Sunday, 17th November 2024

Crime News: ಚಿಕನ್ ತಂದ ವಿಚಾರಕ್ಕೆ ಗಲಾಟೆ; ನಾನ್‌ವೆಜ್‌ ಪ್ರಿಯ ಸಹೋದರನನ್ನು ಬರ್ಬರವಾಗಿ ಕೊಲೆಗೈದ ಕಿಡಿಗೇಡಿಗಳು

Crime News

ಭೋಪಾಲ್: ಸಹೋದರರ ನಡುವೆ ನಡೆದ ಚಿಕನ್ (Chicken) ವಿಚಾರಕ್ಕೆ ತರುವ ಬಗ್ಗೆ ನಡೆದ ಗಲಾಟೆ ಕೊಲೆಯಲ್ಲಿ (Crime News) ಅಂತ್ಯಗೊಂಡ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಮನೆಗೆ ಚಿಕನ್ ತರಲು ಮುಂದಾಗಿದ್ದ ಸಹೋದರನನ್ನು ಇಬ್ಬರು ಸಹೋದರರು (Vegetarian brothers) ಸೇರಿ ಕೊಂದು ಹಾಕಿರೋ ಭೀಕರ ಘಟನೆ ವರದಿಯಾಗಿದೆ. ಈ ವಿಷಯವನ್ನು ಸಹೋದರರ ತಾಯಿಯು ಮುಚ್ಚಿಟ್ಟಿದ್ದರಿಂದ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭೋಪಾಲ್ ಬೈರಾಗರ್ ಪ್ರದೇಶದ ಇಂದಿರಾ ನಗರದ ನಿವಾಸಿ ಅನ್ಶುಲ್ ಯಾದವ್ (22) ಕೊಲೆಯಾದ ಯುವಕ. ಬೈರಾಗರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಕುಟುಂಬ ಸದಸ್ಯರು ಸಸ್ಯಾಹಾರಿಯಾಗಿದ್ದರು. ಆದರೆ ಅನ್ಶುಲ್ ಮನೆಯ ಹೊರಗೆ ಮಾಂಸಾಹಾರ ಸೇವಿಸುತ್ತಿದ್ದ. ಅನ್ಶುಲ್ ಮನೆಗೆ ಚಿಕನ್ ತಂದಿದ್ದರಿಂದ ಆಕ್ರೋಶಗೊಂಡ ಉಳಿದ ಇಬ್ಬರು ಸಹೋದರರು ಆತನನ್ನು ಕೊಂದು ಹಾಕಿದ್ದಾರೆ. ವಿಷಯ ತಿಳಿದ ತಾಯಿ ಪ್ರಕರಣವನ್ನು ಮುಚ್ಚಿಟ್ಟಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು, ತಾಯಿಯ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ಶುಲ್ ಮನೆಯ ಹೊರಗೆ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದನು. ಶುಕ್ರವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಚಿಕನ್ ತಂದಿದ್ದು, ಇದು ಸಹೋದರರಾದ ಅಮನ್ ಮತ್ತು ಕುಲದೀಪ್ ಅವರ ಸಿಟ್ಟಿಗೆ ಕಾರಣವಾಗಿದೆ. ಅನ್ಶುಲ್ ಅಡುಗೆ ಮನೆಗೆ ಹೋಗಿ ತಾನು ತಂದಿದ್ದ ಆಹಾರವನ್ನು ತೆಗೆದುಕೊಂಡು ಊಟಕ್ಕೆ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ತನ್ನ ಸಹೋದರರಾದ ಅಮನ್ ಮತ್ತು ಕುಲದೀಪ್ ಅವರನ್ನು ನಿಂದಿಸಿದ್ದಾನೆ ಮಾತ್ರವಲ್ಲದೆ ಚಿಕನ್ ತುಂಡನ್ನು ಅವರಿಗೆ ತೋರಿಸಿದ್ದಾನೆ. ಇದು ಅಮನ್ ಮತ್ತು ಕುಲದೀಪ್ ಅವರನ್ನು ಕೆರಳಿಸಿದೆ. ಇದರಿಂದ ಮೂವರು ಸಹೋದರರ ನಡುವೆ ವಾಗ್ವಾದ ನಡೆದಿದ್ದು, ಇಬ್ಬರು ಸಹೋದರರು ಹಗ್ಗವನ್ನು ಬಳಸಿ ಅನ್ಶುಲ್‌ನನ್ನು ಕತ್ತು ಹಿಸುಕಿ ಕೊಂದಿದ್ದಾರೆ.

ಖಾಸಗಿ ಆಸ್ಪತ್ರೆಯಿಂದ ಮಾಹಿತಿ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಬಳಿಕ ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ.

China News: ಚೀನಾದಲ್ಲಿ ಚಾಕು ಇರಿತಕ್ಕೆ 8 ಮಂದಿ ಬಲಿ, 21 ಜನರಿಗೆ ಗಾಯ!

ಅನ್ಶುಲ್‌ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಪೊಲೀಸರು ಇಬ್ಬರು ಸಹೋದರರು ಮತ್ತು ಸಂತ್ರಸ್ತೆಯ ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೊಲೆಯನ್ನು ಮರೆಮಾಚಿದ ಆರೋಪದಲ್ಲಿ ಅನ್ಶುಲ್‌ನ ತಾಯಿಯನ್ನು ಪೊಲೀಸರು ಬಳಿಕ ಬಂಧಿಸಿದ್ದಾರೆ.