆದು ತಮ್ಮ ಫಿಟ್ನೆಸ್‌ ಸಾಬೀತು ಮಾಡಿದ್ದಾರೆ. ಜತೆಗೆ ಪಂದ್ಯದಲ್ಲಿ ಏಳು ವಿಕೆಟ್‌ ಕಿತ್ತಿದ್ದು, ಅಲ್ಲದೆ ಬ್ಯಾಟಿಂಗ್‌ನಲ್ಲಿ 36 ರನ್‌ ಗಳಿಸಿ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ. ಸದ್ಯ ಆಸೀಸ್‌ ಪ್ರವಾಸ ಕೈಗೊಂಡಿರುವ ತಂಡದಲ್ಲಿ ಅನುಭವಿ ಬೌಲರ್‌ಗಳಾಗಿ ಇರುವುದು ಕೇವಲ 2 ಮಾತ್ರ. ಅವರೆಂದರೆ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್. ಇವರನ್ನು ಹೊರತುಪಡಿಸಿ ಬೇರ್ಯಾವ ಹಿರಿಯ ವೇಗಿಯೂ ಇಲ್ಲ. ಶಮಿ ತಂಡ ಕೂಡಿ ಕೊಂಡರೆ ಬಲ ಹೆಚ್ಚಲಿದೆ.

ಶಮಿ ತಂಡ ಸೇರಿಕೊಂಡರೆ ಭಾರತ ಬೌಲಿಂಗ್‌ ವಿಭಾಗ ಕೂಡ ಬಲಿಷ್ಠಗೊಳ್ಳಲಿದೆ. ಆಸೀಸ್‌ ತಂಡಕ್ಕೂ ನಡುಕ ಹುಟ್ಟುಕೊಳ್ಳಲಿದೆ. ಏಕೆಂದರೆ, ಈ ಹಿಂದಿನ ಎರಡು ಆಸೀಸ್‌ ಪ್ರವಾಸಲ್ಲಿ ಶಮಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಇದುವರೆಗೂ ಶಮಿ ಆಸ್ಟ್ರೇಲಿಯಾ ಎದುರು 12 ಟೆಸ್ಟ್ ಪಂದ್ಯಗಳನ್ನಾಡಿದ್ದು, 44 ವಿಕೆಟ್ ಕಬಳಿಸುವ ಮೂಲಕ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಇನ್ನು ಆಸೀಸ್‌ ನೆಲದಲ್ಲಿ 8 ಟೆಸ್ಟ್‌ ಪಂದ್ಯಗಳನ್ನಾಡಿದ್ದು 31 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ KL Rahul: ಟೀಮ್‌ ಇಂಡಿಯಾಕ್ಕೆ ಗುಡ್‌ ನ್ಯೂಸ್‌; ಅಭ್ಯಾಸ ಆರಂಭಿಸಿದ ಕನ್ನಡಿಗ ರಾಹುಲ್‌

ರೋಹಿತ್‌ ಅನುಮಾನ

2ನೇ ಮಗುವಿಗೆ ತಂದೆಯಾದ ಕಾರಣ ರೋಹಿತ್‌ ಮೊದಲ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ವರದಿಯಾದ ಪ್ರಕಾರ ರೋಹಿತ್‌ ಸರಣಿಯ ಆರಂಭಿಕ ಪಂದ್ಯದ ಅಲಭ್ಯತೆಯ ಬಗ್ಗೆ ಬಿಸಿಸಿಐ ಮತ್ತು ಆಯ್ಕೆಗಾರರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಡಿಲೇಡ್‌ನಲ್ಲಿ ಡಿ.6ರಿಂದ ಆರಂಭವಾಗಲಿರುವ 2ನೇ ಪಂದ್ಯದಲ್ಲಿ ರೋಹಿತ್‌ ಮತ್ತು ಶಮಿ ಆಡುವುದು ಖಚಿತವಾಗಿದೆ.

ತವರಿನಲ್ಲಿ ನ್ಯೂಜಿಲ್ಯಾಂಡ್‌ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ ವಾಶ್‌ ಆಗಿರುವ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದ ದೃಷ್ಟಿಯಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮಾಡು ಇಲ್ಲವೇ ಮಡಿ ಸರಣಿ ಎನಿಸಿಕೊಂಡಿದೆ.